Wednesday, September 30, 2026

​ ಮೇರು ಪ್ರತಿಭೆಗೆ ಸಂದ ಫಾಲ್ಕೆ ಪ್ರಶಸ್ತಿ :ಶಂಕರರ ಜೊತೆ ಜೊತೆಯಲಿ 'ಅನಂತಯಾನ'

 ​1980ರ ದಿನಗಳು. ಅಕ್ಕನನ್ನು ಸಾಲಿಗ್ರಾಮದ ಸಮೀಪದ ನಾಟನಹಳ್ಳಿಯ ತುಂಬು ಕುಟುಂಬಕ್ಕೆ ಮದುವೆ ಮಾಡಿಕೊಟ್ಟಿದ್ದ ಕಾಲವದು. ಮದುವೆಯಾದ ಮೊದಲ ವರ್ಷವಾದ್ದರಿಂದ ಕರೆದು ಕಳಿಸುವ ಸಂಪ್ರದಾಯಗಳು ಹೆಚ್ಚು; ನಾನೂ ಆಷಾಢಕ್ಕೆ ಕರೆಯಲು ಗೌರಿಹಬ್ಬಕ್ಕೆ ಬಾಗಿನ ಕೊಡಲು... ಹೀಗೆ ಆಗಾಗ್ಗೆ ಅಕ್ಕನ ಮನೆಗೆ ಹೋಗುತ್ತಿದ್ದೆ. ನನ್ನ ಹೋಗುವ ಉತ್ಸಾಹಕ್ಕೆ ಇನ್ನೊಂದು ಪ್ರಬಲ ಕಾರಣವಿತ್ತು—ಅದೇ ಸಾಲಿಗ್ರಾಮದ ‘ಪದ್ಮಾಂಬ ಟಾಕೀಸ್’! ಪಾರ್ವತಮ್ಮ ರಾಜ್‌ಕುಮಾರ್ ಅವರ ತವರು ಕೆ ಆರ್ ನಗರ ತಾಲೂಕಿನ ಸಾಲಿಗ್ರಾಮ . ಆಗಷ್ಟೇ ಅವರು ಪೂರ್ಣಪ್ರಮಾಣದ ಚಿತ್ರ ನಿರ್ಮಾಣಕ್ಕೆ (‘ಪೂರ್ಣಿಮಾ ಎಂಟರ್‌ಪ್ರೈಸಸ್’) ಧುಮುಕಿದ್ದರಿಂದ, ಅವರ ಬ್ಯಾನರ್‌ನ ಹೊಸ ಚಿತ್ರಗಳು ಹಾಸನದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದ ದಿನವೇ ಸಾಲಿಗ್ರಾಮದಲ್ಲೂ ತೆರೆಕಾಣುತ್ತಿದ್ದವು. ಜೊತೆಗೆ ಅವರ ನಿರ್ಮಾಣದ ಚಿತ್ರಗಳ ಚಿತ್ರೀಕರಣವೂ ಸಾಲಿಗ್ರಾಮ, ಚುಂಚನಕಟ್ಟೆ ಜಲಪಾತ ಹಾಗೂ ಕಾವೇರಿ ಹೊಳೆಯ ಜಾಡಿನ ಸುತ್ತಮುತ್ತಲೇ ನಡೆಯುತ್ತಿತ್ತು. ಒಮ್ಮೆ ಹೀಗೆ ಹೋಗಿದ್ದಾಗ ಹತ್ತಿರವೇ ಶೂಟಿಂಗ್ ನಡೆಯುತ್ತಿದೆ ಎಂದು ತಿಳಿದು ನೋಡಲು ಓಡಿದೆವು. ಕಣ್ಣೆದುರು ಕಂಡಿದ್ದು ಅನಂತ್‌ನಾಗ್ ಮತ್ತು ಲಕ್ಷ್ಮಿ! ನಾನು ನೀನು ಒಂದಾದ ಮೇಲೆ ಹಿನ್ನೆಲೆಯಲ್ಲಿ ಹಾಡಿನ ಧ್ವನಿ ಮೊಳಗುತ್ತಿದ್ದಂತೆ, ಅನಂತ್‌ನಾಗ್ ಲಕ್ಷ್ಮಿಯವರನ್ನು ಓಡಿಬಂದು ಎತ್ತಿ ಸುತ್ತಿಸಿ ಕೆಳಗಿಳಿಸುವ ರೊಮ್ಯಾಂಟಿಕ್ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿತ್ತು. ನಮ್ಮೂರಿನಲ್ಲಿ ಓದಿದ್ದ ಇಂದಿನ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು ಅಂದು ಪ್ರೊಡಕ್ಷನ್ ಮ್ಯಾನೇಜರ್ ಆಗಿ ಜನರನ್ನು ನಿಯಂತ್ರಿಸುತ್ತಿದ್ದರು. ಶಾಟ್ ಮುಗಿದ ಬಳಿಕ, ಮರದ ನೆರಳಿನಲ್ಲಿ ನಿಲ್ಲಿಸಿದ್ದ ಅಂಬಾಸಿಡರ್ ಕಾರಿನಲ್ಲಿ ಕೆ.ಎಸ್. ಅಶ್ವತ್ಥ್, ಅನಂತ್ ಹಾಗೂ ಲಕ್ಷ್ಮಿ ಕುಳಿತು ಲೋಕಾಭಿರಾಮವಾಗಿ ಹರಟುತ್ತಿದ್ದರು. ಲಂಗ-ದಾವಣಿಯಲ್ಲಿ ಲಕ್ಷ್ಮಿ ಕಂಗೊಳಿಸುತ್ತಿದ್ದರೆ, ಆ ಬಿಸಿಲಿನಲ್ಲಿ ಅನಂತ್‌ನಾಗ್ ಕೆಂಪಗೆ ಲಕಲಕನೆ ಹೊಳೆಯುತ್ತಿದ್ದರು

