Showing posts with label dinakondu kathe. Show all posts
Showing posts with label dinakondu kathe. Show all posts

Monday, December 9, 2024

ಸಾಲದ ಸರಪಳಿ

 ಒಂದು ಸಣ್ಣ ಊರು. ಆ ಊರು ಸಾಲದ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಒಬ್ಬರಿಗೊಬ್ಬರು ಸಾಲ ಮಾಡಿಕೊಂಡು ಬದುಕುತ್ತಿದ್ದರು. ಹೋಟೆಲ್ ಮಾಲೀಕ ಮಾಂಸದಂಗಡಿಯವನಿಗೆ, ಮಾಂಸದಂಗಡಿಯವನು ರೈತನಿಗೆ, ರೈತ ದೊಡ್ಡ ವ್ಯಕ್ತಿಗೆ, ದೊಡ್ಡ ವ್ಯಕ್ತಿ ವೇಶ್ಯೆಯಿಗೆ, ವೇಶ್ಯೆ ಮತ್ತೆ ಹೋಟೆಲ್ ಮಾಲೀಕನಿಗೆ ಹೀಗೆ ಸಾಲದ ಸರಪಳಿ ಒಂದರ ಮೇಲೊಂದು ಹೆಣೆದುಕೊಂಡಿತ್ತು.

ಒಂದು ದಿನ ಆ ಊರಿಗೆ ಒಬ್ಬ ಯಾತ್ರಿಕ ಬಂದ. ಹೋಟೆಲ್‌ಗೆ ಬಂದು ಒಂದು ರೂಂ ಬುಕ್ ಮಾಡಲು 500 ರೂಪಾಯಿ ನೋಟು ಕೊಟ್ಟ. ಹೋಟೆಲ್ ಮಾಲೀಕನಿಗೆ ಈ ಹಣ ದೇವದೂತನಂತೆ ಕಂಡಿತು. ತಕ್ಷಣ ಮಾಂಸದಂಗಡಿಯವನ ಬಳಿ ಓಡಿ ತನ್ನ ಸಾಲ ತೀರಿಸಿದ. ಮಾಂಸದಂಗಡಿಯವನೂ ಅಷ್ಟೇ ಖುಷಿಯಿಂದ ರೈತನ ಬಳಿ ಹೋದ. ರೈತ ದೊಡ್ಡ ವ್ಯಕ್ತಿಯ ಬಳಿ ಹೋದ. ದೊಡ್ಡ ವ್ಯಕ್ತಿ ವೇಶ್ಯೆಯ ಬಳಿ ಹೋದ. ವೇಶ್ಯೆ ಮತ್ತೆ ಹೋಟೆಲ್ ಮಾಲೀಕನ ಬಳಿ ಹೋದಳು.

ಹೋಟೆಲ್ ಮಾಲೀಕ ಆ ಹಣವನ್ನು ಜೇಬಿಗೆ ಹಾಕುವ ಮುನ್ನವೇ ಯಾತ್ರಿಕ ಬಂದು, "ಯಾವ ರೂಮೂ ಇಷ್ಟವಾಗಲಿಲ್ಲ, ಹಣ ವಾಪಸ್ ಕೊಡಿ" ಎಂದ. ಹೋಟೆಲ್ ಮಾಲೀಕನಿಗೆ ಆಗ ಏನಾಯಿತು ಎಂದರೆ ಪ್ರಾಣ ಬಂತು ಹೋಯಿತು. ಆದರೆ ಆಗಾಗಲೇ ಊರಿನಲ್ಲಿ ಸಾಲದ ಸರಪಳಿ ಕೊಂಡಿ ಕೊಂಡಿಯಾಗಿ ಕಟ್ಟಿ ಹೋಗಿತ್ತು. ಎಲ್ಲರೂ ತಮ್ಮ ಸಾಲ ತೀರಿಸಿಕೊಂಡು ಸುಖವಾಗಿ ಇದ್ದರು.

ಯಾತ್ರಿಕನ ಆಗಮನ ಅವರಿಗೆ ಅನಿರೀಕ್ಷಿತ ಉಡುಗೊರೆಯಾಗಿತ್ತು. ಆದರೆ ಹೋಟೆಲ್ ಮಾಲೀಕನಿಗೆ ಮಾತ್ರ ಅದು ಒಂದು ದೊಡ್ಡ ಆಘಾತವಾಗಿತ್ತು.

ನೀತಿ :-- ಸಾಲದ ಬಗ್ಗೆ ಜಾಗೃತಿ ಮೂಡಿಸುತ್ತದೆ. ಅತಿಯಾದ ಸಾಲ ಮಾಡುವುದರಿಂದ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ಈ ಕಥೆ ಹೇಳುತ್ತದೆ.

Saturday, November 30, 2024

ಹನುಮಂತ ಶನಿಯನ್ನು ಕ್ಷಮಿಸಿ, ಒಳ್ಳೆಯ ಮಾರ್ಗ ತೋರಿದ

 ಒಮ್ಮೆ, ಶನಿ ದೇವರು ತನ್ನ ಹೆತ್ತವರ ಮೇಲೆ ಕೋಪಗೊಂಡು ಮನೆಯಿಂದ ಓಡಿಹೋಗಿದ್ದ. ಕೋಪದಲ್ಲಿ, ತನ್ನ ಶಕ್ತಿಯನ್ನು ಪ್ರದರ್ಶಿಸಲು ಆರಂಭಿಸಿದ. ಅವನು ಒಂದು ಗ್ರಾಮಕ್ಕೆ ಬಂದು, ಅಲ್ಲಿನ ಜನರು ತನಗೆ ನೀರು ಕೊಡಲು ನಿರಾಕರಿಸಿದಾಗ, ಕೋಪದಿಂದ ಗ್ರಾಮವನ್ನು ಸುಟ್ಟು ಹಾಕಲು ಪ್ರಯತ್ನಿಸಿದ.

ಗ್ರಾಮಸ್ಥರು ಭಯಭೀತರಾಗಿ, ಶನಿಯನ್ನು ಸುತ್ತುವರಿದು ಹಿಡಿಯಲು ಪ್ರಯತ್ನಿಸಿದರು. ಆಗ, ಅಲ್ಲಿಗೆ ಹನುಮಂತನು ಬಂದ. ಹನುಮಂತನು ಶನಿಯನ್ನು ಶಾಂತಗೊಳಿಸಿ, ಮನೆಗೆ ಹೋಗುವಂತೆ ಬೇಡಿಕೊಂಡ. ಆದರೆ, ಶನಿ ತನ್ನ ಅಹಂಕಾರದಿಂದ ಹನುಮಂತನ ಮಾತನ್ನು ಕೇಳಲಿಲ್ಲ. ಬದಲಾಗಿ, ಹನುಮಂತನೊಂದಿಗೆ ಯುದ್ಧಕ್ಕೆ ಸಿದ್ಧನಾದ.

ಇಬ್ಬರ ನಡುವೆ ಭೀಕರವಾದ ಗಧಾ ಯುದ್ಧ ನಡೆಯಿತು. ಆಕಾಶವು ಗುಡುಗು ಸದ್ದು ಮತ್ತು ಮಿಂಚಿನಿಂದ ಕಂಪಿಸುತ್ತಿತ್ತು. ಆದರೆ, ಹನುಮಂತನ ಶಕ್ತಿಯು ಅಪಾರವಾಗಿತ್ತು. ಅವನು ಶನಿಯನ್ನು ಸೋಲಿಸಿ, ತನ್ನ ಬಾಲದಲ್ಲಿ ಕಟ್ಟಿಕೊಂಡು, ಶನಿಯ ತಂದೆಯ ಬಳಿಗೆ ಕರೆದೊಯ್ದ.

ಶನಿಯ ತಂದೆಯು ತನ್ನ ಮಗನನ್ನು ನೋಡಿ ಬಹಳ ವಿಷಾದಿಸಿದ. ಅವನು ಹನುಮಂತನನ್ನು ಕ್ಷಮಿಸಿ, ಶನಿಯನ್ನು ಸರಿಯಾದ ಮಾರ್ಗಕ್ಕೆ ತರಲು ಸಹಾಯ ಮಾಡುವಂತೆ ಕೇಳಿಕೊಂಡ. ಹನುಮಂತನು ಕರುಣಾಳುವಾಗಿ ಶನಿಯನ್ನು ಕ್ಷಮಿಸಿ, ಅವನಿಗೆ ಒಳ್ಳೆಯ ಮಾರ್ಗವನ್ನು ತೋರಿಸಿದನು.

ನೀತಿ :-- ಅಹಂಕಾರವನ್ನು ತೊರೆದು, ಕರುಣೆ ಮತ್ತು ಗುರುವಿನ ಮಾತನ್ನು ಆಲಿಸುವಂತೆ ಕಲಿಸುತ್ತದೆ.

ಹನುಮಂತನನ್ನು ತನ್ನ ಗುರುವಾಗಿ ಸ್ವೀಕರಿಸಿ, ಆಜ್ಞೆಯನ್ನು ಪಾಲಿಸಿದ ಶನಿ

 ಹನುಮಂತನಲ್ಲಿ ಕ್ಷಮೆ ಮತ್ತು ಸಹನಾ ಗುಣಗಳು ಕಾಣಬಹುದು. ಇಂತಹ ಅನೇಕ ಗುಣಗಳಿರುವ ಹನುಮಂತನ ಅಪಾರ ಶಕ್ತಿ ಮತ್ತು ಭಕ್ತಿಯನ್ನು ಪ್ರದರ್ಶಿಸುವ ಒಂದು ಸುಂದರ ಕಥೆ ನೋಡಬಹುದು. ಅವನು ಶನಿದೇವನಂತಹ ಶಕ್ತಿಶಾಲಿ ದೇವತೆಯನ್ನು ಸಹ ತನ್ನ ಇಚ್ಛೆಗೆ ಒಳಪಡಿಸಿದ. ಮತ್ತು ಭಗವಂತನ ಆಶ್ರಯದಲ್ಲಿ ಇದ್ದರೆ ಯಾವುದೇ ಕಷ್ಟವನ್ನು ಸುಲಭವಾಗಿ ಜಯಿಸಬಹುದು ಎಂಬ ವಿಶ್ವಾಸವನ್ನು ನೀಡುವ ಹನುಮಂತ ಹಾಗೂ ಶನಿಯ ಕುರಿತ ಕಥೆ ಇಲ್ಲಿ ನೋಡಬಹುದು.

ಕಲಿಯುಗದ ಆಗಮನದೊಂದಿಗೆ ಭೂಮಿಯಲ್ಲಿ ಒಂದು ಹೊಸ ಅಧ್ಯಾಯ ಆರಂಭವಾಗಿತ್ತು. ಧರ್ಮ ಕ್ಷೀಣಿಸಿ ಅಧರ್ಮ ಬೆಳೆಯುತ್ತಿತ್ತು. ಈ ಮಹಾಪರಿವರ್ತನದ ಸಮಯದಲ್ಲಿ ಶನಿದೇವನು ಹನುಮಂತನನ್ನು ಭೇಟಿಯಾಗಲು ನಿರ್ಧರಿಸಿದ. ಹನುಮಂತನಂತಹ ಭಕ್ತನ ಮೇಲೂ ತನ್ನ ಗ್ರಹದೋಷದ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬ ಚಿಂತೆಯಿಂದಲೇ ಅವನು ಹನುಮಂತನ ಆಶ್ರಯಕ್ಕೆ ಬಂದಿದ್ದ. "ಆಂಜನೇಯ, ಕಲಿಯುಗದ ಆಗಮನದಿಂದ ದೇವತೆಗಳಿಗೆ ಭೂಮಿಯಲ್ಲಿ ಇರುವುದು ಕಷ್ಟವಾಗಿದೆ. ಎಲ್ಲರ ಮೇಲೂ ನನ್ನ ಗ್ರಹದೋಷದ ಪ್ರಭಾವ ಬೀರುತ್ತಿದೆ. ನಿನು ರಾಮನ ಅಪಾರ ಭಕ್ತ. ಆದ್ದರಿಂದ ನನ್ನ ದೋಷವು ನಿನ್ನ ಮೇಲೆ ಪ್ರಭಾವ ಬೀರದಿರಬಹುದು. ಆದ್ದರಿಂದ ನೀನು ನನ್ನನ್ನು ಬಿಟ್ಟು ಬೇರೆ ಕಡೆ ಹೋಗು," ಎಂದು ಶನಿದೇವ ವಿಜ್ಞಾಪಿಸಿದ.

ಹನುಮಂತನು ಶಾಂತವಾಗಿ ನಗುತ್ತಾ, "ಶನಿದೇವ, ನೀನು ಧರ್ಮದ ರಕ್ಷಕ. ನಿನ್ನ ಕರ್ಮವನ್ನು ನಿರ್ವಹಿಸು. ನಾನು ನನ್ನ ಕರ್ಮವನ್ನು ನಿರ್ವಹಿಸುತ್ತೇನೆ," ಎಂದು ಹೇಳಿದ.

ಶನಿದೇವನಿಗೆ ಹನುಮಂತನ ಈ ಉತ್ತರ ಅಚ್ಚರಿಯನ್ನುಂಟು ಮಾಡಿತು. ಅವನು ತನ್ನ ಕೆಲಸವನ್ನು ಮಾಡಲು ನಿರ್ಧರಿಸಿ ಹನುಮಂತನ ಹಣೆಯ ಮೇಲೆ ಕುಳಿತುಕೊಂಡನು. ತಕ್ಷಣವೇ ಹನುಮಂತನ ಹಣೆಯಲ್ಲಿ ತುರಿಕೆ ಶುರುವಾಯಿತು. ಅವನು ಸಹಿಸಲಾಗದ ನೋವಿನಿಂದ ಪರ್ವತವೊಂದನ್ನು ಎತ್ತಿ ತನ್ನ ಹಣೆಯ ಮೇಲೆ ಇಟ್ಟುಕೊಂಡ. "ಆಂಜನೇಯ, ನೀನು ಏನು ಮಾಡುತ್ತಿದ್ದೀಯ?" ಎಂದು ಶನಿದೇವನು ಆತಂಕದಿಂದ ಕೇಳಿದ. "ನೀನು ನಿನ್ನ ಕೆಲಸ ಮಾಡು, ನಾನು ನನ್ನ ಕೆಲಸ ಮಾಡುತ್ತೇನೆ," ಎಂದು ಹನುಮಂತ ಶಾಂತವಾಗಿ ಹೇಳಿದ.

ತುರಿಕೆ ಇನ್ನೂ ನಿಲ್ಲದಿದ್ದರಿಂದ ಹನುಮಂತನು ಮತ್ತೊಂದು ಪರ್ವತವನ್ನು ಎತ್ತಿ ತನ್ನ ತಲೆಯ ಮೇಲೆ ಇಟ್ಟುಕೊಂಡನು. ಪರ್ವತದ ಭಾರವನ್ನು ತಾಳಲಾರದೆ ಶನಿದೇವನು ಹನುಮಂತನನ್ನು ಬಿಟ್ಟುಬಿಡುವಂತೆ ಬೇಡಿಕೊಂಡ. ಆದರೆ ಹನುಮಂತ ಶನಿಯ ಸೊಕ್ಕನ್ನು ಮುರಿಯಲು ಮತ್ತೊಂದು ಪರ್ವತವನ್ನು ಎತ್ತಿ ತನ್ನ ತಲೆಯ ಮೇಲೆ ಇಟ್ಟುಕೊಂಡ. ಶನಿದೇವನಿಗೆ ಹನುಮಂತನ ಈ ಕೃತ್ಯ ಆಘಾತವನ್ನುಂಟು ಮಾಡಿತು. ಅವನು ತನ್ನ ತಪ್ಪನ್ನು ಅರಿತು ಹನುಮಂತನಲ್ಲಿ ಕ್ಷಮೆಯಾಚಿಸಿದ. ಆದರೆ ಹನುಮಂತನು ನಾಲ್ಕನೇ ಪರ್ವತವನ್ನು ಎತ್ತಿ ತನ್ನ ತಲೆಯ ಮೇಲೆ ಇಟ್ಟುಕೊಂಡ. ಶನಿದೇವ ದುಃಖದಿಂದ ಹನುಮಂತನನ್ನು ಬಿಟ್ಟುಬಿಡುವಂತೆ ಕೇಳಿಕೊಂಡ. ಅಂತಿಮವಾಗಿ ಹನುಮಂತನು ಶನಿಯನ್ನು ನೋವಿನಿಂದ ಮುಕ್ತಗೊಳಿಸಿದ.

ಈ ಘಟನೆಯ ನಂತರ ಶನಿದೇವನಿಗೆ ಹನುಮಂತನ ಬಗ್ಗೆ ಅಪಾರ ಗೌರವ ಮೂಡಿತು. ಅವನು ಹನುಮಂತನನ್ನು ತನ್ನ ಗುರುವಾಗಿ ಸ್ವೀಕರಿಸಿ ಅವನ ಆಜ್ಞೆಯನ್ನು ಪಾಲಿಸುವೆನೆಂದು ಪ್ರತಿಜ್ಞೆ ಮಾಡಿದ.

ನೀತಿ :-- ಭಕ್ತಿಯ ಶಕ್ತಿ ಅಪಾರ. ಸತ್ಯ ಮತ್ತು ಧರ್ಮವನ್ನು ಎಂದಿಗೂ ಬಿಡಬಾರದು. ಅಲ್ಲದೆ ಸೊಕ್ಕು ಮತ್ತು ಅಹಂಕಾರವು ನಮ್ಮನ್ನು ನಾಶ ಮಾಡುತ್ತದೆ.

