Showing posts with label Post. Show all posts
Showing posts with label Post. Show all posts

Saturday, February 15, 2025

ನನ್ನ ಬ್ಯಾಂಕ್ ಖಾತೆಯಿಂದ ಅಂಚೆ ಇಲಾಖೆ ಖಾತೆಗೆ ಹಣ ಆನ್‌ಲೈನ್‌ನಲ್ಲಿ ವರ್ಗಾಯಿಸಬಹುದೇ?

 

ಖಂಡಿತವಾಗಿ ವರ್ಗಾಯಿಸಬಹುದು. ಬ್ಯಾಂಕ್ ಖಾತೆಯಿಂದ ಅಂಚೆ ಇಲಾಖೆಯ ಖಾತೆಗೆ ಮತ್ತು ಅಂಚೆ ಇಲಾಖೆಯ ಖಾತೆಯಿಂದ ಬ್ಯಾಂಕ್ ಖಾತೆಗೆ ಅಥವಾ ಯಾರಿಗೆ ಯಾವಾಗ ಬೇಕಾದರೂ ಹಣ ವರ್ಗಾಯಿಸಬಹುದು.

  • ಇಂದು ಭಾರತೀಯ ಅಂಚೆ ಕೇವಲ ಅಂಚೆಯಾಗಿ ಉಳಿದಿಲ್ಲ, ಬದಲಿಗೆ IPPB ಎನ್ನುವ ಹೆಸರಿನಿಂದ (India post payment bank) ಬ್ಯಾಂಕಿಂಗ್ ಕ್ಷೇತ್ರಕ್ಕೂ ಕಾಲಿಟ್ಟಿದೆ.
  • ಇಲ್ಲಿನ ಉಳಿತಾಯ ಖಾತೆಗಳನ್ನ ಬ್ಯಾಂಕ್ ಗಳ ಉಳಿತಾಯ ಖಾತೆಯಂತೆಯೇ ಉಪಯೋಗಿಸಬಹುದು.
  • ATM ಕಾರ್ಡ್ ಸೌಲಭ್ಯ ಕೂಡಾ ಇದೆ. ಯಾವುದೇ ಬ್ಯಾಂಕುಗಳ ATM ನಲ್ಲಿ ಹಣ ಪಡೆಯಬಹುದು.
  • ಮೊಬೈಲ್ ರೀಚಾರ್ಜ್ ಮತ್ತು ಎಲ್ಲ ಸೇವೆಗಳ (Utility payment) ಬಿಲ್ ಪಾವತಿಸಬಹುದು.
  • NEFT ಮತ್ತು RTGS ಮೂಲಕ ಹಣ ವರ್ಗಾವಣೆ ಮಾಡಬಹುದು.

ಆದರಿಲ್ಲಿ ಅಂಚೆ ಇಲಾಖೆಯ ಉಳಿತಾಯ ಖಾತೆಯನ್ನು IPPB ಖಾತೆಯನ್ನಾಗಿ ಬದಲಾಯಿಸಿಕೊಳ್ಳಬೇಕು.

