Showing posts with label freedom fighter. Show all posts
Showing posts with label freedom fighter. Show all posts

Wednesday, October 30, 2013

ಸುಭಾಷರ ಸಾವಿನ ರಹಸ್ಯ



                                                             Mr. Subhas Chandra Bose is dead!
ಇಂಥದ್ದೊಂದು ಆಘಾತಕಾರೀ ಸುದ್ದಿ ಮೊದಲು ಹೊರಬಿದ್ದದ್ದು 1945ರ ಆಗಸ್ಟ್ 23ನೇ ತಾರೀಕು. ಸುದ್ದಿ ಬಿತ್ತರಿಸಿದ್ದು ಜಪಾನಿನ ‘ರೇಡಿಯೋ ಟೋಕಿಯೋ’. ಇಡೀ ಜಗತ್ತು ಇವತ್ತಿಗೂ ಅನುಮಾನದಿಂದಲೇ ನೋಡುವ ಅತ್ಯಂತ ದೊಡ್ಡ ಐತಿಹಾಸಿಕ ಸುಳ್ಳೊಂದು ಸದ್ದಿಲ್ಲದೆ ಹೀಗೆ ಹುಟ್ಟಿಕೊಂಡಿತು. ರೇಡಿಯೋ ಟೋಕಿಯೋದ ನ್ಯೂಸ್ ರೀಡರ್ ಹೇಳಿದ್ದಿಷ್ಟು “ವಿಮಾನ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡ ಮಿಸ್ಟರ್ ಸುಭಾಶ್ಚಂದ್ರ ಬೋಸ್ ಜಪಾನಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. ಭಾರತದ ‘ಆಜಾದ್ ಹಿಂದ್‌’ ಪ್ರಾಂತೀಯ ಸರ್ಕಾರದ ಮುಖ್ಯಸ್ಥರಾಗಿದ್ದ ಮಿ. ಬೋಸ್ ಆಗಸ್ಟ್ ಹದಿನಾರನೇ ತಾರೀಕಿನಂದು ವಿಮಾನದ ಮೂಲಕ ಸಿಂಗಾಪುರದಿಂದ ಜಪಾನಿಗೆ ಪ್ರಯಾಣಿಸುತ್ತಿದ್ದರು. ಜಪಾನಿನ ರಾಜಧಾನಿ ಟೋಕಿಯೋದಲ್ಲಿ ಅಲ್ಲಿನ ಜಪಾನೀ ಸರಕಾರದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಲಿಕ್ಕಾಗಿ ಹೋಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಯಿತು. ಆಗಸ್ಟ್ ಹದಿನೆಂಟರ ಹದಿನಾಲ್ಕು ಗಂಟೆಗೆ (ಪೂರ್ವಾಹ್ನ ಎರಡು ಗಂಟೆಗೆ) ತೈಹೋಕು ವಿಮಾನ ನಿಲ್ದಾಣದ ಸಮೀಪ ಈ ಅಪಘಾತ ಸಂಭವಿಸಿತು. ತೀವ್ರವಾಗಿ ಗಾಯಗೊಂಡ ಬೋಸ್‌ರನ್ನು ಜಪಾನಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಆತ ಮಧ್ಯರಾತ್ರಿ ಸಾವನ್ನಪ್ಪಿದರು. ಬೋಸ್ ಅವರ ಜೊತೆಗೆ ಪ್ರಯಾಣಿಸುತ್ತಿದ್ದ ಲೆಫ್ಟಿನೆಂಟ್ ಜನರಲ್ ತ್ಸುನಾಮಸಾ ಶಿಡೈ ಅವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಸುಭಾಶ್ಚಂದ್ರ ಬೋಸ್ ಅವರ ಸೇನೆಯ ಅಧಿಕಾರಿ ಹಾಗೂ ಆಪ್ತ ಹಬೀಬರ್ ರೆಹಮಾನ್ ಮತ್ತಿತರ ನಾಲ್ಕು ಮಂದಿ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ”.
ಆದರೆ…
ಈ ಕುರಿತು ಜಪಾನ್ ಸರ್ಕಾರವಾಗಲಿ, ಅಲ್ಲಿನ ರಾಜಪ್ರಭುತ್ವಕ್ಕೊಳಪಟ್ಟ ಸೈನ್ಯದ ಮುಖ್ಯ ಕಚೇರಿಯಾಗಲಿ ಯಾವುದೇ ಅಧಿಕೃತ ಘೋಷಣೆ ಮಾಡಲಿಲ್ಲ, ಪ್ರಕಟಣೆ ಹೊರಡಿಸಲಿಲ್ಲ! ಒಂದು ವೇಳೆ ಜಪಾನ್ ರಾಜತಾಂತ್ರಿಕ ಕಾರಣಗಳಿಗಾಗಿ ಈ ಸುದ್ದಿಯನ್ನು ಮುಚ್ಚಿಟ್ಟಿತೆಂದು ನಂಬೋಣವೆಂದುಕೊಂಡರೂ ಅದಷ್ಟು ಸುಲಭವಿರಲಿಲ್ಲ. ಏಕೆಂದರೆ ನೇತಾಜಿ ಜೊತೆಗೆ ಜಪಾನಿ ಸೈನ್ಯದ ಲೆಫ್ಟಿನೆಂಟ್ ಜನರಲ್ ತ್ಸುನಾಮಸಾ ಶಿಡೈ ಕೂಡಾ ಸಾವನ್ನಪ್ಪಿದ್ದರು ಅಂತ ರೇಡಿಯೋ ಟೋಕಿಯೋ ಬಿತ್ತರಿಸಿತ್ತು. ಜನರಲ್ ಶಿಡೈ ಜಪಾನಿ ಸೇನೆಯ ಅತ್ಯಂತ ಹಿರಿಯ ಕಮಾಂಡರ್‌ಗಳಲ್ಲೊಬ್ಬರಾಗಿದ್ದರಲ್ಲದೆ, ಕೆಲಸಮಯದ ಹಿಂದಷ್ಟೆ ಕ್ವಾಂಟುಂಗ್ ಪ್ರಾಂತೀಯ ಸೈನ್ಯದ ಉಪಮುಖ್ಯಸ್ಥರಾಗಿ ನೇಮಕವಾಗಿದ್ದರು. ಹಾಗಾಗಿ ಜಪಾನ್ ಸರ್ಕಾರ ಮತ್ತು ಸೈನ್ಯ ಜನರಲ್ ಶಿಡೈ ಸಾವನ್ನು ಮುಚ್ಚಿಟ್ಟಿದ್ದು ಸಂಶಯ ತರಿಸುತ್ತದೆ.
ಹಾಗಾದರೆ ನಿಜಕ್ಕೂ ನಡೆದಿದ್ದೇನು?
