Showing posts with label geetantaranga. Show all posts
Showing posts with label geetantaranga. Show all posts

Monday, November 11, 2024

ಗೀತಾಂತರಂಗ- 892

 *ಅದೃಷ್ಟಪೂರ್ವಂ ಹೃಷಿತೋಸ್ಮಿ ದೃಷ್ಟ್ವಾ ಭಯೇನ ಚ ಪ್ರವ್ಯಥಿತಂ ಮನೋ ಮೇ |*

*ತದೇವ ಮೇ ದರ್ಶಯ ದೇವ ರೂಪಂ ಪ್ರಸೀದ ದೇವೇಶ ಜಗನ್ನಿವಾಸ || (೧೧.೪೫)*

ವಿಶ್ವರೂಪದರ್ಶನದಿಂದ ಮನಸ್ಸಿನಲ್ಲಿ ತುಂಬಾ ತಲ್ಲಣಗೊಂಡಿರುವ ಅರ್ಜುನನು ಅದೇ ಮನಃಸ್ಥಿತಿಯಲ್ಲಿಯೇ ತನ್ನ ಜೀವನದಲ್ಲಿ ಹಿಂದೆ ಘಟಿಸಿರಬಹುದಾದ ತಪ್ಪುಗಳ ಬಗ್ಗೆ ಕ್ಷಮಾಪಣೆಯನ್ನು ಭಕ್ತಿಯಿಂದ ಪ್ರಾರ್ಥಿಸಿಕೊಂಡಿದ್ದನ್ನು ಹಿಂದಿನ ನಾಲ್ಕು ಶ್ಲೋಕಗಳಲ್ಲಿ ಗಮನಿಸಿದ್ದಾಗಿದೆ. ಇದೀಗ ಎರಡು ಶ್ಲೋಕಗಳಲ್ಲಿ ಅರ್ಜುನನು ವಿಶ್ವರೂಪದ ಉಪಸಂಹಾರ ಮಾಡಿಕೊಳ್ಳುವಂತೆ ಭಗವಂತನಲ್ಲಿ ಕೇಳಿಕೊಳ್ಳುತ್ತಿದ್ದಾನೆ.
ಶ್ಲೋಕದ ಸಂಕ್ಷಿಪ್ತಾರ್ಥ- `ಹೇ ದೇವ! ದೇವೇಶ! ಜಗನ್ನಿವಾಸ! ಹಿಂದೆಂದೂ ನೋಡಿರದ ನಿನ್ನ ಈ ವಿಶ್ವರೂಪವನ್ನು ನೋಡಿ ಹರ್ಷಾತಿರೇಕದಿಂದ ರೋಮಾಂಚಿತನಾಗಿದ್ದೇನೆ. ಅಲ್ಲದೇ ಜೊತೆಯಲ್ಲಿ ಭಯಾತಿರೇಕವೂ ಆಗಿರುವುದರಿಂದ ನನ್ನ ಮೈ-ಮನಗಳು ನಡುಗುತ್ತಿವೆ. ಆದ್ದರಿಂದ ನಿನ್ನ ಮೊದಲಿನ ರೂಪವನ್ನು ನನಗೆ ತೋರಿಸು’.
ಈ ಶ್ಲೋಕದಲ್ಲಿ ಅರ್ಜುನನು ಭಗವಂತನನ್ನು ದೇವ! ದೇವೇಶ! ಜಗನ್ನಿವಾಸ! ಈ ಮೂರು ಶಬ್ದಗಳಿಂದ ಸಂಬೋಧಿಸಿದ್ದಾನೆ. ದೇವ ಎಂದರೆ ಪ್ರಕಾಶಸ್ವರೂಪನು. ದೇವೇಶನೆಂದರೆ ಇಂದ್ರಾದಿ ಸಮಸ್ತ ದೇವತಾಗಣಗಳಿಗೂ ಒಡೆಯನು, ಮತ್ತು ಜಗನ್ನಿವಾಸನೆಂದರೆ ಜಗತ್ತಿಗೆ ಆಶ್ರಯನು ಎಂದರ್ಥ.
