ಭೂಮಿಯಲ್ಲಿ ಹುಟ್ಟಿದ ಮೇಲೆ ಸಾಯಲೇಬೇಕು. ಆದರೆ ಈ ೮ ಚಿರಂಜೀವಿಗಳಿಗೆ ಸಾವು ಇಲ್ಲ ಮತ್ತು ಅವರು ಕಲೀಯುಗದ ಅಂತ್ಯದವರೆಗೂ ಭೂಮಿಯಲ್ಲಿ ಜೀವಿಸುತ್ತಾರೆ ಎಂದು ಹಿಂದೂ ಪುರಾಣಗಳಲ್ಲಿ ಉಲ್ಲೇಖವಿದೆ. ಹಾಗಾದರೆ ಆ ವ್ಯಕ್ತಿಗಳು ಯಾರು ಮತ್ತು ಯಾವ ಕಾರಣಕ್ಕೆ ಅವರಿಗೆ ಚಿರಂಜೀವಿಯಾಗುವ ಅವಕಾಶ ಸಿಕ್ಕಿತು ಎಂಬುದನ್ನು ತಿಳಿದುಕೊಳ್ಳೋಣ.
"ಅಶ್ವತ್ಥಾಮಾ ಬಲಿರ್ವ್ಯಾಸೋ ಹನುಮಾಂಶ್ಚ ವಿಭೀಷಣಃ।
ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನಃ॥
ಸಪ್ತೈತೇ ಪುರುಷಾಃ ಪುಣ್ಯಾ ಜೀವಂತಿ ಚಿರಂಜೀವಿನಃ।"
1.Ashwathama (ಅಶ್ವತ್ಥಾಮ)

ಅಶ್ವತ್ಥಾಮನು ದ್ರೋಣಾಚಾರ್ಯರ ಪುತ್ರ ಮತ್ತು ಕೃಪಿಯ ಪುತ್ರ. ಅವರು ದೀರ್ಘಕಾಲದ ನಿಯಮ, ತಪಸ್ಸುಮಾಡಿ ಶಿವನ ಆಶೀರ್ವಾದದಿಂದ ಮಗು ಪಡೆದರು. ಅವನು ಶಿವನ ಅಂಶವಾಗಿರುವನೆಂಬಂತೆ ವರ್ಣಿಸಲಾಗಿದೆ . ಏಕೆಂದರೆ ಹುಟ್ಟುವಾಗಲೇ ಅವನ ತಲೆಯ ಮೇಲೆ "ಮಣಿಯೊಂದು" ಇದ್ದಿತು — ಇದನ್ನು “ತಲೆಯ ರತ್ನ”, “ದಿವ್ಯ ರತ್ನ” ಎಂದೂ ಕರೆಯುತ್ತಾರೆ — ಇದು ಅವನಿಗೆ ಅನಾರೋಗ್ಯ, ಲಕ್ಷಣಗಳು ಮುಂತಾದವುಗಳಿಂದ ರಕ್ಷಿಸುವ ಶಕ್ತಿ ನೀಡಿತ್ತು. ಅವನು ಹುಟ್ಟಿದಾಗ ಕುದುರೆಯಂತೆ ಕೂಗಿದನು; ಆ ಶಬ್ದ ಎಲ್ಲ ದಿಕ್ಕುಗಳಲ್ಲಿ ಪ್ರತಿಧ್ವನಿಸಿತು. ಇದನ್ನು ಕೇಳಿ ಆಕಾಶವಾಣಿ “ಅಶ್ವತ್ಥಾಮ” ಎಂದು ನಾಮಕರಣ ಮಾಡುತ್ತದೆ.
ಗುರು ದ್ರೋಣಾಚಾರ್ಯರು ಅನೇಕ ದೈವಿಕ ಆಯುಧಗಳನ್ನು ಬಳಸುವ ಜ್ಞಾನವನ್ನು ಹೊಂದಿದ್ದರು. ಆದ್ದರಿಂದ ಅವರಿಂದ ಯುದ್ಧ ಕಲೆಗಳನ್ನು ಚೆನ್ನಾಗಿಯೇ ಬಲ್ಲವನೀತ.
