13ನೇ ಶತಮಾನದ ಅಂತ್ಯದ ವೇಳೆಗೆ ದಕ್ಷಿಣ ಭಾರತದ ಮೇಲೆ ಮುಸಲ್ಮಾನರು ಸ್ಥಳೀಯ ರಾಜರ ಮೇಲೆ ದಾಳಿಗಳನ್ನು ನಡೆಸುತ್ತಿದ್ದರು. ಅವರ ಆಕ್ರಮಣಗಳನ್ನು ಪ್ರಬಲವಾಗಿ ಎದುರಿಸಲು ವಿಜಯನಗರ ಸಾಮ್ರಾಜ್ಯವು ಸ್ಥಾಪನೆಯಾಯಿತು. ಸಂಗಮ ವಂಶದ ಸಹೋದರರುಗಳಾದ ಹರಿಹರ ಮತ್ತು ಬುಕ್ಕರು ಕ್ರಿ.ಶ. 1336-1342ರ ನಡುವೆ ಪ್ರಾರಂಭದಲ್ಲಿ ಆನೆಗೊಂದಿಯನ್ನು ನಂತರ ಹಂಪಿಯನ್ನು ರಾಜಧಾನಿಯಾಗಿಸಿಕೊಂಡು ವಿಜಯನಗರ ರಾಜ್ಯವನ್ನು ಸ್ಥಾಪಿಸಿದರು. ಈ ರಾಜ್ಯವು ಕಾಲಕ್ರಮದಲ್ಲಿ ಬಲಗೊಂಡು ವರ್ಧಿಸಿ ಸಾಕಷ್ಟು ಸಮಯದವರೆಗೆ ದಕ್ಷಿಣ ಭಾರತದ ಬಹು ಭಾಗಗಳನ್ನು ಒಳಗೊಂಡಿತ್ತು. ಸಾಮ್ರಾಜ್ಯದ ಉತ್ತುಂಗ ಕಾಲದಲ್ಲಿ ಅದು ಉತ್ತರದ ಕೃಷ್ಣಾ ನದಿಯವರೆಗೆ, ದಕ್ಷಿಣದಲ್ಲಿ ಹಿಂದೂ ಮಹಾಸಾಗರದವರೆಗೆ ಮತ್ತು ಪೂರ್ವ-ಪಶ್ಚಿಮ ಕಡಲ ತೀರದವರೆಗೂ ವ್ಯಾಪಿಸಿತ್ತು. ವಿಜಯನಗರದ ವಿವಿಧ ಅರಸು ಮನೆತನಗಳಾದ ಸಂಗಮ, ಸಾಳುವ, ತುಳುವ ಮತ್ತು ಅರವೀಡು ವಂಶಗಳಿಗೆ ಸೇರಿದ ಹಲವಾರು ಅರಸರುಗಳು ಎರಡೂ ಕಾಲು ಶತಮಾನಗಳಿಗಿಂತ ಅಧಿಕ ಕಾಲ ಆಳ್ವಿಕೆ ನಡೆಸಿ ಕ್ರಿ.ಶ. 1565ರಲ್ಲಿ ಅಂತಿಮವಾಗಿ ಪತನವನ್ನು ಹೊಂದಿದರು. ರಕ್ಕಸಗಿ-ತಂಗಡಗಿ (ರಕ್ಕಸತಂಗಡಿ) (ತಾಳಿಕೋಟೆ) ನಿರ್ಣಾಯಕ ಯುದ್ಧವು ರಾಜಧಾನಿ ಮತ್ತು ಸಾಮ್ರಾಜ್ಯದ ಮೇಲೆ ಶಾಶ್ವತ ದುರಂತವನ್ನು ಉಂಟುಮಾಡಿತು. ಅದರ ತರುವಾಯವೂ ಅರವೀಡು ವಂಶದ ಅರಸರು ಪೆನುಗೊಂಡ ಮತ್ತು ಚಂದ್ರಗಿರಿಯನ್ನು ತಮ್ಮ ರಾಜಧಾನಿಯಾಗಿಸಿಕೊಂಡು ಒಂದು ಶತಮಾನ ಉಳಿದುಬಂದರು. ಆದರೆ ವಿಜಯನಗರಪಟ್ಟಣವು ತಾನು ಕಳೆದುಕೊಂಡ ವೈಭವವನ್ನು ಮರಳಿ ಪಡೆಯಲಾಗಲಿಲ್ಲ.