ಅರ್ಜುನನಿಗೆ ವಿಶ್ವರೂಪದರ್ಶನದಿಂದ ಬಹಳ ಹರ್ಷವೂ ಆಗಿದೆ, ಬಹಳ ಭಯವೂ ಆಗಿದೆ. ಅವನಲ್ಲಿ ಹರ್ಷಾತಿರೇಕದ ಚಿಹ್ನೆಗಳಾದ ರೋಮಾಂಚನವೇ ಮೊದಲಾದವುಗಳು ತೋರಿಕೊಂಡಿವೆ. ಹಾಗೆಯೇ ಭಯಾತಿರೇಕದಿಂದುಂಟಾಗುವ ಮೈನಡುಕವೇ ಮುಂತಾದವುಗಳೂ ಉಂಟಾಗಿವೆ. ಇವೆರಡೂ ಭಾವಗಳೂ ಒಟ್ಟಿಗೇ ಉಂಟಾಗುವುದು ತುಂಬಾ ದುರ್ಲಭವೇ ಸರಿ. ಆದರೂ ತೀರಾ ಅಪರೂಪಕ್ಕೊಮ್ಮೆ ಈ ರೀತಿಯ ಭಾವಾತಿರೇಕಗಳು ಒಟ್ಟಿಗೇ ಆಗುವುದುಂಟು. ಇದಕ್ಕೆ ಕಾರಣವೂ ಉಂಟು; ಅರ್ಜುನನಿಗೆ ಭಗವಂತನ ಈಶ್ವರೀಯ ಸ್ವರೂಪವನ್ನು ನೋಡಬೇಕೆಂಬ ಕುತೂಹಲವಿತ್ತು. ಆ ಕುತೂಹಲಕ್ಕೆ ತಕ್ಕಂತೆ ದೇವರ ದರ್ಶನವಾದಾಗ ಹರ್ಷವಾಗುವುದು ಸಹಜ. ಅಲ್ಲದೇ ಭಗವಂತನ ಸ್ವರೂಪ ಆನಂದಮಯವಾದದ್ದು. ಅವನು ಯಾವುದೇ ಸ್ವರೂಪದಲ್ಲಿ ಪ್ರಕಟನಾದರೂ ಆನಂದವನ್ನೇ ಉಂಟುಮಾಡುತ್ತಾನೆ. ಇದು ಅವನ ಹರ್ಷಕ್ಕೆ ಕಾರಣ. ವಿಶ್ವರೂಪದರ್ಶನದಲ್ಲಿ ಅನೇಕ ಭಯಾನಕ ದೃಶ್ಯಗಳಿವೆ. ಉರಿಯುವ ಉಂಡೆಯಂತೆ ಸುಡುವ ಕಣ್ಣುಗಳು, ಮೃತ್ಯುರೂಪದಂತೆ ಕಾಣುವ ಅನೇಕ ಬಾಯಿಗಳು, ಅವುಗಳಲ್ಲಿ ಪ್ರವೇಶಿಸುತ್ತಿರುವ ಯೋಧರು, ಹೀಗೆ ಇನ್ನೂ ಅನೇಕ ಭಯಾನಕ ದೃಶ್ಯಗಳು ವಿಶ್ವರೂಪದಲ್ಲಿವೆ. ಇದು ಅರ್ಜುನನ ಭಯಕ್ಕೆ ಕಾರಣ. ಹೀಗಾಗಿ ಅವನಿಗೆ ಹರ್ಷ ಮತ್ತು ಭಯ ಎರಡೂ ಒಮ್ಮೆಲೇ ಉಂಟಾಗಿವೆ. ಹಿಂದೆಂದಿಗೂ ನೋಡಿರದ, ನಿರೀಕ್ಷಿಸಿಯೂ ಇರದ ಅದ್ಭುತರೂಪವನ್ನು ನೋಡಿದ್ದರಿಂದ ಅರ್ಜುನನ ಮನಸ್ಸು ಮತ್ತು ಶರೀರಗಳು ಕಂಪಿಸುತ್ತಿವೆ. ಆದ್ದರಿಂದ ವಿಶ್ವರೂಪವನ್ನು ಉಪಸಂಹಾರ ಮಾಡಿ, ಕೃಷ್ಣನ ರೂಪವನ್ನೇ ತನಗೆ ತೋರಿಸು ಎಂದು ಕೇಳಿಕೊಳ್ಳುತ್ತಿದ್ದಾನೆ.