​ಚಿತ್ರೀಕರಣ ನೋಡಿದ ಮೇಲೆ, " ನಾವು ನೋಡಿದ ಚಿತ್ರೀಕರಣದ ಭಾಗ ಸಿನಿಮಾದಲ್ಲಿದೆಯೂ, ನಮ್ಮ ಮುಖವೇನಾದರೂ ಆ ಗುಂಪಿನಲ್ಲಿ ಕ್ಯಾಮೆರಾಗೆ ಬಿದ್ದಿದೆಯೋ?" ತವಕ. ಆ ಸಿನಿಮಾ ಹಾಸನದ ಭಾನು ಟಾಕೀಸ್‌ನಲ್ಲಿ ಬಿಡುಗಡೆಯಾಯಿತು; ನಾವು ನೋಡಿದ ಚಿತ್ರೀಕರಣದ ದೃಶ್ಯವೇ ಸಿನಿಮಾದ ಪೋಸ್ಟರ್ ನಲ್ಲಿದೆ. ಆ ಚಿತ್ರವೇ ‘ನಾ ನಿನ್ನ ಬಿಡಲಾರೆ’!

ಈ ಮುಂಚೆ 'ಪಾತಾಳ ಮೋಹಿನಿ'ಯಂತಹ ಸಿನಿಮಾಗಳಲ್ಲಿ ಮಾಟ-ಮಂತ್ರ, ಗಂಡನನ್ನು ದೆವ್ವದಿಂದ ಬಿಡಿಸಿಕೊಳ್ಳಲು ಹೆಂಡತಿ ಪೂಜೆ-ಪುನಸ್ಕಾರ ಮಾಡುವುದನ್ನು ನೋಡಿದ್ದೆವು. ಆದರೆ ಈ ಚಿತ್ರದಲ್ಲಿ ಅನಂತ್‌ನಾಗ್‌ರ ಹಿಂದಿನ ಪ್ರೇಯಸಿ ಸಾವನ್ನಪ್ಪಿ, ಮುಂದೆ ಅವರನ್ನೇ ಅಮರಿಕೊಳ್ಳುವ ಸನ್ನಿವೇಶಗಳು ಮತ್ತು ಆ ವೇಳೆ ಅನಂತ್ ವ್ಯಕ್ತಪಡಿಸುತ್ತಿದ್ದ ಧ್ವನಿ ಹಾಗೂ ಮುಖಭಾವ ಎದೆನಡುಗಿಸುವಂತಿತ್ತು. ಸಿನಿಮಾ ಮುಗಿಸಿ ಹೊರಬಂದಾಗ ಕಂಡ ಜನಸ್ತೋಮ ಚಿತ್ರದ ಅಭೂತಪೂರ್ವ ಯಶಸ್ಸಿಗೆ ಸಾಕ್ಷಿಯಾಗಿತ್ತು. ಚಿತ್ರಮಂದಿರದ ಎದುರು ರಾಘವೇಂದ್ರ ಸ್ವಾಮಿಗಳ ಭಾವಚಿತ್ರವನ್ನಿಟ್ಟು, ಭಕ್ತರು-ಪ್ರೇಕ್ಷಕರು ಕಾಣಿಕೆ ಹಾಕಲು ದೊಡ್ಡ ಗೋಲಕ (ಹುಂಡಿ) ಇಟ್ಟಿದ್ದು ಇಂದಿಗೂ ನೆನಪಿನ ಬಿತ್ತಿಯಲ್ಲಿ ಹಸಿರಾಗಿದೆ.

