Saturday, April 12, 2025

ಯುಗಾದಿ ಪಾಡ್ಯದ ಹಿನ್ನೆಲೆ ಮತ್ತು ಆಚರಣೆ


ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ!

ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.

ಬೇಂದ್ರೆಯವರ ಕವಿವಾಣಿಯಂತೆ ಹೊಸ ಸಂವತ್ಸರ ಹರ್ಷದಾಯಕವಾಗಿರಲಿ, ಎಂದು ಸಂಭ್ರಮದಿಂದ ಖುಷಿಖುಷಿಯಾಗಿ ಆಚರಿಸುವ ಹಬ್ಬವೇ ಯುಗಾದಿ.

“ಯುಗ” ಎಂದರೆ ಹೊಸ ವರ್ಷ, ಆದಿ ಎಂದರೆ “ಆರಂಭ”. “ಋತೂನಾಂ ಕುಸುಮಾಕರ:” ಎಂಬ ಭಗವದ್ಗೀತೆಯ ವಾಣಿಯಂತೆ ಋತುಗಳರಾಜ “ವಸಂತನ” ಶುಭಾಗಮದ ದಿನವೆ “ಯುಗಾದಿ”.

ಯುಗಾದಿ ಆಚರಣೆಯ ಈ ಮಾಸದ ದಿನ ಹಲವು ಪರಂಪರೆಯ ಆರಂಭದ ದಿನವಾಗಿದೆ. ಆಸುರೀ ಶಕ್ತಿಯ ವಿರುದ್ಧ ಸಾತ್ವಿಕ ಶಕ್ತಿಯ ವಿಜಯವೇ ಯುಗಾದಿಯ ವೈಶಿಷ್ಟ್ಯ. ಈ ದಿನ ಶ್ರೀರಾಮನು ರಾವಣನನ್ನು ಕೊಂದು ಅಯೋಧ್ಯೆಗೆ ಮರಳಿ “ರಾಮ” ರಾಜ್ಯವಾಳಲು ಆರಂಭಿಸಿದ ದಿನ. ಇಂದು ಅಯೋಧ್ಯೆಯಲ್ಲಿ ಶ್ರೀ ರಾಮನ

ವಿಜಯಕ್ಕೆ ಕಾರಣರಾದ ಕಪಿ ವೀರರು ಹಾಗೂ ಅಯೋಧ್ಯೆ ಪ್ರಜೆಗಳು ಎಲ್ಲರೂ

ಮಂಗಳ ಸ್ನಾನ ಮಾಡಿ, ಸಂತಸದಿಂದ ಹೊಸ ಬಟ್ಟೆ ಧರಿಸಿ, ಮೃಷ್ಟಾನ್ನ ಭೋಜನ ಸವಿದು ಆನಂದದಿ ನಲಿದಾಡಿ ರಾಮನೊಂದಿಗೆ ಎಲ್ಲಾ ಪ್ರಜೆಗಳು ತಮ್ಮ ತಮ್ಮ ಮನೆಯ ಮುಂದೆ ವಿಜಯಪತಾಕೆ ಹಾರಿಸಿದರು. ಈ ಶುಭದಿನವು ಆ ದಿನಗಳಿಗೆ ಮಾತ್ರ ಸೀಮಿತವಾಗಬಾರದು, “ರಾಮರಾಜ್ಯ”ದ ಕನಸು ಕಾಣುತ್ತಿದ್ದು, ಅದನ್ನು ನನಸು ಮಾಡಿಕೊಂಡಿರುವ ಭಾರತೀಯರು ಅದರ ನೆನಪಿಗಾಗಿ ಯುಗಾದಿ ಹಬ್ಬದ ದಿನ ಮನೆ ಮನೆಯಲ್ಲೂ ತಳಿರು ತೋರಣಗಳಿಂದ ಅಲಂಕರಿಸಿ, ಅಭ್ಯಂಜನ ಮಾಡಿ, ಹೊಸ ಬಟ್ಟೆ ಧರಿಸಿ, ಸಿಹಿ ಭೋಜನ ಸವಿದು, ಪಂಚಾಂಗ ಶ್ರವಣ ಕೇಳಿ ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ. ಮಹಾಭಾರತದಲ್ಲೂ ಯುಗಾದಿ ಹಬ್ಬದ ಉಲ್ಲೇಖವಿದೆ.