ಭಕ್ತಿಯ ಶಕ್ತಿ ಎಷ್ಟೇ ಕಷ್ಟದ ಪರಿಸ್ಥಿತಿಯೂ ಶಾಂತವಾಗುತ್ತದೆ

 ಕಿಷ್ಕಿಂದೆಯ ಕಾಡಿನಲ್ಲಿ, ಹನುಮಂತನು ತನ್ನ ಆತ್ಮೀಯ ಸ್ವಾಮಿ ಶ್ರೀರಾಮನನ್ನು ಸ್ಮರಿಸುತ್ತಾ ಆಸೀನನಾಗಿದ್ದ. ಅವನ ಮನಸ್ಸು ರಾಮನ ಸುಂದರ ರೂಪದಲ್ಲಿ ಮುಳುಗಿತ್ತು. ಆ ಸಮಯದಲ್ಲಿ, ತನ್ನ ಶಕ್ತಿಯನ್ನು ಪ್ರದರ್ಶಿಸುವ ಆಸೆಯಿಂದ ಶನಿದೇವನು ಅಲ್ಲಿಗೆ ಆಗಮಿಸಿದ. ಶನಿದೇವನು ಹನುಮಂತನನ್ನು ನೋಡಿ, "ಹೇ ಹನುಮಂತ! ನಾನು ಶನಿದೇವ. ನಿನ್ನ ಶಕ್ತಿಯ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ನನ್ನ ಶಕ್ತಿಯನ್ನು ನೀನು ಇನ್ನೂ ಅನುಭವಿಸಿಲ್ಲ. ನನ್ನೊಂದಿಗೆ ಯುದ್ಧಕ್ಕೆ ಸಿದ್ಧನಾಗು!" ಎಂದು ಸವಾಲು ಹಾಕಿದ.

ಹನುಮಂತನು ತನ್ನ ಧ್ಯಾನದಿಂದ ಹೊರಬಂದು ಶನಿದೇವನನ್ನು ನೋಡಿದ. ಆದರೆ ಅವನ ಮನಸ್ಸು ಇನ್ನೂ ರಾಮನಲ್ಲಿ ಮುಳುಗಿತ್ತು. ಶನಿದೇವನ ಮಾತನ್ನು ಅವನು ಅಷ್ಟಾಗಿ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ ಶನಿದೇವನು ಪದೇ ಪದೇ ಕಿರಿಕಿರಿ ಮಾಡುತ್ತಿದ್ದರಿಂದ ಅಂತಿಮವಾಗಿ ಹನುಮಂತನು ಕೋಪಗೊಂಡು ಯುದ್ಧಕ್ಕೆ ಸಿದ್ಧನಾದ. ಅವರ ನಡುವೆ ಭೀಕರ ಯುದ್ಧ ನಡೆಯಿತು. ಆಕಾಶವು ಕಪ್ಪು ಮೋಡಗಳಿಂದ ಕೂಡಿತು. ಮಿಂಚು ಹೊಳೆಯಿತು, ಗುಡುಗು ಸದ್ದು ಕೇಳಿಸಿತು. ಭೂಮಿ ಕಂಪಿಸುತ್ತಿತ್ತು. ಹನುಮಂತನ ಬಾಲವು ಬೆಂಕಿಯ ಜ್ವಾಲೆಯಂತೆ ಹೊಳೆಯುತ್ತಿತ್ತು. ಅವನ ಪ್ರತಿಯೊಂದು ಹೊಡೆತವೂ ಶನಿದೇವನನ್ನು ಹಿಂದಕ್ಕೆ ತಳ್ಳುತ್ತಿತ್ತು.

ಆದರೆ ಶನಿದೇವನೂ ಸಹ ಸುಲಭವಾಗಿ ಹಿಂದೆ ಸರಿಯಲಿಲ್ಲ. ಅವನು ತನ್ನ ಎಲ್ಲಾ ಶಕ್ತಿಯಿಂದ ಹನುಮಂತನನ್ನು ಹೋರಾಡಿದನು. ಆದರೆ ಹನುಮಂತನ ಶಕ್ತಿಯನ್ನು ನೋಡಿ ಆತನಿಗೆ ಆಶ್ಚರ್ಯವಾಯಿತು. ಹನುಮಂತನ ಬಾಲದಿಂದ ಹೊರಟ ಬೆಂಕಿಯ ಜ್ವಾಲೆಗಳು ಶನಿದೇವನನ್ನು ಸುಟ್ಟು ಹಾಕುತ್ತಿದ್ದವು. ಕೊನೆಗೆ ತನ್ನ ಸೋಲನ್ನು ಅರಿತುಕೊಂಡ ಶನಿದೇವನು ಹನುಮಂತನ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದ. "ಹನುಮಂತ, ದಯವಿಟ್ಟು ನನ್ನನ್ನು ಕ್ಷಮಿಸು. ನನ್ನ ಅಹಂಕಾರದಿಂದಾಗಿ ನಾನು ನಿನ್ನನ್ನು ಕೆರಳಿಸಿದೆ. ದಯವಿಟ್ಟು ನನ್ನನ್ನು ಬಿಡುಗಡೆ ಮಾಡು" ಎಂದು ಅಳುತ್ತಾ ಕೇಳಿಕೊಂಡನು.

ಹನುಮಂತನ ಹೃದಯವು ಕರುಣೆಯಿಂದ ತುಂಬಿತು. ಅವನು ಶನಿದೇವನನ್ನು ತನ್ನ ಬಾಲದಲ್ಲಿ ಕಟ್ಟಿಟ್ಟುಕೊಂಡು ಆಕಾಶದಲ್ಲಿ ಎತ್ತಿಕೊಂಡು ಹೋದ. ಭೂಮಿಯ ಮೇಲೆ ಎಲ್ಲೆಲ್ಲಿ ನೋಡಿದರೂ ಶನಿದೇವನಿಗೆ ತಂಪಾದ ನೀರು ಸಿಗುತ್ತಿರಲಿಲ್ಲ. ಬಹಳ ಸಮಯದ ನಂತರ ಅವನಿಗೆ ಸಾಸಿವೆ ಎಣ್ಣೆಯ ಸಮುದ್ರ ಸಿಕ್ಕಿತು. ಹನುಮಂತನು ಶನಿದೇವನನ್ನು ಆ ಎಣ್ಣೆಯಲ್ಲಿ ಮುಳುಗಿಸಿದನು. ಸಾಸಿವೆ ಎಣ್ಣೆಯ ತಂಪಾದ ಸ್ಪರ್ಶದಿಂದ ಶನಿದೇವನಿಗೆ ಬಹಳ ಆರಾಮವಾಯಿತು. ಅದಾದ ಮೇಲೆ ಹನುಮಂತನು ಶನಿದೇವನನ್ನು ಬಿಡುಗಡೆ ಮಾಡಿದ. ಶನಿದೇವನು ಹನುಮಂತನ ಕಾಲಿಗೆ ಬಿದ್ದು ಕೃತಜ್ಞತೆ ಸಲ್ಲಿಸಿದನು. ಅಂದಿನಿಂದ ಶನಿದೇವ ಹನುಮಂತನ ಅಪಾರ ಭಕ್ತನಾದ.

ನೀತಿ :-- ಅಹಂಕಾರದಿಂದ ಅಪಾಯ. ಭಕ್ತಿಯ ಶಕ್ತಿ ಎಷ್ಟೇ ಕಷ್ಟದ ಪರಿಸ್ಥಿತಿಯಲ್ಲಿದ್ದರೂ ಶಾಂತವಾಗುತ್ತದೆ.

ಮೂವತ್ತು ವರ್ಷಗಳ ಹಿಂದಿನ ಸತ್ಯ

 ಸೂರ್ಯನ ಕಿರಣಗಳು ವೃದ್ಧಾಶ್ರಮದ ಕಿಟಕಿಗಳ ಮೂಲಕ ಒಳ ನುಸುಳುತ್ತಿದ್ದವು. ಅದರಲ್ಲಿ ಒಂದು ಕೋಣೆಯಲ್ಲಿ, ಮೂವತ್ತು ವರ್ಷದ ಸುಮಿತ್ ತನ್ನ ತಂದೆ ರಾಮಚಂದ್ರನ ವಸ್ತುಗಳನ್ನು ಜೋಡಿಸುತ್ತಿದ್ದ. ಸುಮಿತ್‌ನ ಮನಸ್ಸು ಒಂದು ಕಡೆ ತನ್ನ ತಂದೆಯನ್ನು ವೃದ್ಧಾಶ್ರಮದಲ್ಲಿ ಬಿಟ್ಟ ಬೇಸರದಿಂದಲೂ, ಮತ್ತೊಂದೆಡೆ ಹೆಂಡತಿ ಅನುಜಾಳ ಮಾತುಗಳಿಂದಲೂ ತುಂಬಿತ್ತು. ಅನುಜಾ ಫೋನಿನಲ್ಲಿ ಹೇಳಿದ್ದ ಮಾತುಗಳು ಇನ್ನೂ ಅವನ ಕಿವಿಗಳಲ್ಲಿ ರಿಂಗಣಿಸುತ್ತಿದ್ದವು. "ತಂದೆಗೆ ಮತ್ತೆ ಮನೆಗೆ ಬರುವುದು ಬೇಡ, ವರ್ಷವಿಡೀ ಹಬ್ಬ ಹರಿದಿನಗಳಲ್ಲೂ ಅಲ್ಲೇ ಇರುವಂತೆ ಹೇಳು."

ಸುಮಿತ್ ತನ್ನ ತಂದೆಯನ್ನು ನೋಡಿದಾಗ, ಅವರು ವೃದ್ಧಾಶ್ರಮದ ಮೇಲ್ವಿಚಾರಕರೊಂದಿಗೆ ನಗುನಗುತ್ತಾ ಮಾತನಾಡುತ್ತಿದ್ದರು. ಇದನ್ನು ನೋಡಿ ಸುಮಿತ್‌ಗೆ ಆಶ್ಚರ್ಯವಾಯಿತು. ತನ್ನ ತಂದೆಗೆ ಅಲ್ಲಿ ಎಲ್ಲರೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿದೆ ಎಂದು ತಿಳಿದು ಸಂತೋಷವಾಯಿತು. ಆದರೆ, ಅನುಜಾಳ ಮಾತುಗಳು ಮತ್ತೆ ಅವನ ಮನಸ್ಸನ್ನು ಕೆರೆದುಕೊಂಡವು.

ಸುಮಿತ್ ತನ್ನ ತಂದೆಯ ಕೋಣೆಗೆ ಸಾಮಾನು ಇಡಲು ಹೋದಾಗ ಮೇಲ್ವಿಚಾರಕರನ್ನು ಕೇಳಿದ, "ನನ್ನ ಅಪ್ಪನಿಗೆ ನಿಮ್ಮ ಪರಿಚಯ ಇದೆಯಾ?" ಮೇಲ್ವಿಚಾರಕರು ನಗುತ್ತಾ ಹೇಳಿದರು, "ನನ್ನ ನಿಮ್ಮ ತಂದೆಯ ಪರಿಚಯ ಮೂವತ್ತು ವರ್ಷದ ಹಿಂದಿನದು. ಮೂವತ್ತು ವರ್ಷದ ಹಿಂದೆ ಅವರು ಈ ಅನಾಥಾಶ್ರಮಕ್ಕೆ ಬಂದು ಒಂದು ಅನಾಥ ಮಗುವನ್ನು ದತ್ತು ತೆಗೆದುಕೊಂಡಿದ್ದರು."

ಸುಮಿತ್‌ಗೆ ಆಗ ಅರ್ಥವಾಯಿತು. ತನ್ನ ತಂದೆ ಯಾವಾಗಲೂ ದಯಾಳು ಮತ್ತು ಕರುಣಾಮಯಿ. ಅವರು ಒಬ್ಬ ಅನಾಥನಿಗೆ ತಂದೆಯಾಗಿದ್ದರು. ಆದರೆ, ತಾನು ಅದನ್ನು ಮರೆತಿದ್ದೆ. ತನ್ನ ಹೆಂಡತಿಯ ಮಾತುಗಳಿಗೆ ಬಲಿಯಾಗಿ ತನ್ನ ತಂದೆಯ ಈ ಮಹಾನ್ ಕಾರ್ಯವನ್ನು ಮರೆತಿದ್ದೆ.

ಸುಮಿತ್‌ಗೆ ತನ್ನ ತಂದೆಯ ಮೇಲೆ ಅಪಾರ ಗೌರವ ಮತ್ತು ಪ್ರೀತಿ ಹುಟ್ಟಿಕೊಂಡಿತು. ಅವನ ಕಣ್ಣುಗಳಲ್ಲಿ ನೀರು ತುಂಬಿತ್ತು. ತನ್ನ ತಂದೆಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ. ಅಂದು ಸುಮಿತ್‌ಗೆ ಅರ್ಥವಾಯಿತು, ಜೀವನದಲ್ಲಿ ಸಂಬಂಧಗಳು ಎಷ್ಟು ಮುಖ್ಯ ಮತ್ತು ಅವುಗಳನ್ನು ಹೇಗೆ ಬೆಳೆಸಿಕೊಳ್ಳಬೇಕು ಎಂದು.

ನೀತಿ :-- ಮುಂದಿನ ದಿನಗಳಲ್ಲಿ ಸುಮಿತ್ ತನ್ನ ತಂದೆಯನ್ನು ಹೆಚ್ಚು ಹೆಚ್ಚು ಭೇಟಿ ಮಾಡುತ್ತಿದ್ದ. ಅವರೊಂದಿಗೆ ಸಮಯ ಕಳೆಯುತ್ತಿದ್ದ. ತಂದೆಯ ಜೊತೆ ಕಳೆದ ಪ್ರತಿ ಕ್ಷಣವನ್ನು ಅವನು ಆನಂದಿಸುತ್ತಿದ್ದ. ಸುಮಿತ್‌ಗೆ ಅರ್ಥವಾಯಿತು, ಜೀವನದಲ್ಲಿ ಹಣ, ಆಸ್ತಿಗಿಂತ ಸಂಬಂಧಗಳು ಬಹಳ ಮುಖ್ಯ.

ಆಹಾರ ಮತ್ತು ಆತ್ಮದ ಸಂಬಂಧ

 ಒಂದು ಕಾಲದಲ್ಲಿ, ಒಂದು ಸಣ್ಣ ಹಳ್ಳಿಯಲ್ಲಿ ಒಬ್ಬ ಸರಳ ಮನುಷ್ಯ ವಾಸಿಸುತ್ತಿದ್ದ. ಅವನು ಪ್ರತಿದಿನ ಬೆಳಗ್ಗೆ ಎದ್ದು, ತನ್ನ ತೋಟದಿಂದ ತಾಜಾ ತರಕಾರಿಗಳನ್ನು ಕೊಯ್ದು, ಅದನ್ನು ಕೈಯಲ್ಲಿ ಹಿಡಿದು, ಮನೆಯಲ್ಲಿ ಸರಳವಾದ ಊಟ ಮಾಡುತ್ತಿದ್ದ. ಅವನು ಊಟ ಮಾಡುವಾಗ, ಪ್ರತಿ ಬೆರಳು ಆಹಾರವನ್ನು ಸ್ಪರ್ಶಿಸುವಾಗ, ಅವನಿಗೆ ಅನುಭವವಾಗುತ್ತಿತ್ತು, ಆಹಾರವು ಅವನ ದೇಹಕ್ಕೆ ಪೋಷಣೆ ನೀಡುತ್ತಿದೆ ಎಂಬುದಕ್ಕಿಂತ ಹೆಚ್ಚಾಗಿ, ಅದು ಅವನ ಆತ್ಮಕ್ಕೆ ಶಾಂತಿ ನೀಡುತ್ತಿದೆ.

ಒಮ್ಮೆ, ಅವನ ಹಳ್ಳಿಗೆ ಒಬ್ಬ ವಿದೇಶಿಯೊಬ್ಬ ಬಂದ. ಅವನು ಚಮಚ ಮತ್ತು ಫೋರ್ಕ್ ಬಳಸಿ ಊಟ ಮಾಡುತ್ತಿದ್ದ. ಗ್ರಾಮಸ್ಥರು ಅವನನ್ನು ವಿಚಿತ್ರವಾಗಿ ನೋಡುತ್ತಿದ್ದರು. ಆ ವಿದೇಶಿಯು ಚಮಚ ಮತ್ತು ಫೋರ್ಕ್ ಬಳಸುವುದು ಏಕೆ ಎಂದು ಕೇಳಿದಾಗ, ಗ್ರಾಮಸ್ಥನು, "ಕೈಗಳಿಂದ ತಿನ್ನುವುದು ನಮ್ಮ ಸಂಸ್ಕೃತಿ. ಕೈಗಳು ಆಹಾರವನ್ನು ಪವಿತ್ರಗೊಳಿಸುತ್ತವೆ ಮತ್ತು ನಮ್ಮ ಆತ್ಮಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುತ್ತವೆ." ಎಂದು ಹೇಳಿದ.

ವಿದೇಶಿಯು ಇದನ್ನು ಕೇಳಿ ಆಶ್ಚರ್ಯಚಕಿತನಾದ. ಅವನು ಕುತೂಹಲದಿಂದ ಗ್ರಾಮಸ್ಥನೊಂದಿಗೆ ಊಟ ಮಾಡಲು ಕುಳಿತ. ಅವನು ಕೈಗಳಿಂದ ಊಟ ಮಾಡಿದಾಗ, ಅವನಿಗೆ ಒಂದು ವಿಚಿತ್ರವಾದ ಅನುಭವವಾಯಿತು. ಆಹಾರವು ಅವನ ದೇಹಕ್ಕೆ ಮಾತ್ರವಲ್ಲ, ಅವನ ಮನಸ್ಸಿಗೂ ಶಾಂತಿ ನೀಡುತ್ತಿದೆ ಎಂದು ಅವನಿಗೆ ಅನಿಸಿತು.

ಅವನು ಮನೆಗೆ ಹೋದ ನಂತರ, ಅವನು ಈ ಬಗ್ಗೆ ಹೆಚ್ಚಿನ ಸಂಶೋಧನೆ ಮಾಡಲು ಪ್ರಾರಂಭಿಸಿದ. ಅವನು "ನಮ್ಮ ಕೈಗಳಲ್ಲಿ ಐದು ಅಂಶಗಳ ಶಕ್ತಿ ಇರುತ್ತದೆ. ಅದು ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂಮಿ. ಈ ಅಂಶಗಳು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತವೆ ಮತ್ತು ನಮ್ಮ ದೇಹ ಮತ್ತು ಮನಸ್ಸನ್ನು ಸಮತೋಲನಗೊಳಿಸುತ್ತವೆ" ಎಂದುಬಕಂಡುಕೊಂಡ.