​ಅಷ್ಟರಲ್ಲಾಗಲೇ 'ದೇವರ ಕಣ್ಣು' ಚಿತ್ರದ ‘ನಿನ್ನ ನೀನು ಮರೆತರೇನು ಸುಖವಿದೆ?’, 'ಮಾತು ತಪ್ಪದ ಮಗ' ಚಿತ್ರದ ‘ಎಂತಾ ಸೌಂದರ್ಯ ನೋಡು’ ಹಾಗೂ ‘ಭಾನು ಭೂಮಿಯ ಮಿಲನದ ಶುಭ ಘಳಿಗೆ’ ಹಾಡುಗಳು ರೇಡಿಯೋಗಳಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದವು. ಆ ಚಿತ್ರಗಳ ಅಂಬರೀಷ್ ಹಾಗೂ ರಜನಿಕಾಂತ್ ಖಳನಾಯಕರಾಗಿ ಮಿಂಚುತ್ತಿದ್ದ ಕಾಲವದು. ಮುಂದೆ ಅವರು ತಮ್ಮದೇ ಸ್ಟೈಲಿನ ಮೂಲಕ ನಾಯಕರಾಗಿ ಪ್ರಸಿದ್ಧರಾದರೆ ಅವರ ಜೊತೆ ಜೊತೆಯಲಿ ಅನಂತ್ ತಮ್ಮದೇ ವಿಭಿನ್ನ ರೀತಿಯ ಅಭಿನಯದಿಂದ ಪ್ರೇಕ್ಷಕರ ಮನಗೆದ್ದಿದ್ದರು.

​‘ನಾ ನಿನ್ನ ಬಿಡಲಾರೆ’ ಯಶಸ್ಸಿನ ಬಳಿಕ ಅನಂತ್‌ನಾಗ್-ಲಕ್ಷ್ಮಿ ಕನ್ನಡಿಗರ ಆಪ್ಯಾಯಮಾನ ತಾರಾಜೋಡಿಯಾದರು. ಕಾದಂಬರಿ ಆಧಾರಿತ ಚಿತ್ರಗಳಾದ ‘ಬಯಲು ದಾರಿ’, ‘ಚಂದನದ ಗೊಂಬೆ’, ‘ಮುದುಡಿದ ತಾವರೆ ಅರಳಿತು’, ‘ಇಬ್ಬನಿ ಕರಗಿತು’, ‘ಬಿಡುಗಡೆಯ ಬೇಡಿ’ ಮುಂತಾದವುಗಳಲ್ಲಿ ನಾಯಕಿಯರ ಪಾತ್ರಕ್ಕೇ ಸಿಂಹಪಾಲು ಇರುತ್ತಿದ್ದರೂ, ಅಷ್ಟೇ ಸಮರ್ಥವಾಗಿ ಆ ಪಾತ್ರಗಳಿಗೆ ಪೂರಕವಾಗಿ ನಿಲ್ಲುವ ಸಂಯಮದ ಅಭಿನಯ ಅನಂತ್ ಅವರಲ್ಲಿತ್ತು. ಹೀರೋಯಿಸಂನ ಅಬ್ಬರವಿಲ್ಲದಿದ್ದರೂ, ಅವರ ನೈಜ ಮುಖಾಭಿನಯವೇ ಮತ್ತು ಧ್ವನಿ ಚಿತ್ರಗಳಿಗೆ ದೊಡ್ಡ ಜೀವಾಳವಾಗಿತ್ತು.

