ಶ್ರೀಮದಾಚಾರ್ಯರ ಸಾಕ್ಷಾತ್ ಶಿಷ್ಯರಾದ ಶ್ರೀ ನರಹರಿತೀರ್ಥರು [ ಅಂಕಿತ : ರಘುಪತಿ ] ಶ್ರೀಮದಾಚಾರ್ಯರ ಆದೇಶದಂತೆ - ಅವರೇ ನಿರ್ದೇಶಿಸಿದಂತೆ ಭಕ್ತಿ ಪ್ರಧಾನವಾದ ಗೇಯ - ಗೀತೆ ಪದ್ಧತಿಯನ್ನು ದೇಶ ಭಾಷೆಯಾದ ಕನ್ನಡಕ್ಕೂ ಅನ್ವಯಿಸುವಂತೆ ಮಾಡಿ " ದಾಸ ಪಂಥ " ದ " ದಿವ್ಯ ಭವ್ಯ ಮಂದಿರ " ಕ್ಕೆ ಶಂಕುಸ್ಥಾಪನೆ ಮಾಡಿದರು.
ಶ್ರೀ ಜಯತೀರ್ಥರು [ ಶ್ರೀ ರಾಮ / ಜಯರಾಮ ] - ಶ್ರೀ ವಿಬುಧೇಂದ್ರತೀರ್ಥರು [ ವಿಬುಧರಾಮ ] - ಶ್ರೀ ಶ್ರೀಪಾದರಾಜರು [ ಅಂಕಿತ : ರಂಗವಿಠ್ಠಲ ] ಹಾಗೂ ಶ್ರೀ ವ್ಯಾಸರಾಜರು [ ಅಂಕಿತ : ಶ್ರೀ ಕೃಷ್ಣ / ಸಿರಿಕೃಷ್ಣ ] ಆ " ದಿವ್ಯ ಭವ್ಯ ಮಂದಿರ " ಕ್ಕೆ ಭದ್ರ ಬುನಾದಿ ಹಾಕಿದರು.
ಶ್ರೀ ಗೋವಿಂದ ಒಡೆಯರು [ ಅಂಕಿತ : ಗುರುಮುದ್ದುಕೃಷ್ಣ ] - ಶ್ರೀ ವಿಜಯೀ೦ದ್ರತೀರ್ಥರು [ ಅಂಕಿತ : ವಿಜಯೀ೦ದ್ರರಾಮ ] - ಶ್ರೀ ಶ್ರೀ ವಾದಿರಾಜರು [ ಅಂಕಿತ : ಹಯವದನ ] - ಶ್ರೀ ಪುರಂದರದಾಸರು [ ಅಂಕಿತ : ಪುರಂದರವಿಠ್ಠಲ ] - ಶ್ರೀ ಕನಕದಾಸರು - [ ಅಂಕಿತ : ನೆಲೆಯಾದಿಕೇಶವ / ಬಾಡದಾದಿಕೇಶವ ] - ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮ [ ಅಂಕಿತ : ವೇಣುಗೋಪಾಲ ] ರೇ ಮೊದಲಾದ ಮಹನೀಯರು ದಿವ್ಯ ಭವ್ಯವಾಗಿ ಈ " ದಾಸ ಪಂಥದ ಗುಡಿ " ಕಟ್ಟಿದರೆ -
ಮುಂದೆ ಶ್ರೀ ವಿಜಯದಾಸರು [ ಅಂಕಿತ : ವಿಜಯವಿಠ್ಠಲ ] - ಶ್ರೀ ಐಜಿ ವೇಂಕಟರಾಮಾಚಾರ್ಯರು [ ಅಂಕಿತ : ವಾಸುದೇವವಿಠ್ಠಲ ] - ಶ್ರೀ ಗೋಪಾಲದಾಸರು [ ಅಂಕಿತ : ಗೋಪಾಲವಿಠ್ಠಲ ] " ಕಳಸ " ಏರಿಸಿದರು.