ತನ್ನ ತಂದೆಯನ್ನು ಯುದ್ಧ ಭೂಮಿಯಲ್ಲಿ ಮೋಸದಿಂದ ಕೊಲ್ಲಲಾಗಿದೆ ಎನ್ನುವ ವಿಷಯವನ್ನು ತಿಳಿದ ತಕ್ಷಣ ಅವನು ಪಾಂಡವರ ಮೇಲೆ ಕೋಪೋದ್ರಿಕ್ತನಾಗುತ್ತಾನೆ. ಕುರುಕ್ಷೇತ್ರ ಯುದ್ಧ ಮುಗಿದ ಮೇಲೆ ಅಶ್ವತ್ಥಾಮನು ಉಪಪಾಂಡವರನ್ನು ಕೊಂದು ನಂತರ ದರ್ಭೆಯನ್ನು ಮಂತ್ರಿಸಿ ಬ್ರಹ್ಮಾಸ್ತ್ರವಾಗಿಸಿ ತುಂಬು ಗರ್ಭಿಣಿ ಉತ್ತರೆಯ ಗರ್ಭಕ್ಕೆ ಪ್ರಯೋಗಿಸಿದ ಪಾಪ ಕಾರ್ಯ ಮಾಡುತ್ತಾನೆ. ಇದರಿಂದ ತೀರಾ ಬೇಸರ ಹಾಗೂ ಸಿಟ್ಟಿನಿಂದ ಪರಮಾತ್ಮ ಕೃಷ್ಣನು ಅವನಿಗೆ ಶಪಿಸುತ್ತಾನೆ. ಅಶ್ವತ್ಥಾಮನ ಹಣೆಯಲ್ಲಿನ ಮಣಿಯನ್ನು ಕಿತ್ತೆಸೆದು ಅವನಿಗೆ "ತ್ರೀಣಿ ವರ್ಷ ಸಹಸ್ರಾಣಿ ವಿಚರಶ್ಯಸಿ ಮಹೀಮಿಯಾನ್" ಎಂದು ಶಾಪ ಕೊಡುತ್ತಾನೆ. ಇದರ ಅರ್ಥ "ನೀನು ಮೂರು ಸಾವಿರ ವರ್ಷಗಳ ಕಾಲ ಈ ಭೂಮಿಯಲ್ಲಿ ಅಲೆದಾಡುತ್ತಿರು" ಎಂದು. ಇನ್ನೊಂದು ಮೂಲದ ಪ್ರಕಾರ ಅಶ್ವತ್ಥಾಮನಿಗೆ ಕಲಿಯುಗದ ಕೊನೆಯವರೆಗೂ ಸಾವಿಲ್ಲದೇ, ವಾಸ್ತವ್ಯವಿಲ್ಲದೇ ದೇಹದ ತುಂಬಾ ಗಾಯಗಳನ್ನು ಹೊತ್ತು ಅಲೆದಾಡುವಂತಹ ಘೋರ ಶಾಪವನ್ನು ನೀಡಿದ್ದನು.
ಕೆಲವರು ಅಶ್ವತ್ಥಾಮನನ್ನು ಬೇರೆ ಬೇರೆ ಸ್ಥಳಗಳಲ್ಲಿ ನೋಡಿದ್ದಾರೆಂದು ಹೇಳಿಕೊಂಡಿದ್ದಾರೆ. ಉದಾಹರಣೆಗೆ, ಮಧ್ಯಪ್ರದೇಶದಲ್ಲಿ ಒಬ್ಬ ವೈದ್ಯನು ಅಶ್ವತ್ಥಾಮನಂತೆಯೇ ಗಾಯವು ವಾಸಿಯಾಗದ ರೋಗಿಯನ್ನು ನೋಡಿದ್ದನು ಎಂದು ಹೇಳಿದ್ದಾನೆ. ಹಾಗೆಯೇ, ಕೆಲವರು ಹಿಮಾಲಯದ ತಪ್ಪಲಿನಲ್ಲಿ ಅಶ್ವತ್ಥಾಮನನ್ನು ಭೇಟಿಯಾಗಿದ್ದಾಗಿ ಹೇಳಿಕೊಂಡಿದ್ದಾರೆ.