​

​ಇತ್ತ ತಮ್ಮ ಶಂಕರ್ ನಾಗ್ ಅವರೊಂದಿಗೆ ಹೊಸ ಅಲೆಯ ಸಿನೆಮಾಗಳ ಸೃಷ್ಟಿಗೆ ಅನಂತ್ ನಾಂದಿ ಹಾಡಿದರು. 1980ರ ‘ಮಿಂಚಿನ ಓಟ’ ಪಕ್ಕಾ ಹಾಲಿವುಡ್ ಮಾದರಿಯ ಕೇವಲ 12 ರೀಲುಗಳ, ಬಿಗಿ ಚಿತ್ರಕಥೆಯ ಜೈಲ್ ಬ್ರೇಕಿಂಗ್ ಸಿನಿಮಾ. ಕನ್ನಡಕ್ಕೆ ಹಾಲಿವುಡ್ ಶೈಲಿಯ ಮೇಕಿಂಗ್ ಹಾಗೂ ಮರಾಠಿ ರಂಗಭೂಮಿ ಮಾದರಿಯ ಗಂಭೀರ ನಾಟಕ ಸಂಸ್ಕೃತಿಯನ್ನು ತಂದ ಹೆಗ್ಗಳಿಕೆ ಈ ಸಹೋದರರಿಗೆ ಸಲ್ಲುತ್ತದೆ. ಇಬ್ಬರೂ ಜೊತೆಗೂಡಿ ‘ಸಂಕೇತ್’ ಸಂಸ್ಥೆ ಕಟ್ಟಿ, ಶಂಕರ್ ನಾಗ್ ನಿರ್ದೇಶನದಲ್ಲಿ ‘ನೋಡಿ ಸ್ವಾಮಿ ನಾವಿರೋದೆ ಹೀಗೆ’, ‘ಆಕ್ಸಿಡೆಂಟ್’, ‘ಪರಮೇಶಿ ಪ್ರೇಮ ಪ್ರಸಂಗ’ ಮುಂತಾದ ವಿಶಿಷ್ಟ ಚಿತ್ರಗಳನ್ನು ನಿರ್ಮಿಸಿದರು.

​ಅದರಲ್ಲೂ ‘ಆಕ್ಸಿಡೆಂಟ್’ ಇಂದಿಗೂ ಸಾರ್ವಕಾಲಿಕ ಶ್ರೇಷ್ಠ ಕ್ಲಾಸಿಕ್ ಎನ್ನಲು ಕಾರಣ—ರಾಜಕೀಯ ಪ್ರಭಾವ, ವ್ಯವಸ್ಥೆಯ ಭ್ರಷ್ಟಾಚಾರ ಮತ್ತು ಅಮಾಯಕರ ಬಲಿ ಮುಂತಾದ ಆ ಚಿತ್ರದ ಕಥಾವಸ್ತು ಇಂದಿಗೂ ನಮ್ಮ ಸಮಾಜದಲ್ಲಿ ದಿನನಿತ್ಯ ಪುನರಾವರ್ತನೆಯಾಗುತ್ತಿರುವುದು! ಆದರೆ ಕಾಲಕ್ಕಿಂತ ತೀರಾ ಮುಂಚಿತವಾಗಿದ್ದ ಇಂತಹ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಲಿಲ್ಲ. ಪುನರ್ಜನ್ಮದ ಕಥಾಹಂದರ ಹೊಂದಿದ್ದ ‘ಜನ್ಮ ಜನ್ಮದ ಅನುಬಂಧ’ ಮತ್ತು ವಿಷ್ಣುವರ್ಧನ್ ಅವರ ‘ಬಂಗಾರದ ಜಿಂಕೆ’ ಒಟ್ಟಿಗೇ ಬಿಡುಗಡೆಯಾದಾಗ ‘ಬಂಗಾರದ ಜಿಂಕೆ’ ಯಶಸ್ವಿಯಾಯಿತು, ಸಂಕೇತ್‌ನ ‘ಜನ್ಮ ಜನ್ಮದ ಅನುಬಂಧ’ ವಿಫಲವಾಯಿತು. 'ಪರಮೇಶಿ ಪ್ರೇಮ ಪ್ರಸಂಗ' ರಿಲೀಸ್ ಆದ ಮೊದಲ ದಿನವೇ ಸಂಜೆಯ ಆಟಕ್ಕೆ ಹೋದಾಗ ಚಿತ್ರಮಂದಿರದಲ್ಲಿ ಜನರೇ ಇರಲಿಲ್ಲ! ಅಂತಹ ಸಿನಿಮಾಗಳಿಗೆ ಕನ್ನಡದ ನೆಲ ಪಕ್ವವಾಗಿರಲಿಲ್ಲ ಎಂದಷ್ಟೇ ಹೇಳಬಹುದು ಕನ್ನಡ ನೆಲದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ತರಲು ಸ್ಥಾಪಿಸಿದ ‘ಸಂಕೇತ್ ಸ್ಟುಡಿಯೋ’ ಕೂಡ ಆರ್ಥಿಕವಾಗಿ ನಷ್ಟ ತಂದಿತು.

