Wednesday, May 14, 2025

ಬಿಗ್ ಬ್ಯಾಂಗ್ ಗಿಂತ ಮುಂಚಿನ ಜಗತ್ತನ್ನು ನಾವು ಹೇಗೆಂದು ಊಹಿಸಿಕೊಳ್ಳಬಹುದು?

 ಬಿಗ್ ಬ್ಯಾಂಗ್ ಮೊದಲು ಏನು ಅಸ್ತಿತ್ವದಲ್ಲಿತ್ತು?

(ರಾಬರ್ಟ್ ಲ್ಯಾಂಬ್ ಮತ್ತು ಪ್ಯಾಟ್ರಿಕ್ ಜೆ. ಕಿಗರ್ ಅವರ ಲೇಖನ ದ ಆಧಾರದ ಮೇಲೆ)

ಸರಿಸುಮಾರು 13.8 ಶತಕೋಟಿ ವರ್ಷಗಳ ಹಿಂದೆ, ಇಡೀ ಬ್ರಹ್ಮಾಂಡವು ಕೇವಲ ಒಂದು ಬಿಂದು ಆಗಿದ್ದ ಸಮಯವನ್ನು ಊಹಿಸಿಕೊಳ್ಳುವುದು ಸಾಕಷ್ಟು ಕಷ್ಟ.

ಬಿಗ್ ಬ್ಯಾಂಗ್ ಸಿದ್ಧಾಂತವು ಬ್ರಹ್ಮಾಂಡವು ಹೇಗೆ ಬಂದಿತು ಎಂಬುದನ್ನು ವಿವರಿಸಲು ಪೈಪೋಟಿ ನಡೆಸುತ್ತಿರುವ ಮುಖ್ಯ ಸಿದ್ಧಾಂತಗಳಲ್ಲಿ ಒಂದು.

ಇದರ ಪ್ರಕಾರ, ಬ್ರಹ್ಮಾಂಡದಲ್ಲಿನ ಎಲ್ಲಾ ವಸ್ತುಗಳು - ಎಲ್ಲಾ ಸ್ಥಳಾವಕಾಶಗಳು - ಸಬ್‌ ಅಟಾಮಿಕ್ ಕಣಕ್ಕಿಂತ ಚಿಕ್ಕದಾದ ರೂಪದಲ್ಲಿ ಅಸ್ತಿತ್ವದಲ್ಲಿತ್ತು.

ಹೀಗೆ ಯೋಚಿಸಿದಾಗ, ಇನ್ನೂ ಕಷ್ಟಕರವಾದ ಪ್ರಶ್ನೆಯೊಂದು ಉದ್ಭವಿಸುತ್ತದೆ: ದೊಡ್ಡ ಬ್ಯಾಂಗ್ ಸಂಭವಿಸುವ ಮುನ್ನ ಏನು ಅಸ್ತಿತ್ವದಲ್ಲಿತ್ತು?

ಈ ಪ್ರಶ್ನೆಯು ಕನಿಷ್ಠ 1,600 ವರ್ಷಗಳ ಮುಂಚೆಯೇ ಹುಟ್ಟಿತ್ತು 20 ನೇ ಶತಮಾನದ ಆರಂಭದಲ್ಲಿ, ಆಲ್ಬರ್ಟ್ ಐನ್‌ಸ್ಟೈನ್ ಅವರ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದ ಪ್ರಕಾರ ದ್ರವ್ಯರಾಶಿಯು ಸಮಯದ ಮೇಲೆ ಪರಿಣಾಮ ಬೀರುತ್ತದೆ.

ಒಂದು ಗ್ರಹದ ಅಗಾಧ ದ್ರವ್ಯರಾಶಿ ಸಮಯವನ್ನು ಹೆಚ್ಚಿಸುತ್ತದೆ - ಕಕ್ಷೆಯಲ್ಲಿರುವ ಉಪಗ್ರಹಕ್ಕಿಂತ ಭೂಮಿಯ ಮೇಲ್ಮೈಯಲ್ಲಿರುವ ಮನುಷ್ಯನಿಗೆ ಸಮಯವು ಸ್ವಲ್ಪ ನಿಧಾನವಾಗಿ ಚಲಿಸುವಂತೆ ಮಾಡುತ್ತದೆ.

