ಸತ್ಯಶೋಧಕನೊಬ್ಬ ಪವಿತ್ರ ತ್ರಿವೇಣಿ ಸಂಗಮದಲ್ಲಿ ಮುಳುಗಿ, ಆ ನದಿದೇವತೆಗೆ ಕೇಳಿದ "ನೀನು ನನ್ನ ಪಾಪಗಳನ್ನು ಸಂಗ್ರಹಿಸಿರುವೆಯಾ?" ಎಂದು. *ನದಿ "ಹೌದು" ಎಂದು ಉತ್ತರಿಸಿತು.
"ನೀನು ಅವುಗಳನ್ನು ಏನು ಮಾಡುತ್ತೀ?" ಎಂದು ಕೇಳಿದ.
ನದಿದೇವತೆ ನಕ್ಕು ಹೇಳಿತು "ನಾನು ಅವುಗಳನ್ನು ಸಮುದ್ರಕ್ಕೆ ಕಳಿಸುತ್ತೇನೆ.
ಕುತೂಹಲದಿಂದ ಅವನು ಸಮುದ್ರದ ಬಳಿಗೆ ಹೋಗಿ, "ನೀವು ನನ್ನ ಪಾಪಗಳನ್ನು ತ್ರಿವೇಣಿ ನದಿಗಳ ಮೂಲಕ ಸ್ವೀಕರಿಸಿದ್ದೀರಾ?" ಎಂದು ಕೇಳಿದ.
ಸಮುದ್ರವು "ಹೌದು" ಎಂದು ಉತ್ತರಿಸಿತು.
ನೀವು ಅವುಗಳನ್ನು ಏನು ಮಾಡುತ್ತೀರಿ?" ಎಂದು ಕೇಳಿದ.
ಸಮುದ್ರವು ಮುಗುಳ್ನಕ್ಕು, "ನಾನು ಅವುಗಳನ್ನು ಮೋಡಗಳಿಗೆ ಕಳಿಸುತ್ತೇನೆ."
ಅವನು ಮೋಡಗಳ ಕಡೆಗೆ ನೋಡುತ್ತ "ನೀವು ನನ್ನ ಪಾಪಗಳನ್ನು ಸಮುದ್ರದಿಂದ ಸ್ವೀಕರಿಸಿದ್ದೀರಾ?" ಎಂದು ಕೇಳಿದ.
ಮೋಡಗಳು "ಹೌದು" ಎಂದು ಉತ್ತರಿಸಿದವು.
"ನೀವು ಅವುಗಳನ್ನು ಏನು ಮಾಡುತ್ತೀರಿ?" ಎಂದು ಕೇಳಿದ.
ಮೋಡಗಳು ಪಿಸುಗುಟ್ಟು, "ನಾವು ಅವುಗಳನ್ನು ಮಳೆಯಂತೆ ಸುರಿಸುತ್ತೇವೆ"
"ಯಾರ ಮೇಲೆ?" ಎಂದು ಕೇಳಿದ
ಮೋಡಗಳು ಮುಗುಳ್ನಕ್ಕವು, "ಖಂಡಿತ ನಿನ್ನ ಮೇಲೆ."
ಇದರಿಂದ ಸತ್ಯಶೋಧಕನಿಗೆ ಒಂದು ಆಳವಾದ ಅರಿವು ಮೂಡಿತು: ನಾವು ಎಲ್ಲಿಗೆ ಹೋದರೂ ಕರ್ಮವು ನಮ್ಮನ್ನು ಹಿಂಬಾಲಿಸಿ ಬರುತ್ತದೆ. ಪ್ರಕೃತಿಯು ನಮಗೆ ಆಗಾಗ ಪೆಟ್ಟು ಕೊಟ್ಟು ಕೊಟ್ಟು ಒಳ್ಳೆಯವರನ್ನಾಗಿಸಲು ತರಬೇತಿ ಕೊಡುತ್ತದೆ. ಒಳ್ಳೆಯದನ್ನು ಮಾಡಲು ನೆನಪಿಸುತ್ತದೆ, ಏಕೆಂದರೆ ಜಗತ್ತು ದುಂಡಗಿರುವುದರಿಂದ ನಮ್ಮ ಕ್ರಿಯೆಗಳು ಅಂತಿಮವಾಗಿ ನಮ್ಮ ಬಳಿಗೇ ಸಾರಿ ಮರಳಿ ಬರುತ್ತವೆ.
ನಿಷಕರ್ಷೆ : ಯಾತ್ರೆಗೆ ಹೋಗಿ ಬಂದವರ ಮನಸ್ಸಿಗೆ ಯಾತ್ರೆಯ ಖುಶಿ ಎಷ್ಟು ಸಿಗಬೇಕೋ ಅಷ್ಟು ಸಿಗುತ್ತದೆ. ಆದರೆ ಪಾಪ-ಪುಣ್ಯಗಳ ಲೆಕ್ಖಕ್ಕೂ ತೀರ್ಥಯಾತ್ರೆಗೂ ಯಾವ ಸಂಬಂಧವೂ ಇಲ್ಲ.