  • ಅದು ತುಂಬಾ ಸುಲಭವಾದ ಕೆಲಸ.
  • ನೇರವಾಗಿ ಅಂಚೆ ಕಛೇರಿಗೆ ಹೋಗಿ ಈ ಸೌಲಭ್ಯ ಪಡೆದುಕೊಳ್ಳಬಹುದು ಅಥವಾ ಅಂಚೆ ಇಲಾಖೆಯ IPPB ಮೊಬೈಲ್ ಅಪ್ಲಿಕೇಶನ್  ಬಳಸಿ ಕೂಡಾ ಮಾಡಿಕೊಳ್ಳಬಹುದು.
  • ಅಂಚೆ ಇಲಾಖೆಯ ಪಾಸ್ ಬುಕ್ ನಲ್ಲಿರುವ ಕೆಲವು ಮಾಹಿತಿಯನ್ನ ಅಪ್ಲಿಕೇಶನ್ ಗೆ ಫೀಡ್ ಮಾಡಬೇಕು
  • ರಿಜಿಸ್ಟರ್ ಮೊಬೈಲ್ ನಂಬರಿಗೆ OTP ಬರುತ್ತದೆ ಮತ್ತು ನಮ್ಮಿಷ್ಟದ ಪಾಸ್ ವರ್ಡ್ ಅಥವಾ Mpin ಸೆಲೆಕ್ಟ್ ಮಾಡಿಕೊಳ್ಳಬೇಕು.
  • ಎಲ್ಲವೂ ಆದ ನಂತರ ಹನ್ನೆರಡು ಅಂಕೆಯ ಹೊಸ ಎಕೌಂಟ್ ನಂಬರ್ ಬರುತ್ತದೆ. ಅದನ್ನ ಮುಂದಿನ ವಹಿವಾಟಿಗೆ ಉಪಯೋಗಿಸಬೇಕು.
  • ಅಂಚೆ ಇಲಾಖೆಯ ಮೂಲ ಖಾತೆಯಿಂದ ಈ IPPB ಖಾತೆಗೆ ಹಣ ವರ್ಗಾಯಿಸಿಕೊಳ್ಳಬೇಕು ಮತ್ತು ಬೇರೆ ಕಡೆಯಿಂದ ವರ್ಗಾವಣೆಯಾದ ಹಣ ಕೂಡಾ IPPB ಖಾತೆಗೆ ಬರುತ್ತದೆ. ಇಲ್ಲಿಂದ ಮೂಲ ಖಾತೆಗೆ ಹಣವನ್ನ ವರ್ಗಾಯಿಸಿಕೊಳ್ಳಬಹುದು.
  • ಈ Option ಗಳು ಅಪ್ಲಿಕೇಶನ್ ನಲ್ಲಿ ಇದೆ. POSB Sweep in ಮತ್ತು POSB Sweep out ಎಂದು ನಮೂದಿಸಲ್ಪಟ್ಟಿದೆ.
  • ಸದ್ಯಕ್ಕೆ ದೇಶದಾದ್ಯಂತದ ಅಂಚೆ ಇಲಾಖೆಯ ಬ್ಯಾಂಕ್ ಗೆ ಒಂದೇ IFSC ಇದೆ. ಅದು IPOS0000001.

Tuesday, February 11, 2025

ಭಾರತದಲ್ಲಿರುವ ಅಂಚೆ ವಲಯಗಳು ಎಷ್ಟು ಮತ್ತು ಅವು ಯಾವುವು?

 

ಭಾರತದಲ್ಲಿ ಒಟ್ಟು ಒಂಭತ್ತು ಅಂಚೆ ವಲಯಗಳಿವೆ.

ಅವುಗಳಲ್ಲಿ ಎಂಟು ಪ್ರಾದೇಶಿಕ ಅಂಚೆ ವಲಯಗಳು ಮತ್ತು , ಒಂಭತ್ತನೇ ವಲಯವು ಕೇವಲ ಮಿಲಿಟರಿಗಾಗಿ ಮೀಸಲಾಗಿರುವ ವಲಯವಾಗಿದೆ.

ಅವುಗಳೆಂದರೆ,

  • 1 - ದೆಹಲಿ, ಹರಿಯಾಣ, ಪಂಜಾಬ್, ಹಿಮಾಚಲಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹಾಗೂ ಚಂಡೀಗಡ.
  • 2 - ಉತ್ತರಪ್ರದೇಶ ಮತ್ತು ಉತ್ತರಾಖಂಡ.
  • 3 - ರಾಜಸ್ಥಾನ, ಗುಜರಾತ್, ದಿಯು ಮತ್ತು ದಮನ್, ದಾದ್ರಾ ಮತ್ತು ನಗರ್ ಹವೇಲಿ.
  • 4 - ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ, ಮತ್ತು ಛತ್ತೀಸ್ಗಢ.
  • 5 - ಆಂಧ್ರ‌ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ.
  • 6 - ತಮಿಳುನಾಡು, ಕೇರಳ, ಪಾಂಡಿಚೇರಿ ಮತ್ತು ಲಕ್ಷದ್ವೀಪ.
  • 7 - ಓರಿಸ್ಸಾ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಝೋರಾಂ, ತ್ರಿಪುರ, ಮೇಘಾಲಯ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಆಸ್ಸಾಂ ಮತ್ತು ಸಿಕ್ಕಿಂ.
  • 8 - ಬಿಹಾರ , ಜಾರ್ಖಂಡ್.
  • 9 -ಆರ್ಮಿ ಪೋಸ್ಟ್ ಆಫೀಸ್.

ಈ ಅಂಚೆ ವಲಯಗಳು ಪಿನ್ (PIN) Postal Index Number ಅನ್ನುವ ಆರು ಅಂಕಿಗಳ ಸಂಖ್ಯೆಯಿಂದ ವರ್ಗೀಕರಿಸಲ್ಪಟ್ಟಿವೆ.