1945 ಆಗಸ್ಟ್ ಇಪ್ಪತ್ಮೂರನೇ ತಾರೀಕು ‘ರೇಡಿಯೋ ಟೋಕಿಯೋ’ದ ಉದ್ಘೋಷಕ ಓದಿದ ಸುದ್ದಿಯನ್ನು ಎರಡು ದಿನದ ಹಿಂದೆಯೇ ಬರೆಯಲಾಗಿತ್ತು! ಅಂದರೆ ಆಗಸ್ಟ್ 21ನೇ ತಾರೀಕಿಗೇ ಈ ಸುದ್ದಿ ಸಿದ್ಧವಾಗಿತ್ತು. ಆಶ್ಚರ್ಯವೆಂದರೆ ಇದನ್ನು ಬರೆದಾತ ಒಬ್ಬ ಭಾರತೀಯ! ಹೆಸರು ಎಸ್. ವಿ. ಅಯ್ಯರ್! ಆ ಸಮಯದಲ್ಲಿ ಈತ ನೇತಾಜಿ ಸ್ಥಾಪಿಸಿದ್ದ ‘ಇಂಡಿಯನ್ ನ್ಯಾಶನಲ್ ಆರ್ಮಿ’ಯ ಸದಸ್ಯನಾಗಿದ್ದ. ಅಷ್ಟೇ ಅಲ್ಲ, ನೇತಾಜಿ ಬೋಸ್ ನೇತೃತ್ವದ ‘ಆಜಾದ್ ಹಿಂದ್‌’ ಪ್ರಾಂತೀಯ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಮಂತ್ರಿಯೂ ಆಗಿದ್ದ. ಇದಕ್ಕೂ ಮಿಗಿಲಾಗಿ ಸ್ವತಂತ್ರ ಭಾರತದ ಕನಸು ಕಂಡಿದ್ದ ನೇತಾಜಿ ಮಹತ್ವಾಕಾಂಕ್ಷೆಯಿಂದ ಸ್ಥಾಪಿಸಿದ್ದ ‘ಆಜಾದ್ ಹಿಂದ್ ರಾಷ್ಟ್ರೀಯಯ ಬ್ಯಾಂಕ್‌’ನ ಮುಖ್ಯಸ್ಥನೂ ಆಗಿದ್ದ. ನೇತಾಜಿಯವರ ನಂಬಿಕಸ್ಥ ಜೊತೆಗಾರನೊಬ್ಬನೇ ಅವರ ಸಾವಿನ ಸುದ್ದಿಯನ್ನು ಬರೆದಿದ್ದನೆಂಬುದು ನಿಜಕ್ಕೂ ಆಶ್ಚರ್ಯ ತರಿಸುತ್ತದೆ. ಆ ಸುದ್ದಿ ಬರೆಯೋದಕ್ಕಿಂತ ಕೇವಲ ನಾಲ್ಕು ದಿನ ಮೊದಲು ಅಂದರೆ ಆಗಸ್ಟ್ 17ನೇ ತಾರೀಕಿಗೆ ಈ ಅಯ್ಯರ್ ನೇತಾಜಿ ಜೊತೆಗೇ ಸೈಗಾನ್‌ಗೆ ಬಂದಿದ್ದ. ಅಲ್ಲಿಂದ ನೇತಾಜಿ ತೈಪೆಗೆ ಬಂದಾಗ ಅಯ್ಯರ್ ಜೊತೆಗಿರಲಿಲ್ಲ. ಸೈಗಾನ್‌ನಲ್ಲಿದ್ದ ಅಯ್ಯರ್‌ನನ್ನು ಟೋಕಿಯೋಗೆ ಕರೆಸಿಕೊಳ್ಳಲಾಗಿತ್ತು. ಆಗ ಆತನ ಜೊತೆಗಿದ್ದಿದ್ದು ಜಪಾನೀ ಸೇನಾಧಿಕಾರಿ ಕರ್ನಲ್ ಟಾಡಾ. ನೇತಾಜಿಯ ಆಜಾದ್ ಹಿಂದ್ ಸರ್ಕಾರದ ವಾರ್ತಾ ಮಂತ್ರಿಯೇ ಮಂತ್ರಿಯೇ ಖುದ್ದು ಬರೆದ ನೇತಾಜಿ ಸಾವಿನ ಸುದ್ದಿಯೇ ಜಗತ್ತಿನಾದ್ಯಂತ ಪತ್ರಿಕಾ ಮತ್ತು ರೇಡಿಯೋ ಕಚೇರಿಗಳಿಗೆ ತಲುಪಿದವು. ಈ ಕೆಲಸ ಮಾಡಿದ್ದು ಆ ಕಾಲದ ಜಪಾನಿನ ವಾರ್ತಾ ಸಂಸ್ಥೆ ‘ಡೊಮೈ ನ್ಯೂಸ್ ಏಜೆನ್ಸಿ’.
ಆ ಸಮಯದಲ್ಲಿ ಸುಭಾಷ್ ಚಂದ್ರ ಬೋಸರು ಬ್ರಿಟಿಷರಿಗೆ ಸಡ್ಡು ಹೊಡೆದು ‘ಆಜಾದ್ ಹಿಂದ್‌’ ಎಂಬ  ಪರ್ಯಾಯ ಸರಕಾರವನ್ನು ನಡೆಸುತ್ತಿದ್ದರು. ಅದೇ ಸರ್ಕಾರದಲ್ಲಿ ವಾರ್ತಾ ಮಂತ್ರಿಯಾಗಿದ್ದ ಅಯ್ಯರ್ ತನ್ನ ಪರಮೋಚ್ಛ ನಾಯಕ ಸಾವಿನ ಸುದ್ದಿಯನ್ನು ಅದು ಯಾಕೆ ಬರೆದ? ಟೋಕಿಯೋಗೆ ಬಂದ ಮೇಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನೇತಾಜಿ ಸತ್ತರೆಂಬ ಸಾಲುಗಳನ್ನು ಬರೆಯುವ ಮೊದಲು ಅಯ್ಯರ್ ಸುದ್ದಿ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಗೋಜಿಗೇ ಹೋಗಲಿಲ್ಲ ಯಾಕೆ?  ವಿಮಾನ ಅಪಘಾತಕ್ಕೀಡಾಯಿತು ಅಂತ ಹೇಳಲಾದ ತೈಪೆಯಲ್ಲೂ ಅಯ್ಯರ್ ಆ ಸಮಯದಲ್ಲಿ ಇರಲಿಲ್ಲ. ಹಾಗಾಗಿ ಸುದ್ದಿ ಬರೆಯುವ ವೇಳೆ ಅಯ್ಯರ್‌ಗಿದ್ದ ಏಕಮಾತ್ರ ಸುದ್ದಿಮೂಲವೆಂದರೆ ಜಪಾನೀ ಅಧಿಕಾರಿಗಳ ಹೇಳಿಕೆ ಮಾತ್ರ. ಇನ್ನೊಂದು ಆಶ್ಚರ್ಯವೆಂದರೆ ಇದು ತೈಪೆಯಲ್ಲಿ ಸುದ್ದಿಯಾಗಲೇ ಇಲ್ಲ!
ಇತ್ತ ಭಾರತದಲ್ಲಿ ನೇತಾಜಿಯ ಸಾವಿನ ಸುದ್ದಿ ಅವರ ಅಸಂಖ್ಯ ಅಭಿಮಾನಿಗಳಿಗೆ ಆಘಾತಕಾರಿಯಾಗಿತ್ತು, ದೇಶವೇ ಅಲ್ಲೋಲಕಲ್ಲೋಲವಾಗಿತ್ತು. ಇಲ್ಲಿ ಈ ಬಗ್ಗೆ ಮೊದಲು ವರದಿ ಮಾಡಿದ್ದು ‘ಹಿಂದುಸ್ತಾನ್ ಟೈಮ್ಸ್‌’ ಪತ್ರಿಕೆ. ಅದು ಆಗಸ್ಟ್ 25ರಂದು ಪ್ರಕಟಿಸಿದ ಸುದ್ದಿಯ ಮೂಲವೂ ಜಪಾನಿನ “ಡೊಮೈ ನ್ಯೂಸ್ ಏಜೆನ್ಸಿ”ಯದ್ದೇ ಆಗಿತ್ತು. ಆದರೆ ಈ ಪತ್ರಿಕೆ ಕೂಡಾ ವರದಿ ಸಂಪೂರ್ಣ ಸತ್ಯವೆಂಬಂತೇನೂ ಪ್ರಕಟಿಸಲಿಲ್ಲ. ಅದಕ್ಕಾಗಿಯೇ ಏನೋ ಅದು ಕೊಟ್ಟ ಹೆಡ್‌ಲೈನ್ “ರಿಪೋರ್ಟೆಡ್ ಡೆತ್ ಆಫ್ ಸುಭಾಷ್ ಬೋಸ್‌”! ವರದಿಯ ಕೊನೆಯಲ್ಲೊಂದು ಚಿಕ್ಕ ಟ್ವಿಸ್ಟ್ ಇತ್ತು. ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠವಾಗಿರುವ ಹಿಂದುಸ್ತಾನ್ ಟೈಮ್ಸ್, ‘ಜಪಾನೀಯರು ತಿಳಿಸಿದಂತೆ ಒಂದು ವೇಳೆ ನೇತಾಜಿಯ ಸಾವಿನ ಸುದ್ದಿ ನಿಜವೇ ಆಗಿದ್ದರೆ ಅದರಿಂದ ಕೋಟ್ಯಂತರ ಭಾರತೀಯ ಮನಸುಗಳಿಗೆ ಘಾಸಿಯಾಗುತ್ತದೆ. ಆದರೆ ಅದೇ ವೇಳೆಗೆ ಬ್ರಿಟಿಷ್ ಪ್ರಭುತ್ವಕ್ಕೆದುರಾಗಿದ್ದ ಬಹಳ ದೊಡ್ಡ ಸಂಕಟವೊಂದು ನಿವಾರಣೆಯಾಯ್ತು….” ಎಂದು ಷರಾ ಬರೆದಿತ್ತು.
