Showing posts with label Sankranti. Show all posts
Showing posts with label Sankranti. Show all posts

Wednesday, February 12, 2025

ಸಂಕ್ರಾಂತಿ ವೇಳೆ ಸೂರ್ಯ ಪಥ ಬದಲಿಸುತ್ತಾನೆ ಅಂದರೆ ಏನರ್ಥ? ಉತ್ತರಾಯಣಕ್ಕೂ ದಕ್ಷಿಣಾಯಣಕ್ಕೂ ಏನು ವ್ಯತ್ಯಾಸ?

 ನಾವು ಪ್ರತಿದಿನವೂ ಎದ್ದು ಪೂರ್ವದಲ್ಲಿ ಹುಟ್ಟುವ ಸೂರ್ಯನನ್ನು ನೋಡುತ್ತೇವೆ, ಆದರೆ ಅವನು ಹುಟ್ಟುವ ಜಾಗ ಯಾವಾಗಲೂ ಒಂದೇ ಆಗಿರುವುದಿಲ್ಲ. ನಿಮ್ಮ ಮನೆ ಬಾಗಿಲು ಪೂರ್ವಕ್ಕಿದ್ದರೆ, ಸರಿಯಾಗಿ ನಿಮ್ಮ ಮನೆಯ ಬಾಗಿಲ ಮಧ್ಯದಲ್ಲಿಯೇ ಪ್ರತಿದಿನವೂ ಅವನು ಉದಯಿಸುವುದಿಲ್ಲ.

ಒಂದು ಕೋಲನ್ನು ನೆಲಕ್ಕೆ ಹುಗಿದು, ಪ್ರತಿನಿತ್ಯ ಬೆಳಿಗ್ಗೆ ಒಂದೇ ಸಮಯದಲ್ಲಿ ಅದರ ನೆರಳನ್ನು ಗಮನಿಸುತ್ತಾ ಬನ್ನಿ,

ಅದರ ನೆರಳು ಸದಾ ಒಂದೇ ಜಾಗದಲ್ಲಿ, ಒಂದೇ ರೇಖೆಯ ಮೇಲೆ ಬೀಳುತ್ತದೆಯೇ? ಇಲ್ಲ, ಅದು ಕೆಳಗಿನ ಚಿತ್ರದಲ್ಲಿ ತೋರಿಸಿದಂತೆ ಪ್ರತಿದಿನ ತನ್ನ ಸ್ಥಾನ ಬದಲಾವಣೆ ಮಾಡಿಕೊಳ್ಳುತ್ತಾ ಹೋಗುತ್ತದೆ.

ಹೀಗೆಯೇ ಆ ನೆರಳಿನ ಪಥ, ನಿಮ್ಮ ಬಲಕ್ಕೆ ಚಲಿಸುತ್ತಾ ಇದೆಯಾದರೆ, (ದಕ್ಷಿಣದ ಕಡೆಗೆ) ಈಗ ಸೂರ್ಯನು ಉತ್ತರಾಯಣದಲ್ಲಿದ್ದಾನೆ. ಅಂದರೆ, ನೆರಳಿನ ದಿಕ್ಕಿಗೆ ವಿರುದ್ಧವಾಗಿ ಸೂರ್ಯನ ಉದಯದ ಬಿಂದುವು ಕ್ರಮೇಣ ಉತ್ತರದ ಕಡೆಗೆ ಚಲಿಸುತ್ತಾ ಇರುತ್ತದೆ ಎಂದರ್ಥ.

ಇದು ಹೀಗೆಯೇ ಸಾಗುತ್ತಾ, ಸೂರ್ಯ ಹುಟ್ಟುವ ಜಾಗವು ಬದಲಾಗುತ್ತಾ, ಉತ್ತರದ ಕಡೆ ಸಾಗಿ, ಒಂದು ಗರಿಷ್ಠ ಬಿಂದುವನ್ನು ತಲುಪಿ (ಪೆಂಡುಲಮ್ಮಿನ ಹಾಗೆ) ಮತ್ತೆ ದಕ್ಷಿಣದ ಕಡೆಗೆ ವಾಪಸು ಬರಲಾರಂಭಿಸುತ್ತದೆ. ಅಂದಿನ ದಿನ ಸೂರ್ಯನ ದಕ್ಷಿಣಾಯನ ಆರಂಭವಾಯಿತು ಎಂದು ನಾವು ತಿಳಿದುಕೊಳ್ಳುತ್ತೇವೆ. (ಇದು ಪ್ರತಿ ವರ್ಷ ಸುಮಾರು ಜುಲೈ 15/16 ನೇ ತಾರೀಕಿನಂದು ಬರುತ್ತದೆ) ಇದನ್ನು ಕರ್ಕಾಟಕ ಸಂಕ್ರಾಂತಿ ಎನ್ನಲಾಗುತ್ತದೆ.