ಅರ್ಜುನನಿಗೆ ಕೃಷ್ಣನ ರೂಪದಲ್ಲಿಯೇ ಭಕ್ತಿ. ಒಬ್ಬೊಬ್ಬರಿಗೆ ಭಗವಂತನ ಒಂದೊಂದು ರೂಪದಲ್ಲಿ ಭಕ್ತಿಯಿರುತ್ತದೆ. ಅನೇಕ ರೂಪದಿಂದ ಇರುವ ದೇವರು ಒಬ್ಬನೇ ಆಗಿದ್ದರೂ ಭಕ್ತರ ಭಕ್ತಿ ವಿಚಿತ್ರವಾಗಿರುತ್ತದೆ. ಯಾವುದೋ ಒಂದು ರೂಪವನ್ನು ಕಂಡರೆ, ಅವರಿಗೆ ಅತಿ ಇಷ್ಟವಾಗಿರುತ್ತದೆ. ಕೃಷ್ಣಾವತಾರದಲ್ಲಿಯೇ ಸ್ಯಮಂತಕೋಪಾಖ್ಯಾನ ಬರುತ್ತದೆ. ಅದರಲ್ಲಿ ಸ್ಯಮಂತಕ ಮಣಿಯನ್ನು ಹುಡುಕುತ್ತಾ ಶ್ರೀಕೃಷ್ಣನು ಜಾಂಬವಂತನ ಗುಹೆಯನ್ನು ಹೊಕ್ಕ ಕಥೆ ಬರುತ್ತದೆ. ಜಾಂಬವಂತನು ಶ್ರೀರಾಮನ ಭಕ್ತನು. ಮೊದಲು ಅವನಿಗೆ ಕೃಷ್ಣನ ಪರಿಚಯವೇ ಹತ್ತಲಿಲ್ಲ. ಸ್ಯಮಂತಕ ಮಣಿಗೋಸ್ಕರ ಅವನು ಕೃಷ್ಣನ ಜೊತೆಯಲ್ಲಿ ಬಾಹುಯುದ್ಧ ಮಾಡಿದನು. ಯುದ್ಧದಲ್ಲಿ ಆತನಿಗೆ ಕೃಷ್ಣನು ಯಾವುದೋ ವೈಷ್ಣವಶಕ್ತಿ ಇರಬಹುದೆಂಬ ಸಂಶಯ ಮೂಡಿತು. ಶ್ರೀಕೃಷ್ಣನು ಆಗ ಅವನಿಗೆ ರಾಮನ ರೂಪದಲ್ಲಿಯೇ ದರ್ಶನ ಕೊಟ್ಟನು. ಏಕೆಂದರೆ ಜಾಂಬವಂತನಿಗೆ ರಾಮನೆಂದರೆ ಇಷ್ಟ. ಈ ರೀತಿಯ ಭಕ್ತಿಗೆ ರಾಗಭಕ್ತಿ ಎಂದು ಕರೆಯುತ್ತಾರೆ. ಅರ್ಜುನನದು ರಾಗಭಕ್ತಿ. ಆದ್ದರಿಂದಲೇ ಆತ ಕೃಷ್ಣರೂಪವನ್ನೇ ನೋಡಲು ಬಯಸುತ್ತಿದ್ದಾನೆ. ಇನ್ನೊಂದು ವಿಧದ ಭಕ್ತಿ ಇರುತ್ತದೆ. ದೇವರ ಯಾವ ಸ್ವರೂಪವನ್ನು ನೋಡಿದರೂ ಇಷ್ಟವೆಂಬ ಮನಃಸ್ಥಿತಿ. ಈ ರೀತಿಯ ಭಕ್ತಿಗೆ ನಿಷ್ಠಾಭಕ್ತಿ ಎಂದು ಹೆಸರು. ವಸಿಷ್ಠ, ವ್ಯಾಸ, ಶುಕ ಮುಂತಾದವರಿಗೆ ನಿಷ್ಠಾಭಕ್ತಿ ಇತ್ತು.
