1960 ರಿಂದ 1980 ರವರೆಗಿನ ದಿನಗಳು ಕನ್ನಡ ಚಲನಚಿತ್ರ ಮಾಧ್ಯಮಕ್ಕೆ ಸುವರ್ಣ ದಿನಗಳು. ಆ ಸಂದರ್ಭದಲ್ಲಿ ಕನ್ನಡದ ಅತ್ಯಂತ ಯಶಸ್ವಿ ಹಾಗೂ ಪ್ರಭಾವಿ ನಟರಾಗಿದ್ದ ಡಾಕ್ಟರ್ ರಾಜಕುಮಾರ್ ಅವರ 150ಕ್ಕೂ ಹೆಚ್ಚು ಚಲನಚಿತ್ರಗಳು ಬಿಡುಗಡೆಯಾಗಿ ಅತ್ಯದ್ಭುತವಾದ ಜನಮನ್ನಣೆಯನ್ನು ಗಳಿಸಿದವು .ಇವುಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದವರು ಲೀಲಾವತಿ, ಜಯಂತಿ ಮತ್ತು ಭಾರತಿ .ಈ ಮೂವರಲ್ಲಿ ಅತಿ ಹೆಚ್ಚು ಎಂದರೆ ನಲವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದವರು ಅಭಿನಯ ಶಾರದೆ ಎಂದು ಹೆಸರಾದ ಜಯಂತಿ.
ಜಯಂತಿಯವರ ಹುಟ್ಟುಹೆಸರು ಕಮಲಕುಮಾರಿ ಹುಟ್ಟಿದ್ದು ಬಳ್ಳಾರಿಯ ತೆಲುಗು ಕುಟುಂಬದಲ್ಲಿ. (ಜನವರಿ 6 1945 -ಜುಲೈ 26 2021).ತಾಯಿಯೊಡನೆ ಚಿಕ್ಕವಯಸ್ಸಿನಲ್ಲಿಯೇ ಆಗಿನ ಮದ್ರಾಸ್ (ಈಗಿನ ಚೆನ್ನೈ)ಗೆ ವಲಸೆ ಹೋದವರು ಆರಂಭದಲ್ಲಿ ಜಗದೇಕ ವೀರನ ಕಥೆ ಹಾಗೂ ಕೆಲವು ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರು .
ಆ ಕಾಲಕ್ಕೆ ಕನ್ನಡದಲ್ಲಿ ಲೀಲಾವತಿ ,ತಮಿಳಿನಲ್ಲಿ ಬಿ ಸರೋಜಾದೇವಿ ತಮ್ಮ ಛಾಪನ್ನು ಮೂಡಿಸಿದ್ದರು.ಕಮಲಕುಮಾರಿ ಅವರ ಕೊಂಚ ಸ್ಥೂಲದೇಹ ಅವರಿಗೆ ನಾಯಕಿ ಪಾತ್ರಗಳಿಗೆ ತೊಡಕಾದ ಸಂದರ್ಭ. ನಿರ್ದೇಶಕ ಪೇಕೆಟಿ ಶಿವರಾಂ ಅವರ ಕಾರಣದಿಂದಾಗಿ ಕೆಲವೊಂದು ಚಿಕ್ಕಪುಟ್ಟ ಪಾತ್ರಗಳುತಮಿಳು-ತೆಲುಗಿನಲ್ಲಿ ದೊರೆತರೂ ನಿಜವಾಗಿ ಅವರಿಗೆ ಬ್ರೇಕ್ ದೊರತದ್ದು 1963 ರಲ್ಲಿ ಕನ್ನಡದ ಜೇನುಗೂಡು ಸಿನಿಮಾದಲ್ಲಿ ಅಭಿನಯಿಸಿದಾಗ .ಅದೇ ಸಂದರ್ಭದಲ್ಲಿ ಅವಿಭಕ್ತ ಕುಟುಂಬಗಳ ವಿಘಟನಾ ಪರ್ವವನ್ನು ಒಡಮೂಡಿಸುವ ಚಂದವಳ್ಳಿಯ ತೋಟ ನಾಯಕಿಯಾಗಿ ಪ್ರಮುಖ ಬ್ರೇಕ್ ಅನ್ನು ನೀಡಿತು. ಆಗಿನ ಪ್ರಮುಖ ನಿರ್ದೇಶಕರಾದ ಎಂ ಆರ್ ವಿಠಲ್ ವೈ ಆರ್ ಸ್ವಾಮಿ, ಶೇಷಗಿರಿರಾವ್, ಟಿವಿ ಸಿಂಗ್ ಟಾಗೋರ್, ಸಿದ್ದಲಿಂಗಯ್ಯ ದೊರೆ-ಭಗವಾನ್ ರವರ ನೆಚ್ಚಿನ ನಾಯಕಿಯಾಗಿ ಅವರ ಹೆಚ್ಚಿನ ಚಿತ್ರಗಳಲ್ಲಿ ಅವರು ಕಾಣಿಸಿಕೊಂಡರು.