ಒಂದು ಮೈದಾನದಲ್ಲಿ ಒಬ್ಬಂಟಿಯಾಗಿ ನಿಂತಿರುವ ವ್ಯಕ್ತಿಗಿಂತ ದೊಡ್ಡ ಬಂಡೆಯ ಪಕ್ಕದಲ್ಲಿ ನಿಂತಿರುವ ಯಾರಿಗಾದರೂ ಸಮಯವು ನಿಧಾನವಾಗಿ ಚಲಿಸುತ್ತದೆ. ಈ ವ್ಯತ್ಯಾಸವು ಗಮನಿಸಲು ತುಂಬಾ ಚಿಕ್ಕದಾಗಿರುವುದೇನೋ ನಿಜ!

ಐನ್‌ಸ್ಟೈನ್‌ರ ಕೃತಿಯ ಆಧಾರದ ಮೇಲೆ, ಬೆಲ್ಜಿಯಂನ ವಿಶ್ವವಿಜ್ಞಾನಿ ರೆವ್. ಜಾರ್ಜಸ್ ಲೆಮಾಟ್ರೆ 1927 ರಲ್ಲಿ ಒಂದು ಪ್ರಬಂಧವನ್ನು ಪ್ರಕಟಿಸಿದರು, ಅದು ಬ್ರಹ್ಮಾಂಡವು ಒಂದು ಬಿಂದುವಿನಲ್ಲಿ ಪ್ರಾರಂಭಿಸಿತು ಮತ್ತು ಬಿಗ್ ಬ್ಯಾಂಗ್ ಅದರ ವಿಸ್ತರಣೆಗೆ ಕಾರಣವಾಯಿತು ಎಂದು.

ಈ ತರ್ಕದ ಪ್ರಕಾರ ಆದಿಸ್ವರೂಪದ ಏಕತ್ವವು ಅದರ ಪ್ರಸ್ತುತ ಗಾತ್ರ ಮತ್ತು ಆಕಾರದ ಕಡೆಗೆ ವಿಸ್ತರಿಸಿದಂತೆ ಸಮಯವು ಅಸ್ತಿತ್ವಕ್ಕೆ ಬಂದಿತು.

++++++++++++++

ಇನ್ನೊಂದು ಆಲೋಚನೆ ಇದೆ: ನಮ್ಮ ಬ್ರಹ್ಮಾಂಡವು ಮತ್ತೊಂದು ಹಳೆಯ ಬ್ರಹ್ಮಾಂಡದ ಸಂತತಿಯಾಗಿರಬಹುದೇ?

ಕೆಲವು ಖಗೋಳ ಭೌತಶಾಸ್ತ್ರಜ್ಞರ ಪ್ರಕಾರ ಬಿಗ್ ಬ್ಯಾಂಗ್‌ನಿಂದ ಉಳಿದಿರುವ ಅವಶೇಷ ವಿಕಿರಣ (Cosmic Microwave Background, CMB) ಈ ಕಥೆಯನ್ನು ಸೂಚಿಸುತ್ತದೆ.

ಖಗೋಳಶಾಸ್ತ್ರಜ್ಞರು ಮೊದಲು 1965 ರಲ್ಲಿ CMB ಯನ್ನು ಗಮನಿಸಿದರು, ಮತ್ತು ಇದರ ಪ್ರಕಾರ ಬ್ರಹ್ಮಾಂಡದ ಅಸ್ತಿತ್ವದ ಮೊದಲ ಕೆಲವು ಕ್ಷಣಗಳಲ್ಲಿ ಅದು ಅತ್ಯಂತ ವೇಗವಾಗಿ ವಿಸ್ತರಿಸಿತು.

ಕೆಲವು ವಿಶ್ವವಿಜ್ಞಾನಿಗಳ ಪ್ರಕಾರ ಬಿಗ್ ಬ್ಯಾಂಗ್ ಗಿಂತಲೂ ಮುಂಚೆ ಒಂದು ಬ್ರಹ್ಮಾಂಡ ಇತ್ತು. ನಮ್ಮ ವಿಶ್ವವು ಆ ಮೂಲ ಬ್ರಹ್ಮಾಂಡದಿಂದ "ಬಬಲ್ ಆಗಿದೆ". ಇದು ಇನ್ಫ್ಲೇಷನ್ ಸಿದ್ಧಾಂತ.