ನಂತರ ಬಂದ ಶ್ರೀ ಜಗನ್ನಾಥದಾಸರು [ ಅಂಕಿತ : ಜಗನ್ನಾಥವಿಠ್ಠಲ ] ಮತ್ತು ಅವರ ಪ್ರಿಯ ಶಿಷ್ಯರಾದ ಶ್ರೀ ಪ್ರಾಣೇಶದಾಸರು [ ಅಂಕಿತ : ಪ್ರಾಣೇಶವಿಠ್ಠಲ ] ಈ " ದಿವ್ಯ ಭವ್ಯ ಹರಿದಾಸ ಮಂದಿರ " ಕ್ಕೆ " ಗೋಪುರ " ವನ್ನು ನಿರ್ಮಿಸಿ - ದಾಸಕೂಟದ ಗೌರವ ಘನತೆಗಳನ್ನು ಆಕಾಶದೆತ್ತರಕ್ಕೆ ಬೆಳೆಸಿ - ಈ ದಿವ್ಯ ಭವ್ಯ ಹರಿ ದಾಸ ಪರಂಪರೆಯನ್ನು ಶ್ರೀಮಂತಗೊಳಿಸಿದರು.
ತದನಂತರದಲ್ಲಿ ಬಂದ ಹರಿದಾಸರುಗಳು ತಮ್ಮ ಪದ - ಪದ್ಯ - ಸುಳಾದಿ - ಉಗಾಭೋಗ - ವೃತ್ತನಾಮ - ಜಾವಳಿ - ಲಾವಣಿ ಮೊದಲಾದವುಗಳಿಂದ " ಹರಿದಾಸ ಮಂದಿರವನ್ನು ಶೃಂಗರಿಸಿ ಅಲಂಕರಿಸುತ್ತಲೇ " ಬಂದಿದ್ದಾರೆ.
***
From ನರಹರಿ ಸುಮಧ್ವ on 1 Nov 2021
ಕನ್ನಡ ಸಾಹಿತ್ಯಕ್ಕೆ ಮಾಧ್ವ ಪರಂಪರೆಯ ಕಾಣಿಕೆ
ಆಚಾರ್ಯ ಮಧ್ವರು ಹನ್ನೆರಡನೇ ಶತಮಾನದಲ್ಲಿ ನೆಲೆಸಿದ್ದು ಉಡುಪಿಯಲ್ಲಿ. ಸುಂದರ ಸೊಬಗಿನ ಆ ಉಡುಪಿಯಲ್ಲಿ ಕಡುಗೋಲು ಕೃಷ್ಣನ ಪ್ರತಿಮೆಯ ಪ್ರತಿಷ್ಠಾಪಿಸಿ, ಅಷ್ಟಮಠಗಳ ಯತಿಗಳು ಮತ್ತು ಪದ್ಮನಾಭಾದಿ ಯತಿಗಳ ಸಮೂಹವನ್ನೇ ನೀಡಿ ಧರ್ಮ ಪ್ರಚಾರ ಮಾಡಲು ಆರಂಭಿಸಿದರು.
ಹರಿದಾಸ ಸಾಹಿತ್ಯದ ಮೂಲ ಪುರುಷರು ಶ್ರೀ ಮಧ್ವಾಚಾರ್ಯರು ಎಂದೇ ಹೇಳಬಹುದು. ಕನ್ನಡದಲ್ಲಿ ಆಚಾರ್ಯರು ಯಾವ ಕೃತಿಗಳನ್ನೂ ರಚಿಸದಿದ್ದರೂ ಅವರ ಪ್ರಭಾವಕ್ಕೆ ಸಿಕ್ಕ ಅವರ ನೇರ ಶಿಷ್ಯರಾದ ನರಹರಿ ತೀರ್ಥರು ಕನ್ನಡದಲ್ಲಿ ಮೊದಲ ದೇವರನಾಮವನ್ನು ರಚಿಸಿದರು
ಆಚಾರ್ಯ ಮಧ್ವರ ನೇರ ಶಿಷ್ಯರಲ್ಲಿ ಒಬ್ಬರಾದ ಹಂಪಿಯಲ್ಲಿ ವಿರಾಜಮಾನರಾಗಿರುವ ಶ್ರೀ ನರಹರಿ ತೀರ್ಥರು "ಹರಿಯೇ ಇದು ಸರಿಯೇ",. "ಎಂತು ಮರುಳಾದೆ ಹರಿಯೇ" " ತಿಳಿಕೋ ನಿನ್ನೊಳಗೆ ನೀನೇ" ಮುಂತಾದ ಕೃತಿಗಳ ಮೂಲಕ ದಾಸಸಾಹಿತ್ಯಕ್ಕೆ ಬುನಾದಿ ಹಾಕಿದರು.