2. Bali chakravarthi (ಬಲಿಚಕ್ರವರ್ತಿ)

ಹಿರಣ್ಯಕಶಪುವಿನ ಪುತ್ರ ಪ್ರಹ್ಲಾದ. ಆತನು ಮಹಾ ವಿಷ್ಣುಭಕ್ತ. ಆತನ ಮಗ ವಿರೋಚನ. ವಿರೋಚನನ ಪುತ್ರನೇ ಬಲಿಚಕ್ರವರ್ತಿ. ಈತನ ರಾಜ್ಯವು ಸುಭಿಕ್ಷವಾಗಿತ್ತು. ಎಷ್ಟು ವಿಷ್ಣುವನ್ನು ಪೂಜಿಸುತ್ತಿದ್ದನೋ ಅಷ್ಟೇ ಹಿಂಸೆಯನ್ನು ಇತರರಿಗೆ ನೀಡುತ್ತಿದ್ದನು. ಋಷಿಗಳ ತಪಸ್ಸಿಗೆ ತಪೋಭಂಗ ಮಾಡುತ್ತಿದ್ದನು. ಯಜ್ಞಯಾಗಾದಿಗಳಿಗೆ ಅಡ್ಡಿಮಾಡುತ್ತಿದ್ದನು. ಬಲಿ ಚಕ್ರವರ್ತಿ ಇಂದ್ರ ಪದವಿಯನ್ನು ಬಯಸಿದರು. 100ನೇ ಅಶ್ವಮೇಧ ಯಾಗವನ್ನು ಪೂರ್ಣಗೊಳಿಸಿದ್ದರೆ, ಅವನು ಇಂದ್ರ ಹುದ್ದೆಗೆ ಅರ್ಹನಾಗುತ್ತಿದ್ದನು. ಇಂದ್ರನು ಶ್ರೀ ಮಹಾವಿಷ್ಣುವಿನ ಸಹಾಯವನ್ನು ಕೋರಿದನು. ಈ ಯಾಗ ಮಾಡುವಾಗ ಯಾರೇ ಬರಲಿ, ಬಂದವರಿಗೆಲ್ಲರಿಗೂ ಅವರು ಕೇಳಿದ ವಸ್ತುಗಳನ್ನು ದಾನವಾಗಿ ಕೊಡಬೇಕೆಂಬ ನಿರ್ಧಾರವನ್ನು ಕೈಗೊಂಡನು.
ವಿಷ್ಣು ವಾಮನ ಮೂರ್ತಿಯ ರೂಪದಲ್ಲಿ ಬಲಿ ಚಕ್ರವರ್ತಿಯ ಬಳಿ ಬಂದು ದಾನವಾಗಿ ಕೇವಲ ಮೂರು ಹೆಜ್ಜೆ ಭೂಮಿಯನ್ನು ಕೇಳಿದನು. ಸರಿ ಎಂದು ಬಲಿಚಕ್ರವರ್ತಿ. ತಕ್ಷಣ, ವಾಮನನು ತ್ರಿವಿಕ್ರಮ ಆಕಾರವನ್ನು ಪಡೆದು, ಮೊದಲ ಹೆಜ್ಜೆಯಲ್ಲಿ ಭೂಮಿಯನ್ನು ಎರಡನೇ ಹೆಜ್ಜೆ ಇಡೀ ಆಕಾಶವನ್ನು, ಮೂರನೇ ಹೆಜ್ಜೆಗೆ ಸ್ಥಳವಿರಲಿಲ್ಲ. ಆಗ ಬಲಿ ವಾಮನನೇ ಶ್ರೀ ವಿಷ್ಣು ಎಂದು ಅರಿತು ವಾಮನನ ಮೂರನೇ ಪಾದದ ಹೆಜ್ಜೆಯ ಸ್ಥಳವಾಗಿ ತನ್ನ ತಲೆಯನ್ನು ಅರ್ಪಿಸಿದನು. ವಾಮನನು ತನ್ನ ಮೂರನೇ ಹೆಜ್ಜೆಯನ್ನು ಬಲಿಯ ತಲೆಯ ಮೇಲೆ ಇಟ್ಟುಕೊಂಡು ಬಲಿಯನ್ನು ಪಾತಾಳ ಲೋಕಕ್ಕೆ ಕಳುಹಿಸಿದನು.
ನಂತರ ಬಲಿಚಕ್ರವರ್ತಿಗೆ ವಿಷ್ಣುವು ನೀನು ಭೂಗರ್ಭದಲ್ಲಿ ಹೂತು ಹೋದರೂ ಚಿರಂಜೀವಿಗಳ ಸಾಲಿನಲ್ಲಿ ಅಮರನಾಗಿರು ಮತ್ತೇ ನಿನ್ನ ನಾಮ ಮುಂದೇ ಬಲೀ ಪಾಡ್ಯ ಎಂಬ ಹಬ್ಬವಾಗಿ ಆಚರಿಸಲಾಗುತ್ತದೆ ಎಂಬ ವರವನ್ನು ದಯಪಾಲಿಸುತ್ತಾನೆ.