ಅಂದರೆ ಒಂದು ವೇಳೆ ನೇತಾಜಿ ಬದುಕಿದ್ದರೆ ಅದರಿಂದ ಬ್ರಿಟಿಷ್ ಸರ್ಕಾರಕ್ಕೆ ಬಹಳ ದೊಡ್ಡ ವಿಪತ್ತು ಎದುರಾಗುತ್ತಿತ್ತು ಎಂಬುದು ನಿಚ್ಚಳವಾಯ್ತು. ಇದೇ ವೇಳೆಗೆ ಭಾರತದಲ್ಲಿ ನೇತಾಜಿ ಸಾವಿನ ಬಗ್ಗೆ ಜನ ಸಂಶಯ ವ್ಯಕ್ತಪಡಿಸತೊಡಗಿದರು. ಬಹುಶಃ ಜಪಾನೀಯರೇ ನೇತಾಜಿಯವರು ಭೂಗತರಾಗಲು ಸಹಕರಿಸಿರಬಹುದು. ಆ ಮೂಲಕ ಮಿತ್ರರಾಷ್ಟ್ರಗಳ ಮೇಲೆ ಯುದ್ಧ ಸಾರಿದ ತಪ್ಪಿಗಾಗಿ ದೊರಕುವ ಶಿಕ್ಷೆಯಿಂದ ನೇತಾಜಿಯವರನ್ನು ಪಾರು ಮಾಡಲು ಜಪಾನಿ ಸೈನ್ಯಾಧಿಕಾರಿಗಳೇ ಈ ಸುಳ್ಳು ಹಬ್ಬಿಸಿರಬಹುದೆಂಬ ಒಂದು ವಾದವೂ ಕೇಳಿಬಂತು. ಇಂಥದ್ದೊಂದು ಸಾಧ್ಯತೆಯನ್ನೂ ತಳ್ಳಿಹಾಕಲು ಸಾಧ್ಯವಿಲ್ಲ. ದಕ್ಷಿಣ ಭಾರತದ ಪ್ರಮುಖ ಇಂಗ್ಲಿಷ್ ದೈನಿಕ ‘ದಿ ಹಿಂದು’ ಈ ಬಗ್ಗೆ ನೇರವಾಗಿ ಬರೆಯಲಿಲ್ಲ. ಬದಲಿಗೆ ಅದು ಲಂಡನ್‌ನಲ್ಲಿ ವಾಸಿಸುತ್ತಿರುವ ಭಾರತೀಯರು ನೇತಾಜಿ ಸಾವಿನ ಸುದ್ದಿಯನ್ನು ನಂಬಲಿಲ್ಲ ಅಂತನ್ನೋ ರೀತಿಯ ವರದಿ ಬರೆಯಿತು. ಇದೇ ರೀತಿಯ ವರದಿಯನ್ನು ಹಿಂದುಸ್ತಾನ್ ಟೈಮ್ಸ್ ಕೂಡಾ ಪ್ರಕಟಿಸಿತು. ‘ಬೋಸ್ ಡೆಡ್, ಸ್ಟೋರಿ ನಾಟ್ ಬಿಲೀವ್ಡ್ ಇನ್ ಲಂಡನ್‌’ ಎಂಬ ಹೆಡ್ಡಿಂಗ್‌ನ ಈ ವರದಿಯಲ್ಲಿ ಒಂದು ಅತ್ಯಂತ ಮಹತ್ವದ ಸಂಗತಿಯನ್ನು ಉಲ್ಲೇಖಿಸಲಾಗಿತ್ತು. ಅದೇನೆಂದರೆ ಹಿಂದೊಮ್ಮೆ ಸುಭಾಷ್‌ಶ್ಚಂದ್ರ ಬೋಸ್‌ರು ಜರ್ಮನಿಯಿಂದ ನಾಪತ್ತೆಯಾದಾಗಲೂ ಜಪಾನ್ ಇದೇ ರೀತಿಯ ಸುದ್ದಿ ಹಬ್ಬಿಸಿತ್ತು. ಆದರೆ ಬಳಿಕ ನೇತಾಜಿ ಟೋಕಿಯೋದಲ್ಲಿ ಪ್ರತ್ಯಕ್ಷವಾಗಿದ್ದರು. ಈ ಘಟನೆಯನ್ನೇ ಉಲ್ಲೇಖಿಸಿ ತರ್ಕ ಮುಂದಿಟ್ಟ ಪತ್ರಿಕೆ ‘ಜಪಾನಿ ಸುದ್ದಿ ಸಂಸ್ಥೆಗಳಿಗೆ ಇಂತಹ ಚಾಳಿಯಿದೆ. ಈ ಬಾರಿ ನೇತಾಜಿ ಸಾವಿನ ಸುದ್ದಿಯು ಹೊರಬಂದ ಕಾಲ ಬಹಳ ಪರಿಪಕ್ವವಾಗಿದೆ. ಈ ಸುದ್ದಿ ಕಪೋಲಕಲ್ಪಿತವಾಗಿರುವ ಎಲ್ಲಾ ಸಾಧ್ಯತೆಗಳಿವೆ. ಬಹುಶಃ ನೇತಾಜಿಯವರೇ ಮಿತ್ರ ರಾಷ್ಟ್ರಗಳ ಸೇನೆಯಿಂದ ಸುಲಭವಾಗಿ ಪಾರಾಗಲು ಯೋಚಿಸಿರಬಹುದೇ?’ ಎಂಬ ಸಂಶಯವನ್ನೂ ವರದಿ ವ್ಯಕ್ತಪಡಿಸಿತ್ತು!
ಆದರೆ ನೇತಾಜಿ ಸಾವಿನ ಸುದ್ದಿಯ ಬಗ್ಗೆ ಮಹಾತ್ಮ ಗಾಂಧಿ ತಕ್ಷಣಕ್ಕೆ ನೀಡಿದ ಪ್ರತಿಕ್ರಿಯೆ ಏನು ಗೊತ್ತಾ? “ಸುಭಾಷ್ ಬೋಸ್ ಸತ್ತಿದ್ದಾರೆಂಬುದು ನಿಜವಾಗಿದ್ದರೂ ಆತ ನಿಸ್ಸಂಶಯವಾಗಿಯೂ ಮಹಾನ್ ದೇಶಭಕ್ತ. ಆದರೆ ಆತ ತಪ್ಪುದಾರಿ ಹಿಡಿದಿದ್ದ! ಇತ್ತ “ನಮ್ಮೊಳಗಿದ್ದ ವೈಯಕ್ತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಾನು ನೇತಾಜಿಯವರ ಬಗ್ಗೆ ಅತೀವವಾದ ಗೌರವಭಾವನೆ ಹೊಂದಿದ್ದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ” ಎಂದುಬಿಟ್ಟರು ನೆಹರು ಮಹಾಶಯರು!