ಕಾಗಿಣೀತೀರ ಮಳಖೇಡ ನಿವಾಸಿ ಅಕ್ಷೋಭ್ಯರ ತನಯ ಶ್ರೀ ಜಯತೀರ್ಥರೂ ಸಮಗ್ರ ಆಚಾರ್ಯರ ಸರ್ವಮೂಲ ಟೀಕೆಯನ್ನು ದೇವಭಾಷೆಯಲ್ಲಿ ಬರೆದರೂ , "ರಾಮವಿಠಲ" ಅಂಕಿತದಲ್ಲಿ "ನೀಲ ಮೇಘ ಶ್ಯಾಮನ ಕೋಮಲಾಂಗನ ಕಂಡೆ" ಎಂಬ ಕೃತಿಯ ರಚಿಸಿದ್ದಾರೆ.
ಅಕಸ್ಮಾತ್ ಕನ್ನಡದಲ್ಲಿ ಮಾತನಾಡಿದರೆ ಮೈಲಿಗೆಯಾಯಿತು ಎಂದು ಕೊಂಡು, ಮತ್ತೆ ಸ್ನಾನ ಮಾಡಿ ತಮ್ಮ ಕಾರ್ಯಗಳನ್ನು ಮುಂದುವರೆಸುತ್ತಿದ್ದ ಕಾಲದಲ್ಲಿ ಆಚಾರ್ಯ ಕರಾರ್ಚಿತ ವಿಗ್ರಹಗಳನ್ನು ಮುಟ್ಟಿ ಪೂಜೆ ಮಾಡಿ , ಕನ್ನಡದಲ್ಲಿ ದೇವರನಾಮ ಗಳನ್ನು ರಚಿಸುವ ಸಂಕಲ್ಪ ಮಾಡಿದ್ದು ಆಗಿನ ಕಾಲಕ್ಕೆ ಒಂದು ಸಾಹಸವೇ ಸರಿ. ಶ್ರೀ ಶ್ರೀಪಾದರಾಜರು "ರಂಗವಿಠಲ" ಅಂಕಿತದಿಂದ ನೂರಾರು ದೇವರ ನಾಮಗಳು, ಉಗಾಭೋಗಗಳನ್ನು ರಚಿಸಿದ್ದಾರೆ. ಅಲ್ಲಿಯವರೆಗೂ ಸಂಸ್ಕೃತ ಕೃತಿಗಳನ್ನು ಮಾತ್ರ ಅಧ್ಯಯನ ಪಾರಾಯಣ ಮಾಡುವ ಪರಿಪಾಠವನ್ನು ದೂರವಿಕ್ಕಿ ಭಕುತಿಯಲಿ ಗಾಯನ ಮಾಡುವವರೂ ಧರ್ಮಗಳನ್ನು ಅರಿಯಬಹುದು ಎಂದು ತಿಳಿಸಿದರು. ಮಕ್ಕಳ ಆಡುಭಾಷೆಯಲ್ಲಿ "ಪೋಪು ಹೋಗೋಣ ಬಾರೋ" ಕೃತಿ ಅಮೋಘವಾಗಿದೆ, ಹಲವಾರು ಸುಳಾದಿಗಳನ್ನೂ ರಚಿಸಿದ್ದಾರೆ. ಶ್ರೀಪಾದರಾಜ ಮಠದಿಂದ "ರಂಗವಿಠಲ" ಮಾಸಿಕ ಪ್ರಕಟಣೆಯಾಗುತ್ತಿದೆ.
ಶ್ರೀ ವ್ಯಾಸರಾಜರು ಇದೇ ಮಾರ್ಗದಲ್ಲಿ ಮುಂದುವರಿದು ತಾವೂ ನೂರಾರು ಕೀರ್ತನೆಗಳನ್ನು ರಚಿಸಿ ಪುರಂದರದಾಸರು ಮತ್ತು ಕನಕದಾಸರಿಗೆ ದಾಸ ದೀಕ್ಷೆ ಇತ್ತು ಸಾವಿರಾರು ದೇವರನಾಮಗಳನ್ನು ಪ್ರಚರಪಡಿಸಿದರು. ವ್ಯಾಸರಾಯರು ಕನ್ನಡ ದೇವರನಾಮಗಳನ್ನು ರಚಿಸಿದ್ದಲ್ಲದೆ, ಚಂದ್ರಿಕಾ, ತರ್ಕತಾಂಡವಾದಿ ಹಲವಾರು ಕೃತಿಗಳನ್ನು ರಚಿಸಿ ಆಚಾರ್ಯ ಮಧ್ವರ ಸಿದ್ಧಾಂತವನ್ನು ಎತ್ತಿ ಹಿಡಿದಿದ್ದಾರೆ. ಇದೇ ರೀತಿ ವ್ಯಾಸರಾಜ ಮಠದ ಮೂಲಕ "ತತ್ವಚಂದ್ರಿಕಾ" ಎಂಬ ಮಾಸಿಕ ಪ್ರಕಟಣೆಯಾಗುತ್ತಿದೆ.