3. Veda vyasa (ವೇದವ್ಯಾಸ)
ವೇದವ್ಯಾಸರ ತಂದೆ ಪರಾಶರ ತಾಯಿ ಸತ್ಯವತಿ. ಅವನ ಕಪ್ಪು ಮೈಬಣ್ಣ ಮತ್ತು ದ್ವೀಪದ ಮೇಲೆ ಜನಿಸಿದವನೆಂದು ದ್ವೈಪಾಯನ “ಕೃಷ್ಣದ್ವೈಪಾಯನ” ಎಂದು ಹೆಸರಿಸಿದ್ದಾರೆ. ವೇದಗಳನ್ನು ವಿಭಜಿಸಿ, ನಾಲ್ಕು ಭಾಗಗಳಾಗಿ ವಿಂಗಡಿಸಿದರು. ಇದು “ವೇದವ್ಯಾಸ” ಎಂಬ ಹೆಸರಿನ ಮುಖ್ಯ ಕಾರಣ. ಬೃಹತ್ ಮಹಾಕಾವ್ಯ ಮಹಾಭಾರತ, 18 ನಮ್ಮ ಮಹಾಪುರಾಣಗಳು ಮತ್ತು ಬ್ರಹ್ಮಸೂತ್ರ ಭಗವದ್ಗೀತೆ, ಭಗವತಮ್ ಮುಂತಾದ ಗ್ರಂಥಗಳು — ಅವರ ಕೃತೆಂದು ಪರಿಗಣಿಸಲಾಗಿದೆ. ಅವರು ದೈವಿಕ ಸಂಪರ್ಕದಿಂದಾಗಿ ಎಲ್ಲಾ ಯೋಗ ಸಿದ್ಧಿಗಳನ್ನು ಸಾಧಿಸಲು ಸಾಧ್ಯವಾಯಿತು.
ಅದ್ದರಿಂದ ಅವರು ‘ಚಿರಂಜೀವಿ’ ಎಂದು ಪರಿಗಣಿಸಲ್ಪಡುತ್ತಾರೆ — ಕಲಿಯುಗದ ಕೊನೆಯವರೆಗೆ ಹಾಗೂ ಮುಂದಿನ ಸತ್ಯಯುಗದ ಆರಂಭವರೆಗೂ ಜೀವಿಸುವುದಾಗಿ ನಂಬಲಾಗುತ್ತದೆ. “ಗುರು ಪೂರ್ಣಿಮೆ” ದಿನದಂದು, ವೇದವ್ಯಾಸರ ಪ್ರಾಮುಖ್ಯತೆಯನ್ನು ಸ್ಮರಿಸಿ ಆಚರಿಸಲಾಗುತ್ತದೆ.
4. Hanumanatha (ಹನುಮಂತ)
ಹನುಮಂತನು ತಾಯಿ ಅಂಜನಾ ಮತ್ತು ತಂದೆ ಕೇಸರಿಗೆ ಜನಿಸಿದನು . ಹನುಮನ ಜನನದಲ್ಲಿ ವಾಯುವಿನ ಪಾತ್ರಕ್ಕೆ ಹನುಮನನ್ನು ವಾಯು ಪುತ್ರ ಎಂದೂ ಕರೆಯುತ್ತಾರೆ .