ಅರ್ಜುನನ ರಾಗಭಕ್ತಿಯ ಪ್ರಾರ್ಥನೆ ಮುಂದಿನ ಶ್ಲೋಕದಲ್ಲಿಯೂ ಮುಂದುವರಿಯಲಿದೆ. ಅದನ್ನು ಮುಂದಿನ ಲೇಖನದಲ್ಲಿ ಗಮನಿಸೋಣ.

ಗೀತಾಂತರಂಗ- 891

 *ತಸ್ಮಾತ್ ಪ್ರಣಮ್ಯ ಪ್ರಣಿಧಾಯ ಕಾಯಮ್ ಪ್ರಸಾದಯೇ ತ್ವಾಮಹಮೀಶಮೀಡ್ಯಮ್ |*

*ಪಿತೇವ ಪುತ್ರಸ್ಯ ಸಖೇವ ಸಖ್ಯುಃ ಪ್ರಿಯಃ ಪ್ರಿಯಾಯಾರ್ಹಸಿ ದೇವ ಸೋಢುಮ್ || (೧೧.೪೪)*

ವಿಶ್ವರೂಪಧಾರಿಯಾದ ಭಗವಂತನಲ್ಲಿ ಪ್ರಾಂಜಲ ಮನಸ್ಸಿನ ಅರ್ಜುನನ ಪ್ರಾರ್ಥನೆಯ ಮುಖ್ಯವಾದ ಭಾಗ ಈ ಶ್ಲೋಕದಲ್ಲಿದೆ. ``ಅರ್ಹಸಿ ದೇವ ಸೋಢುಮ್’ ದೇವ! ನನ್ನ ಅಪರಾಧಗಳನ್ನು ಸಹಿಸಿಕೊಳ್ಳಲು ನೀನು ಸಶಕ್ತನಾಗಿದ್ದೀಯೆ’ ಅಂದರೆ ನನ್ನ ಅಪರಾಧಗಳನ್ನು ಕ್ಷಮಿಸು ಎಂಬ ನೇರ ಮಾತು ಈ ಶ್ಲೋಕದಲ್ಲಿ ಬಂದಿದೆ, ಮತ್ತು ಕ್ಷಮಾಪಣೆಯ ಪ್ರಾರ್ಥನೆ ಈ ಶ್ಲೋಕದಲ್ಲಿಯೇ ಮುಗಿಯುತ್ತದೆ.
ಶ್ಲೋಕದ ಸಂಕ್ಷಿಪ್ತಾರ್ಥ - `ಹೇ ದೇವ! ಜಗತ್ಪಿತನಾದ ನೀನೇ ನನಗೂ ತಂದೆ ಆದ್ದರಿಂದ, ನನ್ನ ಶರೀರವನ್ನು ನಿನ್ನ ಪದತಳದಲ್ಲಿ ಸಮರ್ಪಿಸಿ, ನಮಸ್ಕರಿಸಿ, ದೇವತೆಗಳಿಂದಲೂ, ಋಷಿಗಳಿಂದಲೂ ಸ್ತುತ್ಯನೂ ಆದ, ಒಡೆಯನಾದ ನಿನ್ನಲ್ಲಿ ಕೇಳಿಕೊಳ್ಳುತ್ತಿದ್ದೇನೆ. ಏನೆಂದರೆ; ತಂದೆಯು ಮಗನ ಅಪರಾಧವನ್ನು ಸಹಿಸುವಂತೆ, ಸ್ನೇಹಿತನು ಸ್ನೇಹಿತನ ಅಪರಾಧವನ್ನು ಸಹಿಸುವಂತೆ, ಪತಿಯು ಪತಿವ್ರತೆಯಾದ ಪತ್ನಿಯ ಅಪರಾಧವನ್ನು ಸಹಿಸುವಂತೆ, ನನ್ನೆಲ್ಲ ಅಪರಾಧಗಳನ್ನು ಕ್ಷಮಿಸು’.