ಇದೇ ರೀತಿ ಸೋಂದಾ ಶ್ರೀ ವಾದಿರಾಜ ಶ್ರೀಪಾದರು ಹಲವು ಕನ್ನಡ ಗ್ರಂಥಗಳನ್ನು, ದೇವರನಾಮಗಳನ್ನು ರಚಿಸಿ ಉಪಕರಿಸಿದ್ದಾರೆ,. ಅವರ ಲಕ್ಷ್ಮೀ ಶೋಭಾನೆ ಅತ್ಯಂತ ಮಂಗಳಕರವೆಂದು ಪ್ರಸಿದ್ಧಿ ಪಡೆದಿದೆ ಮತ್ತು ಯಾವುದೇ ಶುಭಕಾರ್ಯಗಳಲ್ಲಿ ಪಾರಾಯಣ ಮಾಡುವ ಪರಿಯಿದೆ. ವಾದಿರಾಜರು ಪ್ರತಿಯೊಬ್ಬ ದೇವತೆಗಳ ಬಗ್ಗೆಯೂ ಕೃತಿಗಳನ್ನು ರಚಿಸಿದ್ದಾರೆ.
ಶ್ರೀ ವಿಜಯೇಂದ್ರ ತೀರ್ಥರು ,- "ವಿಜಯೇಂದ್ರ ರಾಮ" ಅಂಕಿತದಲ್ಲಿ ರಚಿಸಿದ್ದಾರೆ.
ವ್ಯಾಸತತ್ವಜ್ಞ ತೀರ್ಥರು - "ವಾಸುದೇವ ವಿಠಲ" ಅಂಕಿತದಲ್ಲಿ ಕೃತಿಗಳನ್ನು ರಚಿಸಿದ್ದಾರೆ.
ಶ್ರೀ ರಾಘವೇಂದ್ರ ಸ್ವಾಮಿಗಳು ಧೀರ ವೇಣುಗೋಪಾಲ ಅಂಕಿತದಲ್ಲಿ "ಇಂದು ಎನಗೆ ಗೋವಿಂದ", ಮತ್ತು ಸುಳಾದಿಗಳ ರಚಿಸಿದ್ದಾರೆ.
ಶ್ರೀ ವಿದ್ಯಾರತ್ನಾಕರ ತೀರ್ಥರು ಹಲವು ಕೃತಿಗಳನ್ನು ರಚಿಸಿದ್ದಾರೆ.
ಶ್ರೀ ಪ್ರಸನ್ನ ತೀರ್ಥರು ನೂರಾರು ದೇವರನಾಮಗಳು ರಚಿಸಿದ್ದಾರೆ.
ಪ್ರಸ್ತುತ ಶ್ರೀ ಭಂಡಾರಕೇರಿ ಶ್ರೀ ವಿದ್ಯೇಶ ತೀರ್ಥರೂ ನೂರಾರು ಕನ್ನಡ ಕೃತಿಗಳನ್ನು ರಚಿಸಿದ್ದಾರೆ.
ಪ್ರಾತಃ:ಸ್ಮರಣೀಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮ್ಮ ಸಂಸ್ಥೆಯ ಮೂಲಕ ಹಲವಾರು ಸಂಸ್ಕೃತ ಗ್ರಂಥಗಳನ್ನು ಕನ್ನಡಕ್ಕೆ ತಮ್ಮ ಶಿಷ್ಯರ ಮೂಲಕ ಅನುವಾದಿಸಿ ಪ್ರಕಟಿಸಿ ಅನುಕೂಲ ಮಾಡಿದ್ದಾರೆ. ಜೊತೆಗೆ ಹಲವಾರು ವರ್ಷಗಳಿಂದ "ತತ್ವವಾದ" ಎಂಬ ಮಾಸಿಕ ಪ್ರಕಟಣೆಯಾಗುತ್ತಿದೆ.