ಸೂರ್ಯನನ್ನು ಹಿಡಿಯುವ ಪ್ರಯತ್ನ:
ಬಾಲ್ಯದಲ್ಲಿ, ಹನುಮಂತನು ಸೂರ್ಯನನ್ನು ಹಣ್ಣು ಎಂದು ತಪ್ಪಾಗಿ ಭಾವಿಸಿ ಅದನ್ನು ಹಿಡಿಯಲು ಆಕಾಶಕ್ಕೆ ಹಾರಿದನು. ಆಗ ಇಂದ್ರನು ವಜ್ರಾಯುಧದಿಂದ ಅವನ ಮೇಲೆ ದಾಳಿ ಮಾಡಿದನು ಬಾಲಕ ಆಂಜನೇಯನು ಆಕಾಶದಿಂದ ಭೂಮಿಯ ಮೇಲೆ ಬಿದ್ದಾಗ, ಅವನ ದವಡೆಯ ಎಡಭಾಗವು ವಿರೂಪಗೊಂಡಿತು. ಆಗ ಅವನಿಗೆ ಹನುಮಾನ್ ಎಂಬ ಹೆಸರು ಬಂದಿತು. ಅವನ ತಂದೆಯಾದ ವಾಯುದೇವನು ಕೋಪಗೊಂಡು ಎಲ್ಲವನ್ನೂ ಸ್ಥಗಿತಗೊಳಿಸಿದನು. ಆಗ ದೇವತೆಗಳು ಹನುಮಂತನಿಗೆ ಅಮರತ್ವದ ವರವನ್ನು ನೀಡಿದರು ಎಂದು ಹೇಳಲಾಗುತ್ತದೆ.
ರಾಮನ ಮೇಲಿನ ಭಕ್ತಿ:
ಹನುಮಂತನು ರಾಮನಿಗೆ ಅಪಾರ ಭಕ್ತಿ ಮತ್ತು ಸೇವೆಯನ್ನು ಸಲ್ಲಿಸಿದನು. ರಾಮನು ಸೀತೆಯನ್ನು ಹುಡುಕಲು ಲಂಕೆಗೆ ಹೋದಾಗ, ಹನುಮಂತನು ಅವನಿಗೆ ಸಹಾಯ ಮಾಡಿದನು. ರಾಮನು ಅಯೋಧ್ಯೆಗೆ ಹಿಂದಿರುಗಿದ ನಂತರ, ಹನುಮಂತನು ಭೂಮಿಯ ಮೇಲಿನ ರಾಮನ ಭಕ್ತರನ್ನು ರಕ್ಷಿಸಲು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಅಮರನಾಗುವ ವರವನ್ನು ಪಡೆದನು.
ಹನುಮಂತನು ಹಿಮಾಲಯದಲ್ಲಿ ಧ್ಯಾನ ಮಾಡುತ್ತಿದ್ದಾನೆ ಎಂಬ ನಂಬಿಕೆಯೂ ಇದೆ. ಅವನು ರಾಮನ ಹೆಸರನ್ನು ಜಪಿಸುತ್ತಾ, ಭಗವಾನ್ ರಾಮ ಅಥವಾ ಅವನ ಅವತಾರ ಭೂಮಿಗೆ ಮರಳಲು ಕಾಯುತ್ತಿದ್ದಾನೆ ಎಂದು ಹೇಳಲಾಗುತ್ತದೆ.
5. Vibhishana (ವಿಭೀಷಣ)
ವಿಭೀಷಣನು ರಾವಣನ ತಮ್ಮನಾಗಿದ್ದರೂ, ಅವನು ಧರ್ಮ ಮತ್ತು ನೀತಿಯ ಮಾರ್ಗವನ್ನು ಅನುಸರಿಸಿದನು. ರಾವಣನು ಸೀತೆಯನ್ನು ಅಪಹರಿಸಿದಾಗ, ವಿಭೀಷಣನು ಅವನಿಗೆ ಬುದ್ಧಿ ಹೇಳಲು ಪ್ರಯತ್ನಿಸಿದನು, ಆದರೆ ರಾವಣನು ಕೇಳಲಿಲ್ಲ. ಕೊನೆಗೆ ವಿಭೀಷಣನು ರಾಮನ ಕಡೆ ಸೇರಿ, ರಾವಣನ ವಿರುದ್ಧ ಹೋರಾಡಲು ಸಹಾಯ ಮಾಡಿದನು. ರಾಮನು ರಾವಣನನ್ನು ಸಂಹರಿಸಿ, ವಿಜಯಿಯಾದ ನಂತರ, ವಿಭೀಷಣನಿಗೆ ಲಂಕೆಯ ಆಳ್ವಿಕೆಯನ್ನು ವಹಿಸಿಕೊಟ್ಟನು.