ನಾಸಿಕ ಎಂದರೆ ಮೂಗು. ನಾಸಿಕದಲ್ಲಿ ಎಡ ಮತ್ತು ಬಲ ಹೊರಳೆಗಳಿವೆ. ಅವೇ ಇಡಾ ಮತ್ತು ಪಿಂಗಳ ನಾಡಿಗಳು. ಯೋಗಭಾಷೆಯಲ್ಲಿ ಅವುಗಳಿಗೆ ಗಂಗಾ ಮತ್ತು ಯಮುನಾ ಎಂತಲೂ ಅನ್ನುವರು. ಇಡಾ ಮತ್ತು ಪಿಂಗಳ ನಾಡಿಗಳು ಕಾಣುತ್ತವೆ ನಡುವಿನ ಸುಷುಮ್ನ ಕಾಣುವುದಿಲ್ಲ. ಹಾಗೆ ಗಂಗಾ ಯಮುನಾ ಕಾಣುತ್ತವೆ, ಸರಸ್ವತಿ ಕಾಣುವುದಿಲ್ಲ.
ನಾಸಿಕ ಎಂದರೆ ಮೂಗು. ವಾರ ಎಂದರೆ ದಾರಿ. ಅಗ್ರ ಎಂದರೆ ಮೇಲಿನವ. ನಾಸಿಕದ ಇಡಾ ಮತ್ತು ಪಿಂಗಳ ನಾಡಿಗಳ ದ್ವಾರಗಳ ಮೂಲಕ ಮೇಲೆ ಹೋದರೆ ಎರಡೂ ಹುಬ್ಬುಗಳ ನಡುವೆ ಅಲ್ಲಿ ಮೂರೂ ನಾಡಿಗಳು ಕೂಡುವ ತ್ರಿವೇಣಿ ಸಂಗಮ ಇದೆ. ನಮ್ಮ ಮನಸ್ಸು ಮತ್ತು ಪ್ರಾಣಗಳು ಜೊತೆಗೂಡಿ ಅಲ್ಲಿ ಮಿಂದರೆ ಮನುಷ್ಯನು ಕರ್ಮಾತೀತನಾಗುವನು. ಮೋಕ್ಷಕ್ಕೆ ಮಾರ್ಗವಾಗುವುದು. ಆದರೆ ಎಲ್ಲರೂ ಅದನ್ನು ಹೊರಗೆ ಹುಡುಕುವುದರಲ್ಲಿಯೇ ಖುಶಿಪಡುತ್ತಾರೆ. ಏಕೆಂದರೆ ಇಂದ್ರಿಯಗಳು ಯಾವಾಗಲೂ ಹೊರಮುಖವಾಗಿಯೆ ಸೆಳೆಯುತ್ತವೆ.
"ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡು, ಮೋಕ್ಷ ಸಾಧನೆ ಆಗುತ್ತದೆ", "ಮೂರು ಗುಟುಕು ನೀರು ಕುಡಿ". "ನಿನ್ನ ಸ್ವಂತ ಕೊಳದ ನೀರನ್ನು ಕುಡಿ" "ಮೇಲ್ ಸ್ಥಾನದಲ್ಲಿ ನಿಂತು ಕೂಗು ಸ್ವರ್ಗಕ್ಕೆ ಕೇಳಿಸುತ್ತದೆ". ಇವೆಲ್ಲವೂ ಬೇರೆಬೇರೆ ಮಹಾತ್ಮರು ತಮತಮಗೆ ಆದ ಒಂದೇ ರೀತಿಯ ಅನುಭವವನ್ನು ತಮ್ಮ ತಮ್ಮದೇ ಆದ ಭಾಷೆಯಲ್ಲಿ ತಮ್ಮ ತಮ್ಮ ಅನುಯಾಯಿಗಳಿಗೆ ಹೇಳಿರುವರು. ಈ ಆಂತರಿಕ ತತ್ವವನ್ನು ಅರಿತು ಅಂತರಂಗದಲ್ಲಿ ಆಚರಿಸಿದವರಿಗೆ ಮೋಕ್ಷ ಪ್ರಾಪ್ತಿ ನಿಶ್ಚಿತ. ಹೊರಗಿನ ತ್ರಿವೇಣಿ ಸಂಗಮದ ಸ್ನಾನ ಅದರ ಸಾಂಕೇತಿಕ ಸಂಪ್ರದಾಯ. ಅದು ಇಂದ್ರಿಯಗಳ ತೃಪ್ತಿಗೆ ಹಾಗೂ ಮನಸ್ಸಿನ ಸಂತೋಷಕ್ಕೆ ಸೀಮಿತ.