ಈ ದಿನ ಪ್ರಪಂಚ ಸೃಷ್ಟಿಯಾದ ದಿನ ಎಂದು ಹೇಳುತ್ತಾರೆ.

“ಚೈತ್ರೇ ಮಾಸಿ ಜಗದ್ಬ್ರಹ್ಮಾ ಸಸರ್ಜ ಪ್ರಥಮೇಹನಿ!

ಶುಕ್ಲ ಪಕ್ಷೇ ಸಮಗ್ರಂತು, ತದಾ ಸೂರ್ಯೋದಯೇ ಸತಿ!!

ಬ್ರಹ್ಮನು ಈ ಜಗತ್ತನ್ನು ಚೈತ್ರ ಶುದ್ಧ ಪ್ರತಿಪದೆ ದಿನ ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದನು. ಆ ದಿನವೇ ಗ್ರಹ- ನಕ್ಷತ್ರ- ಮಾಸ- ಋತು- ವರ್ಷಾಧಿಪತಿಗಳನ್ನೂ ಸೃಷ್ಟಿಸಿ ಕಾಲಗಣನೆ ಆರಂಭಿಸಿದ. ಹಿಂದೂಗಳಿಗೆ “ಯುಗಾದಿ” ಯುಗದ ಆದಿಯ ದಿನ. ಈ ಹಬ್ಬ ಯಾವ ವಾರ ಬರುತ್ತದೆಯೋ ಆ ವಾರಾಧಿಪತಿ ಆ ವರ್ಷದ ರಾಜ.

ಭಾನುವಾರ ಬಂದರೆ “ರವಿ” ಅಂದರೆ “ಸೂರ್ಯ” ವರ್ಷದ ರಾಜನಾಗುತ್ತಾನೆ. ವರ್ಷದ ಆರಂಭದ ಸ್ಥಿತಿಯಲ್ಲಿ ಪೂರ್ತಿ ವರ್ಷದ ಸುಖ ದುಃಖದ ಪ್ರತೀಕವೆಂದು ಭಾವಿಸಿ ವರ್ಷ ಫಲವನ್ನು ಹೇಳುತ್ತಾರೆ. ಪುರಾಣಗಳ ಪ್ರಕಾರ ಕ್ರಿ, ಶ, 5ನೇ ಶತಮಾನದಲ್ಲಿದ್ದ ಪ್ರಸಿದ್ಧ ಖಗೋಳ ವಿಜ್ಞಾನಿ “ವರಾಹಮಿಹಿರಾ ಚಾರ್ಯರು” ಚೈತ್ರ ಶುದ್ಧ ಪಾಡ್ಯ ಹೊಸ ವರ್ಷವೆಂದು ದೃಢಪಡಿಸಿದ್ದಾರೆ.

ಒಂದು ಕಥೆಯ ಪ್ರಕಾರ ಸೋಮಕಾಸುರ ಎಂಬ ರಾಕ್ಷಸ ವೇದಗಳನ್ನು ಕದ್ದು ಸಮುದ್ರದ ಆಳದಲ್ಲಿ ಮುಚ್ಚಿಡಲು ಮಹಾವಿಷ್ಣು ಅವನನ್ನು ಕೊಂದು ವೇದಳಗನ್ನು ರಕ್ಷಿಸಿದ್ದು ಚೈತ್ರ ಮಾಸದ ಮೊದಲ ದಿನವಾಗಿತ್ತು. ಆದಿತ್ಯ ತನ್ನ ಕಿರಣಗಳನ್ನು ಮೊದಲ ಬಾರಿ ಭೂಮಿಗೆ ಸ್ಪರ್ಶಿಸಿದ ದಿನವೂ ಆಗಿದೆ. ವಸಂತಕಾಲ ಇದನ್ನು ಪ್ರಕೃತಿ ಹಬ್ಬ ಎಂದು ಕರೆಯುತ್ತಾರೆ ಎಲ್ಲೆಡೆಯೂ ಹೂ ಎಲೆ ಬಳ್ಳಿ ಹಣ್ಣು ಹಸಿರು ಚಿಗುರಿ ಕೋಗಿಲೆ ಗಾನಗೈದು ಮನಸ್ಸಿಗೆ ಉಲ್ಲಾಸ ಉತ್ಸಾಹ ಮತ್ತು ಶಕ್ತಿ ತುಂಬಿ ಚಟುವಟಿಕೆಯಿಂದ ಕೆಲಸ ಕಾರ್ಯಗಳನ್ನು ಮಾಡುವ ಕಾಲ.

