ಇಂದು ಯಾವುದೇ ಇನ್ಸೂರೆನ್ಸ್ ಆದರೂ ಆನ್ಲೈನ್ ನಲ್ಲಿ ಕೊಂಡುಕೊಳ್ಳಬಹುದು ಮತ್ತು ಇದು ಸ್ವಲ್ಪ ಮಟ್ಟಿಗೆ ಜನಪ್ರಿಯ ಕೂಡಾ ಆಗುತ್ತಿದೆ. ಕೆಲವು ಪಾಲಿಸಿಗಳಿಗೆ ಸ್ವಲ್ಪ ಮಟ್ಟಿನ ರಿಯಾಯಿತಿ ಕೂಡಾ ಸಿಗುತ್ತದೆ.
- ಕೆಲವು ನಿರ್ಧಿಷ್ಟ ಮತ್ತು ವಿಶೇಷ ಪಾಲಿಸಿಗಳನ್ನು ಆನ್ಲೈನ್‌ನಲ್ಲಿಯೇ ಕೊಂಡುಕೊಳ್ಳಬೇಕಾಗುತ್ತದೆ. ಅವು ಆಫ್ಲೈನ್ ನಲ್ಲಿ ಸಿಗುವುದಿಲ್ಲ.
- ಅದಕ್ಕೆ ಸಂಬಂಧ ಪಟ್ಟ ಟರ್ಮ್ಸ್ ಮತ್ತು ಕಂಡೀಶನ್ ಗಳನ್ನು ಪಾಲಿಸಿಯ ಅರ್ಜಿಯ ಜೊತೆಗೇ ಲಗತ್ತಿಸಿರುತ್ತಾರೆ. ಅವನ್ನು ಓದಿದ್ದೇನೆ ಎಂದು ಒಪ್ಪಿಕೊಂಡ ನಂತರವೇ ಅರ್ಜಿಯು ಪೂರ್ತಿಯಾಗುತ್ತದೆ. ಅಂದರೆ ಟರ್ಮ್ಸ್ ಮತ್ತು ಕಂಡೀಶನ್ ಗಳನ್ನು ಅಕ್ಸೆಪ್ಟ್ ಮಾಡಲೇಬೇಕು , ಓದದಿದ್ದರೂ ಕೂಡಾ.
- ಒಂದು ವೇಳೆ ಅವನ್ನು ವೆಬ್ ಪುಟದಲ್ಲಿ ಓದಲು ಕಷ್ಟವಾದರೆ ಡೌನ್ ಲೋಡ್ ಮಾಡಿಕೊಂಡು ಓದಬಹುದು. ನಂತರ ಅರ್ಜಿಯನ್ನು ಭರ್ತಿಮಾಡಬಹುದು. ನಾವು ಭರ್ತಿ ಮಾಡಿದ ಅರ್ಜಿಯು ಹಾಗೆಯೇ ಸೇವ್ ಆಗಿರುತ್ತದೆ.
- ಇನ್ಸೂರನ್ಸ್ ಕಂಪನಿಗೆ ಕರೆಮಾಡಿ ನಮಗೆ ಬೇಕಾದ ಪಾಲಿಸಿಯ ಸಂಪೂರ್ಣ ಟರ್ಮ್ಸ್ ಮತ್ತು ಕಂಡೀಶನ್ ಗಳನ್ನು ನಮ್ಮ ಮೇಲ್‌ಗೆ ಕಳುಹಿಸುವಂತೆ ಕೂಡಾ ಕೇಳಬಹುದು. ಇವೆಲ್ಲವೂ ನಮಗೆ ಒಪ್ಪಿಗೆಯಾದರೆ ಮಾತ್ರ ಅರ್ಜಿಯನ್ನು ಭರ್ತಿ ಮಾಡಬಹುದು.