​ಇದೇ ಹೊತ್ತಿಗೆ ದೂರದರ್ಶನದಲ್ಲಿ ಮೂಡಿಬಂದ ಆರ್.ಕೆ. ನಾರಾಯಣ್ ಅವರ ಕಥಾಮಾಲಿಕೆ ‘ಮಾಲ್ಗುಡಿ ಡೇಸ್’ ಇಡೀ ದೇಶದ ಗಮನ ಸೆಳೆಯಿತು. ಶಂಕರ್ ನಾಗ್ ಅವರ ನಿರ್ದೇಶನದ ಪ್ರತಿಭೆ ಮತ್ತು ಅನಂತ್‌ನಾಗ್ ಅವರ ಸಹಜಾಭಿನಯದ ಚಾತುರ್ಯವನ್ನು ಇಡೀ ಭಾರತಕ್ಕೆ ಪ್ರಚುರಪಡಿಸಿದ ಹೆಗ್ಗಳಿಕೆ ಈ ಧಾರಾವಾಹಿಗೆ ಸಲ್ಲುತ್ತದೆ. ಸ್ವಾಮಿ ಮತ್ತು ಅವನ ಗೆಳೆಯರ ಜಗತ್ತನ್ನು ಕಟ್ಟಿಕೊಡುತ್ತಲೇ, ಇಬ್ಬರೂ ಸಹೋದರರು ಕಿರುತೆರೆಯಲ್ಲೊಂದು ಅದ್ಭುತ ಮೈಲಿಗಲ್ಲು ಸ್ಥಾಪಿಸಿದರು.

​ರಂಗಭೂಮಿಯಲ್ಲಿ ಗಿರೀಶ್ ಕಾರ್ನಾಡರ ‘ಅಂಜುಮಲ್ಲಿಗೆ’, ಮತ್ತು ‘ಬ್ಯಾರಿಸ್ಟರ್’ ನಾಟಕಗಳನ್ನು ಮುನ್ನಡೆಸುತ್ತಲೇ, ಅಂತಿಮವಾಗಿ ಚಂದ್ರಶೇಖರ ಕಂಬಾರರ ‘ಜೋಕುಮಾರಸ್ವಾಮಿ’ ನಾಟಕವನ್ನು ಸಿನಿಮಾ ಮಾಡಲು ಹೊರಟು 14 ಹಾಡುಗಳನ್ನು ರೆಕಾರ್ಡ್ ಮಾಡಿದ್ದ ಸಂದರ್ಭದಲ್ಲೇ ವಿಜಯದಶಮಿಯಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಶಂಕರ್ ನಾಗ್ ನಿಧನರಾದರು. ಈ ಆಘಾತ, ಸಾಲದ ಹೊರೆ ಮತ್ತು ಸಂಕೇತ್ ಜವಾಬ್ದಾರಿಯನ್ನು ಅನಂತ್ ಒಬ್ಬರೇ ಎದೆಗುಂದದೆ ಕಷ್ಟಪಟ್ಟು ತೀರಿಸಲು ದಶಕಗಳೇ ಬೇಕಾಯಿತು.