ಅವನು ತನ್ನ ದೇಶಕ್ಕೆ ಹಿಂದಿರುಗಿದಾಗ, ಅವನು ತನ್ನ ಸ್ನೇಹಿತರಿಗೆ ಮತ್ತು ಕುಟುಂಬಕ್ಕೆ ಕೈಗಳಿಂದ ತಿನ್ನುವ ಬಗ್ಗೆ ಹೇಳಿದ. ಅವರೆಲ್ಲರೂ ಇದನ್ನು ಪ್ರಯತ್ನಿಸಿ ನೋಡಿದರು ಮತ್ತು ಅವರಿಗೆ ಇದು ತುಂಬಾ ಇಷ್ಟವಾಯಿತು. ಇಂದಿಗೂ, ಅನೇಕ ಜನರು ಕೈಗಳಿಂದ ತಿನ್ನುವುದನ್ನು ಮುಂದುವರಿಸುತ್ತಾರೆ. ಏಕೆಂದರೆ ಅವರಿಗೆ ಗೊತ್ತು, ಕೈಗಳು ಆಹಾರಕ್ಕಿಂತ ಹೆಚ್ಚಾಗಿ, ನಮ್ಮ ಆತ್ಮಕ್ಕೆ ಸಂಪರ್ಕ ಕಲ್ಪಿಸುತ್ತವೆ.

ನೀತಿ :-- ಕೈಗಳಿಂದ ತಿನ್ನುವುದು ಕೇವಲ ಆಹಾರವನ್ನು ಸೇವಿಸುವ ವಿಧಾನವಲ್ಲ, ಅದು ನಮ್ಮ ಸಂಸ್ಕೃತಿ ಮತ್ತು ಆಧ್ಯಾತ್ಮದ ಭಾಗವಾಗ. ಕೈಗಳು ನಮ್ಮ ದೇಹ ಮತ್ತು ಮನಸ್ಸನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತವೆ. ಕೈಗಳಿಂದ ತಿನ್ನುವುದರಿಂದ ಆಹಾರವನ್ನು ಹೆಚ್ಚು ಆನಂದಿಸಬಹುದು. ಆದ್ದರಿಂದ ನಮ್ಮ ಪೂರ್ವಜರ ಸಂಸ್ಕೃತಿಯಲ್ಲಿ ಅನೇಕ ವಿಶೇಷ ವಿಷಯಗಳಿವೆ, ಅವುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.

ಕರಾಗ್ರೆ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ|

ಕರಮೂಲೇ ತು ಗೋವಿಂದಃ ಪ್ರಭಾತೆ ಕರದರ್ಶನಮ್ ||

ಅಂದರೆ ಕೈಗಳ ಮುಂದಿನ ಭಾಗದಲ್ಲಿ ಲಕ್ಷ್ಮೀ ವಾಸಿಸುತ್ತಾಳೆ. ಕೈಗಳ ಮಧ್ಯಭಾಗದಲ್ಲಿ ಸರಸ್ವತಿ ನೆಲೆಸಿದ್ದಾಳೆ ಮತ್ತು ಮೂಲಭಾಗದಲ್ಲಿ ಗೋವಿಂದನಿದ್ದಾನೆ. ಹೀಗಾಗಿ ಬೆಳಗ್ಗೆ ಎದ್ದ ಕೂಡಲೆ ಕೈಗಳ ದರ್ಶನವನ್ನು ಪಡೆದುಕೊಳ್ಳಬೇಕು. ಈ ಶ್ಲೋಕ, ದೈವತ್ವ ನಮ್ಮ ಕೈಗಳ ಒಳಗೆ ಇರುತ್ತದೆ ಎಂಬುದನ್ನು ಸೂಚಿಸುತ್ತದೆ.

ಅನ್ನದಾನದ ಮಹಿಮೆ

 ಸತ್ಯಜಿತ್‌ ಎಂಬ ಬ್ರಾಹ್ಮಣ. ಆತ ಸದಾಚಾರ ಸಂಪನ್ನ. ಅಲ್ಲದೆ ಆತ ಗಂಗೆಯ ಭಕ್ತ. ಎಲ್ಲಿ ಯಾವ ತೀರ್ಥ ಕ್ಷೇತ್ರ ಹೋದರು ಯಾವ ನದಿಗಳು ಕಂಡರು ಗಂಗಾ ದೇವಿಯ ಸ್ಮರಣೆ ಮಾಡುತಿದ್ದ. ಯವಾಗಲೂ ತೀರ್ಥ ಯಾತ್ರೆ ಮಾಡುತಿದ್ದ.

ಒಮ್ಮೆ ಗಂಗಾ ಸ್ನಾನ ಮಾಡಬೇಕು ಎಂಬುವ ಹಂಬಲದಿಂದ ಹೊರಟ. ಕುರುಕ್ಷೇತ್ರ ಎನ್ನುವ ಊರಿಗೆ ಬರುತ್ತಾನೆ. ದಣಿದ ಆತನಿಗೆ ಯಾರಾದರೂ ಬ್ರಾಹ್ಮಣ ಕುಟುಂಬ ಯಾತ್ರಿಕರಿಗೆ ಊಟ ಹಾಕುವ ಕುಟುಂಬದ ಬಗ್ಗೆ ಅಲ್ಲಿ ಇದ್ದ ಜನರಿಗೆ ಕೇಳಿದ. ಆ ಗ್ರಾಮದ ಜನರು ಸತ್ಯಕೇತು ಎನ್ನುವ ಬ್ರಾಹ್ಮಣ ಆತ ನಿತ್ಯ ಅನ್ನದಾನ ಮಾಡುತ್ತಾ ಇದ್ದಾನೆ, ಅವನಲ್ಲಿ ನೀವು ಹೋಗಿ ನಿಮ್ಮ ಹಸಿವಿನ ಭಾದೆಯನ್ನು ನಿವಾರಣೆ ಮಾಡಿಕೊಳ್ಳಬಹುದೆಂದು ಹೇಳಿದರು.

ಸತ್ಯಜಿತ್‌ ಅವನ ಮನೆಗೆ ಬರುತ್ತಾನೆ. ಬಂದಂತಹ ಅತಿಥಿಯನ್ನು ನೋಡಿ ಸತ್ಯಕೇತು ಬಹು ಸಂತಸಗೊಂಡು 'ನಿಮ್ಮಂತಹ ಮಹಾತ್ಮರ, ಭಗವಂತನ ಭಕ್ತರ, ಆಗಮನ ನನ್ನ ಜನ್ಮಾಂತರದ ಪುಣ್ಯದ ಫಲ, ನಮ್ಮಪಿತೃದೇವತೆಗಳು ಇಂದು ಸಂತೃಪ್ತಿ ಹೊಂದುವರು. ಅಲ್ಲದೆ ಅವರ ಅಂತರ್ಯಾಮಿಯಾದ ಶ್ರೀ ಹರಿಯು ಸಂಪ್ರಸನ್ನ ಆಗುವನು. ಏಳಿ, ತಮ್ಮ ಸ್ನಾನ ಆಹ್ನೀಕಗಳನ್ನು ಮುಗಿಸಿಕೊಂಡು ಭೋಜನ ಮಾಡಲು ಸಿದ್ದರಾಗಿ ಎಂದು ಕೈಮುಗಿದು ವಿಜ್ಞಾಪಿಸಿದ.

ಸತ್ಯಜಿತ್‌ ಎನ್ನುವ ಬ್ರಾಹ್ಮಣ ಅವನ ಮಾತಿಗೆ ಸಂತಸಗೊಂಡು 'ಅಯ್ಯಾ, ಸತ್ಯಕೇತು ಎಲ್ಲಾ ಕಡೆಯಿಂದ ಹಾರಿ ಬರುವ ಪಕ್ಷಿಗಳಿಗೆ ವೃಕ್ಷಗಳು ಹೇಗೆ ಆಶ್ರಯ ನೀಡುವದೋ, ಅದೇ ರೀತಿಯಲ್ಲಿ ನೀನು ಬರುವಂತಹ ಯಾತ್ರಿಕರಿಗೆ ಆಶ್ರಯದಾತ ನಾಗಿದ್ದೀ, ನಿನ್ನಂತಹ ಗೃಹಸ್ಥ ಇನ್ನೊಬ್ಬ ಇಲ್ಲ" ಎನ್ನುತ್ತ, "ನೀನು ಗಂಗಾಸ್ನಾನ ಮಾಡಿರುವೆಯಾ?" ಎಂದು ಕೇಳಿದ. ಅದಕ್ಕೆ ಸತ್ಯಕೇತು "ಕ್ಷಮಿಸಿ. ನಾನು ಇದುವರೆಗೆ ಗಂಗಾಸ್ನಾನ ಮಾಡಿಲ್ಲ. ನಾನು ಗಂಗಾಸ್ನಾನ ಮಾಡಲು ಹೊರಟರೆ ಇಲ್ಲಿ ನಿತ್ಯ ಬರುವ ಯಾತ್ರಿಕರಿಗೆ ತೊಂದರೆ ಆಗುತ್ತದೆ. ಮತ್ತು ನನ್ನ ಅನ್ನದಾನ ಮಾಡುವ ಸಂಕಲ್ಪ ನಿಂತು ಹೋಗುತ್ತದೆ. ಹಾಗಾಗಿ ಹೋಗಿಲ್ಲ. ಎಂದು ಉತ್ತರಿರಿಸಿದ. ಈ ಮಾತನ್ನು ಕೇಳಿ ಸತ್ಯಜಿತ್‌ 'ಛೇ! ಗಂಗಾ ಸ್ನಾನ ಮಾಡದ ನಿನ್ನ ಮುಖ ದರುಶನ, ನಿನ್ನ ಮನೆಯ ಭೋಜನ ಆತಿಥ್ಯ ಎಲ್ಲಾ ನಿಷಿದ್ಧ, ತಿಳಿಯದೆ ನಿನ್ನ ಮನೆಗೆ ಬಂದೆ" ಎಂದು ಅವನ ಮನೆಯ ಆತಿಥ್ಯ ನಿರಾಕರಿಸಿ, ಅವನಿಗೆ ನಿಂದಿಸಿ ಹಾಗೇ ಹೊರಟ.

ಅಲ್ಲಿಂದ ಗಂಗಾನದಿಯ ದಡಕ್ಕೆ ಬಂದು ನೋಡಿದ, ಸುತ್ತಲೂ ಬರಿ ಮರುಳು. ಒಂದು ಹನಿ ಸಹ ಗಂಗಾ ನದಿಯ ಕಾಣುತ್ತಾ ಇಲ್ಲ "ಅಮ್ಮಾ, ಗಂಗಾ ಮಾತೆ!" ನಾನು ಯಾವ ಅಪರಾಧ ಮಾಡಿಲ್ಲ. ಯಾಕೇ ನಿನ್ನ ದರುಶನ, ಸ್ನಾನ ನನಗೆ ಇಲ್ಲ, ದಯವಿಟ್ಟು ಕೃಪೆ ಮಾಡೆಂದು ಮರುಳಲ್ಲಿ ಬಿದ್ದು ಗೋಳಾಡಿದ. ಆಗ ತಾಯಿ ಗಂಗೆ "ಎಲೈ ಮೂಢ! ಸತ್ಯಕೇತುವಿನ ಮನೆಯ ಅನ್ನವನ್ನು ತಿರಸ್ಕರಿಸಿ, ಅವನನ್ನು ನಿಂದಿಸಿ ಬಂದ ಕಾರಣದಿಂದ ನಿನಗೆ ನಾನು ಒಲಿಯುವದಿಲ್ಲ" ಎಂದಳು. "ಅನ್ನದಾನ ಕ್ಕೆ ಸಮನಾದ ದಾನ ಇನ್ನೊಂದು ಇಲ್ಲ. ನಿತ್ಯ ಅನ್ನದಾನ ಮಾಡುತ್ತಾ, ಯಾತ್ರೆ ಮಾಡಿದರೆ ಚ್ಯುತಿ ಆಗುವುದೆಂದು ಗಂಗಾಸ್ನಾನ ಮಾಡದೇ ಮನೆಯಲ್ಲಿ ಬಂದಂತಹ ಅತಿಥಿಗಳ ಸತ್ಕಾರ ಮಾಡಿ ಅವರನ್ನು ಸಂತಸ ಪಡಿಸುವ ಸತ್ಯಕೇತು ಎಂಬ ಸಜ್ಜನ ವ್ಯಕ್ತಿಯ ಮನಸ್ಸು ನೋಯಿಸಿ, ಅವನ ಆತಿಥ್ಯ ತಿರಸ್ಕರಿಸಿದ ಪಾಪಕ್ಕೆ ಇದು ಶಿಕ್ಷೆ. ಹೋಗಿ ಅವನ ಮನೆಯ ಆತಿಥ್ಯ ಸ್ವೀಕರಿಸಿ ಬಾ" ಎಂದು ಗಂಗಾದೇವಿ ಆದೇಶಿಸಿದಳು.

ತಾಯಿಯ ಆದೇಶದಂತೆ ಬೇಗನೆ ಅವನ ಮನೆಗೆ ಹೊರಡುತ್ತನೆ. ಅಲ್ಲಿ ಬಂದಂತಹ‌ ಅತಿಥಿ ಊಟ ಮಾಡದೆ ಹೊರಟ ಎನ್ನುವ ದುಃಖ ದಿಂದ ಸತ್ಯಕೇತು ಕುಳಿತಿದ್ದ. ಮತ್ತೆ ತಿರುಗಿ ಬಂದ ಬ್ರಾಹ್ಮಣನಿಗೆ ಮತ್ತೆ ಉಪಚಾರ ಮಾಡಿ ಭೋಜನ ಮಾಡಿಸಿ ಕಳುಹಿಸಿದ.

ಹೋಗುವ ಮುಂಚೆ "ಅನ್ನದಾನದ ಮಹಿಮೆಯನ್ನು ತಿಳಿಯದೇ ನಿನಗೆ ನಿಂದಿಸಿದೆ‌, ನನ್ನ ಕ್ಷಮಿಸಿ" ಎಂದು ಹೇಳಿ ಅವನ ಅಪ್ಪಣೆ ಪಡೆದು ಗಂಗಾನದಿಯ ಕಡೆ ಬರುತ್ತಾನೆ. ಆಗ ತುಂಬಿ ಹರಿಯುವ ಗಂಗೆಯ ಪ್ರವಾಹವನ್ನು ಕಂಡು ಸಂತಸ ಪಟ್ಟ. ಗಂಗೆಯಲ್ಲಿ ಮಿಂದು ಪುನೀತನಾಗುತ್ತಾನೆ ಸತ್ಯಜಿತ್.

ನೀತಿ :-- ಎಲ್ಲಾ ದಾನಗಳಿಗಿಂತ ಅನ್ನದಾನ ಶ್ರೇಷ್ಠ. ಅನ್ನವೇ ಪ್ರಾಣ. ಅನ್ನದಾನ ಮಾಡುವವನು ಹಸಿದವರಿಗೆ ಪ್ರಾಣದಾನ ಮಾಡಿದಂತೆ. ಅನ್ನದಾನವನ್ನು ಯಾರು ಮಾಡುತ್ತಾರೆಯೋ ಅವರು ಉತ್ತಮ ಲೋಕವನ್ನು ಪಡೆದು, ಭಗವಂತನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.

ಆನೆಯ ಬೆನ್ನ ಮೇಲಿನ ಸವಾರಿ

 ಒಂದು ದಟ್ಟವಾದ ಕಾಡು. ಅಲ್ಲಿ ಆನೆಯೊಂದಿತ್ತು. ದಿನಾಲೂ ನೀರು ಕುಡಿಯಲು ಸಮೀಪದ ಕೊಳಕ್ಕೆ ಹೋಗಿ, ನೀರು ಕುಡಿದು ಸಂಗಡಿಗರೊಂದಿಗೆ ಕೊಳದಲ್ಲಿ ಈಜುತ್ತಿತ್ತು. ಆ ಕೊಳದಲ್ಲೊಂದು ಕಪ್ಪೆ ವಾಸವಾಗಿತ್ತು. ಆನೆ ನೀರು ಕುಡಿದು ಈಜಾಡುವುದನ್ನು ಅದು ದಿನವೂ ನೋಡುತ್ತಿತ್ತು. ಅದಕ್ಕೆ ಒಮ್ಮೆಯಾದರೂ ಆನೆಯ ಬೆನ್ನನ್ನೇರಿ ಸವಾರಿ ಮಾಡಬೇಕೆಂಬ ಆಸೆಯಾಗಿತ್ತು. ಆದರೆ ಆನೆಯನ್ನು ಕೇಳಲು ಭಯ. ಹಾಗೂಹೀಗೂ ಒಂದು ದಿನ ಧೈರ್ಯ ಮಾಡಿ "ಆಯ್ಯಾ, ಆನೆ ನನ್ನದೊಂದು ಕೋರಿಕೆ ಇದೆ. ಸಾಯುವ ಮೊದಲು ನಿನ್ನ ಬೆನ್ನನ್ನು ಏರಿ ಕಾಡಿನಲ್ಲಿ ಸವಾರಿ ಮಾಡಬೇಕು" ಎಂದು ಕೇಳಿಯೇ ಬಿಟ್ಟಿತು. ಆನೆಗೆ ಕಪ್ಪೆಯ ಮೇಲೆ ಕನಿಕರ ಪಟ್ಟು ಅಷ್ಟೇ ತಾನೇ ಎಂದು ಅನುಮತಿ ನೀಡಿತು.