ಯುಗಾದಿ ಹಬ್ಬದ ಆಚರಣೆ ಹೀಗಿದೆ: ಉಷ: ಕಾಲದಲ್ಲಿ ಎದ್ದು ಶ್ರೀರಾಮನನ್ನು ಸ್ಮರಿಸಿ ಮಂಗಳ ಸ್ನಾನ ಮಾಡಿ ಹೊಸ ವಸ್ತ್ರ ಧರಿಸಿ ಹಿರಿಯರ ಆಶೀರ್ವಾದ ಪಡೆಯಬೇಕು. ಮನೆ ದೇವರು ಹಾಗೂ ಶ್ರೀ ಸೀತಾರಾಮ ಲಕ್ಷ್ಮಣ ಭರತ ಶತ್ರುತ್ನ ಹನುಮಂತ ಸಹಿತ (ರಾಮನ ಪಟ್ಟಾಭಿಷೇಕದ ಫೋಟೋ) ಶ್ರೀ ರಾಮನ ಪೂಜೆ ಮಾಡಿ ಬೇವು ಬೆಲ್ಲ ಸೇವಿಸಿ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಬೇಕು. ಹಾಗೆ ಬಂಧು ಬಾಂಧವರೊಡನೆ ಸೇರಿ ಕುಳಿತು ಸತ್ಪಾತ್ರ ಬ್ರಾಹ್ಮಣರು, ಪುರೋಹಿತರು ಹೇಳುವ ಪಂಚಾಂಗ ಶ್ರವಣವನ್ನು ಕೇಳಿ ಹೊಸ ವರ್ಷದ ಫಲವನ್ನು ಕೇಳಬೇಕು. ಮಕ್ಕಳಿಂದ ದೊಡ್ಡವರ ತನಕ ರಾಶಿ ಭವಿಷ್ಯ ಕೇಳಲು ಕಾತುರರಾಗಿರುತ್ತಾರೆ. ಸಾಮಾಜಿಕ ಸಾಮರಸ್ಯ ದೃಷ್ಟಿಯಿಂದಲೂ ಈ ಹಬ್ಬ ಪ್ರಮುಖವಾಗಿದೆ. ಎಲ್ಲರ ಮನೆಗಳಲ್ಲೂ ಮನೆ ಮುಂದೆ ಸಾರಿಸಿ- ಬಣ್ಣ ಬಣ್ಣದ ರಂಗೋಲಿ ಹಾಕಿ, ಮಾವು ಬೇವಿನ ತಳಿರು ತೋರಣಗಳಿಂದ ಅಲಂಕರಿಸಿರುತ್ತಾರೆ. ಮಂಗಳ ಸ್ನಾನ ಮಾಡಿ ಕುಂಕುಮ ವಿಟ್ಟು, ಹೊಸ ಬಟ್ಟೆ ಧರಿಸಿ ಇಷ್ಟಮಿತ್ರರ ಜೊತೆಗೂಡಿ “ಹೋಳಿಗೆ ಪಾಯಸದ” ಸುಗ್ರಾಸ ಭೋಜನ ಸವಿದು ಸಂಭ್ರಮಿಸುತ್ತಾರೆ. ಯುಗಾದಿ ಹಬ್ಬದ ದಿನ ಊರಿಗೆ ಊರೇ ಸಂಭ್ರಮಿಸುತ್ತದೆ.

ಈ ದಿನ ಬೇವು ಬೆಲ್ಲ ಕೊಡುವಾಗ ಹಾಗೆ ಹಿರಿಯರಿಗೆ ನಮಸ್ಕರಿಸುವಾಗ

ಶತಾಯುರ್ವಜ್ರ ದೇಹಾಯ ಸರ್ವ ಸಂಪತ್ಕರಾಯಚ !

ಸರ್ವಾರಿಷ್ಟವಿನಾಶಾಯ ನಿಂಭಕಂದಲಭಕ್ಷಣಮ್!!