​ಶಂಕರ್ ನಿಧನದ ನಂತರ ಹಲವರು ಲೇಖಕರು ಸಿನಿ ಬರಹಗಾರರು ಪರಿಚಯಾತ್ಮಕ ಲೇಖನಗಳನ್ನು ಬರೆದರಾದರೂ, ಅನಂತ್ ನಾಗ್ ರಚಿಸಿದ ‘ನನ್ನ ತಮ್ಮ ಶಂಕರ’ ಕೃತಿ ಸಾಹಿತ್ಯಿಕವಾಗಿ ಅತ್ಯಂತ ಶ್ರೇಷ್ಠ ಆತ್ಮಕಥನ. ತಮ್ಮ ಪಯಣದ ಜೊತೆಗೇ ಸಾಗಿಬಂದ ಶಂಕರನ ಬದುಕು, ಬಾಲ್ಯದ ತುಂಟಾಟಗಳು, ಜೊತೆಯಾಗಿ ಕಟ್ಟಿದ ಕನಸುಗಳು-ಸಾಹಸಗಳು, ಅನುಭವಿಸಿದ ಸಂಭ್ರಮ ಹಾಗೂ ಶಂಕರನ ಅಕಾಲಿಕ ಸಾವಿನ ಆಘಾತವನ್ನು ಎದುರಿಸಿದ ಕ್ಷಣಗಳನ್ನು ಒಬ್ಬ ಸಮರ್ಥ ಲೇಖಕನಂತೆ ಅವರು ಎದೆಗಿಳಿಯುವಂತೆ ಕಟ್ಟಿಕೊಟ್ಟಿದ್ದಾರೆ. ಓದಿದವರ ಕಣ್ಣಂಚು ಒದ್ದೆಯಾಗಿಸದೆ ಬಿಡದ ಈ ಕೃತಿಯನ್ನು ಎಷ್ಟು ಬಾರಿ ಓದಿದರೂ ಹೊಸದಾಗಿ ಕಾಡುತ್ತದೆ. ಆಗುಂಬೆಯ ಕಾಡಿನಲ್ಲಿ ಸಾಗಿ ಬಂದ ಒಂದು ಮಳೆಯ ರಾತ್ರಿಯ ಚಿತ್ರಣ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.

​

​1990 ರಿಂದ 1995ರ ಕಾಲಘಟ್ಟ ಸಂಪೂರ್ಣ ಅನಂತ್‌ನಾಗ್ ಅವರ ಪರ್ವ. ‘ಗಣೇಶನ ಮದುವೆ’ಯ ಅಭೂತಪೂರ್ವ ಯಶಸ್ಸಿನ ನಂತರ ಬಂದ ‘ಗೌರಿ ಗಣೇಶ’, ‘ಗಣೇಶ ಸುಬ್ರಹ್ಮಣ್ಯ’ ಸರಣಿಯ ಸಿನಿಮಾಗಳು, ತೆಲುಗಿನ ಜಂಧ್ಯಾಲ ಮಾದರಿಯ ಅಚ್ಚುಕಟ್ಟಾದ ಸಿಚುಯೇಷನಲ್ ಕಾಮಿಡಿ ಚಿತ್ರಗಳ ಕನ್ನಡ ಅವತರಣಿಕೆಯಂತಿದ್ದು ಅನಂತ್ ಅವರನ್ನು ಮುಂಚೂಣಿಗೆ ತಂದವು. ಓಂ ಸಾಯಿಪ್ರಕಾಶ್, ಎಚ್.ಆರ್. ಭಾರ್ಗವ ನಿರ್ದೇಶನದ ‘ಗೋಲ್‌ಮಾಲ್ ರಾಧಾಕೃಷ್ಣ’ ಸರಣಿ, ‘ಮನೇಲಿ ಇಲಿ ಬೀದೀಲಿ ಹುಲಿ’ ಚಿತ್ರಗಳಲ್ಲಿ ಸಿಹಿಕಹಿ ಚಂದ್ರು, ರಮೇಶ್ ಭಟ್, ಎಂ.ಎಸ್. ಉಮೇಶ್, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ಮೈಸೂರು ಲೋಕೇಶ್ ಅವರೊಂದಿಗೆ ಸೇರಿದ ಅನಂತ್‌ನಾಗ್ ಕಾಮಿಡಿ ಟೈಮಿಂಗ್ ಅದ್ಭುತವಾಗಿತ್ತು. ವಿಡಿಯೋ ಕ್ಯಾಸೆಟ್‌ಗಳ (VHS) ಕಾಲದಲ್ಲಿ ಹಳ್ಳಿಹಳ್ಳಿಯ ಗಣಪತಿ ಹಬ್ಬಗಳಲ್ಲಿ ಇವರ ಸಿನಿಮಾಗಳು ರಾತ್ರಿಯಿಡೀ ರಂಜಿಸುತ್ತಿದ್ದವು.