ಒಂದು ದಿನ ಬಿಡುವು ಮಾಡಿಕೊಂಡು ಆನೆ, ಕಪ್ಪೆ ಬಳಿಗೆ ಬಂದಿತು. ಕಪ್ಪೆಯ ಮುಂದೆ ಮಂಡಿಯೂರಿ ನೆಲದತ್ತ ಬಾಗಿತು. ಕಪ್ಪೆ ಆನೆಯ ಬೆನ್ನ ಮೇಲೆ ಹಾರಿತು. ಆನೆ ಕಪ್ಪೆಯನ್ನು ಸವಾರಿ ಕರೆದೊಯ್ಯಿತು. ಕಡೆಗೂ ಕಪ್ಪೆಯ ಬಹುದಿನಗಳ ಕನಸು ನೆರವೇರಿತ್ತು. ಆನೆ ಮತ್ತೆ ಕೊಳದ ಬಳಿ ತಂದುಬಿಟ್ಟಿತು. ಆದರೆ ಕಪ್ಪೆಗೆ ಆನೆಯ ಬೆನ್ನ ಮೇಲಿನ ಸವಾರಿ ತುಂಬಾ ಹಿಡಿಸಿತ್ತು. ಅದು ಕೆಳಕ್ಕಿಳಿಯಲು ಒಪ್ಪಲಿಲ್ಲ. ಆನೆ ಕಪ್ಪೆಯನ್ನು ಎಷ್ಟು ಕೇಳಿಕೊಂಡರೂ ಕಪ್ಪೆ ಹಿಡಿದ ಹಠವನ್ನು ಬಿಡಲಿಲ್ಲ. ಆನೆಗೆ ಸಿಟ್ಟು ಬಂದು ಸೊಂಡಿಲಿನಲ್ಲಿ ಕಪ್ಪೆಯನ್ನು ಬೀಳಿಸಲು ಯತ್ನಿಸಿತು. ಆದರೆ ಆಗಲಿಲ್ಲ. ಕಡೆಗೆ ಒಂದುಪಾಯ ಮಾಡಿತು. ದಾರಿಯಲ್ಲಿ ಸಿಕ್ಕ ಹಾವನ್ನು ತನಗೆ ಸಹಾಯ ಮಾಡುವಂತೆ ಕೇಳಿಕೊಂಡಿತು. ಹಾವು ಆನೆಯ ಬೆನ್ನನ್ನೇರಿತು. ಹಾವನ್ನು ನೋಡುತ್ತಲೇ ದಿಗಿಲು ಬಿದ್ದ ಕಪ್ಪೆ ಜಾಗ ಖಾಲಿ ಮಾಡಿತು.

ಹಾವು ಆನೆಯನ್ನು ಸವಾರಿ ಮಾಡಿಸುವಂತೆ ಕೇಳಿಕೊಂಡಿತು. ಕಪ್ಪೆಯನ್ನು ಓಡಿಸಿ ಸಹಾಯ ಮಾಡಿದ್ದರಿಂದ ಆನೆ ಅದರ ಕೋರಿಕೆಯನ್ನು ಮನ್ನಿಸಿತು. ಸವಾರಿ ಮುಗಿಯುವಷ್ಟರಲ್ಲಿ ಹಾವಿಗೆ ಆನೆಯ ಬೆನ್ನು ತುಂಬಾ ಹಿಡಿಸಿತ್ತು. ಅದು ಮೆತ್ತನೆಯ ಹಾಸಿಗೆಯಂತೆ ತೋರಿತ್ತು. ಹೀಗಾಗಿ ಹಾವು ಕೂಡಾ ಬೆನ್ನ ಮೇಲಿಂದ ಕೆಳಕ್ಕಿಳಿಯಲು ಒಪ್ಪಲಿಲ್ಲ. ಇದ್ಯಾವ ಗ್ರಹಚಾರವೆಂದು ಆನೆ ಹಣೆ ಚಚ್ಚಿಕೊಂಡಿತು. ಅದೇ ಸಮಯಕ್ಕೆ ಮುಂಗುಸಿಯೊಂದು ಬಂದಿತು. ಹಾವು ಮುಂಗುಸಿಯ ಶತ್ರುವಾಗಿದ್ದರಿಂದ ಆನೆ ಅದರ ಸಹಾಯ ಕೋರಿತು. ಮುಂಗುಸಿ ಒಂದೇ ಏಟಿಗೆ ಆನೆಯ ಬೆನ್ನನ್ನೇರಿದ ಮರುಕ್ಷಣವೇ ಹಾವು ಕೆಟ್ಟೆನೋ ಬಿಟ್ಟೆನೋ ಎಂದು ಸರಸರನೆ ಪಲಾಯನಗೈದಿತು.

ಆನೆಗೆ ನೆಮ್ಮದಿಯಾಯಿತು. ಆದರೆ ಅದರ ನೆಮ್ಮದಿ ಬಹಳ ಕಾಲ ಉಳಿಯಲಿಲ್ಲ. ಆನೆಯ ಗ್ರಹಾಚಾರಕ್ಕೆ ಮುಂಗುಸಿ ಕೂಡಾ ಕೆಳಕ್ಕಿಳಿಯಲಿಲ್ಲ. ಆನೆಯ ಬೆನ್ನ ಮೇಲೆಯೇ ಅದೂ ಲಂಗರು ಹಾಕಿತು. ಮುಂಗುಸಿಯನ್ನು ಕೆಳಗಿಳಿಸಲು ಆನೆ ತನ್ನ ಕೈಲಾದ ಪ್ರಯತ್ನವನ್ನೆಲ್ಲಾ ಮಾಡಿ ನೋಡಿತು. ಅದೆಲ್ಲವೂ ನಿರರ್ಥಕ ಎಂದು ಆನೆಗೆ ಅನಿಸಿದಾಗ ಅದು ಕೆಂಡಾಮಂಡಲವಾಯಿತು. ನಾಯಿಯೊಂದು ಅಲೆಯುತ್ತಾ ಆ ದಾರಿಯಾಗಿ ಬಂದಿತು. ಆನೆ, ನಾಯಿಯನ್ನು ಸಹಾಯ ಮಾಡುವಂತೆ ಕೇಳಿಕೊಂಡಿತು. ನಾಯಿ ಬೊಗಳಿ ಬೊಗಳಿ ದಂತಕೋರೆಗಳನ್ನು ಪ್ರದರ್ಶಿಸಿ ಮುಂಗುಸಿಯನ್ನು ಹೆದರಿಸಿತು. ಮುಂಗುಸಿಯೂ ಅಲ್ಲಿಂದ ಓಡಿ ಹೋಯಿತು. ಈಗ ಮುಂಗುಸಿಯ ಸ್ಥಾನವನ್ನು ನಾಯಿ ಅಲಂಕರಿಸಿತು. ರಾಜಾರೋಷವಾಗಿ ಆನೆಯ ಬೆನ್ನ ಮೇಲೆ ಸವಾರಿ ಮಾಡಿತು.

ಆನೆಯ ಬೆನ್ನ ಮೇಲೆ ಕೂತಾಗ ಇತರೆ ಪ್ರಾಣಿಗಳು ತನ್ನನ್ನು ಗೌರವಯುತವಾಗಿ ಕಾಣುವುದನ್ನು ನಾಯಿ ಗಮನಿಸಿತು. ಹೀಗಾಗಿ ಅದು ಕೂಡಾ ಅಲ್ಲಿಂದ ಕಾಲ್ದೆಗೆಯಲು ಒಪ್ಪಲಿಲ್ಲ. ಆನೆಗೆ ಯಾಕೋ ಇದು ಅತಿಯಾಯಿತು ಎಂದೆನಿಸಿತು. ಯಾರ ಸಹಾಯವನ್ನು ಕೇಳಲೂ ಹಿಂದೆಗೆಯಿತು. ನಾಯಿಯನ್ನು ಬೆನ್ನ ಮೇಲಿಂದ ಓಡಿಸಲು ಉಪಾಯ ಹೊಳೆಯಿತು. ಆನೆ ಕೊಳದ ಬಳಿ ಬಂದಿತು. ಅದಕ್ಕೆ ನಾಯಿಯ ದೌರ್ಬಲ್ಯ ಗೊತ್ತಿತ್ತು. ನಾಯಿಗೆ ನೀರನ್ನು ಕಂಡರೆ ಆಗುತ್ತಿರಲಿಲ್ಲ. ಆನೆ ಕೊಳದಲ್ಲಿ ಎರಡು ಮೂರು ಡುಬುಕಿ ಹೊಡೆಯಿತು. ಜನ್ಮದಲ್ಲಿ ಮೈಗೆ ನೀರು ಸೋಕಿಸಿಕೊಳ್ಳದ ನಾಯಿ ಬೊಬ್ಬೆ ಹೊಡೆಯುತ್ತಾ ಕೊಳದಿಂದ ಎದ್ದು ಓಡಿ ಹೋಯಿತು. ಆನೆ ಕಡೆಗೂ ನಿಟ್ಟುಸಿರು ಬಿಟ್ಟಿತು. ಸಂಗಡಿಗರೆಲ್ಲ ಅದರ ಬುದ್ಧಿವಂತಿಕೆಗೆ ಬೆನ್ನುತಟ್ಟಿದವು.

ನೀತಿ :-- ಅತಿಯಾದ ಆಸೆ ಒಳ್ಳೆಯದಲ್ಲ. ಕಪ್ಪೆ, ಹಾವು, ಮುಂಗುಸಿ ಮತ್ತು ನಾಯಿ ತಮ್ಮ ಆಸೆಗೆ ಆನೆಯ ಸಹಾಯ ಪಡೆಯಲು ಪ್ರಯತ್ನಿಸಿದವು. ಆದರೆ ಅವುಗಳ ಆಸೆ ಅತಿಯಾಗಿಯಾದರೆ ಆಗುವ ಪರಿಣಾಮ ಇಲ್ಲಿ ಕಾಣಬಹುದು.

ಅವರವರ ಕರ್ಮದ ಫಲ ಅವರೇ ಅನುಭವಿಸಬೇಕು

 ಒಂದೂರಲ್ಲಿ ಒಬ್ಬ ಪ್ರಜಾಪಾಲಕನಾದ ರಾಜನಿದ್ದ. ಅವನಿಗೆ ಮೂರು ಜನ ಮಂತ್ರಿಗಳು. ಈ ಮೂರು ಜನ ಮಂತ್ರಿಗಳಲ್ಲಿ, ಒಳ್ಳೆಯವರೂ ಮತ್ತು ಕುತಂತ್ರಿಗಳು ಇದ್ದರು. ಆದರೆ ರಾಜನ ಎದುರಲ್ಲಿ ಸಭ್ಯನಂತೆ ವರ್ತಿಸಿ, ಒಳಗಳೊಗೆ ರಾಜನ ಆಜ್ಞೆಯನ್ನು ಅವಲಕ್ಷಿಸುತ್ತಿದ್ದರು. ಇದರಿಂದ ಪ್ರಾಮಾಣಿಕನಿಗೆ ಬೆಲೆ ಇಲ್ಲವಾಗುತ್ತದೆ.

ಒಂದು ದಿನ ರಾಜ ತನ್ನ ಮೂರು ಮಂತ್ರಿಗಳನ್ನು ಕರೆಯುತ್ತಾನೆ. ಮೂರು ಜನರಿಗೆ ಒಂದೊಂದು ಗೋಣಿ ಚೀಲವನ್ನು ಕೊಟ್ಟು, ಕಾಡಿಗೆ ಹೋಗಿ ನಾಳೆ ಸಂಜೆಯೊಳಗೆ ಕಾಡಿನಲ್ಲಿ ಸಿಗುವ ಅತ್ಯುತ್ತಮವಾದ ಹಣ್ಣುಗಳನ್ನು ಆಯ್ದು ತುಂಬಿಕೊಂಡು ಬರುವಂತೆ ಆಜ್ಞೆ ಮಾಡಿದ.

ಮೂರು ಮಂತ್ರಿಗಳಲ್ಲಿ ಒಬ್ಬ ರಾಜನ ಆಜ್ಞೆಯನ್ನು ನಿಯತ್ತಿನಿಂದ ಕಾಡು ಸುತ್ತಿ ಒಳ್ಳೆಯ ಮತ್ತು ತಿನ್ನಲು ಯೋಗ್ಯವಾದ ಹಣ್ಣುಗಳನ್ನು ಆಯ್ದು ತುಂಬಿಸಿಕೊಳ್ಳುತ್ತಾನೆ. ಎರಡನೆಯವನು "ಅಯ್ಯೋ ರಾಜರು ಒಳಗೆಲ್ಲಿ ನೋಡುತ್ತಾರೆ?" ಮೇಲೆ ಸ್ವಲ್ಪ ಒಳ್ಳೆಯ ಹಣ್ಣುಗಳನ್ನು ತುಂಬಿಸಿ ಕೆಳಗೆ ಕೊಳೆತ ಹಣ್ಣುಗಳನ್ನು ತುಂಬಿಸಿಕೊಳ್ಳುತ್ತಾನೆ. ಇನ್ನು ಮೂರನೆಯವನು "ಅಯ್ಯೋ ರಾಜ ನೋಡುವುದೇ ಇಲ್ಲ. ಯಾರು ಕಾಡು ಸುತ್ತಿ ಹಣ್ಣು ಆರಿಸಿ ತರೋದು ?" ಎಂದು ತರಗೆಲೆ ಮತ್ತು ಕಸಕಡ್ಡಿ ತುಂಬಿಸಿಕೊಂಡು ಹೋಗುತ್ತಾನೆ.

ಮಾರನೇ ದಿನ ಮಂತ್ರಿಗಳು ಗೋಣಿಯ ಮೂಟೆಯನ್ನು ಅರಸನ ಮುಂದಿಡುತ್ತಾರೆ. ಅರಸ ಅದನ್ನು ಪರೀಕ್ಷಿಸುವುದಿಲ್ಲ. ಬದಲಾಗಿ ಭಟರನ್ನು ಕರೆದು ಹೇಳುತ್ತಾನೆ "ಈ ಮೂರು ಜನರನ್ನು ಜೈಲಿಗಟ್ಟಿ, ಅವರವರು ತಂದ ಹಣ್ಣಿನ ಮೂಟೆ ಅವರವರ ಬಳಿ ಇರಲಿ. ಒಂದು ತಿಂಗಳು ತಿನ್ನಲು ಏನನ್ನೂ ಕೊಡಬೇಡಿ" ಎಂದು ಆಜ್ಞೆ ಮಾಡಿದ.

ಒಂದು ತಿಂಗಳ ನಂತರ ಬಾಗಿಲು ತೆರೆದಾಗ, ಪ್ರಾಮಾಣಿಕವಾಗಿ ಉತ್ತಮವಾದ ಹಣ್ಣುಗಳನ್ನು ತಂದವ ಆರೋಗ್ಯವಂತನಾಗಿ ಹೊರ ಬರುತ್ತಾನೆ. ಕೊಳೆತ ಹಣ್ಣುಗಳನ್ನು ಪೇರಿಸಿಟ್ಟ ಮಂತ್ರಿ ರೋಗಗ್ರಸ್ತನಾಗಿದ್ದ. ಇನ್ನು ತಿನ್ನಲು ಯೋಗ್ಯವಲ್ಲದ ವಸ್ತುಗಳನ್ನು ತಂದ ಮಂತ್ರಿ ಕೊನೆಯುಸಿರೆಳೆದಿದ್ದ.

ನೀತಿ :-- ಇದೆ ಕರ್ಮದ ಫಲ. ಉತ್ತಮವಾದ ಕೆಲಸಕ್ಕೆ ಉತ್ತಮವಾದ ಪರಿಣಾಮ, ಕೆಟ್ಟ ಕೆಲಸದಿಂದ ಕೆಟ್ಟ ಪರಿಣಾಮ.

ಲಕ್ಷ್ಮಿ ಭೂಮಿಯ ಮೇಲೆ ಇಲ್ಲವಾದರೆ?

 ಲಕ್ಷ್ಮಿ ವ್ಯಕ್ತಿಗೆ ಧನ, ಸಂಪತ್ತನ್ನು ಕರುಣಿಸುವ ದೇವತೆ. ಈಕೆಯ ಅನುಗ್ರಹವನ್ನು ಅಥವಾ ಆಶೀರ್ವಾದವನ್ನು ಹೊಂದಿರುವ ವ್ಯಕ್ತಿಯು ತನ್ನ ಜೀವನದಲ್ಲಿ ಎಂದಿಗೂ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಿರಬಹುದು ಅಥವಾ ಬಡತನವನ್ನಾಗಿರಬಹುದು ಎದುರಿಸುವುದಿಲ್ಲ ಎನ್ನುವ ನಂಬಿಕೆ ನಮ್ಮವರಲ್ಲಿದೆ. ಧಾರ್ಮಿಕ ಗ್ರಂಥ ಹಾಗೂ ಪುರಾಣಗಳಲ್ಲಿ ಲಕ್ಷ್ಮಿ ದೇವಿಗೆ ಸಂಬಂಧಿಸಿದಂತೆ ಅನೇಕ ಕಥೆಗಳನ್ನು ಉಲ್ಲೇಖಿಸಲಾಗಿದೆ.

ವಿಷ್ಣುವಿನಿಂದ ಲಕ್ಷ್ಮಿಯ ಅಪಹರಣ!

ಹೌದು. ಒಂದು ದಂತಕಥೆಯು ಲಕ್ಷ್ಮಿಯನ್ನು ಅಪಹರಿಸಲಾಗಿತ್ತು ಎಂದು ಹೇಳುತ್ತದೆ. ಹೇಗೆಂದರೆ, ಒಮ್ಮೆ ಲಕ್ಷ್ಮಿಯು ತನ್ನ ಪತಿ ವಿಷ್ಣು ದೇವನೊಂದಿಗೆ ಜಗಳ ಮಾಡಿದಳು. ಈ ವಿವಾದವು ಲಕ್ಷ್ಮಿ ದೇವಿಯ ಅಪಹರಣಕ್ಕೆ ಕಾರಣವಾಯಿತು ಎನ್ಮಲಾಗುತ್ತದೆ. ಲಕ್ಷ್ಮಿ ವಿಷ್ಣುವಿನ ಬಳಿ ಬಂದು ನೀವು ತುಳಸಿ ಪರ್ವತದಲ್ಲಿ ನೆಲೆಸಬೇಕೆಂದು ಹೇಳುತ್ತಾಳೆ. ಇದಕ್ಕೆ ಒಪ್ಪದ ವಿಷ್ಣು ದೇವನು ತಾನು ವೈಕುಂಠದಲ್ಲಿ ಮಾತ್ರ ನೆಲೆಸುವುದಾಗಿ ಹೇಳುತ್ತಾನೆ. ಈ ವಾದ ವಿವಾದದಿಂದ ಬೇಸರಗೊಂಡ ಲಕ್ಷ್ಮಿಯು ಭೂಮಿಯನ್ನು ತೊರೆದು ತನ್ನ ಪತಿ ಇರುವ ವೈಕುಂಠಕ್ಕೆ ಹೊರಟು ಹೋಗುತ್ತಾಳೆ. ಭೂಮಿಯಲ್ಲಿ ಲಕ್ಷ್ಮಿಯ ಅನುಪಸ್ಥಿತಿಯಿಂದಾಗಿ ಜನರು ಸಂಪತ್ತು ಮತ್ತು ಸಮೃದ್ಧಿಯ ಕೊರತೆಯನ್ನು ಎದುರಿಸುವಂತಾಯಿತು. ಇದನ್ನು ನೋಡಿದ ಜನರು ವಿಷ್ಣುವನ್ನು ಪ್ರಾರ್ಥಿಸಿದರು ಮತ್ತು ಲಕ್ಷ್ಮಿ ದೇವಿಯನ್ನು ಮೆಚ್ಚಿಸಿ ಮತ್ತೆ ಭೂಲೋಕಕ್ಕೆ ಬರುವಂತೆ ಮಾಡಿದರು. ಇದಾದ ನಂತರ ಭಗವಾನ್ ವಿಷ್ಣುವು ಲಕ್ಷ್ಮಿಯನ್ನು ತನ್ನೊಂದಿಗೆ ವೈಕುಂಠಕ್ಕೆ ಕರೆದೊಯ್ದ. ಈ ರೀತಿಯಾಗಿ ವಿಷ್ಣು ದೇವನು ಲಕ್ಷ್ಮಿಯನ್ನು ಅಪಹರಿಸಿಕೊಂಡು ವೈಕುಂಠಕ್ಕೆ ಕರೆದುಕೊಂಡ. ಆದರೆ, ನಂತರ ಲಕ್ಷ್ಮಿ ದೇವಿಯನ್ನು ಪುನಃ ಭೂಲೋಕಕ್ಕೆ ಕಳುಹಿಸಲೂ ಮುಂದಾದ.