ಅದೇ ಕಾಲಕ್ಕೆ ತಮಿಳಿನ ಖ್ಯಾತ ನಿರ್ದೇಶಕರಾದ ಕೆ ಬಾಲಚಂದರ್ರವರ ಎದಿರ್ ನಿಳಲ್( ಕನ್ನಡದಲ್ಲಿ ಗಾಂಧಿ ನಗರ ಚಿತ್ರವಾಗಿ ಮೂಡಿಬಂತು ) ಹಾಸ್ಯನಟ ತಾಯಿ ನಾಗೇಶ್ ಹಾಗೂ ಅರೆಹುಚ್ಚಿ ಪಾತ್ರದಲ್ಲಿ ಗಮನ ಸೆಳೆದ ಜಯಂತಿ ಅವರಿಗೆಹೆಸರನ್ನು ತಂದು ಕೊಟ್ಟಿದ್ದಲ್ಲದೇ ಮುಂದೆ ಅದೇ ನಿರ್ದೇಶಕರ ಇರು ಕೋಡುಗಳು( ಕನ್ನಡದಲ್ಲಿ ಎರಡು ರೇಖೆಗಳು) ಮತ್ತು ಭಾಮ ವಿಜಯ ಮುಂತಾದ ಸಿನಿಮಾಗಳಲ್ಲಿ ಅವಕಾಶ ದೊರೆಯಿತು.ಮುಂದೆ ಅವರಿಗೆ ಇತರೆ ಭಾಷೆಗಳಲ್ಲಿ ಅವಕಾಶ ದೊರೆತರೂ ಅವರು ನೆಲೆನಿಂತದ್ದು ಮುಂದೆ ಕನ್ನಡದಲ್ಲಿಯೇ.
ಬೆಟ್ಟದ ಹುಲಿ 1965 ರಲ್ಲಿ ಬಿಡುಗಡೆಗೊಂಡ ಅಪಾರ ಯಶಸ್ಸನ್ನು ಸಾಧಿಸಿದ ಚಿತ್ರ. ವ್ಯಕ್ತಿಯ ಬೆಳವಣಿಗೆಯಲ್ಲಿ ಪರಿಸರ ಮುಖ್ಯವೋ ಇಲ್ಲಾ ಜೀನ್ಸ್ ಮುಖ್ಯವೋ ಎಂಬುದರ ಎಳೆಯನ್ನಿಟ್ಟುಕೊಂಡು ಚಿತ್ರದಲ್ಲಿ ಸೆಂಟಿಮೆಂಟ್, ಸಾಹಸ ,ಶೃಂಗಾರ ,ಸೆಂಟಿಮೆಂಟ್,ಕುತೂಹಲ, ಹಾಸ್ಯ,ಮಧುರ ಸಂಗೀತ ಹದವಾಗಿ ಬೆರೆತ ಸಿನಿಮಾದಲ್ಲಿ ಜಯಂತಿಯವರ ಬೀಡುಬೀಸಾದ ಅಭಿನಯ ಚಿತ್ರರಸಿಕರ ಗಮನಸೆಳೆದಿದ್ದೇ ಕಾರಣವಾಗಿ ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ಬಿಡುಗಡೆಗೊಂಡ ಅರ್ಧಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಆಕೆ ನಾಯಕಿಯಾಗಿ ಅಭಿನಯಿಸಿದರು.ಅವರ ದೈಹಿಕ ಸ್ಥೂಲತೆಯನ್ನು ಮೈ ಮರೆಸುವಂತೆ ಅವರ ಸಹಜ ಅಭಿನಯ ಸಹನಟ -ನಟಿ ರೊಂದಿಗಿನ ಸೌಹಾರ್ದತೆ ,ಸದಾ ಆನಂದದ ಮನೋಭಾವ,ವೃತ್ತಿಪರತೆ ಮತಗಳನ್ನು ಅಭ್ಯಸಿಸಿ ಅದಕ್ಕೆ ತಕ್ಕಂತೆ ಅಭಿನಯಿಸುವ ಅವರ ಶೈಲಿ ಅವರನ್ನು ಹೆಚ್ಚು ಚಾಲ್ತಿಯಲ್ಲಿ ಇಟ್ಟ ನಾಯಕಿಯನ್ನಾಗಿ ಮಾಡಿತು.