ಇನ್ನೊಂದು ಅಸ್ತವ್ಯಸ್ತ ಇನ್ಫ್ಲೇಷನ್ ಸಿದ್ಧಾಂತದ ಪ್ರಕಾರ ಗುಳ್ಳೆಗಳು ಒಡೆದು ಮತ್ತಷ್ಟು ಗುಳ್ಳೆಗಳನ್ನು ಅಂದರೆ ಅನೇಕಾನೇಕ ವಿಶ್ವಗಳನ್ನು ಹುಟ್ಟು ಹಾಕುತ್ತಿವೆ. ಇದು ಯುನಿವರ್ಸ್ ಅಲ್ಲ, ಮಲ್ಟಿವರ್ಸ್!

ಕೆಲವು ವಿಜ್ಞಾನಿಗಳು ಪ್ರಸ್ತಾಪಿಸುವ ಹಾಗೆ ನಮ್ಮ ವಿಸ್ತರಿಸುತ್ತಿರುವ ಬ್ರಹ್ಮಾಂಡವು ಸೈದ್ಧಾಂತಿಕವಾಗಿ ಮತ್ತೊಂದು ಬ್ರಹ್ಮಾಂಡದ ಕಪ್ಪು ಕುಳಿಯಿಂದ ಬಿಳಿ ರಂಧ್ರವಾಗಿ ಹರಡುತ್ತಾ ಇರಬಹುದು. ಮತ್ತು ನಮ್ಮದೇ ಬ್ರಹ್ಮಾಂಡದ ಪ್ರತಿಯೊಂದು ಕಪ್ಪು ಕುಳಿಯು ಪ್ರತ್ಯೇಕ ವಿಶ್ವಗಳನ್ನು ಹೊಂದಿರಬಹುದು.

++++++++++++++

ಆದರೆ ಕೆಲವು ವಿಜ್ಞಾನಿಗಳು ಬ್ರಹ್ಮಾಂಡವು ಪ್ರಾರಂಭವಾದದ್ದು ಬಿಗ್ ಬ್ಯಾಂಗ್‌ನಿಂದಲ್ಲ, ಆದರೆ ಬಿಗ್ ಬೌನ್ಸ್‌ನಿಂದ ಎಂದು ಭಾವಿಸುತ್ತಾರೆ.

ಬಿಗ್ ಬೌನ್ಸ್

ಬಹಳ ಹಿಂದೆಯೇ, ಭಾರತದಲ್ಲಿನ ಮಧ್ಯಕಾಲೀನ ಧಾರ್ಮಿಕ ದಾರ್ಶನಿಕರು ಬ್ರಹ್ಮಾಂಡವು ಸೃಷ್ಟಿ ಮತ್ತು ವಿನಾಶದ ಅಂತ್ಯವಿಲ್ಲದ ಚಕ್ರದ ಮೂಲಕ ಹಾದುಹೋಗುತ್ತದೆ ಎಂದು ತಿಳಿಸಿದ್ದರು, ಇದರಲ್ಲಿ ಅದು ಯಾವುದೋ ಒಂದು ದ್ರವ್ಯರಾಶಿಯಿಂದ ನಮ್ಮ ಸುತ್ತಲೂ ನಾವು ಇರುವ ವಿಶ್ವಕ್ಕೆ ವಿಕಸನಗೊಳ್ಳುತ್ತದೆ, ಮತ್ತೆ ನಾಶವಾಗುತ್ತದೆ ಮತ್ತೆ ಹೊಸದಾಗಿ ಪ್ರಾರಂಭಿಸುತ್ತದೆ.