ವಿಷ್ಣು ದೇವನನ್ನು ಹೊರತುಪಡಿಸಿ, ಒಂದು ಪೌರಾಣಿಕ ಕಥೆಯ ಪ್ರಕಾರ, ಲಕ್ಷ್ಮಿಯನ್ನು ಇಂದ್ರ ದೇವನ ಮಗನಾದ ದೇವರಾಜ ಬಾಲಿಯೂ ಅಪಹರಿಸಿಕೊಂಡು ಹೋಗಿದ್ದ. ಈ ಕಥೆಯಂತೆ ಲಕ್ಷ್ಮಿ ದೇವಿಯನ್ನು ಭೂಲೋಕದಿಂದಲೇ ಅಪಹರಿಸಿಕೊಂಡು ಹೋಗಲಾಗಿತ್ತು. ಇದರಲ್ಲಿ ದೇವರಾಜ ಬಾಲಿಯ ಪಾತ್ರ ಪ್ರಮುಖವಾಗಿದೆ. ಒಮ್ಮೆ ದೇವರಾಜ ಬಾಲಿಯು ತನ್ನ ತಪಸ್ಸು ಮತ್ತು ಭಕ್ತಿಯ ಬಲದಿಂದ ಲಕ್ಷ್ಮಿಯನ್ನು ಅಪಹರಿಸಿಕೊಂಡು ಹೋಗುತ್ತಾನೆ. ಬಾಲಿಯು ಲಕ್ಷ್ಮಿ ದೇವಿಯನ್ನು ಕಂಡು ಅವಳನ್ನು ತನ್ನ ರಾಜ್ಯದಲ್ಲಿ ತನ್ನ ನಿಯಂತ್ರಣಕ್ಕೆ ತಂದು ತನ್ನೊಂದಿಗೆ ಅಲ್ಲಿ ನೆಲೆಸುವಂತೆ ಮಾಡಿದ.

ಬಾಲಿಯು ಲಕ್ಷ್ಮಿಯನ್ನು ಅಪಹರಿಸಿಕೊಂಡು ಹೋಗಿದ್ದಕ್ಕಾಗಿ ಭೂಮಿಯ ಮೇಲೆ ಬಡತನ ಮತ್ತು ದಾರಿದ್ರ್ಯವು ತಲೆಯೆತ್ತತೊಡಗಿತು. ಜನರು ಊಟಕ್ಕೂ ಪರದಾಡಬೇಕಾಯಿತು. ತಮ್ಮಲ್ಲಿ ಸಂಪತ್ತು ಮತ್ತು ಅದೃಷ್ಟ ಕಡಿಮೆಯಾಗುತ್ತಿರುವುದನ್ನು ಕಂಡು ಜನರು ವಿಷ್ಣುವನ್ನು ಪ್ರಾರ್ಥಿಸಿದರು. ಭಗವಾನ್ ವಿಷ್ಣುವು ಲಕ್ಷ್ಮಿಯನ್ನು ಮರಳಿ ಪಡೆದುಕೊಳ್ಳಬೇಕೆಂದು ನಿರ್ಧರಿಸಿದ. ಮತ್ತು ಪ್ರಹ್ಲಾದನ ರೂಪದಲ್ಲಿ ಅಪಹರಣಕಾರ ಬಾಲಿಯನ್ನು ಮೋಡಿ ಮಾಡುವ ಮೂಲಕ ದೇವಿಯನ್ನು ಮುಕ್ತಗೊಳಿಸಿದ.

ಸಂಕಷ್ಟ, ಸಮಸ್ಯೆಗಳು ಕೇವಲ ಮನುಷ್ಯನಿಗೆ ಮಾತ್ರವಲ್ಲ, ದೇವರಿಗೂ ತಪ್ಪಿದ್ದಲ್ಲ. ಆದರೆ, ಭೂಮಿಯಲ್ಲಿ ಯಾವುದೇ ಜೀವಿ, ಕಷ್ಟದಲ್ಲಿದ್ದಾಗ ದೇವರು ಮೊದಲು ಅದನ್ನು ಪರಿಹರಿಸಲು ಬರುತ್ತಾನೆ. ಲಕ್ಷ್ಮಿಯು ಭೂಮಿಯ ಮೇಲೆ ಇಲ್ಲವಾದರೆ ಅನಾಹುತಗಳು ಸಂಭವಿಸಬಹುದು.

ನೀತಿ :-- ಲಕ್ಷ್ಮಿ ಭೂಮಿಯ ಮೇಲೆ ಇಲ್ಲವಾದರೆ, ಏನೆಲ್ಲ ಅನಾಹುತಗಳು ಸಂಭವಿಸಬಹುದು ಎಂಬುದಕ್ಕೆ ಈ ಎರಡು ಕಥೆಗಳು ಉತ್ತಮ ಉದಾಹರಣೆಯಾಗಿವೆ.

ಸ್ತ್ರೀ ರೂಪ ಧರಿಸಿದ ಶನಿ

 ಗುಜರಾತ್‌ನ ಭಾವನಗರದ ಸಾರಂಗಪುರದಲ್ಲಿರುವ ಕಷ್ಟಭಂಜನ ಹನುಮಾನ್ ದೇವಸ್ಥಾನವು ವಿಶೇಷ ಹಾಗೂ ಆಕರ್ಷಣೆಯ ಕೇಂದ್ರವಾಗಿದೆ. ಇದು ಅನೇಕ ಭಕ್ತರ ಅಪಾರ ನಂಬಿಕೆಯ ಶ್ರದ್ಧಾ ಕೇಂದ್ರವಾಗಿದೆ. ಬಜರಂಗಬಲಿಯ ಪಾದದ ಬಳಿ ಶನಿದೇವನು ಕುಳಿತಿರುವುದು ಈ ದೇವಾಲಯದಲ್ಲಿನ ವಿಶೇಷವಾಗಿದೆ. ಅಷ್ಟೇ ಅಲ್ಲ, ಇಲ್ಲಿ ಶನಿದೇವನು ಸ್ತ್ರೀ ರೂಪದಲ್ಲಿ ಕಂಡುಬರುವುದು ಇನ್ನೊಂದು ವಿಶೇಷ ಅಂಶ. ಈ ಅದ್ಭುತ ದೃಶ್ಯದ ಹಿಂದೆ ಒಂದು ಆಸಕ್ತಿದಾಯಕ ಕಥೆ ಅಡಗಿದೆ.

ಒಮ್ಮೆ ಶನಿದೇವನ ಕೋಪವು ಭೂಮಿಯ ಮೇಲೆ ತುಂಬಾ ಹೆಚ್ಚಾಯಿತು. ಅವನ ಕೋಪದಿಂದ ಆಗ ಜನರು ತುಂಬಾ ಕಷ್ಟಪಡುತ್ತಿದ್ದರು. ಕೆಟ್ಟ ಸಂಭವಗಳು, ರೋಗಗಳು ಮತ್ತು ಅನೇಕ ಸಮಸ್ಯೆಗಳು ಜನರನ್ನು ಕಾಡುತ್ತಿದ್ದವು. ಜನರು ತಮ್ಮ ಸಂಕಷ್ಟಗಳಿಂದ ಮುಕ್ತಿ ಹೊಂದಲು ಹನುಮಂತನನ್ನು ಪ್ರಾರ್ಥಿಸಲು ಶುರು ಮಾಡಿದರು. "ಓ ದೇವರೇ, ನಮ್ಮನ್ನು ರಕ್ಷಿಸು" ಎಂದು.

ಅವರು ಹನುಮಂತನನ್ನು ಬೇಡಿಕೊಳ್ಳುತ್ತಿದ್ದರು.

ಹನುಮಂತನು ತನ್ನ ಭಕ್ತರ ಕೂಗನ್ನು ಕೇಳಿ ಕೋಪಗೊಂಡು. ಶನಿಯು ತನ್ನ ಭಕ್ತರಿಗೆ ತೊಂದರೆ ಕೊಡುತ್ತಿರುವುದನ್ನು ಸಹಿಸಲಾಗದೆ, ಅವನು ತನ್ನ ಗಧೆಯನ್ನು ಎತ್ತಿಕೊಂಡು ಶನಿಯನ್ನು ಹುಡುಕಲು ಹೊರಟ. ಈ ವಿಷಯ ತಿಳಿದ ಶನಿಗೆ ತುಂಬಾ ಭಯವಾಯಿತು. ಅವನಿಗೆ ಈಗ ಯಾರು ತನ್ನನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಅರಿವಾಯಿತು. ತನ್ನನ್ನು ತಾನು ರಕ್ಷಿಸಿಕೊಳ್ಳಲು ಯಾವುದೇ ಮಾರ್ಗ ಸಿಗದಿದ್ದಾಗ, ಅವನು ಒಂದು ಕುತಂತ್ರವನ್ನು ರೂಪಿಸಿ, ಶನಿ ತನ್ನನ್ನು ತಾನು ಸ್ತ್ರೀ ವೇಷಕ್ಕೆ ಹಾಕಿಕೊಂಡ.

ಹನುಮಂತನು ಬ್ರಹ್ಮಚಾರಿ ಎಂದು ಅವನಿಗೆ ಗೊತ್ತಿತ್ತು. ಹಾಗಾಗಿ ಸ್ತ್ರೀ ವೇಷದಲ್ಲಿ ಇದ್ದರೆ ಹನುಮಂತನು ತನ್ನನ್ನು ಮುಟ್ಟುವುದಿಲ್ಲ ಅಥವಾ ತನ್ನ ಮೇಲೆ ಕೈ ಎತ್ತುವುದಿಲ್ಲ ಎಂದು ಭಾವಿಸಿದ. ಹೀಗೆ ಸ್ತ್ರೀ ವೇಷದಲ್ಲಿ ಹನುಮಂತನ ಪಾದದ ಬಳಿ ಕುಳಿತು ಕ್ಷಮೆಯಾಚಿಸಿದ. ಹನುಮಂತನು ಶನಿಯ ಕ್ಷಮೆಯಾಚನೆಯನ್ನು ಸ್ವೀಕರಿಸಿ ಅವನ ತಪ್ಪನ್ನು ಮನ್ನಿಸಿದ. ಅಂದಿನಿಂದ ಶನಿಯು ಹನುಮಂತನ ಪಾದದ ಬಳಿಯೇ ಕುಳಿತುಕೊಂಡಿದ್ದಾನೆ. ಇದೇ ಕಾರಣಕ್ಕೆ ಸಾರಂಗಪುರದ ಕಷ್ಟಭಂಜನ ಹನುಮಾನ್ ದೇವಸ್ಥಾನದಲ್ಲಿ ಶನಿದೇವನು ಸ್ತ್ರೀ ರೂಪದಲ್ಲಿ ಹನುಮಂತನ ಪಾದದ ಬಳಿ ಕುಳಿತಿರುವ ದೃಶ್ಯವನ್ನು ನೋಡಬಹುದು.

ನೀತಿ :-- ಕಥೆಯು ಭಕ್ತಿಯ ಶಕ್ತಿ ಮತ್ತು ಕ್ಷಮೆಯ ಮಹತ್ವ. ಶನಿಯ ಕೋಪ ಮತ್ತು ಅದರ ಪರಿಣಾಮ, ಹನುಮಂತನ ಕರುಣೆ ಮತ್ತು ಕ್ಷಮೆ, ಶನಿಯ ಕುತಂತ್ರ ಮತ್ತು ವೇಷ ಬದಲಾವಣೆ ಹಾಗೂ ಸಾರಂಗಪುರದ ದೇವಾಲಯದ ವಿಶೇಷತೆ ತಿಳಿಸುತ್ತದೆ.

ಹನುಮಂತನಲ್ಲಿರುವ ದಯಾಗುಣ

 ಲಂಕೆಯ ಅಹಂಕಾರಿ ರಾಜ ರಾವಣನಿಗೆ ಆಕಾಶವೇ ಮಿತಿಯೆಂಬಂತೆ ತೋರುತ್ತಿತ್ತು. ತನ್ನ ಶಕ್ತಿಯ ಅತಿಯಾದ ಅಂದಾಜು ಮತ್ತು ಅತಿಮಾನುಷ ಸ್ವಭಾವದಿಂದಾಗಿ ದೇವತೆಗಳನ್ನೂ ಕೀಳಾಗಿ ನೋಡುತ್ತಿದ್ದ. ಒಮ್ಮೆ ತನ್ನ ಅಧಿಕಾರ ಪ್ರದರ್ಶನಕ್ಕೆ ಮುಂದಾದ ರಾವಣ, ಶನಿ ದೇವರನ್ನೇ ಬಂಧಿಸಿ ಲಂಕೆಯ ಕತ್ತಲ ಕೋಣೆಯಲ್ಲಿ ಬಂಧಿಸಿದ.

ಇದೇ ಸಮಯದಲ್ಲಿ ಸೀತಾ ಮಾತೆಯನ್ನು ಹುಡುಕಿಕೊಂಡು ಹನುಮಂತನು ಲಂಕೆಗೆ ಆಗಮಿಸಿದ್ದ. ಅರಮನೆಯ ಎಲ್ಲಾ ಕೋಣೆಗಳನ್ನು ಅಲೆದಾಡುತ್ತಿದ್ದಾಗ, ಒಂದು ಕೋಣೆಯಿಂದ ದೀನವಾದ ನರಳಾಟ ಕೇಳಿಸಿತು. ಆ ಶಬ್ದದ ಕಡೆಗೆ ಹೋಗುತ್ತ ಹೋಗುತ್ತ ಕತ್ತಲ ಕೋಣೆಯೊಂದನ್ನು ತಲುಪಿದ. ಅಲ್ಲಿ ಬಂಧಿತನಾಗಿದ್ದ ಶನಿ ದೇವರನ್ನು ಕಂಡು ಹನುಮಂತನಿಗೆ ಆಶ್ಚರ್ಯವಾಯಿತು.

ಶನಿ ದೇವರು ಹನುಮಂತನನ್ನು ಕಂಡು ಸಂತೋಷಗೊಂಡು "ಹನುಮಂತ, ನನ್ನನ್ನು ಈ ಸೆರೆಯಿಂದ ಬಿಡಿಸಿಕೊ" ಎಂದು ಕೇಳಿಕೊಂಡ. ಹನುಮಂತನಿಗೆ ಶನಿ ದೇವರನ್ನು ಕಂಡು ತುಂಬಾ ವಿಷಾದವಾಯಿತು. ತಕ್ಷಣವೇ ತನ್ನ ಬಲವನ್ನು ಪ್ರಯೋಗಿಸಿ ಕೋಣೆಯ ಬಾಗಿಲು ಒಡೆದು ಶನಿ ದೇವರನ್ನು ಬಂಧನದಿಂದ ಬಿಡಿಸಿದ.

ಶನಿ ದೇವರು ಹನುಮಂತನ ಕಾಲಿಗೆ ಬಿದ್ದು ಧನ್ಯವಾದಗಳನ್ನು ಅರ್ಪಿಸಿ, "ಹನುಮಂತ, ನೀನು ನನ್ನನ್ನು ಈ ಸಂಕಟದಿಂದ ಮುಕ್ತಗೊಳಿಸಿದ್ದೀ. ನಾನು ನಿನ್ನನ್ನು ಎಂದಿಗೂ ಮರೆಯುವುದಿಲ್ಲ. ನೀನು ಭಕ್ತರನ್ನು ಎಂದಿಗೂ ಕಷ್ಟಕ್ಕೆ ಸಿಲುಕಿಸುವುದಿಲ್ಲ" ಎಂದು ವರವನ್ನು ನೀಡಿದ.

ಹನುಮಂತನು ಶನಿ ದೇವರ ಆಶೀರ್ವಾದವನ್ನು ಪಡೆದು ಸೀತಾ ಮಾತೆಯನ್ನು ಹುಡುಕುವ ಕೆಲಸವನ್ನು ಮುಂದುವರಿಸಿದ. ಶನಿ ದೇವರು ಹನುಮಂತನಿಗೆ ಕೊಟ್ಟ ವರದಿಂದಾಗಿ ಇಂದಿಗೂ ಹನುಮಂತನ ಭಕ್ತರ ಮೇಲೆ ಶನಿಯ ದೋಷ ಬೀರುವುದಿಲ್ಲ ಎಂಬ ನಂಬಿಕೆ ಜನರಲ್ಲಿ ಇದೆ.

ನೀತಿ :-- ಶ್ರೀರಾಮನ ಅನುಗ್ರಹದಿಂದ ಹನುಮಂತನಿಗೆ ಅಪಾರ ಶಕ್ತಿ ಸಿಕ್ಕಿತ್ತು. ತನ್ನ ಶಕ್ತಿಯನ್ನು ಅಹಂಕಾರಕ್ಕೆ ಬಳಸಿಕೊಳ್ಳದೆ, ಇತರರ ಸಹಾಯ ಮಾಡಿರುವುದರಿಂದಾಗಿ ದೇವತೆಗಳ ಆಶೀರ್ವಾದವೂ ಅವನಿಗೆ ಸಿಕ್ಕಿತು. ಹೀಗೆ ಹನುಮಂತನು ಒಬ್ಬ ಆದರ್ಶ ಪುರುಷನಾಗಿ ನಮ್ಮ ಮನಸ್ಸಿನಲ್ಲಿ ನೆಲೆಸಿದ್ದಾನೆ.