ಆಗಿನ ಕಾಲಕ್ಕೆ ಆಧುನಿಕ ವಿಚಾರಧಾರೆಯ ಮಿಸ್ ಲೀಲಾವತಿ ಅಭಿನಯ ಮೆಚ್ಚುಗೆಗೆ ಪಾತ್ರವಾದ ದ್ದಲ್ಲದೆ ಆ ಬಾರಿಯ ರಾಷ್ಟ್ರ ಪ್ರಶಸ್ತಿಯನ್ನು ಅವರಿಗೆ ತಂದುಕೊಟ್ಟಿತು. ಹಾಲಿವುಡ್ನ ಜೇಮ್ಸ್ಬಾಂಡ್ ಚಿತ್ರಗಳಿಂದ ಪ್ರೇರಿತರಾಗಿ ಕನ್ನಡದಲ್ಲಿ ಅದೇ ಮಾದರಿಯ ಜೇಡರ ಬಲೆ ಸಿನಿಮಾ ತಯಾರಾದಾಗ ಜೇಮ್ಸ್ ಬಾಂಡ್ ಚಿತ್ರದ ಮಾದರಿಯಲ್ಲಿಯೇ ಮಾದಕ ನಾಯಕನಟಿಯರ ಹುಡುಕಾಟದಲ್ಲಿದ್ದಾಗ ನಿರ್ದೇಶಕ ದೊರೆ ಭಗವಾನ್ ರವರ ದೃಷ್ಟಿ ಹರಿದದ್ದು ಜಯಂತಿಯಡೆಗೆ .ಹಾಡಿನ ಸಂದರ್ಭವೊಂದರಲ್ಲಿ ರಾಜಕುಮಾರ್ ಹಾಗೂ ಜಯಂತಿ ಇಬ್ಬರೂ ಈಜುಡುಗೆ ಧರಿಸಿ ನರ್ತಿಸಿದ ಹಾಡೊಂದು ಅಪಾರವಾಗಿ ಗಮನಸೆಳೆದಿದ್ದೆ ಅಲ್ಲದೆ ಮುಂದೆ ಆ ಚಿತ್ರದ ಸರಣಿ ಸಿನಿಮಾಗಳು ತಯಾರಾದಾಗ ಅವುಗಳಲ್ಲಿ ನಟಿಸಿದ ಮುಂದೆ ಪ್ರಖ್ಯಾತ ನಟರಾಗಿ ಹೆಸರು ಮಾಡಿದ ಲಕ್ಷ್ಮಿ ಮತ್ತು ರೇಖಾ ಅದೇ ರೀತಿ ಹುಡುಗೆಯಲ್ಲಿ ಕಾಣಿಸಿಕೊಳ್ಳಬೇಕಾಯಿತು.
ಚಿತ್ರರಂಗದಲ್ಲಿ ನಾಯಕ ನಟರಾಗಿ ದೀರ್ಘವಾಗಿ ಅಭಿನಯಿಸ ಬಹುದಾದರೂ ನಾಯಕ ನಟಿಯರಿಗೆ ಅವಧಿ ಐದರಿಂದ ಹತ್ತು ವರ್ಷಗಳು ಮಾತ್ರ. 1958 ರಲ್ಲಿ ಬೆಳಕಿಗೆ ಬಂದ ಲೀಲಾವತಿ 1968ರಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದರೆ ಆರತಿ, ಭಾರತಿ ,ಕಲ್ಪನಾ, ಮಂಜುಳಾಎಂಟು ಹತ್ತು ವರ್ಷಗಳ ಕಾಲ ನಾಯಕ ನಟಿಯರಾಗಿ ಉಳಿದರೆ ಜಯಂತಿ ಸುಮಾರು 1963 ರಿಂದ 1978ರ ಅವಧಿಯವರೆಗೂ ನಾಯಕಿ ನಟಿಯಾಗಿ ಮುಂದುವರೆದದ್ದು ವಿಶೇಷ ಅಷ್ಟೇ ಅಲ್ಲದೆ ಅವರ ಅಭಿನಯ ಸಾಮರ್ಥ್ಯ ತಮ್ಮ ಗ್ಲಾಮರನ್ನು ಹಿಡಿದಿಟ್ಟುಕೊಂಡಿದ್ದೆ ಕಾರಣವೆನ್ನಬಹುದು.