ಅರ್ಜುನನು ವಿಶ್ವರೂಪದರ್ಶನದಿಂದ ತುಂಬಾ ಬದಲಾಗಿದ್ದಾನೆ. ಈ ಹಿಂದೆ ಒಂಭತ್ತು ಅಧ್ಯಾಯಗಳಲ್ಲಿ ಭಗವಂತನು ದೀರ್ಘವಾಗಿ ಉಪದೇಶಿಸಿದರೂ, ಆಗಿರದ ಬದಲಾವಣೆ, ಅವನಲ್ಲಿ ವಿಶ್ವರೂಪದರ್ಶನದಿಂದ ಆಗಿದೆ. ಬಹುಶಃ ಜೀವನದಲ್ಲಿ ಈ ಹಿಂದೆ ಎಂದಿಗೂ ಅವನು ಶ್ರೀಕೃಷ್ಣನನ್ನು ಹೀಗೆ ಪ್ರಾರ್ಥಿಸಿದ್ದಿರಲಿಕ್ಕಿಲ್ಲ!. ಈಗ ಸಾಷ್ಟಾಂಗ ನಮಸ್ಕಾರದ ಮೂಲಕ ಶರಣಾಗತಿಯನ್ನು ಸೂಚಿಸುತ್ತಿದ್ದಾನೆ. ಜಗದೀಶ್ವರನಾದ ಶ್ರೀಕೃಷ್ಣನನ್ನು ತಾನು ಹಿಂದೆ ಮಾಡಿರಬಹುದಾದ ತಪ್ಪುಗಳ ಬಗ್ಗೆ ಅಂಗಲಾಚಿ ಕ್ಷಮಾಪಣೆಯನ್ನು ಕೇಳುತ್ತಿದ್ದಾನೆ.
ಇಲ್ಲಿ ವೇದವ್ಯಾಸರು `ಪ್ರಣಮ್ಯ’ `ಪ್ರಣಿಧಾಯ’ ಎಂಬ ಎರಡು ಶಬ್ದಗಳನ್ನು ಬಳಸಿದ್ದಾರೆ. ಪ್ರಣಮ್ಯ ಎಂದರೆ `ನಮಸ್ಕಾರ ಮಾಡಿಕೊಂಡು’ ಎಂದರ್ಥ. ಪ್ರಣಿಧಾಯ ಎಂಬ ಶಬ್ದಕ್ಕೂ ಸ್ವಲ್ಪ ಹೆಚ್ಚು-ಕಡಿಮೆ ಇದೇ ಅರ್ಥವನ್ನೇ ವ್ಯಾಖ್ಯಾನಕಾರರು ಹೇಳಿರುತ್ತಾರೆ. ಆದರೆ ಇಲ್ಲಿ ನಮ್ಮದೊಂದು ಅಭಿಪ್ರಾಯವಿದೆ. `ಪ್ರಣಿಧಾನ’ ಎಂಬ ಶಬ್ದದಲ್ಲಿ ಯಾವ ಧಾತು ಮತ್ತು ಉಪಸರ್ಗಗಳು ಇವೆಯೋ, ಅದೇ ಧಾತು ಮತ್ತು ಉಪಸರ್ಗಗಳು `ಪ್ರಣಿಧಾಯ’ ಎಂಬ ಶಬ್ದದಲ್ಲಿಯೂ ಇದೆ. `ಪ್ರಣಿಧಾನ’ ಎಂಬ ಶಬ್ದಕ್ಕೆ ಯೋಗಸೂತ್ರದ ವ್ಯಾಸಭಾಷ್ಯದಲ್ಲಿ ಭಕ್ತಿವಿಶೇಷವೆಂತಲೂ, ಕರ್ಮ ಹಾಗೂ ಅದರ ಫಲಗಳ ಸಮರ್ಪಣೆ ಎಂತಲೂ ಅರ್ಥವನ್ನು ಹೇಳಿದ್ದಾರೆ. (ಯೋ.ಸೂ ೧.೨೩ ಮತ್ತು ೨.