Tuesday, November 26, 2024

ದಿನಕ್ಕೊಂದು ಕಥೆ - *ಬೇರೆಯವರ ಬಗ್ಗೆ ಹಬ್ಬಿಸುವ ಗಾಳಿಸುದ್ದಿಗಳು.*

 ಒಬ್ಬ ವ್ಯಕ್ತಿ ಇದ್ದ. ಬೇರೆಯವರನ್ನು ಟೀಕಿಸುತ್ತಾ ದೂಷಿಸುತ್ತಾ ಇರದಿದ್ದರೆ ಅವನಿಗೆ ತಿಂದ ಅನ್ನವೇ ಜೀರ್ಣವಾಗುತ್ತಿರಲಿಲ್ಲ. ಯಾವಾಗಲೂ ಇದೇ ಅವನ ಕೆಲಸ.


ಒಂದು ಸಲ ಊರಲ್ಲಿ ಯಾವುದೋ ಕಳ್ಳತನವಾದಾಗ, ತಾನೇ ಸ್ವತಃ ನೋಡಿದವನ ಹಾಗೆ, ತಮ್ಮ ಪಕ್ಕದ ಮನೆಯ ಯುವಕನೇ ಕಳ್ಳ ಎಂದು ಸುದ್ದಿ ಹಬ್ಬಿಸಿದ. ಆ ಯುವಕನನ್ನು ಕಂಡರೆ ಇವನಿಗೆ ಅಷ್ಟಕಷ್ಟೆ.ಆ ತರುಣನನ್ನು ಪೊಲೀಸರು ಬಂಧಿಸಿದರು . ವಿಚಾರಣೆಯೆಲ್ಲಾ ನೆಡೆದು,ಕೆಲವು ದಿನಗಳ ನಂತರ ನಿಜವಾದ ಕಳ್ಳ ಸಿಕ್ಕಿದ ನಂತರ, ಈ ಯುವಕನನ್ನು ನಿರಪರಾಧಿ ಎಂದು ಬಿಡುಗಡೆ ಮಾಡಿದರು.

ಅವಮಾನಿತನಾದ ‌ಈ ಯುವಕ ತನ್ನ ಮೇಲೆ ಸುಳ್ಳು ಆಪಾದನೆ ನೀಡಿದ, ತನ್ನ ಪಕ್ಕದ ಮನೆಯ ವ್ಯಕ್ತಿಯ ಮೇಲೆ ಮಾನನಷ್ಠ ಮೊಕದ್ದಮೆಯನ್ನು ಹೂಡಿದ.

ನ್ಯಾಯಾಲಯದಲ್ಲಿ ಈ ವ್ಯಕ್ತಿ, ನಾನು ಸುಮ್ಮನೆ ಅವನು ‌ಇದ್ರೂ ಇರಬಹುದು ‌ಎಂದು‌‌ ಅನುಮಾನದಿಂದ ಹೇಳಿದ್ದು, ಅದರಿಂದ ಈಗ ಅವನಿಗೇನೂ ತೊಂದರೆಯಾಗಿಲ್ಲವಲ್ಲ, ಹೇಗೂ ಬಿಡುಗಡೆಯಾದನಲ್ಲ ಎಂದ.

ವಿಚಾರಣೆಯೆಲ್ಲಾ ಮುಗಿಯಿತು. ಎಲ್ಲರೂ ಎದ್ದು ಹೋಗುವ ಮುಂಚೆ ನ್ಯಾಯಾಧೀಶರು, ಈ ವ್ಯಕ್ತಿಯನ್ನು ಕರೆದು, ನೀನು ಆ ಯುವಕನ ಬಗ್ಗೆ ಕಳ್ಳ ಎಂದು ಹಬ್ಬಿಸಿದ ಸುಧ್ಧಿಯನ್ನು ಒಂದು ಕಾಗದದ ಮೇಲೆ ಬರೆದು, ಆ ಕಾಗದವನ್ನು ಚೂರು ಚೂರು ಮಾಡಿ ಮನೆಗೆ ಹೋಗುವಾಗ ರಸ್ತೆ ಯುದ್ಧಕ್ಕೂ ಚೆಲ್ಲುತ್ತಾ ಹೋಗು, ನಾಳೆ ತೀರ್ಪು ಕೇಳಲು ಬಾ ಎಂದರು.

ಮಾರನೇ ದಿನ ಆತ ತೀರ್ಪು ಕೇಳಲು ಬಂದಾಗ, ನ್ಯಾಯಾಧೀಶರು, ನಿನ್ನೆ ನೀನು ಚೆಲ್ಲಿದ ಕಾಗದದ ಚೂರುಗಳನ್ನು ವಾಪಸು ಆರಿಸಿಕೊಂಡು ಬಾ ಎಂದರು.
‌ ಆಗ ಆ ವ್ಯಕ್ತಿ, ಅದು ಹೇಗೆ ಸಾಧ್ಯ? ಈಗ ಅವೆಲ್ಲ ಗಾಳಿಗೆ ಹಾರಿ ಹೋಗಿವೆ, ಆ ಚೂರುಗಳನ್ನು ಈಗ ಆರಿಸಿ ತರಲು ಅದ್ಹೇಗೆ ತಾನೇ ಸಾಧ್ಯ?ಎಂದ.
ಆಗ ನ್ಯಾಯಾಧೀಶರು, ಅದೇ ರೀತಿ ನೀನು , ಒಬ್ಬ ಒಳ್ಳೆಯ ವ್ಯಕ್ತಿಯ ಬಗ್ಗೆ, ಮಾಡಿದ ಗಾಸಿಪ್ ಎಲ್ಲೆಡೆಯೂ ಹರಿದು ಹೋಗಿದೆ . ಅವು ಆತನ ಘನತೆಗೆ ಧಕ್ಕೆ ತರಬಲ್ಲವು. ಆ ತಪ್ಪನ್ನು ಈಗ ನೀನು ಸರಿಪಡಿಸಲು ಸಾಧ್ಯವೇ , ಒಬ್ಬರ ಹಿಂದೆ ಇಂತಹ ನೀಚ ಕೆಲಸವನ್ನು ಮಾಡುವ ಮುನ್ನ ಆತ್ಮಸಾಕ್ಷಿ ಎಂಬುದು ಒಮ್ಮೆಯಾದರೂ, ನಿನ್ನನ್ನು ಎಚ್ಚರಿಸಲಿಲ್ಲವೇ? ಎಂದು ಕೇಳಿದರು.

ಆ ವ್ಯಕ್ತಿಗೆ, ಈಗ ತನ್ನ ತಪ್ಪಿನ ಅರಿವಾಗಿ, ಯುವಕನಲ್ಲಿ ಕ್ಷಮೆಯೇನೂ ಯಾಚಿಸಿ, ಸ್ವಲ್ಪ ದಂಡ ಕಟ್ಟಿದ,ಆದರೆ ಹೋದ ಮಾನವನ್ನು ಇವನು ತಂದುಕೊಡಲು ಸಾಧ್ಯವೇ.

ಸಾಮಾನ್ಯವಾಗಿ ನಾಲ್ಕು ಜನರ ಗುಂಪಿನಲ್ಲಿ ನಾವು ಕುಳಿತಿದ್ದು, ಏನೂ ಕಾರಣದಿಂದ ಒಬ್ಬ ಅಲ್ಲಿಂದ ಎದ್ದು ಹೋದರೆ ಸಾಕು, ಆಗ ನೋಡಿ ಅವನ‌ ಹಿಂದಿನಿಂದ ಅವನ ಬಗ್ಗೆ ಹೇಗೆ ಚರ್ಚೆ ನಡೆಯುತ್ತಿರುತ್ತದೆ ಎಂದು.
ಯಾರೋ ಒಬ್ಬರು ನಮಗೆ ಸ್ವಲ್ಪ ಇಷ್ಟವಾಗುವುದಿಲ್ಲವೆಂದರೂ ಸರಿ , ಅವರ ಬಗ್ಗೆ ಇಲ್ಲ ಸಲ್ಲದ್ದನ್ನೆಲ್ಲ ಸೇರಿಸಿ ಅವನ ಬಗ್ಗೆ ತನಗೆ ‌ಎಲ್ಲವೂ ತಿಳಿದಿದೆ ‌ಎನ್ನುವ ಹಾಗೆ ಸತ್ಯದ ತಲೆಯಮೇಲೆ ಹೊಡೆದಂತೆ ಮಾತನಾಡುವುದು, ಕೆಲವು ಮನುಷ್ಯರ ಸ್ವಭಾವ. ಯಾರ ಬಗ್ಗೆ ಆದರೂ, ಪೂರ್ಣ ಸತ್ಯ ಗೊತ್ತಿಲ್ಲದೆ ಮಾತನಾಡುವುದು, ಮಹಾ ತಪ್ಪು, ಅಪರಾಧ ಕೂಡಾ.ಇದರಿಂದ ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗಬಹುದು. ತಮ್ಮ ತಪ್ಪೇ ಇಲ್ಲದೆ ಅವರು, ಶಿಕ್ಷೆ ಕೂಡಾ ಅನುಭವಿಸುವಂತಾಗಬಹುದು. ನಮ್ಮ ಕೈಯಲ್ಲಿರುವ ಕೆಂಡ, ಇತರರನ್ನು ಸುಡುವ ಮುನ್ನ ನಮ್ಮನ್ನೇ ಸುಡುವಂತೆ, ಇತರರ ಬಗೆಗಿನ ಕೆಟ್ಟ ಮಾತುಗಳು ನಮ್ಮ ವ್ಯಕ್ತಿತ್ವದ ಕನ್ನಡಿಯಾಗುತ್ತವೆ . ಸದಾ ಬೇರೆಯವರ ಬಗ್ಗೆ ಕೆಟ್ಟದ್ದನ್ನೇ ಮಾತನಾಡುತ್ತಾ, ಕೆಟ್ಟದ್ದನ್ನೇ ಬಯಸುವ ವ್ಯಕ್ತಿಯನ್ನು ಯಾರೂ ಹೆಚ್ಚು ದಿನ ಗೌರವಿಸುವುದಿಲ್ಲ, ಅವನನ್ನು ಯಾರೂ ನಂಬುವುದೂ‌ ಇಲ್ಲ.

ಸದಾ ಇನ್ನೊಬ್ಬರನ್ನು ದೂಷಣೆ ಮಾಡುತ್ತಾ ,ಅವರ ಬಗ್ಗೆ ಇಲ್ಲ ಸಲ್ಲದ ಸುದ್ಧಿ ಹಬ್ಬಿಸುತ್ತ ಸಂತೋಷಪಡುವುದು ಒಂದು ಮಹಾ ದೊಡ್ಡ ರೋಗ. ಅದರಿಂದ ದೂರವಿದ್ದರೆ ,ನಮಗೂ ಹಾಗೂ ,ಸಮಾಜಕ್ಕೂ ಒಳ್ಳೆಯದು.

ದಿನಕ್ಕೊಂದು ಕಥೆ - "ಸೋಲಿನಲ್ಲಿ ಜೊತೆಯಾದ ಬಾಳಿನ ಗೆಳತಿ"

 ಆತನ ಹೆಸರು ‘ಚೇತನ್’ ಜೀವನದಲ್ಲಿ ಅದೆಷ್ಟು ಬಾರಿ ಸೋತಿದ್ದನೋ ಲೆಕ್ಕವೇ ಇಲ್ಲ. ಈಗಲೂ ಅವನಿಗೆ ಸೋಲೇ ಇತ್ತು. ಕೈ ಹಾಕಿದ ಎಲ್ಲಾ ಕೆಲಸದಲ್ಲಿ ಸೋಲು. ಖಚಿತವಾಗಿತ್ತು. ಬಿ.ಕಾಂ ಮುಗಿಸಿ ಕೆಲಸಕ್ಕಾಗಿ ಅಲೆದ ಸಿಗಲಿಲ್ಲ. ದೊಡ್ಡ ಕೆಲಸ ಅಂತೇನು ಅಲ್ಲ ಓದಿಗೆ ತಕ್ಕಂತೆ ಕೆಲಸ, ಜೀವನೊಪಾಯಕ್ಕೆ ಆಗುವಷ್ಟು ಸಂಪಾದನೆ. ಕೆಲಸಗಳಿಗೆ ಅರ್ಜಿ ಹಾಕಿ ಸೋತು ಸಿಗದೇ, ಇಷ್ಟವಿಲ್ಲದಿದ್ದರೂ ಒಲ್ಲದ ಮನಸ್ಸಿ ನಿಂದ ಶಿಕ್ಷಕ ವೃತ್ತಿಯನ್ನು ಮಾಡಬೇಕಾಗಿ ಬಂದಿತು. ಪ್ರವೇಟ್ ಶಾಲೆ ಒಂದರಲ್ಲಿ ಕೆಲಸ ಸಿಕ್ಕಿತು, ಬಿಟ್ಟರೆ ಇದು ಇಲ್ಲ ಎಂಬುದು ಗೊತ್ತಿತ್ತು. ಅವನಿಗೆ ಮಕ್ಕಳನ್ನು ಮಾತಾಡಿಸಲು, ನಗಿಸಲು, ಅವುಗಳ ಜೊತೆ ಆಡಲು ಬರುವುದೂ ಇಲ್ಲ, ಇಷ್ಟವೂ ಇಲ್ಲ. ಆದರೂ ಹೇಗೋ ಸಂಭಾಳಿಸಿ ಕೊಂಡಿದ್ದ . ಇದರ ನಡುವೆ ಅವನ ವಿವಾಹವಾಯಿತು. ಮಡದಿ ಅವನ ಬದುಕಿಗೆ ಬೆಳಕಾದಳು. ಕೆಲಸ ಮುಗಿಸಿ ಉಸ್ಸಪ್ಪಾ ಎಂದು ಮನೆಗೆ ಬಂದರೆ ತಂಪೆರವ ಮಡದಿ ಇದ್ದುದರಿಂದ ಅವನಿಗೆ ಅಷ್ಟು ಕಷ್ಟ ಎನಿಸಲಿಲ್ಲ. ಇತ್ತೀಚೆಗೆ ಶಾಲಾ ಮಕ್ಕಳ ಬಗ್ಗೆ ಅವನಿಗೆ ಆಸಕ್ತಿ ಹುಟ್ಟಿತು.


ಅವನ ದುರಾದೃಷ್ಟವೋ ಎಂಬಂತೆ ಪ್ರವೇಟ್ ಶಾಲೆ ಆದುದರಿಂದ, ಇದ್ದಕ್ಕಿದ್ದಂತೆ ಶಾಲೆ ನಡೆಸುವುದು ಕಷ್ಟ ಎಂದು ಕೆಲಸದಿಂದ ತೆಗೆದರು. ಮತ್ತೆ ತಲೆ ಮೇಲೆ ಕೈ ಹೊತ್ತು ಕೂತ. ಈ ಕೆಲಸ ಅಲ್ಲದಿದ್ದರೆ ಇನ್ನೊಂದು ಸಿಕ್ಕೇ ಸಿಗುತ್ತದೆ ಎಂದು ಪತ್ನಿ ಸಮಾಧಾನ ಮಾಡಿದಳು. ಅವಳು ಸಹ ಮನೆ ಹತ್ತಿರದ ಚಿಕ್ಕ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಆ ಸಂಬಳದಿಂದಲೇ ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದರು. ಗಂಡನಿಗೆ ಕೆಲಸ ಹುಡುಕಿ, ನಾನೊಬ್ಬಳೇ ದುಡಿಯ ಬೇಕು ಎಂಬ ಕಟಕು ಮಾತನ್ನು ಅಪ್ಪಿ ತಪ್ಪಿಯು ಆಡಲಿಲ್ಲ.

ಒಂದು ಮಧ್ಯಾಹ್ನ ಮನೆಗೆ ಹೋಗಲಾಗದೆ, ರಸ್ತೆಯಲ್ಲೂ ಅಲೆಯಲಾಗದೆ, ಹಳೆ ದೇವಸ್ಥಾನದ ಹೊರಜಗಲಿಯ ಮೇಲೆ ಮಲಗಿದ್ದನು. ಚಿಂತೆಯಲ್ಲಿರುವಾಗಲೇ ಯಾರೋ ಡಬ ದಬ ಹೊಡೆದಂತಾಯಿತು. ಆತ ಎಚ್ಚರಗೊಂಡು ನೋಡುತ್ತಾನೆ
ಒಬ್ಬ ಬಾಲಕ ಅವನ ಮೈ ಮೇಲೆ ಹೊಡೆಯುತ್ತಿತ್ತು. ಅವನಿಗೆ ಸಿಟ್ಟು ಬಂದಿತು ಎದ್ದು ಆ ಮಗುವನ್ನು ಹೊಡೆಯಬೇಕೆಂದು ಕೊಂಡ ಆದರೆ ಅದು ಬುದ್ಧಿಮಾಂದ್ಯ ಮಗುವಾಗಿತ್ತು. ಕೈ ಹಿಂತೆಗೆದುಕೊಂಡ. ಅಷ್ಟು ಹೊತ್ತಿಗೆ ಆ ಹುಡುಗನ ತಾಯಿ ಬಂದು ಕ್ಷಮೆ ಕೇಳುವಂತೆ ಆತನನ್ನು ನೋಡಿದಳು. ಅವನ ಕರುಳು ಚುರಕ್ಕಂತು ಆ ಬಾಲಕನನ್ನು ಎತ್ತಿ ಮುದ್ದು ಮಾಡಿ ತಾಯಿಯ ಜೊತೆ ಕಳಿಸಿಕೊಟ್ಟ. ಆಕೆ ಮಾತಾಡಿ ದಾಗ ಅವನ ಮನೆಯ ಪಕ್ಕದಲ್ಲಿ ಅವಳ ಮನೆ ಇರುವುದು ತಿಳಿಯಿತು. ಆತ ಮನೆಗೆ ಬಂದ ಮೇಲೆ ಪತ್ನಿಗೆ ಎಲ್ಲವನ್ನು ಹೇಳಿದ.