ಅರ್ಜಿ ಭರ್ತಿ ಮಾಡಿದ ನಂತರ ಮೆಡಿಕಲ್ ಟೆಸ್ಟ್ ಗಳನ್ನು ಮಾಡುತ್ತಾರೆ. ಅದಕ್ಕೆ ನಾವು ಯಾವುದೇ ಶುಲ್ಕ ಕೊಡಬೇಕಿಲ್ಲ. (ಪಾಲಿಸಿಯ ಪ್ರಕಾರ ಬೇಕಿದ್ದರೆ ಮಾತ್ರ ) ಅವರು ನಿಯೋಜಿಸಿದ ಲ್ಯಾಬ್ ನವರು ಮನೆಗೆ ಬಂದು ಅವರಿಗೆ ಬೇಕಾದ ಪರೀಕ್ಷೆಗಳನ್ನು ಮಾಡಿಕೊಂಡು ಹೋಗುತ್ತಾರೆ. ಅಗತ್ಯವಿದ್ದರೆ ಅಥವಾ ಮನೆಯಲ್ಲಿ ಮಾಡಲಾಗದ ಟೆಸ್ಟ್‌ಗಳು ಇದ್ದರೆ ಆಸ್ಪತ್ರೆಗೆ ಅಥವಾ ಲ್ಯಾಬ್‌ಗೆ ನಾವೇ ಹೋಗಬೇಕಾಗುತ್ತದೆ. ಇವೆಲ್ಲವೂ ಮುಗಿದ ನಂತರ ಎಲ್ಲವೂ ಸರಿ ಇದ್ದರೆ ಮಾತ್ರವೇ ಪಾಲಿಸಿಯನ್ನು ಕೊಡುತ್ತಾರೆ. ಪಾಲಿಸಿಯು ಯಾವುದೇ ಕಾರಣದಿಂದ ತಿರಸ್ಕರಿಸಲ್ಪಟ್ಟರೆ ನಾವು ಕಟ್ಟಿದ ಹಣ (ಮೊದಲೇ ಕಟ್ಟಿದ್ದರೆ ) ಪೂರ್ತಿಯಾಗಿ ವಾಪಸ್ ಸಿಗುತ್ತದೆ.
- ಎಲ್ಲವೂ ಸರಿ ಇದ್ದು ಪಾಲಿಸಿಯು ನಮ್ಮ ಕೈ ಸೇರಿದ ಮೇಲೆ ಕೂಡಾ, ಪಾಲಿಸಿ ಬಾಂಡ್‌ನಲ್ಲಿರುವ ವಿಷಯಗಳನ್ನು ಮತ್ತೊಮ್ಮೆ ಓದಿಕೊಂಡು ನಾವು ಅದನ್ನು ರದ್ದು ಪಡಿಸಲು ಕೋರಬಹುದು.
- ಅದಕ್ಕೆ ನಮಗೆ ಪಾಸಿಯು ನಮ್ಮ ಕೈ ಸೇರಿದ ಮೇಲೆ ಹದಿನೈದು ದಿನದ ಸಮಯ ಇರುತ್ತದೆ. (Free look period) ನಾವು ನಮಗಿಷ್ಟ ಬಂದ ಕಾರಣ ಕೊಟ್ಟು ಪಾಲಿಸಿಯನ್ನು ರದ್ದು ಪಡಿಸಿಕೊಳ್ಳಬಹುದು. ಇಲ್ಲಿ ಮೆಡಿಕಲ್ ಟೆಸ್ಟ್‌ಗೆ ಸಂಬಂಧಿಸಿದ ಖರ್ಚುಗಳನ್ನು ಕಡಿತಗೊಳಿಸಿ ನಾವು ಕಟ್ಟಿದ ಕಂತಿನ ಹಣವನ್ನು ಮರಳಿಸುತ್ತಾರೆ.
ಈ ನಿಯಮವು ಹೆಲ್ತ್ ಇನ್ಸೂರೆನ್ಸ್ , ಲೈಫ್ ಇನ್ಸೂರೆನ್ಸ್ ಮತ್ತು ಟರ್ಮ್ ಇನ್ಸೂರೆನ್ಸ್ ಪಾಲಿಸಿಗಳಿಗೆ ಅನ್ವಯಿಸುತ್ತದೆ. ಆದರೆ ಯುನಿಟ್ ಲಿಂಕ್ ಪಾಲಿಸಿಗಳಾದಲ್ಲಿ ನಮ್ಮ ಪಾಲಿಸಿಯ ಅಂದಿನ ಮೌಲ್ಯವನ್ನು ಹಿಂದಿರುಗಿಸುತ್ತಾರೆ. ಸಾಮಾನ್ಯವಾಗಿ ಯುನಿಟ ಲಿಂಕ್ ಪಾಲಿಸಿಗಳಿಗೆ ಮೆಡಿಕಲ್ ಟೆಸ್ಟ್ ಇರುವುದಿಲ್ಲ. ಆದರೆ ಕೆಲವು ತೆರಿಗೆ ಮತ್ತು ಶುಲ್ಕ ಗಳನ್ನು ಕಡಿತಗೊಳಿಸುತ್ತಾರೆ.
ಆನ್ಲೈನ್ ಪಾಲಿಸಿ ಖರೀದಿಸುವಾಗಿನ ಎಲ್ಲ ವಿಧಾನಗಳೂ ಕೂಡಾ ಪಾರದರ್ಶಕವಾಗಿ ಇರುತ್ತವೆ. ಯಾವುದೇ ಮಾಹಿತಿಗಳನ್ನು ಬೇಕಿದ್ದರೂ ಕೇಳಿ ಪಡೆಯಬಹುದು.