೧) ಆದ್ದರಿಂದ ಇಲ್ಲಿಯೂ `ಪ್ರಣಿಧಾಯ’ ಎಂಬ ಶಬ್ದಕ್ಕೆ ಕೇವಲ ಶರೀರವನ್ನು `ಭೂಮಿಯಲ್ಲಿ ಚೆಲ್ಲಿ’ ಎಂದಿಷ್ಟೇ ಅರ್ಥವನ್ನು ಹೇಳದೇ, `ಭಕ್ತಿಪೂರ್ವಕವಾಗಿ ತನ್ನನ್ನು ಸಮರ್ಪಿಸಿಕೊಂಡು’ ಎಂಬುದಾಗಿ ಅರ್ಥ ಹೇಳುವುದು ಯುಕ್ತವೆಂದು ತೋರುತ್ತದೆ. ನಮಸ್ಕಾರದಲ್ಲಿ ಅನೇಕ ಪ್ರಕಾರಗಳಿರುತ್ತವೆ. ಸುಮ್ಮನೇ ನಮಸ್ಕರಿಸುವುದಕ್ಕೂ, ಶರಣಾಗತಿಯ ಭಾವದಿಂದ ನಮಸ್ಕರಿಸುವುದಕ್ಕೂ ಅಂತರವಿದೆ. ಇಲ್ಲಿ ಅರ್ಜುನನು ಪರಿಪೂರ್ಣ ಶರಣಾಗತಿಯಿಂದ ನಮಸ್ಕರಿಸುತ್ತಿದ್ದಾನೆ. ಈ ಅರ್ಥವನ್ನು ಸೂಚಿಸುವುದಕ್ಕೋಸ್ಕರವೇ ವೇದವ್ಯಾಸರು `ಪ್ರಣಮ್ಯ’ `ಪ್ರಣಿಧಾಯ’ ಎಂಬ ಎರಡು ಶಬ್ದಗಳನ್ನು ಬಳಸಿದ್ದಾರೆಂಬುದು ನಮ್ಮ ಅಭಿಪ್ರಾಯ.
ಹೀಗೆ ಪರಿಪೂರ್ಣ ಶರಣಾಗತಿಯ ಭಾವನೆಯಿಂದ ನಮಸ್ಕರಿಸಿ, ಜಗದೀಶ್ವರನಾದ ಶ್ರೀಕೃಷ್ಣನಲ್ಲಿ ಅರ್ಜುನನು ಕೇಳಿಕೊಳ್ಳುತ್ತಿರುವುದೇನೆಂಬುದನ್ನು ಈಗ ಗಮನಿಸೋಣ; ಶ್ರೀಕೃಷ್ಣನು ಜಗದೀಶ್ವರನೂ, ಮತ್ತು ಎಲ್ಲರಿಂದಲೂ ಸ್ತುತ್ಯನೂ ಆಗಿದ್ದಾನೆ. ತನ್ನ ಜೀವನದಲ್ಲಿ ಹಿಂದೆ ಆಗಿರಬಹುದಾದ ಅಪರಾಧಗಳನ್ನು ಕ್ಷಮಿಸಬೇಕೆಂಬುದೂ ಅವನ ಮುಖ್ಯ ಪ್ರಾರ್ಥನೆ. ಈ ಕ್ಷಮಾಪಣೆಗೆ ಆತ ಕೊಟ್ಟಿರುವ ಮೂರು ದೃಷ್ಟಾಂತಗಳನ್ನು ನಿಜಕ್ಕೂ ಗಮನಿಸಬೇಕು.
೧. `ಪಿತೇವ ಪುತ್ರಸ್ಯ’ – ತಂದೆಯು ಮಗನ ಅಪರಾಧಗಳನ್ನು ಕ್ಷಮಿಸುವಂತೆ.
೨. ಮಿತ್ರನು ತನ್ನ ಮಿತ್ರನ ತಪ್ಪುಗಳನ್ನು ಸಹಿಸಿಕೊಳ್ಳುವಂತೆ.
