ಮ್ಯೂಚುವಲ್ ಫಂಡ್ ವ್ಯವಸ್ಥೆಯಲ್ಲಿ ಹಲವಾರು ಹೂಡಿಕೆದಾರರಿಂದ ಹಣ ಸಂಗ್ರಹಿಸಿ ಅದನ್ನು ವಿವಿಧ ಕಂಪನಿಗಳ ಷೇರುಗಳಲ್ಲಿ, ಬಾಂಡ್ ಗಳಲ್ಲಿ ತೊಡಗಿಸಲಾಗುತ್ತದೆ. ಇಂತಹ ವ್ಯವಸ್ಥೆಯಲ್ಲಿ ಫಂಡ್ ಮ್ಯಾನೇಜರುಗಳಿರುತ್ತಾರೆ. ಅವರೇ ಯಾವ ಕಂಪನಿಯ ಷೇರುಗಳಲ್ಲಿ ಹಣ ತೊಡಗಿಸಬೇಕು ಅಥವಾ ಯಾವ ಬಾಂಡ್ ತೆಗೆದುಕೊಂಡರೆ ಲಾಭವಿದೆ , ಯಾವಾಗ ಖರೀದಿಸಬಹುದು, ಎಷ್ಟು ಖರೀದಿಸಿದರೆ ಲಾಭ ಎಂಬುದನ್ನೆಲ್ಲ ಅಧ್ಯಯನ ನಡೆಸಿ ಹೂಡಿಕೆದಾರರ ಪರವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದರಿಂದ ಬಂದ ಲಾಭಾಂಶವನ್ನು ಮ್ಯೂಚುವಲ್ ಫಂಡ್ ಟ್ರಸ್ಟಗಳು ಹೂಡಿಕೆದಾರರಿಗೆ ಅವರು ಹೊಂದಿರುವ ಯೂನಿಟ್ ಗಳ ಆಧಾರದ ಮೇಲೆ ಹಂಚುತ್ತವೆ. ಹೊಸದಾಗಿ ಹೂಡಿಕೆ ಕ್ಷೇತ್ರದಲ್ಲಿ ಕಾಲಿಡುವವರಿಗೆ ಇದು ಸೂಕ್ತ.
ಷೇರುಗಳು ಎಂದರೆ ಒಂದು ಕಂಪನಿಯಲ್ಲಿ ಸಣ್ಣ ಮಟ್ಟದ ಪಾಲುದಾರಿಕೆ ಹೊಂದುವದು ಎಂದರ್ಥ. ಯಾವ ಕಂಪನಿಯ ಎಷ್ಟು ಷೇರುಗಳನ್ನು ಖರೀದಿಸುತ್ತೆವೆಯೊ ಆ ಪ್ರಮಾಣದಲ್ಲಿ ಆ ಕಂಪನಿಯ ಮಾಲಿಕತ್ವ ಹೊಂದಿದಂತೆ. ಇದೊಂದು ತರಹ ಇತರ ಹೂಡಿಕೆದಾರರೊಂದಿಗೆ ಪಾಲುದಾರಿಕೆ ಹಂಚಿಕೊಂಡಂತೆ. ಷೇರು ಮಾರುಕಟ್ಟೆಯಲ್ಲಿ ನೋಂದಾಯಿಸಿಕೊಂಡ ಯಾವುದೇ ಕಂಪನಿಯ ಷೇರುಗಳನ್ನು ಹೂಡಿಕೆದಾರ ಖರೀದಿಸಬಹುದು. ಎಷ್ಟು ಷೇರುಗಳನ್ನು ಖರೀದಿಸಬೇಕು, ಯಾವಾಗ ಖರೀದಿಸಬೇಕು, ಯಾವ ಸಮಯದಲ್ಲಿ ಮಾರಬೇಕು ಎಂಬ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೂಡಿಕೆದಾರನು ಸ್ವತಂತ್ರ. ಇಲ್ಲಿ ಯಾವುದೇ ಫಂಡ್ ಮ್ಯಾನೇಜರುಗಳ ಮಧ್ಯಸ್ಥಿಕೆಯಿರುವದಿಲ್ಲ. ಹೀಗಾಗಿ ಷೇರುಗಳ ಮೌಲ್ಯಗಳ ಏರಿಳಿತಗಳ ಅಧ್ಯಯನ ಮಾಡಬೇಕಾಗುವುದು. ಇದಕ್ಕೆಲ್ಲ ಈ ಕ್ಷೇತ್ರಗಳ ಜ್ಞಾನ ಇರುವದು ಅವಶ್ಯಕ.