ಈ ಸ್ತೋತ್ರವನ್ನು ಹೇಳಿ ಆಶೀರ್ವಾದ ಮಾಡುತ್ತಾರೆ.

ಅರ್ಥ : ನೂರು ವರ್ಷಗಳ ಕಾಲ ವಜ್ರ ದೇಹಿಯಾಗಿರಲು, ಸರ್ವ ಸಂಪತ್ತುಗಳನ್ನು ಪಡೆಯಲು ಮತ್ತು ಸಕಲ ಅನಿಷ್ಠ ನಿವಾರಣೆಗಾಗಿಯೂ ಬೇವಿನ ಹೊಸ ಚಿಗುರನ್ನು ತಿನ್ನಬೇಕು.

ಬೇವು ಬೆಲ್ಲ: ಮನುಷ್ಯನ ಶರೀರಕ್ಕೆ ತಂಪು ನೀಡುವ ಬೇವೂ ಬೇಕು. ಉಷ್ಣ ಪ್ರಧಾನ ಬೆಲ್ಲವೂ ಬೇಕು. ಆಯುರ್ವೇದದ ಪ್ರಕಾರ ವಸಂತ ಋತುವಿನಲ್ಲಿ ಉಂಟಾಗುವ “ವಾತ ಕಫ ಪಿತ್ತ” ದಂತ ಕಾಯಿಲೆಗಳಿಗೆ ಬೇವು ಬೆಲ್ಲ ಸಿದ್ದೌಷಧ. ಹಾಗೆ “ಸುಖೇ ದುಃಖೇ ಸಮೇ ಕೃತ್ವಾ ಲಾಭಲಾಭೌ,ಜಯಾಜಯೌ” ಭಗವದ್ಗೀತೆ ಯಲ್ಲಿ ಕೃಷ್ಣ ಹೇಳಿರುವಂತೆ ಸುಖ ದುಃಖಗಳ ಸಮರಸವೇ ಜೀವನ. ದ್ವೇಷವನ್ನು ಮೆಟ್ಟಿ ಪ್ರೀತಿಯನ್ನು ಬೆಳೆಸಬೇಕು. ಭೂತಕಾಲದ ಕಹಿ ಅನುಭವ -ಭವಿಷ್ಯದ ಸಿಹಿ ಅನುಭವಕ್ಕೆ ನಾಂದಿಯಾಗಬೇಕು ಎಂಬ ಸದುದ್ದೇಶದಂತೆ “ಬೇವು ಬೆಲ್ಲ” ಇಂತಹ ಹತ್ತು ಹಲವು ಸಂಕೇತಗಳಿಂದ ಕೂಡಿದೆ.

ಕವಿ ಕುವೆಂಪುರವರ ವಾಣಿಯಂತೆ: “ಜೀವನವೆಲ್ಲ ಬೇವು ಬೆಲ್ಲ, ಬಲ್ಲವರೆಲ್ಲ ಬಲ್ಲಿದರೆಲ್ಲ, ಕಷ್ಟ ಸುಖ ಸಿಹಿ ಕಹಿ ಸಮವೆಲ್ಲ, ಕಷ್ಟ ಸುಖ ಸಿಹಿ ಕಹಿ ಸಮವೆಲ್ಲ ಬೆಟ್ಟದೊಡೆಯ ಮಲ್ಲಯ್ಯನ ದಯೆ ಇದ್ದರೆ ಭಯವಿಲ್ಲ” ಎಂಬ ಕವಿವಾಣಿಯಂತೆ ಬೇವು ಅದರಕ್ಕೆ ಕಹಿ ಉದರಕ್ಕೆ ಸಿಹಿ ಬೇವಿನ ಕಹಿಯ ಅನುಭವವಿಲ್ಲದವರಿಗೆ ಸಿಹಿಯ ಮಹತ್ವ ತಿಳಿಯದು ಬೇವು ಬೆಲ್ಲ ನಮ್ಮ ಜೀವನದ ಉದ್ದಕ್ಕೂ ಕಾಣುವ ಸುಖ- ದುಃಖ, ಹಗಲು- ರಾತ್ರಿ, ನೋವು- ನಲಿವು, ಪ್ರೀತಿ -ದ್ವೇಷ, ಗಳ ಸಂಕೇತವಾಗಿದೆ.