೩. ಪತಿಯು ಪತ್ನಿಯ ತಪ್ಪುಗಳನ್ನು ಸಹಿಸಿಕೊಳ್ಳುವಂತೆ ತನ್ನ ತಪ್ಪುಗಳನ್ನು ಸಹಿಸಿಕೊಳ್ಳಬೇಕೆಂದು ಅವನ ಪ್ರಾರ್ಥನೆ. ಪ್ರೀತಿ ಇದ್ದಲ್ಲಿ ಸಹನೆ ಇದ್ದಿರುತ್ತದೆ. ಇವೆರಡೂ ಒಟ್ಟಿಗೆ ಇರುವ ಸ್ಥಳಗಳು

ಈ ಮೂರು. ಅಥವಾ ಪ್ರೀತಿ ಮತ್ತು ಸಹನೆ ಈ ಮೂರೇ ಪ್ರಕಾರದಿಂದ ಇರುತ್ತದೆ. ಇನ್ನುಳಿದ ಪ್ರೀತಿ-ಸಹನೆಗಳನ್ನು ಈ ಮೂರರಲ್ಲಿಯೇ ಅಂತರ್ಭಾವಗೊಳಿಸಿಕೊಳ್ಳಲು ಸಾಧ್ಯವಿದೆ. ಉದಾಹರಣೆಗೆ; ಗುರುವಿಗೆ ಶಿಷ್ಯನಲ್ಲಿರುವ ಪ್ರೀತಿ-ಸಹನೆ, ತಂದೆಗೆ ಮಗನಲ್ಲಿರುವ ಪ್ರೀತಿ-ಸಹನೆಗೆ ಸಮನಾದದ್ದು. ಆದ್ದರಿಂದ ಗುರು-ಶಿಷ್ಯರ ದೃಷ್ಟಾಂತವನ್ನು ತಂದೆ-ಮಗನ ದೃಷ್ಟಾಂತದಲ್ಲಿಯೇ ಅಂತರ್ಭಾವಗೊಳಿಸಿಕೊಳ್ಳಬಹುದು. ಹೀಗೆಯೇ ತಾಯಿ-ಮಕ್ಕಳ ಪ್ರೀತಿಯನ್ನೂ ಇದರಲ್ಲಿಯೇ ಅಂತರ್ಭಾವಗೊಳಿಸಿಕೊಳ್ಳಬಹುದು. ಒಟ್ಟಾರೆ ಲೋಕದಲ್ಲಿ ಪ್ರೀತಿ-ಸಹನೆ ಎನ್ನುವುದು ಮೂರೇ ವಿಧ. ಆದ್ದರಿಂದಲೇ ನಮಗೆ ಹಿತವನ್ನು ಮಾರ್ಗದರ್ಶಿಸುವ ಗ್ರಂಥವನ್ನು ೧. ಪ್ರಭುಸಮ್ಮಿತ. ೨. ಮಿತ್ರಸಮ್ಮಿತ. ೩. ಕಾಂತಾಸಮ್ಮಿತ ಎಂಬುದಾಗಿ ಮೂರೇ ಪ್ರಕಾರಗಳಿಂದ ವಿಂಗಡಿಸುತ್ತಾರೆ.
೧. ಪ್ರಭುಸಮ್ಮಿತವೆಂದರೆ ವೇದಗಳು. ಅವು ತಂದೆಯು ಮಗನಿಗೆ ಆದೇಶಿಸುವಂತೆ, ನಮಗೆ ಹಿತವಾದದ್ದನ್ನು ಆದೇಶಿಸುತ್ತವೆ.
೨. ಮಿತ್ರಸಮ್ಮಿತವೆಂದರೆ ಪುರಾಣಗಳು. ಅವು ಸ್ನೇಹಿತನಂತೆ ನಮಗೆ ಹಿತವನ್ನು ನಿರ್ದೇಶಿಸುತ್ತವೆ.
೩. ಕಾಂತಾಸಮ್ಮಿತವೆಂದರೆ ಕಾವ್ಯಗಳು. ಅವು ನಮಗೆ ಪತ್ನಿಯಂತೆ ಪ್ರೀತಿಯಿಂದ ಹಿತವಾದ ಮಾರ್ಗದ ಸೂಚನೆಯನ್ನು ಕೊಡುತ್ತವೆ. ಪ್ರಕೃತದಲ್ಲಿ ಅರ್ಜುನನ ಮುಖದಿಂದ ಇದೇ ಮೂರು ವಿಧಗಳನ್ನು ಹೇಳಿಸುತ್ತಿರುವ ವೇದವ್ಯಾಸರ ಅಭಿಪ್ರಾಯವೇನೆಂದರೆ; ಅರ್ಜುನನಿಗೆ ತಂದೆಯೂ, ಸಖನೂ, ಎಲ್ಲವೂ ಆಗಿರುವ ಶ್ರೀಕೃಷ್ಣನು ಅರ್ಜುನನ ಬಗ್ಗೆ ಪ್ರೀತಿಯ ಭಾವವನ್ನು ತಾಳಿ, ಅವನ ತಪ್ಪುಗಳನ್ನು ಸಹಿಸಿಕೊಳ್ಳಲಿ ಎಂದು.