ಶರಪಂಜರ ಹಾಗೂ ಯಾವ ಜನ್ಮದ ಮೈತ್ರಿ ಚಿತ್ರದ ಮಾನಸಿಕ ರೋಗಿಯ ಪಾತ್ರದಲ್ಲಿ ಕಲ್ಪನ ,ಸಂಪತ್ತಿಗೆ ಸವಾಲ್, ಸೀತಾರಾಮ ಚಿತ್ರದ ಮಂಜುಳಾರ ವರ ಗಂಡುಬೀರಿಯ ಪಾತ್ರ ಶುಭ ಮಂಗಳ ಆರತಿ ಭಾವನಾತ್ಮಕ ಪಾತ್ರಕ್ಕೆ ಸಮಾಂತರವಾಗಿ ಜಯಂತಿ ಬಹದ್ದೂರ್ ಗಂಡು,ಶ್ರೀಮಂತನಮಗಳು, ಮಾಂಗಲ್ಯ ಭಾಗ್ಯ ,ಬಾಳು ಬೆಳಗಿತು( ಕಮಲದ ಹೂವಿಂದ ಕೆನ್ನೆಯ ಮಾಡಿದನು ಜಯಂತಿಯ ರೂಪವನ್ನು ವರ್ಣಿಸಿ ಬರೆದ ಗೀತೆಎಂದು ಹೆಸರಾಗಿತ್ತು ), ಕಸ್ತೂರಿ ನಿವಾಸ ಚಿತ್ರದಲ್ಲಿ ಕಾಣಬಹುದು.
ಯಾವುದನ್ನು ಅತಿರೇಕಕ್ಕೆ ಹೋಗದೆ ಸಹಜವಾಗಿ ಅಭಿನಯಿಸುವುದು ಅವರ ಕಲೆ. ಎಡಕಲ್ಲು ಗುಡ್ಡದಮೇಲೆ ಚಿತ್ರದ ಋಣಾತ್ಮಕ ಪತ್ರವು ಕೊನೆಯಲ್ಲಿ ನೋಡುಗರ ಸಹಾನುಭೂತಿ ಪಡೆಯುವಲ್ಲಿ ಜಯಂತಿಯವರ ಮೇರು ಅಭಿನಯವು ಕಾರಣವಾಗಿದೆ .ಅದೇ ಚಿತ್ರದ ವಿರಹ ನೂರು ನೂರು ತರಹ ಗೀತೆಗೆ ನೀಡಿರುವ ಭಾವಾಭಿನಯ ಆಕೆಯನ್ನು ಬಿಟ್ಟು ಬೇರಾರಿಗೂ ಸಾಧ್ಯವಿಲ್ಲವೇನೋ ಎನಿಸುವಂತಿದೆ ನಾಗರಹಾವು ಚಿತ್ರದಲ್ಲಿ ಚಿಕ್ಕ ಪಾತ್ರವಾದರೂ ಒನಕೆ ಓಬವ್ವನ ಕನ್ನಡ ನಾಡಿನ ವೀರರಮಣಿಯ ಗೀತೆಯ ನಟನೆ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು.
ಆ ಕಾಲದ ದಕ್ಷಿಣ ಭಾರತದ ಪ್ರಮುಖನಟರಾದ ಎಂಜಿಆರ್, ಎನ್ಟಿಆರ್, ಜೆಮಿನಿ ಗಣೇಶನ್ ಮುಂತಾಗಿ ಬಹುತೇಕ ಎಲ್ಲಾ ನಟರ ನಾಯಕಿಯಾಗಿ ಸುಮಾರು ಐನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಅವರದು .ಕನ್ನಡದಲ್ಲಿ ರಾಜಕುಮಾರ್, ಉದಯಕುಮಾರ್ ರಂತಹ ನಟರ ಜೊತೆಗಲ್ಲದೆ ಮುಂದಿನ ತಲೆಮಾರಿನ ವಿಷ್ಣುವರ್ಧನ್ ,ಅಂಬರೀಶ್ ಅವರ ಜೊತೆಗೆ ನಾಯಕ ನಟಿಯಾಗಿ ಅವರು ಅಭಿನಯಿಸಿದ್ದಾರೆ.