ಭಾರತಕ್ಕೆ ಸ್ವಾತಂತ್ರ್ಯ ಬಂದ ಕ್ಷಣದಲ್ಲೂ ಸುಭಾಶರನ್ನು ಕಳೆದುಕೊಂಡ ಸೂತಕ ದೇಶವನ್ನು ಆವರಿಸಿತ್ತು. ಸಾವಿನ ರಹಸ್ಯವನ್ನು ಭೇದಿಸುವಂತೆ ನೆಹರು ಸರ್ಕಾರದ ಮೇಲೆ ಒತ್ತಡ ಬಿತ್ತು. ಹಾಗಾಗಿ 1956ರಲ್ಲಿ ಶಾ ನವಾಝ್ ಸಮಿತಿ ರಚನೆಯಾಯಿತು. ಬೋಸರು ಭಾರತೀಯ ರಾಷ್ಟ್ರೀಯ ಸೇನೆಯನ್ನು ತಂದರೆ ನಾನೇ ಅದರ ವಿರುದ್ಧ ಖಡ್ಗ ಹಿಡಿದು ಹೋರಾಡುತ್ತೇನೆ ಎಂದಿದ್ದ ನೆಹರು ರಚಿಸಿದ ಸಮಿತಿಯಿಂದ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ? “ವಿಮಾನ ಅಪಘಾತದಲ್ಲಿ ಮಡಿದರು” ಎಂದು ಷರಾ ಬರೆಯಿತು ಶಾ ನವಾಝ್ ಸಮಿತಿ. ಆದರೆ ಒತ್ತಡ ನಿಲ್ಲಲಿಲ್ಲ. ಅದಕ್ಕೆ ಮಣಿದ ನೆಹರು ಪುತ್ರಿ ಇಂದಿರಾ ಗಾಂಧಿಯವರು ಖೋಸ್ಲಾ ಸಮಿತಿ ರಚಿಸಿ, ಅದರ ಕೈಯಿಂದಲೂ “ಮಡಿದರು” ಎಂದು ಬರೆಸಿ ಕಣ್ಣೊರೆಸಲು ಯತ್ನಿಸಿದರೂ ಜನ ನಂಬಲಿಲ.್ಲ ಕೊನೆಗೆ 1998, ಏಪ್ರಿಲ್ 30ರಂದು ಕೋಲ್ಕತಾ ಹೈಕೋರ್ಟ್, “ವಿವಾದಕ್ಕೆ ಅಂತ್ಯ ಕಾಣಿಸುವಂಥ ಒಂದು ಕೂಲಂಕಷ ಶೋಧನೆ, ಪರಾಮರ್ಶೆ ಮಾಡುವ ಆಯೋಗ ರಚನೆ ಮಾಡಿ” ಎಂದು ಆಗಿನ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಆದೇಶ ನೀಡಿತು. 1999ರಲ್ಲಿ ಅಟಲ್ ಸರ್ಕಾರ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮನೋಜ್ ಮುಖರ್ಜಿಯವರ ಸಮಿತಿ ರಚನೆ ಮಾಡಿತು. ಅದು 2006ರಲ್ಲಿ ತನ್ನ ವರದಿ ನೀಡಿತು, ಆದರೆ ಅಷ್ಟರೊಳಗೆ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರ್ಕಾರ ವರದಿಯನ್ನೇ ತಿರಸ್ಕಾರ ಮಾಡಿಬಿಟ್ಟಿತು!
ಏಕೆ ಗೊತ್ತಾ?
ಶಾ ನವಾಝ್, ಖೋಸ್ಲಾ ಸಮಿತಿಗಳಂತೆ ನೆಹರು ಕುಟುಂಬಕ್ಕೆ ‘ಬೇಕಾದ’ ವರದಿಯನ್ನು ಮುಖರ್ಜಿ ಆಯೋಗ ನೀಡಲಿಲ್ಲ. ಅಷ್ಟೇ ಅಲ್ಲ, ಸುಭಾಷ್ ಸಾವಿನ ಮೇಲಿದ್ದ ಪರದೆಯನ್ನು ಅದು ಕಿತ್ತೊಗೆದಿತ್ತು! ಸುಭಾಷ್ ಚಂದ್ರ ಬೋಸ್ ಈಗ ಬದುಕಿಲ್ಲ, ಆದರೆ 1945 ಆಗಸ್ಟ್ 18ರಂದು ತೈವಾನಿನ ತೈಹೋಕು ಬಳಿ ನಡೆದ ವಿಮಾನ ಅಪಘಾತದಲ್ಲಿ ಮಡಿದರು ಎನ್ನಲು ಅಂಥದ್ದೊಂದು ಅಪಘಾತವೇ ನಡೆದಿಲ್ಲ, ಆ ವಿಮಾನ ಮರುದಿನವೂ ಹಾರಾಟ ನಡೆಸಿತ್ತು ಎಂಬ ಸತ್ಯವನ್ನು ಹೊರಹಾಕಿತ್ತು!! ಅಷ್ಟೇ ಅಲ್ಲ, ಜಪಾನಿನ ರೆಂಕೋಜಿ ದೇವಾಲಯದಲ್ಲಿರುವ ಚಿತಾಭಸ್ಮ ಕೂಡ ನೇತಾಜಿವರದ್ದಲ್ಲ ಎಂಬ ಕಠೋರ ಸತ್ಯವನ್ನು ಬಹಿರಂಗ ಮಾಡಿತ್ತು!!! ಈ ವರದಿಯನ್ನು ಆಧರಿಸಿ ನೇತಾಜಿ ಸೇನೆಯಲ್ಲಿದ್ದ ಮನ್ವತಿ ಆರ್ಯ ಅವರು “Judgement: No Aircrash, NO Death” ಎಂಬ ಪುಸ್ತಕ ಹೊರತಂದಿದ್ದಾರೆ. 2007ರಲ್ಲಿ ನೇತಾಜಿ ಬಗ್ಗೆ “Patriot” ಎಂಬ ಪುಸ್ತಕವನ್ನೂ ಬರೆದಿದ್ದರು. “ನೇತಾಜಿ ಸತ್ತಿದ್ದು ಭಾರತದಲ್ಲೇ ಹೊರತು, ವಿಮಾನ ಅಪಘಾತದಲ್ಲಲ್ಲ; ಬ್ರಿಟಿಷರನ್ನು ಹೊರದಬ್ಬಿದ್ದು ಗಾಂಧಿಯಲ್ಲ, ಬೋಸ್‌” ಎಂದು ಕಳೆದ ವರ್ಷ ಖ್ಯಾತ ಅಂಕಣಕಾರ ಟಿಜೆಎಸ್ ಜಾರ್ಜ್ ಕೂಡ ಬರೆದಿದ್ದರು. ಈ ಮೇಲಿನ ಪುಸ್ತಕಗಳು, ಮುಖರ್ಜಿ ಆಯೋಗದ ವರದಿ ಹಾಗೂ ಇತರ ದಾಖಲೆಗಳನ್ನು ಆಧರಿಸಿ ಸುಭಾಷ್ ಜನ್ಮ ದಿನವಾದ ಇಂದು(ಜನವರಿ 23) ಅವರ ಸಾವಿನ ರಹಸ್ಯವನ್ನು ಭೇದಿಸುವ ಪುಸ್ತಕ ಹೊರತರಲು ನಾನೂ ನಿರ್ಧರಿಸಿದ್ದೆ.  ಈ ಮಧ್ಯೆ, ಜನವರಿ 8ರಂದು ಕೋಲ್ಕತಾದ “ಸ್ಟೇಟ್ಸ್‌ಮನ್‌” ಪತ್ರಿಕೆಯಲ್ಲಿ ವರದಿಯೊಂದು ಪ್ರಕಟವಾಗಿದ್ದು ಬೋಸ್ ಬದುಕು-ಸಾವಿಗೆ ಸಂಬಂಧಿಸಿದ “33 ಕ್ಲಾಸಿಫಯ್ಡ್(ಗೌಪ್ಯ) ದಾಖಲೆ”ಗಳನ್ನು ನೀಡುವಂತೆ ಬೋಸ್ ಕುಟುಂಬದ 30 ಸದಸ್ಯರು ಮಾಹಿತಿ ಹಕ್ಕಿನ ಮೂಲಕ ಮನವಿ ಮಾಡಿದರೂ ಕೇಂದ್ರದ ಕಾಂಗ್ರೆಸ್ ಸರ್ಕಾರ ತಿರಸ್ಕಾರ ಮಾಡಿದೆ! ಎಲ್ಲ ಕಾರಣ, ದಾಖಲೆ, ಮಾಹಿತಿಗಳನ್ನು ಹೊಂದಿದ ಸಮಗ್ರ ಪುಸ್ತಕವನ್ನು ಇನ್ನೊಂದು ತಿಂಗಳೊಳಗಾಗಿ ನಿಮ್ಮ ಕೈಗಿಡುತ್ತೇನೆ.