ಪರಮಪೂಜ್ಯ ಶ್ರೀ ಸತ್ಯಾತ್ಮತೀರ್ಥರು ವಿಶ್ವಮಧ್ವ ಮಹಾಪರಿಷತ್ ಮೂಲಕ ನೂರಾರು ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ತಮ್ಮ ಶಿಷ್ಯರ ಮೂಲಕ ಹಲವಾರು ಕನ್ನಡ ಕೃತಿಗಳನ್ನು ಹೊರತಂದಿದ್ದಾರೆ ಜೊತೆಗೆ "ಶ್ರೀ ಸುಧಾ" ಎಂಬ ಹೆಸರಿನಿಂದ ಮಾಸಿಕವನ್ನು ಪ್ರಕಟಿಸುತ್ತಿದ್ದಾರೆ .
ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥರು ಮಂತ್ರಾಲಯ ಮಠದ ಆಶ್ರಯದಲ್ಲಿ ಸಮಗ್ರ ರಾಯರ ಗ್ರಂಥಗಳನ್ನೂ ಕನ್ನಡಕ್ಕೆ ತಂದಿದ್ದಾರೆ, ಅವರ ಕನ್ನಡ ಸೇವೆ ಅನರ್ಘ್ಯ. ಅಲ್ಲದೆ ದಾಸಸಾಹಿತ್ಯಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಮಂತ್ರಾಲಯದಲ್ಲಿ ವಿಶೇಷ ದಾಸಕೂಟಗಳನ್ನೂ, ಭಜನಾ ಮಂಡಳಿಗಳನ್ನೂ ಪ್ರೋತ್ಸಾಹಿಸಿದ್ದಾರೆ. ಅದರಲ್ಲೂ ಹೆಚ್ಚಾಗಿ ಮಹಿಳೆಯರ ಭಜನಾ ಮಂಡಳಿಗಳನ್ನೂ ಉತ್ತೇಜಿಸಿ ದಾಸಸಾಹಿತ್ಯ ಪ್ರಚಾರಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಜೊತೆಗೆ ಮಂತ್ರಾಲಯ ಮಠದಿಂದ "ಗುರು ಸಾರ್ವಭೌಮ" ಮಾಸಿಕವೂ ನಿರಂತರ ಪ್ರಕಟಣೆಯಾಗುತ್ತಿದೆ.
ಇದೇ ರೀತಿ ಪರಮಪೂಜ್ಯ ಶ್ರೀ ಫಲಿಮಾರು ವಿದ್ಯಾಧೀಶ ತೀರ್ಥರೂ ಕೂಡ ಕನ್ನಡದಲ್ಲಿ ತಮ್ಮ ಸಂಸ್ಥೆಯ ಮೂಲಕ ಹಲವಾರು ಕನ್ನಡ ಕೃತಿಗಳನ್ನು ರಚಿಸಿದ್ದಾರೆ. ಜೊತೆಗೆ "ಸರ್ವಮೂಲ" ಎಂಬ ಮಾಸಿಕವನ್ನು ತಂದಿದ್ದಾರೆ.
ಇನ್ನು ದಾಸರುಗಳ ಪೈಕಿ ಅಗ್ರಗಣ್ಯರು ಶ್ರೀ ಪುರಂದರದಾಸರು - ನಾಲ್ಕು ಲಕ್ಷಕ್ಕೂ ಹೆಚ್ಚಿನ ದೇವರನಾಮಗಳನ್ನು, ಉಗಾಭೋಗಗಳನ್ನು, ಮುಂಡಿಗೆಗಳು, ಸುಳಾದಿಗಳನ್ನೂ ರಚಿಸಿದ್ದಾರೆ, ಕರ್ನಾಟಕ ಸಂಗೀತ ಪಿತಾಮಹನೆನೆಸಿ, ಶ್ರೀ ವ್ಯಾಸರಾಯರಿಂದ ಅವರ ಕೀರ್ತನೆಗಳು "ಪುರಂದರೋಪನಿಷತ್" ಎಂದು ಆಚಾರ್ಯ ಮಧ್ವರ "ಸರ್ವಮೂಲ"ದೊಂದಿಗೆ ಗೌರವಿಸಲ್ಪಟ್ಟಿದೆ.