70ರ ದಶಕದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸಿದ ಜಯ-ವಿಜಯ ಚಿತ್ರದ ಶೂಟಿಂಗ್ ಹಳೆಕೋಟೆ ಮತ್ತು ಮಾವಿನಕೆರೆ ಕೆರೆಯ ಸುತ್ತಮುತ್ತ ನಡೆದಿತ್ತು. ಆ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಅವರು ತಂಗಿದ್ದ ಐಬಿಗೆ ಹೋಗಿ ಕಿರುಕುಳ ನೀಡಿದಾಗ ಅದನ್ನು ದಿಟ್ಟತನದಿಂದ ಎದುರಿಸಿದ್ದ ಆಗ ಸುದ್ದಿಯಾಗಿತ್ತು.
ಮೊದಲಿಗೆ ನಿರ್ದೇಶಕ ಪೇಕೆಟಿ ಶಿವರಾಮ್ ರವರನ್ನು ವರಿಸಿದ ಜಯಂತಿ ಕೃಷ್ಣಕುಮಾರ್ ಗೆ ಜನ್ಮ ನೀಡಿದರು .ಮುಂದೆ ಪೇಕೆಟಿ ಶಿವರಾಮ್ ರವರಿಂದ ದೂರವಾದ ನಂತರ ಬಂಡಾರು ಗಿರಿಬಾಬು ಜೊತೆಗೆ ಧರ್ಮ ದಾರಿ ತಪ್ಪಿತು ಮತ್ತು ವಜ್ರದ ಜಲಪಾತ ಚಿತ್ರ ನಿರ್ಮಿಸಿ ಕೈಸುಟ್ಟುಕೊಂಡರು. ನಂತರ ಅವರಿಗಿಂತ ಕಿರಿಯ ನಟ ರಾಜಶೇಖರ್ರವರನ್ನು ನಟರಾಗಿಸಿ ವಿಜಯ್ ಮತ್ತು ಏನ್ ಸ್ವಾಮಿ ಅಳಿಯಂದ್ರೆ ನಿರ್ಮಾಣ ಮತ್ತು ನಿರ್ದೇಶನ ಮಾಡಿದರೂ ಆ ಚಿತ್ರಗಳು ಕೂಡ ಯಶಸ್ವಿಯಾಗಲಿಲ್ಲ.ಆದರೆ ಅವರೊಂದಿಗಿನ ಒಡನಾಟ ಆ ಕಾಲದಲ್ಲಿ ಚಿತ್ರ ಪುರವಣಿಗಳ ಗಾಸಿಪ್ ಪುಟಗಳಿಗೆ ಆಹಾರವಾಗಿತ್ತು .
500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಒಂದು ರಾಷ್ಟ್ರ ಪ್ರಶಸ್ತಿ ಮತ್ತು ಐದು ರಾಜ್ಯ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡ ಜಯಂತಿ ತಾವು ನಿರ್ವಹಿಸಿದ ವೈವಿಧ್ಯಮಯ ಪಾತ್ರಗಳಿಂದಾಗಿ ಜನಮಾನಸದಲ್ಲಿ ಸದಾ ಹಸಿರಾಗಿಯೇ ಉಳಿಯುತ್ತಾರೆ. ಸಂದರ್ಶನ ಒಂದರಲ್ಲಿ ಯಶಸ್ಸಿನ ಬಗ್ಗೆ ಮಾತನಾಡುತ್ತಾ" ನಾನು ಸತ್ತಾಗ ಒಬ್ಬ ಅಭಿಮಾನಿಯ ಕಣ್ಣಲ್ಲಿ ನೀರು ಕಾಣಿಸಿದರೆ , ವಿಷಾದ ಮೂಡಿದರೆ ಅದುವೇ ದೊಡ್ಡ ಯಶಸ್ಸು"ಎಂದಿದ್ದರು. ಇಂದು ಅವರ ಐದನೇ ವರ್ಷದ ನೆನಪಿನ ವರ್ಷಾಚರಣೆ.