ಆಕೆ ಹೇಳಿದಳು ನೀವು ಬೇಜಾರು ಕಳೆಯಲು, ಪಕ್ಕದ ಮನೆಗೆ ಹೋಗಿ ಸ್ವಲ್ಪ ಹೊತ್ತು ಆ ಮಗುವಿನ ಜೊತೆ ಆಟವಾಡಿ, ನಿಮಗೂ ಸಮಯ ಕಳೆಯುತ್ತೆ ಆ ತಾಯಿಗೂ ಹಗುರವಾಗುತ್ತದೆ ಎಂದಳು. ಮರುದಿನದಿಂದ ಆತ ಆ ಮಗುವಿನ ಬಳಿ ಹೋಗಿ ಸ್ವಲ್ಪ ಹೊತ್ತು ಮಾತಾಡಿ ಆಟವಾಡಿಸಿ ಬರುತ್ತಿದ್ದ. ಆ ಬಾಲಕನ ತಾಯಿಗೆ ಇದರಿಂದ ತುಂಬಾ ಅನುಕೂಲವಾಯಿತು. ಆಟ ಆಡಿಸಿದ, ಮಾತನಾಡಿಸಿದ, ಚೆನ್ನಾಗಿ ಹೊಂದಿಕೊಂಡನು. ಇದನ್ನು ಗಮನಿಸಿದ ಆ ಬಾಲಕನ ತಾಯಿ ಹೇಳಿದಳು, ನೋಡು ಸದ್ಯಕ್ಕೆ ನಿನಗೂ ಕೆಲಸವಿಲ್ಲ, ಈ ಕಾಲೋನಿಯಲ್ಲಿ ಮಾನಸಿಕ ಸಮಸ್ಯೆ ಇರುವ ಕೆಲವು ಮಕ್ಕಳು ಇದ್ದಾವೆ. ಅವುಗಳನ್ನೆಲ್ಲ ಒಂದು ಕಡೆ ಸೇರಿಸಲು ನೀವೇಕೆ ಒಂದು ಶಾಲೆ ನಡೆಸ ಬಾರದು, ಈ ಮೊದಲೇ ನೀವು ಶಾಲೆಯಲ್ಲಿ ಶಿಕ್ಷಕರಾದ ಅನುಭವ ಇದೆ ಶಾಲೆ ನಡೆಸಿ ಪೋಷಕರೆಲ್ಲ್ ಸೇರಿ ನಿಮಗೆ ಬೇಕಾದ ವ್ಯವಸ್ಥೆ ಮಾಡುತ್ತಾರೆ ಎಂದಳು. ಮತ್ತೆ ಶಿಕ್ಷಕ ವೃತ್ತಿನಾ ಎಂದು ಮನಸ್ಸು ಹಿಂಜರಿದರೂ
ಅವನಿಗೆ ಹೌದೇನಿಸಿ ಒಪ್ಪಿಕೊಂಡನು.

ಮುಖ್ಯ ಕಚೇರಿಗಳಿಗೆ ಹೋಗಿ ಶಾಲೆ ಮಾಡುವ ಅನುಮತಿ ಪಡೆದುಕೊಂಡು ಬಂದ. ಆ ತಾಯಿ ಎಲ್ಲಾ ಕಡೆ ಹೇಳಿ ಬಂದಳು. ಶಾಲೆಗೆ ಸ್ಥಳವು ಸಿಕ್ಕಿತು. ಕೆಲಸ ಮತ್ತು ವೇತನ ದೊರೆಯಿತು. ಮತ್ತಷ್ಟು ಮಕ್ಕಳನ್ನು ಸೇರಿಸಿದರು. ಆ ಮಕ್ಕಳನ್ನು ಬಹಳ ಪ್ರೀತಿ ಯಿಂದ ನೋಡಿಕೊಂಡ, ಆಟ ಆಡಿಸಲು ಆ ಮಕ್ಕಳಿಗೆ ಪೂರಕವಾದ ಆಟದ ಸಾಮಾನುಗಳನ್ನು ತಾನೇ ಮಾಡಿದ. ಮಕ್ಕಳ ಪೋಷಕರನ್ನು ಕರೆಸಿ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು. ಎಂಬುದನ್ನು ವಿವರಿಸುತ್ತಿದ್ದ. ಮನೆಯಲ್ಲಿ ಮಕ್ಕಳ ಜೊತೆ ತಾಳ್ಮೆಯಿಂದ ವರ್ತಿಸಿ ಎಂದು ಹೇಳುತ್ತಿದ್ದ. ಇವನು ಸಕಾರಾತ್ಮಕ ಕೆಲಸ ಚಟುವಟಿಕೆಗಳನ್ನು ಗುರುತಿಸಿದ ಎಲ್ಲಾ ತಾಯಂದಿರ ಬಾಯಿಂದ ಬಾಯಿಗೆ ಹರಡಿ
ಗ್ರಾಮ, ಪಟ್ಟಣಗಳವರೆಗೂ ವಿಷಯ ಹೋಯಿತು. ಇನ್ನಷ್ಟು ಮಕ್ಕಳು ಶಾಲೆಗೆ ಸೇರಿದರು. ಅವನ ಸ್ಥಿತಿ ಈಗ ಉತ್ತಮ ಮಟ್ಟಕ್ಕೆ ಏರಿತು. ಸಮಾಜದಿಂದ ಅವನಿಗೆ ಒಳ್ಳೆಯ ಹೆಸರು ಬಂದಿತು. ಸರ್ಕಾರಿ ಅಧಿಕಾರಿಗಳು ಬಂದು ಶಾಲೆಗೆ ಬೇಕಾದ ವ್ಯವಸ್ಥೆಯನ್ನು ಮಾಡಿದರು. ಸಿರಿವಂತ ತಂದೆ ತಾಯಿ ಯರು ಆ ಶಾಲೆಗೆ ಹಲವು ಕೊಡುಗೆಗಳನ್ನು ಕೊಟ್ಟರು.

ಆ ಶಾಲೆಗೆ ಅವನೇ ಮುಖ್ಯಸ್ಥನಾದನು. ಈಗ ಅವನ ಜೊತೆಗೆ ನಾಲ್ಕಾರು ಸಹ ಶಿಕ್ಷಕರು ಬಂದರು. ಸರ್ಕಾರದ ವತಿಯಿಂದ ಹಾಗೂ ಖಾಸಗಿ ವತಿಯಿಂದ ಮತ್ತು ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳು ಬಂದವು. ಇಷ್ಟೇ ಅಲ್ಲದೆ ಅವನು ಮಾಡಿದ ಆಟದ ಸಾಮಾನುಗಳಿಗೆ, ಆನ್ಲೈನ್ ಬೇಡಿಕೆ ಹೆಚ್ಚಿತು. ತಾನು ದುರಾದೃಷ್ಟ ವಂತ ಎಂದು ಎಷ್ಟು ಹೀಗಳೆದುಕೊಂಡಿದ್ದನೋ, ಈಗ ಅಷ್ಟೇ ಪ್ರಸಿದ್ಧಿ ಹೆಸರು ಬೇರೆ ರಾಜ್ಯಗಳ ತನಕ ಹರಡಿತು. ಆ ಮಕ್ಕಳಿಗೂ ಅವನಿಗೂ ಆವಿನ ಭಾವ ಸಂಬಂಧ ಬೆಳೆದು ಬಂದಿತ್ತು ಒಂದು ದಿನ ಮಕ್ಕಳ ಜೊತೆ ಕಳೆಯದಿದ್ದರೆ ಅವನಿಗೆ ಗೊತ್ತಿಲ್ಲ ದಂತೆ ಅವನ ಮನಸ್ಸಿಗೆ ಕಸಿ ವಿಸಿ ಆಗುತ್ತಿತ್ತು. ಹಾಗಾಗಿ, ಎಷ್ಟೇ ಅವಸರದ ಕೆಲಸ ಅಥವಾ ಒತ್ತಡ ಗಳಿದ್ದರೂ ಶಾಲೆಗೆ ಬಂದು ಮಕ್ಕಳ ಜೊತೆ ಒಂದಷ್ಟು ಹೊತ್ತು ಕಳೆಯುತ್ತಿದ್ದ.

ಒಮ್ಮೆ ಅವನೇ ಅಂದುಕೊಂಡ ನಾನು ಹೇಗಿದ್ದವನು ಈಗ ಹೇಗಾಗಿದ್ದೇನೆ ಎಂದು ಯೋಚಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಪತ್ನಿಯ ನೆನಪಾಯಿತು. ಮನೆಗೆ ಬಂದು ಪತ್ನಿ ಯನ್ನು ಕೇಳಿದ, ನಾನು ಎಷ್ಟು ಸಲ ಚಿಂತಿತನಾಗಿ ಕೆಲಸವಿಲ್ಲದೆ ಅಲೆಯುತ್ತಿದ್ದೆ, ಇದ್ದ ಕೆಲಸವೂ ಹೋಗಿತ್ತು. ನನ್ನ ಕೈಲಿ ಬಿಡಿಗಾಸು ಇಲ್ಲದಿದ್ದಾಗಲೂ ನೀನು ಜೀವನವನ್ನು ನಿರ್ವಹಣೆ ಮಾಡಿದ್ದು, ನಾನು ಜೀವನದಲ್ಲಿ ಗೆಲ್ಲುತ್ತೇನೆ ಎಂಬ ನಂಬಿಕೆ ನನಗಿರಲಿಲ್ಲ, ಒಂದು ದಿನವೂ ನೀನು ನನ್ನ ಬಗ್ಗೆ ಒಂದು ಕೆಟ್ಟ ಮಾತಾಗಲಿ, ಅಥವಾ ತಿರಸ್ಕಾರದ ನೋಟವಾಗಲಿ ತೋರಿಸಲಿಲ್ಲ ನಿನಗೆ ನನ್ನ ಮೇಲೆ ಅಷ್ಟೊಂದು ನಂಬಿಕೆ, ಜೀವನದಲ್ಲಿ ನಾನು ಗೆದ್ದೆ ಗೆಲ್ಲುತ್ತೇನೆ, ನನಗೂ ಒಳ್ಳೆಯ ದಿನಗಳು ಬರುತ್ತವೆ ಎಂಬ ವಿಶ್ವಾಸ ನನ್ನ ಮೇಲೆ ನಿನಗಿತ್ತಾ ಎಂದು ಕೇಳಿದ.

ಆಕೆ ಹೇಳಿದಳು. ನಿಮಗೆ ಹೊಲದ ಬಗ್ಗೆ ಗೊತ್ತಾ? ನಾನು ರೈತರ ಕುಟುಂಬದಿಂದ ಬಂದವಳು ಹೊಲದಲ್ಲಿ ಒಮ್ಮೆ ರಾಗಿ ಹಾಕುತ್ತೇವೆ ಅದು ನಾಶವಾಗುತ್ತದೆ, ಮತ್ತೊಮ್ಮೆ ಜೋಳ ಹಾಕುತ್ತೇವೆ ಅದೂ ನಾಶವಾಗುತ್ತದೆ.
ಹೀಗೆ ನಾಶವಾದಷ್ಟು ಮತ್ತೆ ಮತ್ತೆ ಕಡಲೆ, ಉದ್ದು, ಹೆಸರು ಎಲ್ಲಾ ಹಾಕುತ್ತೇವೆ. ಕೊನೆಗೆ ನಾವು ಅಂದುಕೊಂಡಿರದೆ ಇದ್ದ ಬೆಳೆ ಚೆನ್ನಾಗಿ ಬಂದು ಅದು ನಮ್ಮ ಕೈ ಹಿಡಿಯುತ್ತದೆ. ಮನುಷ್ಯನ ಬದುಕು ಹೀಗೆ ಹುಡುಕುತ್ತಾ ಇರಬೇಕು ಯಾವುದೋ ಒಂದು ಕಡೆ ನಮಗೆ ಬೇಕಾದ್ದು ಸಿಗುತ್ತದೆ. ಅದರಿಂದಲೇ ಬದುಕು ಚೆನ್ನಾಗಿ ಆಗುತ್ತದೆ. ನನಗೆ ನಿಮ್ಮ ಮೇಲೆ ವಿಶ್ವಾಸವಿತ್ತು. ಒಳ್ಳೆಯ ದಿನಗಳು ಕೊನೆತನಕ ಉಳಿಯುವುದಿಲ್ಲ ಎಂದಾದರೆ, ಕೆಟ್ಟ ದಿನಗಳು ಎಲ್ಲೀಯ ತನಕ ಉಳಿಯಲು ಸಾಧ್ಯ. ಕತ್ತಲು ಬಂದಮೇಲೆ ಬೆಳಕು ಬರಲೇಬೇಕು ಅಲ್ಲವೇ? ಹಾಗೆ ಬೆಳಕು ಬಂದ ಮೇಲೆ ಜೀವನ ರಂಗು ರಂಗಾಗುತ್ತದೆ. ಜೀವನದಲ್ಲಿ ಎಲ್ಲಾ ಬರುತ್ತದೆ ಹೋಗುತ್ತದೆ.
ಬದಲಾವಣೆ ಎನ್ನುವುದು ಜಗದ ನಿಯಮ ಆದರೆ ಪ್ರಾಣ ಹೋದರೆ ಎಂದಿಗೂ ಬರುವುದಿಲ್ಲ.
ದಾಸರು ಹೇಳಿರುವುದು ಇದನ್ನೆ.

ಆದದ್ದೆಲ್ಲ ಒಳಿತೇ ಆಯಿತು ನಮ್ಮ
ಶ್ರೀಧರನ ಸೇವೆ ಮಾಡಲು
ಸಾಧನ ಸಂಪತ್ತಾಯಿತು !!

ದಂಡಿಗೆ ಬೆತ್ತ ಹಿಡಿಯುವುದಕ್ಕೆ
ಮಂಡೆ ಬಾಗಿ ನಾಚುತಲಿದ್ದೆ
ಹೆಂಡತಿ ಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತ ಹಿಡಿಸಿದಳಯ್ಯ!!

*ಗೋಪಾಲ ಬುಟ್ಟಿ ಹಿಡಿಯುವುದಕ್ಕೆ*
*ಭೂಪತಿಯೆಂದು ಗರ್ವಿಸುತ್ತಿದ್ದೆ*
*ಆ ಪತ್ನಿ ಕುಲ ಸಾವಿರವಾಗಲಿ*
*ಗೋಪಾಲ ಬುಟ್ಟಿ ಹಿಡಿಸಿದಳಯ್ಯ!!*

*ತುಳಸಿ ಮಾಲೆ ಹಾಕುವುದಕ್ಕೆ*
*ಅರಸನೆಂದು ತಿರುಗುತಲಿದ್ದೆ*
*ಸರಸಿ ಜಾಕ್ಷ ಶ್ರೀ ಪುರಂದರ ವಿಠಲನು*
*ತುಳಸಿ ಮಾಲೆ ಹಾಕಿದನಯ್ಯ !!*

ದಿನಕ್ಕೊಂದು ಕಥೆ - ಮಾಯೆ

 ಒಬ್ಬ ಮನುಷ್ಯನು ದೇಹ ಬಿಟ್ಟಿದ್ದ. ಶವ ಸಂಸ್ಕಾರಕ್ಕೆ ಅವನ ಗೆಳೆಯನು ಸ್ಮಶಾನಕ್ಕೆ ಹೋಗಿದ್ದ. ಅಲ್ಲಿ ತನ್ನ ಗೆಳೆಯನ ದೇಹವು ಅಗ್ನಿಗೆ ಆಹುತಿಯಾಗುವುದನ್ನು ಕಣ್ಣಾರೆ ಕಂಡ. ಜೀವನವು ಎಷ್ಟು ಅಸ್ಥಿರ, ನಶ್ವರ ಎನಿಸಿತು. 'ಮನುಷ್ಯನು ಈ ನಶ್ವರ ಜೀವನಕ್ಕಾಗಿ, ಸಂಸ್ಕಾರಕ್ಕಾಗಿ ಆಶೆಪಡಬಾರದು, ಹೋರಾಡಬಾರದು !' ಎಂದು ಅಲ್ಲಿರುವವರಿಗೆ ಈತ ಹೇಳಿದ. ಜನರು ಈತನ ಉಪದೇಶಕ್ಕೆ ಮೌನವಾಗಿ ಸಮ್ಮತಿಸಿ ಮನೆಗೆ ಹೊರಟರು. ಅಷ್ಟರಲ್ಲಿ ಯಾರೋ ಈತನ ಕಾಲಮೇಲೆ ಕಾಲಿಟ್ಟಿದ್ದರಿಂದ ಇವನ ಹಳೆ ಚಪ್ಪಲಿ ಹರಿಯಿತು. 'ಕಣ್ಣು ಕಾಣುವುದಿಲ್ಲವೆ ? ಹೇಗೆ ನಡೆಯುತ್ತೀರಿ ?' ಎಂದು ಅವರೊಂದಿಗೆ ಈತ ವಾದವಿವಾದಕ್ಕೆ ಇಳಿದು ಹೋರಾಡತೊಡಗಿದ . ಅಲ್ಲಿದ್ದ ಜನರೆಲ್ಲ ಈತನಿಗೆ ಸಮಾಧಾನ ಹೇಳಿ ಆಗಬಹುದಾಗಿದ್ದ ಅನಾಹುತ ತಪ್ಪಿಸಿದರು. ಒಂದು ಕ್ಷಣದ ಹಿಂದೆಯೇ 'ಮಾನವ ಜೀವನ ಅಸ್ಥಿರ-ನಶ್ವರ' ಎಂದು ಹೇಳಿದವನೇ ತನ್ನ ಹಳೆಯ ಚಪ್ಪಲಿಗಳಿಗಾಗಿ ವಾದಿಸಿದ ! ಇದೇ ಮಾಯೆ, ಮೋಹ!.

ಕೃಪೆ: ಸಿದ್ದೇಶ್ವರ ಸ್ವಾಮೀಜಿಗಳು.
*********************************************
*ತಾಯಿಯ ಪ್ರೀತಿಗೆ ಸಮಾನವಾದದ್ದು ಬೇರೊಂದಿಲ್ಲ.*

ಒಂದು ಕಾಡಿನಲ್ಲಿ ಸಂಗೀತದ ಆಶ್ರಮವೊಂದಿತ್ತು . ಆಶ್ರಮದ ಬದಿಯಲ್ಲಿ ಒಂದು ನದಿ ಹರಿಯುತ್ತಿತ್ತು. ನದಿ ದಂಡೆಯ ಮೇಲೆ, ಕುಳಿತು ತಬಲ, ಪಿಯಾನೋ ವೈಲೀನ್ ನುಡಿಸುತ್ತಿದ್ದರು.