ಕೆಲವು ಸಮಕಾಲೀನ ವಿಜ್ಞಾನಿಗಳು ಕೂಡ ಈ ತರಹದ ಕಲ್ಪನೆಗೆ ಬಂದಿದ್ದಾರೆ. ಬಿಗ್ ಬ್ಯಾಂಗ್ ಬದಲಿಗೆ, ಬ್ರಹ್ಮಾಂಡವು ಪದೇ ಪದೇ ವಿಸ್ತರಿಸುತ್ತದೆ ಮತ್ತು ಸಂಕುಚಿತಗೊಳ್ಳುತ್ತದೆ, ಪ್ರತಿ ಬಾರಿಯೂ ಅದು ಒಂದು ನಿರ್ದಿಷ್ಟ ಗಾತ್ರಕ್ಕೆ ಕುಗ್ಗುತ್ತದೆ ಎಂದು ಅವರು ನಂಬುತ್ತಾರೆ. ಬಿಗ್ ಬೌನ್ಸ್ ಸಿದ್ಧಾಂತದಲ್ಲಿ, ಪ್ರತಿ ಚಕ್ರವು ಸಣ್ಣ, ನಯವಾದ ಬ್ರಹ್ಮಾಂಡದಿಂದ ಪ್ರಾರಂಭವಾಗುತ್ತದೆ, ಅದು ಬಿಂದುವಿನಷ್ಟು ಚಿಕ್ಕದಾಗಿರುವುದಿಲ್ಲ. ಅದು ಕ್ರಮೇಣ ವಿಸ್ತರಿಸುತ್ತದೆ, ಮತ್ತು ಕಾಲಾನಂತರದಲ್ಲಿ ಅದು ಗಂಟುಗಂಟಾಗುತ್ತ ಬಾಗುತ್ತ ಹೋಗುತ್ತದೆ. ಒಂದು ಘಟ್ಟ ತಲುಪಿದ ಮೇಲೆ ಅದು ಮುದುಡುತ್ತ ಕುಗ್ಗುತ್ತ ಕುಸಿಯುತ್ತಾ ಹೋಗುತ್ತದೆ. ಅಂತಿಮವಾಗಿ, ಪ್ರಾರಂಭದ ಹಂತದ ಗಾತ್ರಕ್ಕೆ ಕುಗ್ಗುತ್ತದೆ. ನಂತರ, ಚಕ್ರವು ಹೊಸದಾಗಿ ಪ್ರಾರಂಭವಾಗುತ್ತದೆ. ಈ ಚಕ್ರ ಒಂದು ಲಕ್ಷ ಕೋಟಿ ವರ್ಷಕ್ಕೊಮ್ಮೆ ಪುನರಾವರ್ತನೆ ಆಗುತ್ತದೆ.

ಬಿಗ್ ಬೌನ್ಸ್ ಸಿದ್ಧಾಂತದ ಪ್ರಕಾರ ಸಮಯ ಎಂಬುದು ಈಗಿನ ವಿಶ್ವ ಹುಟ್ಟುವ ಮುಂಚೆಯೂ ಇತ್ತು.

++++++++++++

ಬಿಗ್ ಬ್ಯಾಂಗ್ ಆಗಿರಲಿ ಅಥವಾ ಬಿಗ್ ಬೌನ್ಸ್ ಆಗಿರಲಿ, ನಮ್ಮ ಪ್ರಸ್ತುತ ಬ್ರಹ್ಮಾಂಡದ ಮೊದಲು ಏನು ಅಸ್ತಿತ್ವದಲ್ಲಿತ್ತು ಎಂಬ ಪ್ರಶ್ನೆ ಮುಕ್ತ ಪ್ರಶ್ನೆಯಾಗಿಯೇ ಉಳಿದಿದೆ.

ಬಹುಶಃ ಏನೂ ಇಲ್ಲ.

ಬಹುಶಃ ಮತ್ತೊಂದು ಬ್ರಹ್ಮಾಂಡ ಅಥವಾ

ನಮಗಿಂತ ಭಿನ್ನವಾದ ಬೇರೆ ಆವೃತ್ತಿ.

ಬಹುಶಃ ಬ್ರಹ್ಮಾಂಡಗಳ ಸಮುದ್ರ, ಅದರಲ್ಲಿ ಪ್ರತಿಯೊಂದಕ್ಕೂ ಅದರದೇ ವಿಭಿನ್ನ ಭೌತಿಕ ಕಾನೂನುಗಳು ಇರಬಹುದು!