ಬಿದಿಗೆ ಚಂದ್ರನ ದರ್ಶನ: ಯುಗಾದಿ ಹಬ್ಬ ಪಾಂಡ್ಯದ ಮರುದಿನವೇ ಬಿದಿಗೆ.

ಬಿದಿಗೆ ದಿನ ಚಂದ್ರ ದರ್ಶನ ಮಾಡಿದರೆ ಶುಭದಾಯಕ. "ಚೌತಿ ಚಂದ್ರನನ್ನು ನೋಡಬೇಡ ಬಿದಿಗೆ ಚಂದ್ರನನ್ನು ಬಿಡಬೇಡ” ಎಂಬ ಮಾತಿದೆ. ಹಾಗೆ ಯುಗಾದಿ ಬಿದಿಗೆ ಚಂದ್ರನ ದರ್ಶನ ಮಾಡಿದರೆ ವರ್ಷವೆಲ್ಲ ಸುಖವಾಗಿರುತ್ತಾರೆ. ಬಿದಿಕೇರಿನ ಚಂದ್ರ ಕಾಣುವುದು ಕಷ್ಟ ಒಂದು ಕಡ್ಡಿ ಗಾತ್ರ ಇರುತ್ತಾರೆ ಆದರೂ ಆ ಚಂದ್ರನನ್ನು ಹುಡುಕಿ ನೋಡಿ ದರ್ಶನ ಮಾಡಿ ನಾವು ಧರಿಸಿದ ಬಟ್ಟೆಯಿಂದ ಒಂದು ಎಳೆ ತೆಗೆದು ಚಂದ್ರನಿಗೆ ಅರ್ಪಿಸಿದರೆ ಆ ವರ್ಷವೆಲ್ಲ ಸುಖ ಸಮೃದ್ಧ ತುಂಬಿರುತ್ತದೆ.

ಚಂದ್ರಮಾನ ಯುಗಾದಿಯ ಆಚರಣೆ ಕರ್ನಾಟಕ, ಆಂಧ್ರ, ಕೇರಳ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಲ್ಲಿ ಆಚರಿಸುತ್ತಾರೆ. ತಮಿಳುನಾಡು ಹಾಗೂ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮತ್ತು ನಮ್ಮ ಉಡುಪಿ ಮಂಗಳೂರು ಗಳಲ್ಲಿ ಸೂರ್ಯನು ಮೇಷ ರಾಶಿ ಪ್ರವೇಶಿಸುವ ದಿನ “ಸೌರಮಾನ ಯುಗಾದಿ” ಎಂದು ಆಚರಿಸುತ್ತಾರೆ. ವೈಜ್ಞಾನಿಕ ದೃಷ್ಟಿಯಿಂದ ಈ ಹಬ್ಬದಲ್ಲಿ ಬೇವಿನ ಚಿಗುರು ಹೂಗಳನ್ನು ಬೆಲ್ಲ ಜೀರಿಗೆಗಳೊಂದಿಗೆ ಮಿಶ್ರಣ ಮಾಡಿ ಪ್ರಸಾದವಾಗಿ ಸೇವಿಸುವುದು, ಧಾರ್ಮಿಕವಾಗಿಯೂ, ವೈದ್ಯಕೀಯವಾಗಿಯೂ, ಮಹತ್ವದ್ದಾಗಿದೆ.

ನಾವು ವಾಸಿಸುವ ಭೂಮಿ ಧರ್ಮ ಕ್ಷೇತ್ರವು ಹೌದು ಕರ್ಮ ಕ್ಷೇತ್ರವು ಹೌದು ನಮ್ಮ ಒಳಿತಿಗಾಗಿ ಸುಖ ಸಂತೋಷಕ್ಕಾಗಿ ಸಂಘಟನೆಗಾಗಿ ಒಂದು ಬಾಂಧವ ಮಿತ್ರರೊಂದಿಗೆ ಬೆರೆಯಲು ಇಂತಹ ಹಲವು ಹಬ್ಬ ಹರಿದಿನಗಳನ್ನು ಆಚರಿಸುತ್ತಾ ಬಂದಿದ್ದೇವೆ.