ಆ ದಿನ ಸೂರ್ಯೋದಯದ ಸಮಯದಲ್ಲಿ ಸೂರ್ಯನು ಕರ್ಕಾಟಕ ರಾಶಿಯ ಮೂಲಕ ಉದಯಿಸುತ್ತಾನೆ. ಸೂರ್ಯನ ಈ ರಾಶಿ ಪ್ರವೇಶವನ್ನು ಸಂಕ್ರಮಣವೆಂದು ಕರೆಯುತ್ತಾರೆ.

ಹೀಗೆ ಅಲ್ಲಿಂದ ಸೂರ್ಯನ ಬಿಂಬವು ದಕ್ಷಿಣದ ದಿಕ್ಕಿನಲ್ಲಿ ಸಾಗುತ್ತಾ, ಅಲ್ಲಿಯೂ ತನ್ನ ಗರಿಷ್ಠ ಬಿಂದುವನ್ನು ತಲುಪಿ, ಮತ್ತೆ ಉತ್ತರದ ಕಡೆಗೆ ಹೊರಳಿಕೊಳ್ಳುವ ದಿನವೇ ಉತ್ತರಾಯಣ ಪುಣ್ಯಕಾಲ ಅಥವಾ ಮಕರ ಸಂಕ್ರಾಂತಿ.

ಉತ್ತರಾಯಣ ಮತ್ತು ದಕ್ಷಿಣಾಯನ ಮಾರ್ಗದ ಮಧ್ಯಬಿಂದುವನ್ನು ವಿಷು ಎಂದು ಕರೆಯುತ್ತಾರೆ. ನಮ್ಮಲ್ಲಿ ಮಕರ ಸಂಕ್ರಾಂತಿಯ ಹಾಗೆ ಕೇರಳದಲ್ಲಿ ಇದೊಂದು ಹಬ್ಬದ ದಿನ. ಇದು ಪ್ರತೀ ವರ್ಷ ಏಪ್ರಿಲ್ 14/15 ರಂದು ದಕ್ಷಿಣದ ಕಡೆಯಿಂದ ಉತ್ತರದ ಕಡೆಗೆ ಹೋಗುವಾಗಲೂ, ಅಕ್ಟೋಬರ್ 14/ 15 ರಂದು ಉತ್ತರದಿಂದ ದಕ್ಷಿಣದ ಕಡೆ ಹೋಗುವಾಗಲೂ ಸಿಗುತ್ತದೆ. ಇದುವೇ ನಿಜವಾದ ಪೂರ್ವದಿಕ್ಕಿನ ಕೇಂದ್ರಬಿಂದು.....ಬೇಕಿದ್ದರೆ ಕೋಲಿನ ನೆರಳಿನ ಸಹಾಯದಿಂದ ಆ ಜಾಗವನ್ನು ಗುರುತು ಮಾಡಿಕೊಳ್ಳಿ. ಏಕೆಂದರೆ ಈ ನಿಜಪೂರ್ವದ ದಿಕ್ಕಿಗೆೆ ಲಂಬವಾಗಿ ಇರುವುದೇ ನಿಜ ಉತ್ತರದ ಕೇಂದ್ರ ಬಿಂದು; ಪಿರಮಿಡ್ಡುಗಳು ಅತ್ಯಂತ ಖಚಿತವಾಗಿ ಈ ದಿಕ್ಕಿನಲ್ಲಿಯೇ ತಮ್ಮನ್ನು ಹೊಂದಿಸಿಕೊಂಡಿರುವುದು.