ವಿಜಯನಗರ ಸಾಮ್ರಾಜ್ಯದ ಪ್ರಮುಖ ಅರಸರೆಂದರೆ ಇಮ್ಮಡಿ ಹರಿಹರ (ಕ್ರಿ.ಶ. 1377-1404), ಪ್ರೌಢದೇವರಾಯ (ಕ್ರಿ.ಶ. 1422-1446), ಕೃಷ್ಣದೇವರಾಯ (ಕ್ರಿ.ಶ. 1509-1530). ಇವರುಗಳು ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಪ್ರಸಿದ್ಧ ಅರಸರುಗಳು. ವಿಜಯನಗರದ ವೈಭವವನ್ನು ಕಾಣಲು ಅನೇಕರು ಭೇಟಿ ನೀಡಿದರು. ಅರೇಬಿಯಾ, ಇಟಲಿ, ಪರ್ಷಿಯಾ, ಪೊರ್ಚಗಲ್ ಮತ್ತು ರಷ್ಯಾಗೆ ಸೇರಿದ ಫೆರಿಸ್ತಾ (ಕ್ರಿ.ಶ. 1378), ಅಬ್ದುಲ್ ರಜಾಕ್ (ಕ್ರಿ.ಶ. 1442-1443), ಡೊಮಿಂಗೊ ಪಯಾಸ್ (ಕ್ರಿ.ಶ. 1520), ಫೆರ್ನಾವೊ ನ್ಯೂನಿಜ್ (ಕ್ರಿ.ಶ. 1535-1537), ಇಬ್ಬ ಬತೂತ (ಕ್ರಿ.ಶ. 16ನೇ ಶತಮಾನ), ಡ್ಯೂರೆಟ್ ಬಾರ್ಬೋಸ (ಕ್ರಿ.ಶ. 1500-1516) ನಿಕೊಲೊ ಕೊಂಟಿ ಮುಂತಾದ ವಿದೇಶಿ ಪ್ರವಾಸಿಗರು ಇಲ್ಲಿಗೆ ಬಂದು ವಿಜಯನಗರ ಸಾಮ್ರಾಜ್ಯದ ವೈಭವವನ್ನು ಅತ್ಯಂತ ಕೂಲಂಕಷವಾಗಿ ತಮ್ಮ ಪ್ರವಾಸ ಕಥಾನಕದಲ್ಲಿ ದಾಖಲಿಸಿದ್ದಾರೆ.
ವಿಜಯನಗರದ ಚಾರಿತ್ರಿಕ ಮೌಲ್ಯ ಮತ್ತು ಅವರ ಕಾಲದ ಕೊಡುಗೆಗಳಾದ ಬೃಹತ್ ಪ್ರಮಾಣದ ಧಾರ್ಮಿಕ, ಲೌಕಿಕ ಮತ್ತು ರಕ್ಷಣಾ ವಾಸ್ತು ನಿರ್ಮಿತಿಗಳನ್ನು ಪರಿಗಣಿಸಿ ಯುನೆಸ್ಕೊ 1986ರಲ್ಲಿ ಹಂಪಿಗೆ ವಿಶ್ವ ಪರಂಪರೆ ನೆಲೆ ಸ್ಥಾನ ನೀಡಿ ಗುರುತಿಸಿತು. ವಿಜಯನಗರ ಪಟ್ಟಣದಲ್ಲಿ ಹಾಯ್ದು ಹೋಗುವ ನೀರಾವರಿ ಮತ್ತು ನೀರು ಸರಬರಾಜು ವ್ಯವಸ್ಥೆಯಿಂದ ಕೂಡಿದ ಸೂಕ್ಷ್ಮ ಮತ್ತು ರಚನಾ ಯೋಜನೆಗಳು, ದಕ್ಷ ನಗರ ಬಜಾರುಗಳು ಮಂಟಪಗಳು ಮತ್ತು ಇನ್ನೂ ಅನೇಕ ಪ್ರಾಚೀನ ಅವಶೇಷಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಮತ್ತು ರಾಜ್ಯ ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯವರು ಬಹುತೇಕ ರಕ್ಷಿಸುತ್ತಲಿದ್ದಾರೆ. ಹಂಪಿಯ ಸ್ಮಾರಕಗಳು ಸುಮಾರು 40 ಚ.ಕಿ.ಮೀ. ನಷ್ಟು ವಿಶಾಲ ಪ್ರದೇಶದಲ್ಲಿ ವಿಸ್ತಾರವಾಗಿ ವ್ಯಾಪಿಸಿದ್ದು ಅವುಗಳು ಅಧಿಕವಾಗಿ ತುಂಗಭದ್ರಾ ನದಿಯ ಬಲದಂಡೆಯಲ್ಲಿವೆ. ನದಿಯ ಎಡದಂಡೆಯಲ್ಲಿ ಆನೆಗೊಂದಿಯಿದ್ದು ಅಲ್ಲಿಯೂ ವಿಜಯನಗರ ಕಾಲಕ್ಕೆ ಸೇರಿದ ಕುರುಹಗಳಿವೆ. ಸ್ಮಾರಕಗಳಿಗೆ ಭೇಟಿ ನೀಡಲು ಪ್ರವಾಸಿಗರು ಎರಡು ಮಾರ್ಗಗಳನ್ನು ಆಯ್ಕೆ ಮಾಡಿ ಕೊಳ್ಳಬಹುದು.