ಇದೇನೇ ಇರಲಿ, ‘Give me blood and I will give you freedom ಎನ್ನುತ್ತಿದ್ದ, ಅಂಡಮಾನ್ ನಿಕೋಬಾರ್‌ಗಳನ್ನು ವಶಕ್ಕೆ ತೆಗೆದುಕೊಂಡು ಶಹೀದ್, ಸ್ವರಾಜ್ ಎಂಬ ಹೆಸರಿಟ್ಟು ಈ ದೇಶದ ಭೂಭಾಗವನ್ನು ಮೊದಲಿಗೆ ದಾಸ್ಯಮುಕ್ತವಾಗಿಸಿದ ಭಾರತಾಂಬೆಯ ಧೀರ ಪುತ್ರ ಏನಾದ ಎಂಬುದೇ ದೇಶವಾಸಿಗಳಿಗೆ ತಿಳಿದಾಗಿರುವುದು ಎಂತಹ ವಿಪರ್ಯಾಸವಲ್ಲವೆ? ಆ ಕಾರಣಕ್ಕಾಗಿಯೇ ಅವರ ಜನ್ಮದಿನವಾದ ಇಂದು ಅಂಥ ಸುಪುತ್ರ ನಮ್ಮ ನೆಲದಲ್ಲಿ ಜನಿಸಿದನಲ್ಲಾ ಎಂಬ ಖುಷಿಗಿಂತ ಸಾವಿನ ಸಂಟಕವೇ ಹೆಚ್ಚು ಕಾಡುತ್ತದೆ!

ಗಾಂಧಿ ಎಂಬ ಹೆಮ್ಮರದ ಕೆಳಗೆ ಹೂತುಹಾಕುವ ಮುನ್ನ…


ಹತ್ಯಾರೋಂ ಕಾ ಜವಾಬ್, ಹತ್ಯಾರೋಂ ಸೆ ದೇಂಗೆ!
ಹಾಗಂತ 1965, ಆಗಸ್ಟ್ 15ರಂದು ಕೆಂಪುಕೋಟೆಯ ಮೇಲೆ ನಿಂತು ಪ್ರಧಾನಿ ಲಾಲ್‌ಬಹಾದ್ದೂರ್ ಶಾಸ್ತ್ರಿಯವರು ಗುಡುಗಿದಾಗ ಅನುಮಾನಪಟ್ಟವರೇ ಹೆಚ್ಚು. ಜತೆಗೆ ದುರ್ಬಲ ಕಾಯದ ಈ ವ್ಯಕ್ತಿಯಿಂದ ಏನು ತಾನೇ ಸಾಧ್ಯ ಎಂಬ ಅಸಡ್ಡೆ.
ಇದಾಗಿ ಎರಡು ವಾರಗಳಾಗಿವೆಯಷ್ಟೆ.
ಅವತ್ತು 1965, ಆಗಸ್ಟ್ 31ನೇ ತಾರೀಖು. ಹೊತ್ತಿಗೆ ಮೊದಲೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮನೆಗೆ ಬಂದಿದ್ದರು. ಇನ್ನೇನು ಊಟಕ್ಕೆ ಕುಳಿತುಕೊಳ್ಳಬೇಕು. ಹತ್ತಿರಕ್ಕೆ ಬಂದ ಆಪ್ತ ಕಾರ್ಯದರ್ಶಿಯೊಬ್ಬರು ಕಿವಿಯಲ್ಲೇನೋ ಪಿಸುಗುಟ್ಟಿದರು. ಹಸಿವನ್ನೇ ಮರೆತ ಶಾಸ್ತ್ರಿಯವರು ’10 ಜನಪಥ್‌’ ರಸ್ತೆಯಲ್ಲಿದ್ದ ಪ್ರಧಾನಿ ಕಚೇರಿಯತ್ತ ನಡೆದೇ ಬಿಟ್ಟರು. ಭೂಸೇನೆ, ವಾಯುಸೇನೆ ಮತ್ತು ನೌಕಾದಳದ ಮೂವರು ಮುಖ್ಯಸ್ಥರು ಪ್ರಧಾನಿಯ ಹಾದಿಯನ್ನೇ ಎದುರು ನೋಡುತ್ತಿದ್ದರು. ಶಾಸ್ತ್ರಿಯವರು ಬಂದಿದ್ದೇ ತಡ ವೈಸ್ ಅಡ್ಮಿರಲ್ ಭಾಸ್ಕರ ಸದಾಶಿವ ಸೋಮನ್ ಮತ್ತು ಏರ್‌ಚೀಫ್ ಮಾರ್ಷಲ್ ಅರ್ಜನ್ ಸಿಂಗ್ ಪ್ರಧಾನಿ ಕೊಠಡಿಯನ್ನು ಸೇರಿದರು. ಏನಿರಬಹುದು? ಎಂದು ಉಳಿದವರು ಯೋಚಿಸುವ ಮೊದಲೇ ಎಲ್ಲರೂ ಹೊರಬಂದರು. ಕೇವಲ 5 ನಿಮಿಷಗಳಲ್ಲಿ ಪ್ರಧಾನಿ ಶಾಸ್ತ್ರಿಯವರು ಎದೆ ಝಲ್ಲೆನಿಸುವಂತಹ ನಿರ್ಧಾರ ಕೈಗೊಂಡಿದ್ದರು.
ಪಾಕ್‌ನ ಮೇಲೆ ಯುದ್ಧ ಘೋಷಣೆಯಾಗಿತ್ತು.