ಒಟ್ಟಿನಲ್ಲಿ, ಪೂರ್ವದ ಆಕಾಶದಲ್ಲಿ ಉದಯಿಸುವಾಗ ಸೂರ್ಯನು ತೂಗುಗುಂಡಿನ ಹಾಗೆ ಆಚೆಯಿಂದ ಈಚೆಗೆ ಹೊಯ್ದಾಡುತ್ತಾ ಇರುತ್ತಾನೆ ಎಂದೂ, ವಿಷು ಬಿಂದುವೇ ಅದರ ಮಧ್ಯಭಾಗವೆಂದೂ, ದಕ್ಷಿಣಾಯನ, ಉತ್ತರಾಯಣ ಆರಂಭವಾಗುವ ಜಾಗಗಳನ್ನು ಅದರ ಗರಿಷ್ಠ ಮಿತಿಗಳೆಂದೂ ಕಲ್ಪಿಸಿಕೊಳ್ಳಬಹುದು.

ನಮ್ಮ ಬಹಳಷ್ಟು ದೇವಸ್ಥಾನಗಳ ವಿನ್ಯಾಸವನ್ನು ಇದೇ ಮೂರು ಬಿಂದುಗಳಲ್ಲಿ ಒಂದರ (ಕಟಕ, ವಿಷು, ಮಕರ ಸಂಕ್ರಮಣ) ಆಧಾರದ ಮೇಲೆ ವಿನ್ಯಾಸ ಮಾಡಿರುವುದನ್ನೂ, ಅವತ್ತಿನ ದಿನ ಸೂರ್ಯನ ಬೆಳಕು ನೇರವಾಗಿ ಗರ್ಭಗುಡಿಯಲ್ಲಿರುವ, ದೇವರ ವಿಗ್ರಹದ ಮೇಲೆ ಬೀಳುವಂತೆ ದೇಗುಲದ ಕಿಂಡಿಗಳ, ಅಥವಾ ದ್ವಾರದ ಸ್ಥಾನವನ್ನು ನಿರ್ಣಯಿಸಿ, ನಿರ್ಮಾಣ ಮಾಡಿರುವುದನ್ನು ಕಾಣಬಹುದು.

ಕೆಲವು ದೇಗುಲಗಳ ಶಂಕುಸ್ಥಾಪನೆಯ ಅಥವಾ ಪ್ರಾಣಪ್ರತಿಷ್ಠೆಯ ದಿನದಂದು ಸೂರ್ಯಬಿಂಬವು ಯಾವ ಜಾಗದಲ್ಲಿ ಮೂಡುತ್ತದೆಯೋ ಅದಕ್ಕೆ ಎದುರಾಗಿ ಗರ್ಭಗೃಹ ಬರುವಂತೆ ಮಾಡಿರುವುದೂ ಉಂಟು.

ತುಂಬಾ ಆಸಕ್ತಿಕರ ವಿಷಯವೇನೆಂದರೆ, ನಮ್ಮ ಕರ್ನಾಟಕದ ಯಾದಗಿರಿಯ ಬಳಿ, ಶಹಾಪುರದಿಂದ 4 ಕಿಮೀ ದೂರದಲ್ಲಿ ವಿಭೂತಿಹಳ್ಳಿ ಎಂಬ ಗ್ರಾಮವಿದ್ದು, ಅದು ಮೇಲೆ ಹೇಳಿದಂತಹ ಸೂರ್ಯನ ಪಥವನ್ನು ಅಭ್ಯಾಸ ಮಾಡಲೆಂದೇ ರೂಪಿಸಲಾಗಿದ್ದ ಒಂದು ಬಯಲು- ಖಗೋಲ ಪ್ರಯೋಗಶಾಲೆಯಾಗಿತ್ತು (ಇಂಗ್ಲೆಂಡಿನ ಸ್ಟೋನ್ ಹೆಂಜ್ ಮಾದರಿಯಲ್ಲಿ) ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. (ಚಿತ್ರ ನೋಡಿ)

ಇದಲ್ಲದೆ ಕೊಪ್ಪಳ ಜಿಲ್ಲೆಯಲ್ಲಿನ ಹನುಮಸಾಗರ ಹಾಗೂ ಮುರದೊಡ್ಡಿಯಲ್ಲಿನ ನಿರುಗಲ್ಲುಗಳು ಸಹ ಇಂಥದೇ ಉದ್ದೇಶಕ್ಕಾಗಿ ಬಲಸಲ್ಪಡುತ್ತಿದ್ದಿರಬಹುದು ಎಂಬ ಅಭಿಪ್ರಾಯವಿದೆ.