ವಿಭೀಷಣನು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ, ಅಮರತ್ವವನ್ನು ಬೇಡಿದನು. ಬ್ರಹ್ಮನು ಅವನ ಭಕ್ತಿಯಿಂದ ಪ್ರಸನ್ನನಾಗಿ, ಅವನಿಗೆ ಅಮರತ್ವದ ವರವನ್ನು ನೀಡಿದನು. ಹೀಗಾಗಿ, ವಿಭೀಷಣನು ಚಿರಂಜೀವಿ ಎಂದು ಪರಿಗಣಿಸಲ್ಪಟ್ಟಿದ್ದಾನೆ.
ಕೆಲವು ನಂಬಿಕೆಗಳ ಪ್ರಕಾರ, ರಾಮನು ತನ್ನಆಳ್ವಿಕೆಯಕೊನೆಯಲ್ಲಿ ಅಯೋಧ್ಯೆಯನ್ನು ತೊರೆಯಲು ಮುಂದಾದಾಗ, ಅವನು ವಿಷ್ಣುವಿನ ನಿಜವಾದ ರೂಪವನ್ನು ಧರಿಸಿದನು. ವಿಭೀಷಣನನ್ನು ಭೂಮಿಯ ಮೇಲೆ ಉಳಿಯಲು ಮತ್ತು ಜನರಿಗೆ ಸೇವೆ ಸಲ್ಲಿಸಲು ಮತ್ತು ಅವರನ್ನು ಸತ್ಯ ಮತ್ತು ಧರ್ಮದ ಮಾರ್ಗಕ್ಕೆ ಮಾರ್ಗದರ್ಶನ ಮಾಡಲು ಆದೇಶಿಸಿದನು. ಆದ್ದರಿಂದ, ವಿಭೀಷಣನನ್ನು ಚಿರಂಜೀವಿಗಳಲ್ಲಿ ಒಬ್ಬ ಎಂದು ಪರಿಗಣಿಸಲಾಗಿದೆ.
ವಿಭೀಷಣನು ಇಂದಿಗೂ ಜೀವಂತವಾಗಿದ್ದಾನೆಂದು ಹೇಳಲಾಗುತ್ತದೆ. ಪೌರಾಣಿಕ ನಂಬಿಕೆಯ ಪ್ರಕಾರ, ರಾಮನು ವಿಭೀಷಣನಿಗೆ ರಂಗನಾಥಸ್ವಾಮಿ ದೇವಾಲಯದಲ್ಲಿ ನೆಲೆಸುವ ವರವನ್ನು ನೀಡಿದ್ದನು. ಆದ್ದರಿಂದ, ವಿಭೀಷಣನು ಇಂದಿಗೂ ಆ ದೇವಾಲಯದಲ್ಲಿ ವಾಸಿಸುತ್ತಿದ್ದಾನೆ ಎಂದು ಅನೇಕ ಭಕ್ತರು ನಂಬುತ್ತಾರೆ.
6. Krupacharya (ಕೃಪಾಚಾರ್ಯ)
ಕುರು ರಾಜ್ಯದ ರಾಜ ಶಂತನು ರಾಜನು ಕಾಡಿನಲ್ಲಿ ಅಲೆದಾಡುವಾಗ, ಕೃಪಾ ಮತ್ತು ಕೃಪಿಯನ್ನು ಕಂಡು, ಅವರನ್ನು ದತ್ತು ಪಡೆದನು ಮತ್ತು ಅವರಿಬ್ಬರಿಗೂ ಕೃಪಾ ಮತ್ತು ಕೃಪಿ ಎಂದು ಹೆಸರಿಸಿದನು. ನಂತರ, ಕೃಪಾಚಾರ್ಯರು ಒಬ್ಬ ಶ್ರೇಷ್ಠ ಬಿಲ್ಲುಗಾರ ಮತ್ತು ಆಚಾರ್ಯ ಎಂಬ ಬಿರುದನ್ನು ಪಡೆದರು.