ಜಮ್ಮುವಿನ ಛಾಂಬ್ ವಿಭಾಗದಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿದ್ದ ಪಾಕಿಸ್ತಾನಿ ಪಡೆಗಳು ಸುಮಾರು ನೂರಕ್ಕೂ ಅಧಿಕ ಯುದ್ಧ ಟ್ಯಾಂಕ್‌ಗಳ ಮೂಲಕ ಭಾರತದ ಮೇಲೆ ಮುಗಿಬಿದ್ದಿದ್ದವು. ಇನ್ನು ಕೆಲವೇ ಗಂಟೆಗಳಲ್ಲಿ ಇಡೀ ಕಾಶ್ಮೀರವೇ ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ಕಳೆದುಕೊಳ್ಳುವ ಅಪಾಯ ಎದುರಾಗಿತ್ತು. ಛಾಂಬ್ ಅನ್ನು ರಕ್ಷಿಸಿಕೊಳ್ಳುವುದು ಅಸಾಧ್ಯ ಎಂದು ಅರ್ಜನ್ ಸಿಂಗ್ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಶಾಸ್ತ್ರೀಜಿ ಅಳುಕಲಿಲ್ಲ! ನೆಹರು ಅವರಂತೆ ಗೋಗರೆಯುತ್ತ ವಿಶ್ವಸಂಸ್ಥೆಯ ಕದ ತಟ್ಟಲಿಲ್ಲ. ಅಂತಾರಾಷ್ಟ್ರೀಯ ಒತ್ತಡದ ಬಗ್ಗೆಯೂ ಚಿಂತಿಸಲಿಲ್ಲ. ವಿಶ್ವದ ನಾಯಕರು ಏನನ್ನುತ್ತಾರೋ ಎಂದು ಯೋಚಿಸಲಿಲ್ಲ. ಏಕೆಂದರೆ ‘ಹಮಾರಾ ದೇಶ್ ರಹೇಗಾ ತೋ, ಹಮಾರಾ ತಿರಂಗಾ ರಹೇಗಾ’ ಎಂದು ಹದಿನೈದು ದಿನಗಳ ಹಿಂದಷ್ಟೇ ತಾವೇ ಹೇಳಿದ ಮಾತುಗಳನ್ನು ಅವರು ಮರೆತಿರಲಿಲ್ಲ. ‘ಛಾಂಬ್ ಕೈ ಜಾರುವ ಮೊದಲು, ಲಾಹೋರನ್ನು ವಶಪಡಿಸಿಕೊಳ್ಳಿ’ ಎಂದು ಭಾರತೀಯ ಪಡೆಗಳಿಗೆ ನಿರ್ದೇಶನ ನೀಡಿಯೇ ಬಿಟ್ಟರು!
ಎರಡನೇ ಜಾಗತಿಕ ಸಮರದ ನಂತರ ಭುಗಿಲೆದ್ದ ಅತಿ ದೊಡ್ಡ ಸಂಘರ್ಷ ಅದಾಗಿತ್ತು. ಏಕೆಂದರೆ ಎರಡೂ ರಾಷ್ಟ್ರಗಳು ಸಾವಿರಕ್ಕೂ ಅಧಿಕ ಟ್ಯಾಂಕ್‌ಗಳೊಂದಿಗೆ ಪರಸ್ಪರ ಮುಗಿಬಿದ್ದಿದ್ದವು. ಆರಂಭದಲ್ಲಿ ಪಾಕಿಸ್ತಾನದ್ದೇ ಮೇಲುಗೈ. ಅಮೆರಿಕ ದಾನ ಮಾಡಿದ್ದ ಸುಧಾರಿತ ಎಂ-48 ಪ್ಯಾಟನ್ ಟ್ಯಾಂಕ್‌ಗಳನ್ನು ಹೊಂದಿದ್ದ ಪಾಕಿಸ್ತಾನದ ಎರಡು ಸೇನಾ ತುಕಡಿಗಳು ಭಾರತದ ಮೇಲೆ ಆಕ್ರಮಣ ಮಾಡಿದರೆ, ನಮ್ಮ ಒಂದೇ ತುಕಡಿ ಶತ್ರುವನ್ನು ಹಿಮ್ಮೆಟ್ಟಿಸಬೇಕಿತ್ತು. ಜತೆಗೆ ಪ್ರತಿ ದಾಳಿಯನ್ನು ಮಾಡಬೇಕಿತ್ತು. ಆದರೇನಂತೆ ಸಪ್ಟೆಂಬರ್ 10ರಂದು ‘ಅಸಲ್ ಉತ್ತರ್‌’ (True North)  ಬಳಿ ನಡೆದ ನಿರ್ಣಾಯಕ ಸಮರದಲ್ಲಿ ನಮ್ಮ ಸೈನಿಕರು  ಪಾಕ್‌ನ 97 ಟ್ಯಾಂಕ್‌ಗಳನ್ನು ವಶಪಡಿಸಿಕೊಂಡರು. ಲಾಹೋರನ್ನು ರಣರಂಗವಾಗಿಸಿದರು. ಶಾಸ್ತ್ರೀಜಿ ಅವರ ತಾಕತ್ತಿನ ಬಗ್ಗೆ ಕೀಳಂದಾಜು ಮಾಡಿದ್ದ ಜನರಲ್ ಅಯೂಬ್‌ಖಾನ್ ಬೆದರಿದ. ಏಕೆಂದರೆ ಚೀನಾ ಕೈಯಲ್ಲಿ ಸೋತಿದ್ದ ನಮ್ಮನ್ನು ಬಗ್ಗುಬಡಿಯಲು ಇದೇ ಸರಿಯಾದ ಸಮಯವೆಂದು ಭಾವಿಸಿದ್ದ ಅಯೂಬ್‌ಖಾನ್‌ಗೆ ಶಾಸ್ತ್ರೀಜಿ ತಕ್ಕ ಪ್ರತ್ಯುತ್ತರ ನೀಡಿದ್ದರು.
ಈ ಮಧ್ಯೆ ಪಾಕಿಸ್ತಾನದ ಪರ ನಿಲುವು ತಳೆದಿದ್ದ ಚೀನಾ, ಯುದ್ಧದಲ್ಲಿ ಮೂಗು ತೂರಿಸುವ ಮಾತಾಡಿತು. ಆದರೂ ಬೆದರಿಕೆಗೆ ಬಗ್ಗಲಿಲ್ಲ ಭಾರತ. ಯುದ್ಧ ಮುಂದುವರೆಯಿತು. ಏಕೆಂದರೆ ಅಂದು ಪ್ರಧಾನಿಯಾಗಿದ್ದದ್ದು ನೆಹರು ಅಲ್ಲ. ಲಾಲ್ ಬಹಾದ್ದೂರ್ ಶಾಸ್ತ್ರಿ. ಹಾಗಾಗಿಯೇ ‘ದೇಶಕ್ಕಾಗಿ ಒಂದು ಹೊತ್ತು ಉಪವಾಸ ಮಾಡಿ’ ಎಂಬ ಕರೆಗೆ 50 ಕೋಟಿ ಭಾರತೀಯರು ಮನಃಪೂರ್ವಕವಾಗಿ ಓಗೊಟ್ಟಿದ್ದರು. ಇತ್ತ ಪರಿಸ್ಥಿತಿ ತೀವ್ರ ಸ್ಥಿತಿಗೆ ತಲುಪಿತು. ಕೈ ಮೀರಿ ಹೋಗುವ ಲಕ್ಷಣ ಕಂಡುಬಂತು. ಮುಂದಾಗಬಹುದಾದ ಅಪಾಯವನ್ನರಿತ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿತು. ಫಲವಾಗಿ, ಸೆಪ್ಟೆಂಬರ್ 21ರಂದು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕದನ ವಿರಾಮ ಒಪ್ಪಂದವೇರ್ಪಟ್ಟಿತು. ಅವುಗಳಲ್ಲಿ 152 ಟ್ಯಾಂಕ್‌ಗಳನ್ನು ನಮ್ಮ ಸೈನಿಕರು ನಾಶಪಡಿಸುವ ಬದಲು ವಶಪಡಿಸಿಕೊಂಡಿದ್ದರು. ಅದು ನಮ್ಮ ಬಹಾದ್ದೂರಿಕೆಯ ಪ್ರತೀಕವಾಗಿತ್ತು. ಆದರೆ ಪ್ರತಿಯಾಗಿ ಭಾರತ ಕಳೆದುಕೊಂಡಿದ್ದು ಕೇವಲ 128 ಟ್ಯಾಂಕುಗಳು.