ಶ್ರೀ ಕನಕದಾಸರು - ಜಾತಿಯಲ್ಲಿ ಕುರುಬನಾಗಿ ಹುಟ್ಟಿದರೂ ಶ್ರೀ ವ್ಯಾಸರಾಜರಿಂದ ಅತ್ಯುನ್ನತ ಗೌರವ ಮತ್ತು ದಾಸಧೀಕ್ಷೆ ಪಡೆದು, ಪುರಂದರದಾಸರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ದೇವರನಾಮಗಳನ್ನು ರಚಿಸಿದ್ದಾರೆ. ಅವರ ಕೃತಿಗಳು ಕಬ್ಬಿಣದ ಕಡಲೆಯಿದ್ದಂತೆ. ಅವರ ಪದ ಜೋಡಣೆ, ಸಾಹಿತ್ಯ ಚಿಂತನೆ ಶೈಲಿ, ಮುಂಡಿಗೆಗಳನ್ನು ಅರ್ಥಮಾಡಿಕೊಳ್ಳಲು ವ್ಯಾಸಸಾಹಿತ್ಯದ ಆಸರೆ ಕೂಡ ಬೇಕು. ಅವರು ಪ್ರತಿಯೊಂದು ಪದದಲ್ಲೂ ವಿಶೇಷ ಅರ್ಥಗಳನ್ನು ಹುಡುಕುವಂತೆ ಮಾಡುತ್ತಾರೆ. "ಅಂಧಕನನುಜನ ಕಂದನ ತಂದೆಯ", "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ", "ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ", "ಕುಲ ಕುಲ ಕುಲವೆಂದು ಹೊಡೆದಾಡದಿರಿ",. "ಏನೆ ಮನವಿತ್ತೆ ಲಲಿತಾಂಗಿ" ಇತ್ಯಾದಿ ಹಲವಾರು ಗಂಭೀರ ಅರ್ಥಗರ್ಭಿತ ಸಾಹಿತ್ಯ ರಚಿಸಿದ್ದಾರೆ. ಅವರ ಅಂಕಿತ "ಕಾಗಿನೆಲೆ ಆದಿ ಕೇಶವ". ಇವರ ಇತರ ಪ್ರಸಿದ್ಧ ಕೃತಿಗಳು - ಮೋಹನತರಂಗಿಣಿ, ನಳಚರಿತ್ರೆ, ಮುಂಡಿಗೆ, ಹರಿಭಕ್ತಿಸಾರ, ರಾಮಧಾನ್ಯ ಚರಿತ್ರೆ, ದಂಡಕಗಳು, ಉಗಾಭೋಗ, ಸುಳಾದಿಗಳು, ಇತ್ಯಾದಿ.
ಕುಮಾರವ್ಯಾಸರು ಇಡೀ ಮಹಾಭಾರತವನ್ನು ಕನ್ನಡದಲ್ಲಿ ಕಾವ್ಯಮಯವಾಗಿ ನೀಡಿದ್ದಾರೆ.
ಶ್ರೀ ಪ್ರಸನ್ನ ವೆಂಕಟ ದಾಸರು - ಪ್ರಸನ್ನ ವೆಂಕಟ ಅಂಕಿತದಿಂದ ಸಾಕಷ್ಟು ಕೀರ್ತನೆಗಳನ್ನು ರಚಿಸಿದ್ದಾರೆ. ಇವರ ವಿಶೇಷತೆಯೆಂದರೆ ಕ್ಲಿಷ್ಟ ಪದಲಾಲಿತ್ಯದ ಕೀರ್ತನೆಗಳು ಅಷ್ಟು ಸುಲಭವಾಗಿ ಅರ್ಥವಾಗುವುದು ಕಠಿಣ.
ವಿಜಯದಾಸರು - ೨೫೦೦೦ಕ್ಕೂ ಹೆಚ್ಚು ಕೀರ್ತನೆಗಳು, ಸುಳಾದಿಗಳು, ಮುಂಡಿಗೆ, ಉಗಾಭೋಗ, ಇತ್ಯಾದಿ ಪ್ರತಿಯೊಂದು ವಿಷಯದಲ್ಲೂ ಸುಳಾದಿಗಳನ್ಧು ರಚಿಸಿದ್ದಾರೆ - ಹಬ್ಬ ಸುಳಾದಿ, ನೈವೇದ್ಯ ಸುಳಾದಿ, ಧನ್ವಂತರಿ ಸುಳಾದಿ, ಇತ್ಯಾದಿ ಹಲವಾರು.