ಮಹಾಭಾರತದಲ್ಲಿ ಕೃಪಾಚಾರ್ಯರು ಪಾಂಡವರು ಮತ್ತು ಕೌರವರ ಪ್ರಥಮ ಗುರುಗಳಾಗಿದ್ದರು. ಅವರು ಎಷ್ಟು ಕಠಿಣ ಸಮಯದಲ್ಲಿರಲಿ ನ್ಯಾಯಧರ್ಮ, ನೀತಿಸತ್ಯ, ದಾನ, ನಿಷ್ಠೆ—ಅಲ್ಲಿಯೂ ಸದಾ ತೊಡಗಿಸಿಕೊಂಡಿರುತ್ತಾರೆ. ಕೊನೆಯಲ್ಲಿ ಕೃಪಾಚಾರ್ಯರು ಅರ್ಜುನನ ಮೊಮ್ಮಗ ಪರೀಕ್ಷಿತನ ಗುರುವಾಗಿ, ತನ್ನ ಕರ್ತವ್ಯಗಳನ್ನು ಪೂರೈಸಿದ ನಂತರ, ಅಂತಿಮವಾಗಿ ತಪಸ್ಸು ಮಾಡಲು ಕಾಡಿಗೆ ಹೋದರು ಮತ್ತು ತನ್ನ ಉಳಿದ ಜೀವನವನ್ನು ಕಳೆದರು ಎಂದು ನಂಬಲಾಗಿದೆ.
ಕೆಲವು ಗ್ರಂಥಗಳ ಪ್ರಕಾರ, ಕೃಪಾಚಾರ್ಯರು ತನ್ನ ಶಿಸ್ತು, ನಿಷ್ಠೆ ಮತ್ತು ನಿಷ್ಪಕ್ಷಪಾತ ಸ್ವಭಾವದಿಂದಾಗಿ ಅಮರತ್ವವನ್ನು ಪಡೆದರು. ಕಲಿಯುಗದ ಅಂತ್ಯದವರೆಗೆ "ಅಮರ" ಆಗಿರುತ್ತಾರೆ. ವಿಷ್ಣು ಪುರಾಣದ ಪ್ರಕಾರ ಮುಂದಿನ ಮನ್ವಂತರದಲ್ಲಿ ಕೃಪಾಚಾರ್ಯರು ಸಪ್ತರ್ಷಿಗಳಲ್ಲಿ ಒಬ್ಬನಾಗುತ್ತಾರೆ.
7. Parasurama (ಪರಶುರಾಮ)
ಪರಶುರಾಮರು ಜಮದಗ್ನಿ ಮತ್ತು ರೇಣುಕೆ ಎಂಬ ಋಷಿ ದಂಪತಿಗಳ ಮಗ. ಅವರು ಬ್ರಾಹ್ಮಣರಾಗಿದ್ದರೂ, ಕ್ಷತ್ರಿಯರ ಗುಣಗಳನ್ನು ಹೊಂದಿದ್ದರು ಎಂದು ಹೇಳಲಾಗುತ್ತದೆ. ಪರಶುರಾಮನ ಪತ್ನಿ ಧರಣಿ.
ಪರಶುರಾಮರು ಶಿವನ ಮಾರ್ಗದರ್ಶಕತ್ವದಲ್ಲಿ ಮಹಾ ಯಜ್ಞಾಭ್ಯಾಸ (ತಪಸ್ಸು) ನೆರವೇರಿಸಿದರು. ಅವರ ಶ್ರದ್ಧೆ ನೋಡಿ, ಶಿವನು ಅವರಿಗೆ ಅಮೋಘವಾದ ಪಾರಾಶು (ಕತ್ತಿ) ಮತ್ತು ಅತ್ಯಂತ ಶಕ್ತಿಯವಿರುವ ರುದ್ರಾಕ್ಷ (ಶಿವನ ಅಂಶ) ನೀಡಿ, ಸಾಧಕನನ್ನಾಗಿ ಮಾಡಿದರು. ಭೂಮಿಯನ್ನು ಆಳುವ ಅನ್ಯಾಯದ ಮತ್ತು ದುಷ್ಟ ಶಕ್ತಿಗಳನ್ನು ಸೋಲಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಪರಶುರಾಮ ಅವರ ಅಸಾಧಾರಣ ಸದಾಚಾರ ಮತ್ತು ಧೈರ್ಯವನ್ನು ನೋಡಿದ ಶಿವನು ಅವರಿಗೆ ಅಮರತ್ವದ ವರ ಕೊಟ್ಟರು.
ತನ್ನ ಕರ್ತವ್ಯ ಮುಗಿದ ಮೇಲೆ ಅವನು ಪುನಃ ಬ್ರಾಹ್ಮಣನಾಗಿ ಮಹೇಂದ್ರ ಗಿರಿಗೆ ಹೋಗಿ ತಪಸ್ಸಿನಲ್ಲಿ ತೊಡಗುತ್ತಾನೆ. ಪರಶುರಾಮನು ಬ್ರಾಹ್ಮಣನಾಗಿ ಈಗಲೂ ಮಹೇಂದ್ರ ಗಿರಿಯಲ್ಲಿ ತಪಸ್ಸು ಮಾಡುತ್ತಿದ್ದಾನೆಂದು ಹೇಳುತ್ತಾರೆ.