ಇತ್ತ ಶಾಸ್ತ್ರಿಯವರ ಬಗ್ಗೆ ಹಗುರವಾಗಿ ಮಾತಾಡಿದ್ದವರು ಯುದ್ಧ ಮುಗಿದ ಮೇಲೆ ಸೊಲ್ಲೇ ಎತ್ತಲಿಲ್ಲ. ಅದೆಲ್ಲಕ್ಕಿಂತ ಮುಖ್ಯವಾಗಿ, 1962ರಲ್ಲಿ ಚೀನಾ ಆಕ್ರಮಣ ಮಾಡಿದಾಗ ನೆಹರು ಬದಲು ಶಾಸ್ತ್ರೀಜಿ ಪ್ರಧಾನಿಯಾಗಿರಬೇಕಿತ್ತು ಎಂಬ ಭಾವನೆ ಜನಮನದಲ್ಲುಂಟಾಯಿತು. ಸೋವಿಯತ್ ರಷ್ಯಾ, ಅಮೇರಿಕ ಮತ್ತು ಚೀನಾಗಳು ಹುಬ್ಬೇರಿಸಿದವು. ರಣರಂಗದಲ್ಲಿ ಶಾಸ್ತ್ರಿಯವರನ್ನು ಮಣಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತವು. ಮಾತುಕತೆಗೆ ಕರೆದವು. ಈಗಿನ ಕಜಕಿಸ್ತಾನದ ತಾಷ್ಕೆಂಟ್‌ನಲ್ಲಿ ಸಂಧಾನ ಮಾತುಕತೆ ಏರ್ಪಾಡಾಯಿತು.
ಮುಂದಿನದ್ದು ಮಹಾನ್ ದುರಂತ!
ರಷ್ಯಾ ಪ್ರಧಾನಿ ಅಲೆಕ್ಸಿ ಕೊಸಿಗಿನ್ ಮಧ್ಯಸ್ಥಿಕೆಯಲ್ಲಿ 1966, ಜನವರಿಯಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಅಯೂಬ್‌ಖಾನ್ ನಡುವೆ ಸಂಧಾನ ಪ್ರಾರಂಭವಾಯಿತು. ‘ಮುಂದೆಂದೂ ಬಲಪ್ರಯೋಗದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸುವುದಿಲ್ಲ’ ಎಂದು ಲಿಖಿತ ಭರವಸೆ ನೀಡಬೇಕೆಂದು ಶಾಸ್ತ್ರೀಜಿ ಪಟ್ಟು ಹಿಡಿದರು. ಅಯೂಬ್‌ಖಾನ್ ಒಪ್ಪದೇ ಹೋದಾಗ,”Then you will have to find another PM” (ಹಾಗಾದರೆ ನನ್ನ ನಂತರದ ಪ್ರಧಾನಿ ಬರುವವರೆಗೂ ಕಾಯಬೇಕಾಗುತ್ತದೆ!) ಎಂದು ಮುಖಕ್ಕೆ ಹೊಡೆದಂತೆ ಹೇಳಿದರು. ಶಾಸ್ತ್ರಿಯವರನ್ನು ಬಗ್ಗಿಸಲು ಸಾಧ್ಯವಿಲ್ಲ ಎಂದು ಅರಿತ ಅಯೂಬ್ ಖಾನ್ ತಾನೇ ಮಣಿದ. ಲಿಖಿತ ಭರವಸೆ ನೀಡಿದ. ಜನವರಿ 10ರಂದು ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಬಿತ್ತು. ಆದರೆ ಸಹಿಯ ಶಾಯಿ ಆರುವ ಮೊದಲೇ, ಮಧ್ಯರಾತ್ರಿ 1 ಗಂಟೆ 32 ನಿಮಿಷಕ್ಕೆ ಭಾರತಕ್ಕೆ ಬರಸಿಡಿಲು ಬಂದೆರಗಿತು! ಶಾಸ್ತ್ರೀಜಿ ಅನುಮಾನಾಸ್ಪದವಾಗಿ, ‘ಹೃದಯಾಘಾತ’ಕ್ಕೊಳಗಾಗಿದ್ದರು. ಗಾಂಧೀಜಿ ಕೊಲೆಯಾದ ನಂತರ ಮೊದಲಬಾರಿಗೆ ಇಡೀ ದೇಶವೇ ಕಂಬನಿಯ ಕೋಡಿಯಲ್ಲಿ ತೇಲಿ ಹೋಯಿತು. ಕೇವಲ 17 ತಿಂಗಳು ಪ್ರಧಾನಿಯಾಗಿದ್ದ ಶಾಸ್ತ್ರೀಜಿ, 17 ವರ್ಷಗಳ ಕಾಲ ದೇಶವನ್ನಾಳಿದ ನೆಹರು ಅವರನ್ನೇ ಮೀರಿಸಿದ್ದರು. ಅದು ಕೆಲವರ ಕಣ್ಣು ಕೆಂಪಾಗಿಸಿತ್ತು. ಕಾಂಗ್ರೆಸ್ಸಿಗರ ಹೊಟ್ಟೆಯಲ್ಲೇ ಕಿಚ್ಚು ಹೊತ್ತಿಕೊಂಡಿತ್ತು. ಹಾಗಾಗಿ ಶಾಸ್ತ್ರಿಯವರ ದುರಂತಮಯ ಅಧ್ಯಾಯ ಸಾವಿನ ನಂತರವೂ ಮುಂದುವರಿಯಿತು.
ನೀಲಿಗಟ್ಟಿದ್ದ ದೇಹ ಭಾರತಕ್ಕೆ ಬಂತು!
ಆದರೆ ಶವ ಪರೀಕ್ಷೆ ನಡೆಯಲಿಲ್ಲ. ಕೆಲವು ಕೃತಘ್ನ ಭಾರತೀಯರೇ ಶಾಸ್ತ್ರಿಯವರನ್ನು ಇತಿಹಾಸದ ಕಸದ ತೊಟ್ಟಿಗೆ ದೂಡಿ ಕೈ ತೊಳೆದುಕೊಳ್ಳಲು ವ್ಯವಸ್ಥಿತ ಪಿತೂರಿ ನಡೆಸಿದ್ದರು. ಗಾಂಧೀಜಿ ಮತ್ತು ನೆಹರು ಅವರ ಅಂತ್ಯ ಸಂಸ್ಕಾರ ನಡೆದ ಸ್ಥಳದಲ್ಲಿ ಶಾಸ್ತ್ರಿಯವರ ಅಂತ್ಯ ಸಂಸ್ಕಾರ ನಡೆಸಲು ಅಡ್ಡಗಾಲು ಹಾಕಿ, ದೇಹವನ್ನು ಅಲಹಾಬಾದ್‌ಗೆ ಕೊಂಡೊಯ್ಯಲು ಹವಣಿಸಿದರು. ಮೊದಲೇ ನೊಂದಿದ್ದ ಪತ್ನಿ ಲಲಿತಾಶಾಸ್ತ್ರಿ ದೇಶದ ಜನರ ಮುಂದೆ ಬಣ್ಣ ಬಯಲು ಮಾಡುವ ಬೆದರಿಕೆ ಹಾಕಿದಾಗ ದಿಲ್ಲಿಯಲ್ಲೇ ಅಂತ್ಯಸಂಸ್ಕಾರ ನಡೆಸಲು ಅವಕಾಶ ಮಾಡಿಕೊಡಲಾಯಿತು. ಅಷ್ಟೇ ಅಲ್ಲ, ಶಾಸ್ತ್ರೀಜಿಯವರ ಸಮಾಧಿ ಮೇಲೆ ಅವರದ್ದೇ ಆದ ‘ಜೈ ಜವಾನ್, ಜೈ ಕಿಸಾನ್‌’ ಘೋಷಣೆಯನ್ನು ಕೆತ್ತುವುದಕ್ಕೂ ಅಡ್ಡಿಪಡಿಸಿದರು. ಮತ್ತೆ ಲಲಿತಾಶಾಸ್ತ್ರಿ ಉಪವಾಸ ಸತ್ಯಾಗ್ರಹ ಮಾಡುವೆನೆಂದು ಬೆದರಿಕೆಯೊಡ್ಡಬೇಕಾಗಿ ಬಂತು. ದುಃಖದಿಂದ ಹೊರಬರುವ ಮೊದಲೇ ಶಾಸ್ತ್ರೀಜಿ ಭಾವಚಿತ್ರ ಕಾಂಗ್ರೆಸ್ ಕಾರ್ಯಾಲಯದಿಂದಲೂ ಕಣ್ಮರೆಯಾಯಿತು. ಇಂದಿರಾಪ್ರೇರಿತ ಕಾಂಗ್ರೆಸ್ಸಿಗರ ಪಿತೂರಿ ಆ ಮಟ್ಟಿಗಿತ್ತು.