ಆಶ್ರಮದ ಕೆಲವು ಹುಡುಗರು ಒಂದೊಂದು ಮರದ ಕೆಳಗೆ ಕುಳಿತು ಸಂಗೀತದ ಅಭ್ಯಾಸ ನಡೆಸುತ್ತಿದ್ದರು. ಕೆಲವು ಕುರಿ ಕಾಯುವ ಹುಡುಗರು ಕುರಿ ಮೇಯಿಸಲು ಕುರಿಗಳೊಂದಿಗೆ ಆ ಕಾಡಿಗೆ ಬರುತ್ತಿದ್ದರು.

ಒಂದು ದಿನ ಒಬ್ಬ ಹುಡುಗ ಮೃದಂಗ ಬಾರಿಸುತ್ತಿದ್ದ. ಕುರಿ ಹಿಂಡಿನಲ್ಲಿದ್ದ ಒಂದು ಕುರಿಮರಿ, ಓಡೋಡಿ ಇವನ ಹತ್ತಿರ ಬಂದಿತು. ಮೃದಂಗದ ಶಬ್ದಕ್ಕೆ ತಾನು ಕೂಡ ತಲೆ ಅಲ್ಲಾಡಿಸುತ್ತಿತ್ತು. ಈ ಹುಡುಗ ಅಭ್ಯಾಸ ಮುಗಿಸಿ ಒಳಗೆ ಹೋದಾಗ, ಪುನಹ ಈ ಕುರಿಮರಿ ತನ್ನ ಗುಂಪಿನ ಕಡೆಗೆ ಓಡಿಹೋಯಿತು. ಪ್ರತಿದಿನವೂ ಇದೇ ರೀತಿ ನಡೆಯುತ್ತಿತ್ತು, ಈ ಹುಡುಗ ಮೃದಂಗ ಬಾರಿಸಿದಾಗಲೆಲ್ಲಾ, ಅದರ ಶಬ್ದ ಕಿವಿಗೆ ಬಿದ್ದ ತಕ್ಷಣ ಈ ಕುರಿಮರಿ ಓಡಿ ಬಂದು , ತಲೆ ಅಲ್ಲಾಡಿಸುತ್ತಾ ನಿಲ್ಲುತ್ತಿತ್ತು. ಮೃದಂಗದ ಶಬ್ದ ನಿಂತ ಕ್ಷಣ ತನ್ನ ಮಂದೆಯ ಕಡೆಗೆ ಓಡಿ ಹೋಗುತ್ತಿತ್ತು. ಈ ಹುಡುಗನಿಗೆ ಆಶ್ಚರ್ಯವಾಗಿ, ಒಂದು ದಿನ ಕುರಿಯನ್ನು , ಮೃದಂಗದ‌ ಶಬ್ದ ಕೇಳಿದ ತಕ್ಷಣ ನೀನೇಕೆ ಹಾಗೆ ತಲೆ ಅಲ್ಲಾಡಿಸುವೆ ? ಎಂದು ಕೇಳಿದ.

ಮೃದಂಗದ ಶಬ್ದ ನನ್ನ ಕಿವಿಯ ಮೇಲೆ ಬಿದ್ದಾಗ, ನನ್ನ ಹೃದಯದಲ್ಲಿ ಪ್ರೇಮದ ತರಂಗಗಳು ಏಳಲು ಶುರುವಾಗುತ್ತದೆ, ಎಂದಿತು ಕುರಿ.
ಮೃದಂಗದ ಶಬ್ದಕ್ಕೂ ನಿನ್ನ ಹೃದಯದಲ್ಲಿ ಪ್ರೇಮ ತರಂಗ ಏಳುವುದಕ್ಕೂ ಏನು ಸಂಬಂಧ ? ಎಂದು ಕೇಳಿದ ಹುಡುಗ.
ಏಕೆಂದರೆ, ನಿನ್ನ ಮೃದಂಗ ತಯಾರಾಗಿದ್ದು ನನ್ನ ತಾಯಿಯ ಚರ್ಮದಿಂದ, ಅದಕ್ಕಾಗಿ ನನಗೆ, ಹಾಗೆ ಅನ್ನಿಸುತ್ತದೆ. ನನ್ನ ತಾಯಿ ಈಗ ಜೀವಂತ ಇಲ್ಲ, ಆದರೆ ಅವಳು ನಿನ್ನ ಮೃದಂಗದ ಮೂಲಕ ಅವಳ ಪ್ರೇಮವನ್ನು ಬಿಟ್ಟು ಹೋಗಿದ್ದಾಳೆ, ಅದರಲ್ಲೇ ಅವಳನ್ನು ಕಾಣುತ್ತೇನೆ,ಎಂದು ಕಣ್ಣೀರು ಸುರಿಸಿತು ಕುರಿ.

ಜಗತ್ತಿನಲ್ಲಿ ತಾಯಿಯ ಪ್ರೇಮವೇ ಹಾಗೆ. ಎಲ್ಲ ಪ್ರೇಮಕ್ಕಿಂತಲೂ, ತಾಯಿಯ ಪ್ರೇಮ ದೊಡ್ಡದು. ತಾಯಿಯ ಪ್ರೇಮಕ್ಕಿಂತಲೂ ಬೇರೆ ಯಾವುದೂ ದೊಡ್ಡದಲ್ಲ.

ನಾವು ದೊಡ್ಡ ದೊಡ್ಡ ಹೋಟಲ್ ನಲ್ಲಿ, ಸಾವಿರಾರು ರೂಪಾಯಿಗಳನ್ನು ಕೊಟ್ಟು ಬೇಕಾದದ್ದನ್ನು ಕೊಂಡು ತಿನ್ನಬಹುದು. ಆದರೆ ಮನೆಯಲ್ಲಿ ತಾಯಿ ಮಾಡಿಕೊಟ್ಟ ರೊಟ್ಟಿ, ಚಟ್ನಿಯ ರುಚಿ ಅದಕ್ಕಿರುವುದಿಲ್ಲ. ಏಕೆಂದರೆ ಹೋಟೆಲ್ ನವನು ನಾವು ಕೇಳಿದ್ದನ್ನೇ ಕೊಟ್ಟರೂ ಅವನ ಕಣ್ಣು , ನಾವು ಕೊಡುವ ಹಣದ ಮೇಲಿರುತ್ತದೆ. ಆದರೆ ಅಮ್ಮನ ಕಣ್ಣು ಮಗ ಚೆನ್ನಾಗಿ ತಿಂದು ಆರೋಗ್ಯವಂತನಾಗಬೇಕು ಎಂಬುದರ ಬಗ್ಗೆ ಇರುತ್ತದೆ . ಅಮ್ಮ ಕೊಡುವ ರೊಟ್ಟಿ ಗಟ್ಟಿಯಾಗಿದ್ದರೂ, ಅಮ್ಮನ ಹೃದಯ , ಮೃದುವಾಗಿರುತ್ತದೆ.

ನಾವು ದೊಡ್ಡವರಾಗಿ ದುಡಿಯ ತೊಡಗಿದಾಗ, ದುಡಿದು ಮನೆಗೆ ಬಂದಾಗ, ನಮ್ಮ ಮಕ್ಕಳು ನನಗೇನು ತಂದಿ? ಎಂದು ಕೇಳುತ್ತಾರೆ . ಆದರೆ ತಾಯಿ ಮಾತ್ರ , ಇವತ್ತು ಅಲ್ಲಿ ಏನು ತಿಂದಿ ? ಹೊಟ್ಟೆ ತುಂಬಿತಾ? ಎಂದು ಕೇಳುತ್ತಾಳೆ. ಹಾಗೆ ಕೇಳುವವಳು ಅಮ್ಮ ಮಾತ್ರ.
ತಾಯಿ ಪ್ರೀತಿಗೆ ಎಂದೂ ಬೆಲೆಕಟ್ಟಲು ಸಾಧ್ಯವಿಲ್ಲ.

ದಿನಕ್ಕೊಂದು ಕಥೆ- "ಮದುವೆಗಾಗಿ ಹುಡುಕಾಟ"

     ಒಬ್ಬ ತಂದೆ ತನ್ನ ಮಗಳ ಮದುವೆ ಮಾಡಲು ಯೋಚಿಸಿ, ಒಬ್ಬಳೇ ಮುದ್ದಿನ ಮಗಳನ್ನು ಕೇಳಿದ. ಮಗಳೇ ಹೇಳು, ನಿನಗೆ ಎಂಥ ಗಂಡು ಬೇಕು ಅಂಥ ಗಂಡನ್ನೇ ಹುಡುಕಿ ಅದ್ಧೂರಿಯಾಗಿ ಮದುವೆ ಮಾಡುವೆ ಎಂದನು. ಮಗಳು ಹೇಳಿದಳು, ಅಪ್ಪಾ ನಾನು ಮದುವೆಯಾಗುವ ಹುಡುಗ ನೋಡಲು ಚೆನ್ನಾಗಿದ್ದು, ದೊಡ್ಡ ಹುದ್ದೆ. ಇರಬೇಕು. ಹೈಟು- ವೆಯ್ಟು- ವೈಟ್ ಹದವಾಗಿದ್ದು ನಮ್ಮಿಬ್ಬರ ಜೋಡಿ ಮೇಡ್ ಫಾರ್ ಈಚ್ ಅದರ್ ಎನ್ನುವಂತಿರಬೇಕು. ಇಂಜಿನಿಯರ್- ಡಾಕ್ಟರ್- ಬಿಜಿನೆಸ್ ಮ್ಯಾನ್ ಅಲ್ಲದಿದ್ದರೂ ಕೊನೆ ಪಕ್ಷ ಮಾಸ್ಟರ್ ಡಿಗ್ರಿ ಯಾದರು ಆಗಿರಬೇಕು. ನನಗೆ ಹಳ್ಳಿ ಯಲ್ಲಿ ಇರಲು ಇಷ್ಟವಿಲ್ಲ ಸಿಟಿಯಲ್ಲಿ ಸ್ವಂತ ಮನೆ ಅಥವಾ ಫ್ಲಾಟ್ ಇರಬೇಕು.

    ಮಗಳ ಅಭಿಪ್ರಾಯ ಕೇಳಿದ ತಂದೆ ಒಳ್ಳೆಯದು ಮಗಳೇ, ನಾನು ಯೌವನದಲ್ಲಿ ನಿನ್ನಂತೆ ಹೇಳುತ್ತಿದ್ದೆ. ಅಂತ ಹುಡುಗಿಯನ್ನು ಹುಡುಕಿ ಹುಡುಕಿ ಸಿಗದೇ ಸುಸ್ತಾಗಿ ಕೊನೆಗೆ ನಿನ್ನ ತಾಯಿಯನ್ನೇ ಮದುವೆ ಮಾಡಿಕೊಂಡೆ. ನಿನ್ನ ವರನ ಹುಡುಕಾಟಕ್ಕೆ ನೀನೇ ಹೋಗು ಅವನಿಗೆ ಕೊಟ್ಟು ಮದುವೆ ಮಾಡುವೆ ಎಂದನು. ಮಗಳಿಗೆ ಬಹಳ ಖುಷಿಯಾಯಿತು. ತನ್ನಿಷ್ಟದಂತ ಗಂಡು ಹುಡುಕಲು ಹೊರಟಳು. ಎಲ್ಲಾ ಸಣ್ಣ ದೊಡ್ಡ ಪಟ್ಟಣಗಳನ್ನೆಲ್ಲ ಸುತ್ತಾಡುತ್ತಾ ದೇಶವನ್ನೇ ಸುತ್ತಿದಳು. ಹುಡುಕಿದ ಗಂಡು ಗಳಲ್ಲಿ ಕೊರತೆ ಕಾಣುತ್ತಿತ್ತು, ಕಪ್ಪು, ಕುಳ್ಳ, ದಪ್ಪ, ಸಣಕಲ, ಉಬ್ಬಲ್ಲು, ಪೀಚು ಮುಖ, ಸರಿಯಾಗಿ ಮಾತಾಡಕ್ಕೆ ಬರಲ್ಲ ಹೀಗೆ ಒಂದಿಲ್ಲೊಂದು ಕೊರತೆ ಅವಳಿಗೆ ಕಾಣುತ್ತಿತ್ತು. ಗಂಡು ಹುಡುಕುವ ಕೆಲಸ ಮುಂದುವರಿಸಿ ಕೆಲವು ವರ್ಷಗಳೇ ಉರುಳಿತು. ಅವಳ ಯೌವ್ವನ ಕುಸಿದಿದ್ದು ಅವಳಿಗೆ ತಿಳಿಯಲಿಲ್ಲ.

    ಅದು ಹೇಗೋ ಅವಳಿಷ್ಟದಂತ ಗಂಡು ಸಿಕ್ಕನು. ಅವನನ್ನು ನೋಡಿ ಮಾತನಾಡಿಸಿ
ನಾನು ಮದುವೆಯಾಗುವ ಹುಡುಗ ಹೀಗೆ ಇರಬೇಕೆಂದು ಬಹಳ ದಿನದಿಂದ ಹುಡುಕುತ್ತಿದ್ದೆ ಅಂತೂ ನೀನು ಸಿಕ್ಕಿದೆ ಎಂದು ಖುಷಿಯಿಂದ ಹೇಳಿದಳು. ಹುಡುಗ ಹೇಳಿದ, ನಾಲ್ಕು ವರ್ಷಗಳ ಹಿಂದೆ ನೀನು ನನ್ನ ಬಳಿಯೂ ಬಂದಿದ್ದೆ ಆಗ ನಿನ್ನನ್ನು ನೋಡಿ ಮದುವೆಯಾಗುವುದಾದರೆ ಇಂಥ ಹುಡುಗಿಯನ್ನೇ ಆಗಬೇಕು ಎಂದು ನಿನ್ನನ್ನು ಮದುವೆಯಾಗಲು ಕೇಳಿದೆ ಆದರೆ ನೀನು ಒಪ್ಪಲಿಲ್ಲ. ಈಗ ನಿನಗೆ ವಯಸ್ಸಾಗಿದೆ, ನನಗೆ ಚಂದದ ಹುಡುಗಿ ಸಿಕ್ಕು ಅವಳ ಜೊತೆ ನನ್ನ ಮದುವೆ ನಿಶ್ಚಯವಾಗಿದೆ ಎಂದು ಆಹ್ವಾನ ಕೊಟ್ಟನು.

    ಹುಡುಕಾಟಕ್ಕೆ ಕೊನೆ ಎನ್ನುವುದು ಇರಲ್ಲ. ಸೀರೆ ಅಂಗಡಿಗೆ ಹೋದರೆ, ಆ ಸೀರೆ ಬಣ್ಣ ಚಂದ, ಇನ್ನೊಂದು ಸೀರೆಯ ಡಿಸೈನ್ ಅಂದ ಎಂದುಕೊಳ್ಳುತ್ತಾ, ಮತ್ತೆ ಸುತ್ತಮುತ್ತ ಸೀರೆಗಳನ್ನು ನೋಡಿ ಓ ಅದು ಇನ್ನೂ ಚೆನ್ನಾಗಿದೆ ಎಂದು ತೆಗೆಸಿ ನೋಡುತ್ತೇವೆ. ಹೀಗೆ ಸಂಜೆವರೆಗೂ ಹುಡುಕಾಟ ನಡೆಸುತ್ತಾ ಸುಸ್ತಾಗಿ ಕೊನೆಗೆ ಹೊತ್ತಾಯ್ತು ಯಾವುದೋ ಒಂದು ಎಂದು ಕಣ್ಣಿಗೆ ಕಂಡ ಸೀರೆ ತೆಗೆದುಕೊಂಡು ಮನೆಗೆ ಬರುತ್ತೆವೆ. ಅದನ್ನು ಉಟ್ಟು ನೋಡಿದಾಗ ತೀರ ಸಾಧಾರಣ ಎನಿಸುತ್ತದೆ. ಹೀಗೆ ಕೆದಕಿ ಬೆದಕಿ ಹುಡುಕುತ್ತಾ ಹೋದರೆ ಕಲ್ಪನೆಯಂತಿರುವ ಗಂಡು-ಹೆಣ್ಣು ಸಿಗುವುದಿಲ್ಲ. ಹಾಗಂತ ಹುಡುಕುವುದು ತಪ್ಪಲ್ಲ. ತುಂಬಾ ನಿರೀಕ್ಷೆಗಳು ಇರಬಾರ ದು. ಒಂದು ಕಣ್ಣಳತೆ ಅಥವಾ ಅಂದಾಜೀಗೆ ಸರಿ ಹೋದರೆ ಸಿಕ್ಕಿರುವುದನ್ನು ಒಪ್ಪಬೇಕು. ಸಂತೋಷದಿಂದ ಜೀವನ ಸಾಗಿಸಬೇಕು.

    ಜಗತ್ತಿನಲ್ಲಿ ಯಾವುದು ಪೂರ್ಣವಲ್ಲ. ಭಗವಂತ ಮಾತ್ರ ಪೂರ್ಣ. ಪ್ರಪಂಚ
ಹೇಗಿದಿಯೋ ಹಾಗೆ ಸ್ವೀಕರಿಸಬೇಕು. ಎಲ್ಲರಿಗೂ ಆಸೆ ಆಕಾಂಕ್ಷೆ ಕನಸು ಕಲ್ಪನೆಗಳು
ಬೆಟ್ಟದಷ್ಟು ಇರುತ್ತದೆ. ಆದರೆ ಹಾಗೆ ಜಗತ್ತು ಇರುವುದಿಲ್ಲ. ಪರ್ಫೆಕ್ಟ್ ನ್ನು ಹುಡುಕಲು ಹೊರಟವರೇ ಕೊನೆಗೆ ಅನ್ಫಿಟ್ಟಂತ ಮೂಲೆ ಗುಂಪಾಗುತ್ತಾರೆ. ಭಗವಂತ ಕೊಟ್ಟಿದ್ದನ್ನು ಸ್ವೀಕರಿಸಬೇಕು. ಸುಂದರವಾಗಿ ಬದುಕುವುದನ್ನು ಕಲಿಯಬೇಕು.