ಇವರು ತ್ರೇತಾಯುಗದಲ್ಲಿ ಹುಟ್ಟಿ, ದ್ವಾಪರಯುಗದಲ್ಲಿ ಕರ್ಣ, ಭೀಷ್ಮ, ದ್ರೋಣಚಾರ್ಯರಿಗೆ ಗುರುಗಳಾಗಿದ್ದರು. ಹಾಗಾಗಿ ಅವರು ಕಲಿಯುಗದಲ್ಲಿಯೂ ಇದ್ದಾರೆ ಎಂಬ ನಂಬಿಕೆ ಇದೆ. ಕಲಿಯುಗದ ಅಂತ್ಯದಲ್ಲಿ ವಿಷ್ಣುವಿನ ಕಲ್ಕಿ ಅವತಾರಗಾಗಿ, ಅವರು ಯುದ್ಧ ಕೌಶಲ್ಯಗಳನ್ನು ಕಲಿಸುತ್ತಾರೆ ಎಂಬ ನಂಬಿಕೆ ಇದೆ.
8. Markandeya (ಮಾರ್ಕಂಡೇಯ)
ಮಾರ್ಕಂಡೇಯ ಎಂಬ ಹೆಸರು ಸಪ್ತ ಚಿರಂಜೀವಿ ಶ್ಲೋಕದಲ್ಲಿ ಬರುವುದಿಲ್ಲ. ಆದರೂ ಇವರು ಒಬ್ಬರು ಚಿರಜೀವಿ. ಮಾರ್ಕಂಡೇಯನು ಮೃಕಂಡು ಮತ್ತು ಮರುದ್ವತಿಯರ ಪುತ್ರ. ಮೃಕಂಡು ಮತ್ತು ಮರುದ್ವತಿ ದಂಪತಿಗಳಿಗೆ ಮಕ್ಕಳಿರಲಿಲ್ಲ, ಅವರು ಶಿವನ ಕೃಪೆಯಿಂದ ಪುತ್ರನಾಗುವ ವರವನ್ನು ಪಡೆದರು, ಆದರೆ ಆ ಮಗನಿಗೆ ಕೇವಲ ಹದಿನಾರು ವರ್ಷಗಳ ಆಯುಷ್ಯ ಮಾತ್ರವಿತ್ತು. ಆ ಮಗುವಿನ ಹೆಸರು ಮಾರ್ಕಂಡೇಯ. ಅವನು ಶಿವನ ಪರಮ ಭಕ್ತನಾಗಿದ್ದರು. ಹದಿನಾರು ವರ್ಷಗಳು ತುಂಬಿದಾಗ, ಯಮನು ಅವನ ಪ್ರಾಣವನ್ನು ತೆಗೆದುಕೊಳ್ಳಲು ಬಂದರು. ಮಾರ್ಕಂಡೇಯನು ಶಿವಲಿಂಗವನ್ನು ಬಿಗಿಯಾಗಿ ಅಪ್ಪಿಕೊಂಡು ಪ್ರಾರ್ಥಿಸಿದರು. ಶಿವನು ಪ್ರತ್ಯಕ್ಷನಾಗಿ ಯಮನಿಗೆ ಅವನ ಪ್ರಾಣವನ್ನು ತೆಗೆದುಕೊಳ್ಳದಂತೆ ಹೇಳಿದರು. ಹೀಗಾಗಿ ಮಾರ್ಕಂಡೇಯನು ಅಮರನಾದರು.
ಹಿಂದೂ ಧರ್ಮಗ್ರಂಥಗಳ ಪ್ರಕಾರ ಅವನು ಅಸ್ತಿತ್ವದಲ್ಲಿದ್ದಾರೆ, ಭೂಮಿಯಲ್ಲಿ ಸಂಚರಿಸುತ್ತಾರೆ ಮತ್ತು ದೈವಿಕ ಜ್ಞಾನವನ್ನು ಪೂಜಿಸುವ ಸ್ಥಳಗಳಲ್ಲಿ ವಾಸಿಸುತ್ತಾರೆ.