1904, ಅಕ್ಟೋಬರ್ 2ರಂದು ಕಾಶಿ ಸಮೀಪದ ಮೊಘಲ್ ಸರಾಯ್‌ನಲ್ಲಿ ಬಡ ಶಿಕ್ಷಕರ ಮಗನಾಗಿ ಹುಟ್ಟಿದ ಲಾಲ್ ಬಹಾದ್ದೂರ್ ಶಾಸ್ತ್ರಿಯವರದ್ದು ಏಳುಬೀಳಿನ ಹಾದಿ. ಪ್ರಧಾನಿ ಸ್ಥಾನ ಪಿತ್ರಾರ್ಜಿತ ಆಸ್ತಿಯಂತೆ ಬಂದಿದ್ದಲ್ಲ. ಬಾಲ ಗಂಗಾಧರ ತಿಲಕ್ ಅವರಿಂದ ಪ್ರಭಾವಿತರಾಗಿದ್ದ ಅವರು 1921ರಲ್ಲಿ ಶಿಕ್ಷಣಕ್ಕೆ ಶರಣು ಹೊಡೆದು ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದರು. ಆರು ವರ್ಷ ಜೈಲುವಾಸವನ್ನೂ ಅನುಭವಿಸಿದ್ದರು. ಆದರೆ ಸ್ವಾತಂತ್ರ್ಯಾನಂತರ ಕೇಂದ್ರ ಸಚಿವರಾದ ಶಾಸ್ತ್ರಿಯವರ ಏಳಿಗೆಯನ್ನು ನೆಹರು ಸಹಿಸದಾದರು. ಅವರ ಅಸಹನೆ ಯಾವ ಮಟ್ಟಕ್ಕೆ ತಲುಪಿತೆಂದರೆ ಎಲ್ಲ ಖಾತೆಗಳನ್ನು ಕಿತ್ತುಕೊಂಡು ‘ಖಾತೆ ರಹಿತ’ ಮಂತ್ರಿಯಾಗಿಸಿ ಅವಮಾನವನ್ನೂ ಮಾಡಿದರು. ಎಲ್ಲಿ ಶಾಸ್ತ್ರಿಯವರು ಅಡ್ಡಗಾಲಾಗುತ್ತಾರೋ ಎಂಬ ಭಯದಿಂದ ‘ನೆಹರು ನಂತರ ಯಾರು?’ ಎಂಬ ಪ್ರಶ್ನೆಯನ್ನು ಸ್ವತಃ ಹುಟ್ಟು ಹಾಕಿ ತನ್ನ ಮಗಳು ಇಂದಿರಾ ಗಾಂಧಿಯವರನ್ನು ಉತ್ತರಾಧಿಕಾರಿಯಾಗಿ ಮಾಡಲು ಹವಣಿಸಿದರು. ಶಾಸ್ತ್ರಿಯವರ ನಿಗೂಢ ಮರಣದೊಂದಿಗೆ ನೆಹರು ಆಸೆ ಈಡೇರಿತು. ಇಂದಿರಾ ಪ್ರಧಾನಿಯಾದರು. ಭಾರತ ಮತ್ತೆ ನೆಹರು ಕುಟುಂಬಕ್ಕೆ ನೇಣು ಹಾಕಿಕೊಂಡಿತು. ಶಾಸ್ತ್ರೀಜಿ ಪಠ್ಯ ಪುಸ್ತಕಗಳ ಒಂದೆರಡು ಪ್ಯಾರಾಗಳಿಗೆ ಸೀಮಿತರಾದರು. ಇತಿಹಾಸ ತನ್ನ ಧೀರ ಪುತ್ರನನ್ನೇ ಮರೆಯುವಂತಾಯಿತು.
ಏಕೆ ಈ ಮಾತು ಹೇಳಬೇಕಾಗಿದೆ ಗೊತ್ತಾ?
ಟ್ವಿಟ್ಟರ್‌ನಲ್ಲಿ ಭಾರತದ ಪ್ರಧಾನಿಯವರ ಅಧಿಕೃತ ಹ್ಯಾಂಡಲ್ @PMOIndia ಇದೆ. “ಗಾಂಧೀಜಿಯವರ 144ನೇ ಹುಟ್ಟುಹಬ್ಬವಾದ ಇಂದು ಪ್ರಧಾನಿ ಮನಮೋಹನ್ ಸಿಂಗ್ ರಾಜಘಾಟ್‌ಗೆ ತೆರಳಿ ಗೌರವ ಸಲ್ಲಿಸಿದರು” ಎಂದು ಅಕ್ಟೋಬರ್ 2ರಂದು ಟ್ವೀಟ್ ಕೂಡ ಮಾಡಿದ್ದಾರೆ. ಆದರೆ ತೀರಾ ಬೇಸರದ ಸಂಗತಿಯೆಂದರೆ ಅಕ್ಟೋಬರ್ 2ರಂದೇ ಜನಿಸಿದ ಈ ದೇಶದ ಮತ್ತೊಬ್ಬ ಸುಪುತ್ರ ಹಾಗೂ ಜನಪ್ರಿಯ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಬಗ್ಗೆ ಒಂದು ಸಣ್ಣ ಉಲ್ಲೇಖ ಮಾಡುವ ಸೌಜನ್ಯವನ್ನೂ ತೋರಲಿಲ್ಲ. ಮೊನ್ನೆ ಆಗಸ್ಟ್ 20 ರಾಜೀವ್ ಗಾಂಧಿಯವರ ಜನ್ಮದಿನದಂದು ಕೇವಲ 3 ಪ್ರಮುಖ ಇಂಗ್ಲಿಷ್ ಪತ್ರಿಕೆಗಳಿಗೆ ಭಾರತ ಸರ್ಕಾರ ರಾಜೀವ್ ಭಜನೆ ಮಾಡುವ 48 ಜಾಹೀರಾತು ನೀಡಿತ್ತು! ಇದು ದೇಶವನ್ನಾಳುತ್ತಿರುವವರ ಮನಸ್ಥಿತಿ ನೋಡಿ…
ಆದರೇನಂತೆ…
ಬಹಳ ಖುಷಿ ಕೊಡುವ ಸಂಗತಿಯೆಂದರೆ ಟ್ವಿಟ್ಟರ್‌ನಲ್ಲಿ ಈ ದೇಶದ ಯುವ ಜನ ಗಾಂಧೀಜಿಗೆ ಸರಿಸಮನಾಗಿ ಶಾಸ್ತ್ರೀಜಿಯವರನ್ನೂ ನೆನಪಿಸಿಕೊಂಡರು.
ನಾವೂ ಮರೆಯುವುದು ಬೇಡ.