ಪೋಸ್ಟಲ್ ಇಂಡೆಕ್ಸ್ ನಂಬರ್ ಅಥವಾ ಪಿನ್ (PIN) ಅನ್ನು ಪ್ರಥಮವಾಗಿ ೧೫ನೇ ಅಗಸ್ಟ್ ೧೯೭೫ ರಲ್ಲಿ ಜಾರಿಗೊಳಿಸಲಾಯಿತು.

ಈ ಪಿನ್ ಗೆ ಅದರದ್ದೇ ಆದ ವ್ಯಾಖ್ಯಾನವಿದೆ. ಅದೆಂದರೆ,

  • ಪಿನ್ ನ ಮೊದಲ ಅಂಕೆಯು ವಲಯವನ್ನ ಸೂಚಿಸುತ್ತದೆ.
  • ಎರಡನೇ ಅಂಕೆಯು ಆ ವಲಯದ ಉಪವಲಯವನ್ನ ಸೂಚಿಸುತ್ತದೆ.
  • ಮೂರನೇ ಅಂಕೆಯು ಉಪವಲಯದ ಜಿಲ್ಲೆಯನ್ನ ತೋರಿಸುತ್ತದೆ.
  • ಕೊನೆಯ ಮೂರು ಅಂಕೆಗಳಿಂದ ಇಂತಹುದೇ ಅಂಚೆ ಕಛೇರಿ ಅನ್ನುವುದನ್ನ ತಿಳಿಯಬಹುದು.

ಅಂಚೆ ಸೇವೆಯು ಭಾರತದಲ್ಲಿ ಪ್ರಾರಂಭವಾಗಿ ಸುಮಾರು ನೂರಾ ಐವತ್ತು ವರುಷಗಳಾದವು.

ಇಂದು‌ ಸುಮಾರು ೧೫೫೦೦೦ ಅಂಚೆ ಕಛೇರಿಗಳ ಮೂಲಕ ದೇಶದ ಮೂಲೆ ಮೂಲೆಗಳನ್ನ ಅಂಚೆಯಣ್ಣ ತಲುಪುತ್ತಾನೆ.

ಒಂದು ಕಾಲದಲ್ಲಿ ಭಾರತೀಯ ಜನರ ಜೀವನಾಡಿಯಾಗಿದ್ದ ಅಂಚೆ ಇತ್ತೀಚಿನ ದಿನಗಳಲ್ಲಿ ತನ್ನ ಇರುವಿಕೆಯನ್ನ ಹೇಳಿಕೊಳ್ಳಬೇಕಾಗಿ ಬಂದಿದೆ.

ಪತ್ರ ವ್ಯವಹಾರದ ಜೊತೆಗೆ, ನಾಗರಿಕ ಸಮುದಾಯಕ್ಕೆ ಸರಕಾರದಿಂದ ಕೊಡುವ ಸವಲತ್ತುಗಳನ್ನ ತಲುಪಿಸುವ ಸರಕಾರದ ಪ್ರತಿನಿಧಿಯಾಗಿ ಕೂಡಾ ಕೆಲಸ ಮಾಡುತ್ತಿದೆ.

ಜೊತೆಗೆ ಜೀವವಿಮೆ, ಹಣಕಾಸು ಮತ್ತು ಬ್ಯಾಂಕಿಂಗ್ ವ್ಯವಹಾರವನ್ನ ಕೂಡಾ ಪ್ರಾರಂಭಿಸಿದೆ.

ಸುಕನ್ಯಾ ಸಮೃದ್ಧಿ ಯಂತಹ ಜನಪ್ರಿಯ ಠೇವಣಿ ಯೋಜನೆಯನ್ನು ಕೂಡಾ ಪರಿಚಯಿಸಲಾಯಿತು.

ಈ ಎಲ್ಲ ಸೇವೆಯನ್ನ ಜನರಿಗೆ ಒದಗಿಸುತ್ತಿರುವ ಅಂಚೆ ನಡೆದು ಬಂದ ದಾರಿ, ಒದಗಿಸಿದ ಮತ್ತು ಒದಗಿಸುತ್ತಿರುವ ಸೇವೆ ಮಾತ್ರ ಅಪೂರ್ವವಾದದ್ದು ಮತ್ತು ಸ್ಮರಣೀಯವಾದದ್ದು.