ಗೋಪಾಲದಾಸರು - ಜಗನ್ನಾಥದಾಸರಿಗೆ ವಿಜಯದಾಸರ ಆಜ್ಞೆಯಂತೆ ಆಯುರ್ದಾನ ಮಾಡಿದ್ದಲ್ಲದೆ, ಹಲವಾರು ಕೀರ್ತನೆಗಳು ರಚಿಸಿದ್ದಾರೆ.
ಜಗನ್ನಾಥದಾಸರು - ಹರಿಕಥಾಮೃತಸಾರ, ತತ್ವಸುವ್ವಾಲಿ, ದೇವರನಾಮಗಳು, ಉಗಾಭೋಗ, ಇತ್ಯಾದಿ
ಮೋಹನದಾಸರು - ಕೋಲುಪದ ಎಂಬ ದೀರ್ಘ ಕೃತಿ ಮತ್ತು ಹಲವಾರು ದೇವರನಾಮಗಳನ್ನು ನೀಡಿದ್ದಾರೆ.
ಇದಲ್ಲದೆ ಇನ್ನೂ ಹಲವಾರು ದಾಸಶ್ರೇಷ್ಟರು ಇದ್ದಾರೆ
ಪ್ರಾಣೇಶದಾಸರು, ಗುರು ಪ್ರಾಣೇಶದಾಸರು, ಗುರುಗೋಪಾಲದಾಸರು, ಗುರು ಜಗನ್ನಾಥದಾಸರು, ಮಹಿಪತಿದಾಸರು, ಮೊದಲಕಲ್ಲು ಶೇಷದಾಸರು, ಗುರುಪುರಂದರ ದಾಸರು, ತಂದೆ ಪುರಂದರದಾಸರು, ಶ್ಯಾಮಸುಂದರ ದಾಸರು, ವರದೇಶವಿಠಲರು, ಭೂಪತಿವಿಠಲದಾಸರು, ಕಾಖಂಡಕಿ ಕೃಷ್ಣ ದಾಸರು, ಶ್ರೀದವಿಠಲದಾಸರು, ಅಚಲಾನಂದ ದಾಸರು, ಶ್ರೀ ಪ್ರಸನ್ನ ಶ್ರೀನಿವಾಸ ದಾಸರು, ವೇಣುಗೋಪಾಲ ದಾಸರು, ಶ್ರೀ ಗೋವಿಂದ ವಿಠಲ ದಾಸರು, ಮೈಸೂರಿನ ಸುಬ್ಬರಾಯರು, ಗುರುಗೋವಿಂದ ವಿಠಲ ದಾಸರು, ವರದವಿಠಲದಾಸರು, ಉರಗಾದ್ರಿವಿಠಲದಾಸರು, ಅಸ್ಕಿಹಾಳ ಗೋವಿಂದದಾಸರು, ಸದಾನಂದ ದಾಸರು, ಅಹೋಬಲ ದಾಸರು, ಹನುಮೇಶವಿಠಲದಾಸರು, ಅಭಿನವ ಜನಾರ್ಧನ ವಿಠಲದಾಸರು, ಗೋಕಾವಿ ಅನಂತಾಧೀಶರು, ಜಯೇಶವಿಠಲದಾಸರು, ಜನಾರ್ಧನವಿಠಲದಾಸರು, ಕಾರ್ಪರ ನರಸಿಂಹ ದಾಸರು ಶ್ರೀಪತಿವಿಠಲದಾಸರು, ಶ್ರೀವಿಠಲ ದಾಸರು, ಭೂಪತಿವಿಠಲದಾಸರು, ರಂಗೇಶವಿಠಲದಾಸರು, ತುಳಸಿರಾಮದಾಸರು, ಹೆಳವನಕಟ್ಟೆ ಗಿರಿಯಮ್ಮ, ಹರಪನಹಳ್ಳಿ ಭೀಮವ್ವ, ನಂಜನಗೂಡು ತಿರುಮಲಾಂಬ, ಗಲಗಲಿ ಅವ್ವ, ಯದುಗಿರಿಯಮ್ಮ.