​1995ರಲ್ಲಿ ಬಿಡುಗಡೆಯಾದ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ‘ಬೆಳದಿಂಗಳ ಬಾಲೆ’ ಭಾರತೀಯ ಚಿತ್ರರಂಗದಲ್ಲೇ ಅಪರೂಪದ ಪ್ರಯೋಗ. ನಾಯಕಿ ತೆರೆಯ ಮೇಲೆ ಕಾಣಿಸದೇ ಕೇವಲ ಫೋನ್ ಸಂಭಾಷಣೆಯಲ್ಲೇ ಸಾಗುವ ಆ ಚಿತ್ರ ಅನಂತ್‌ನಾಗ್ ಮತ್ತು ದೇಸಾಯಿಯವರಿಗೆ ಅಪಾರ ಹೆಸರು-ಪ್ರಶಂಸೆ ತಂದುಕೊಟ್ಟರೂ, ವಾಣಿಜ್ಯಿಕವಾಗಿ ಚಿತ್ರಮಂದಿರಗಳಲ್ಲಿ ದೊಡ್ಡ ಮಟ್ಟದಲ್ಲಿ ಗೆಲ್ಲದಿರುವುದು ವಿಪರ್ಯಾಸ. ಆದರೆ ಕಾಲಾನಂತರದಲ್ಲಿ ಅದೊಂದು ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿತು. ಇನ್ನು ‘ನಾರದ ವಿಜಯ’ದ ಹಾಸ್ಯಮಯ ನಾರದನ ಪಾತ್ರವಂತೂ ಅವರಿಗಾಗಿಯೇ ಹುಟ್ಟಿದಂತಿತ್ತು.

​ಮುಂದೆ ಜೆ.ಎಚ್. ಪಟೇಲರ ಮಂತ್ರಿಮಂಡಲದಲ್ಲಿ ಸಚಿವರಾದರೂ ಮತ್ತೆ ಚಿತ್ರರಂಗಕ್ಕೆ ಹಿಂದಿರುಗಿದರು . ಯೋಗರಾಜ್ ಭಟ್ ಅವರ ‘ಮುಂಗಾರು ಮಳೆ’ ಮತ್ತು ‘ಗಾಳಿಪಟ’ ಚಿತ್ರಗಳಲ್ಲಿ ಹೊಸ ತಲೆಮಾರಿಗೆ ಕನೆಕ್ಟ್ ಆದರು. ಹೇಮಂತ್ ರಾವ್ ನಿರ್ದೇಶನದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಅಲ್ಝೈಮರ್ಸ್ ಪೀಡಿತ ವೆಂಕೋಬ ರಾವ್ ಪಾತ್ರ ಅವರ ವೃತ್ತಿಜೀವನದ ಸರ್ವಶ್ರೇಷ್ಠ ಮೈಲಿಗಲ್ಲು. ರಿಷಬ್ ಶೆಟ್ಟಿ ಅವರ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು’ ಚಿತ್ರದಲ್ಲಿ ಕನ್ನಡ ಶಾಲೆಗಳ ಉಳಿವಿಗಾಗಿ ನ್ಯಾಯಾಲಯದಲ್ಲಿ ಅವರು ಮಾತನಾಡುವ 10 ನಿಮಿಷಕ್ಕೂ ಮೀರಿದ ಸುದೀರ್ಘ ಭಾಷಣದ ದೃಶ್ಯವನ್ನು ಒಂದೇ 'ಸಿಂಗಲ್ ಟೇಕ್'ನಲ್ಲಿ ಮುಗಿಸಿದ್ದು ಅವರ ಕಸುಬುಗಾರಿಕೆ ಮತ್ತು ನೆನಪಿನ ಶಕ್ತಿಗೆ ಸಾಕ್ಷಿ.

​ವೈಯಕ್ತಿಕ ಬದುಕು ಮತ್ತು ಗೌರವಗಳ ಮುಕುಟ

​1948ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿಯ ಕೊಂಕಣಿ ಕುಟುಂಬದಲ್ಲಿ ಸದಾಶಿವ ನಾಗರಕಟ್ಟೆ ಮತ್ತು ಆನಂದಿ ದಂಪತಿಯ ಹಿರಿಯ ಪುತ್ರನಾಗಿ ಜನಿಸಿದ ಅನಂತ್ ಬೆಳೆದದ್ದು ಮುಂಬೈ ಹಾಗೂ ಕರ್ನಾಟಕದ ವಿವಿಧೆಡೆ. ಸಹೋದರಿ ಶ್ಯಾಮಲಾ ಮತ್ತು ತಮ್ಮ ಶಂಕರ್ ನಾಗ್ ಅವರ ಒಡನಾಟದಲ್ಲಿ ಸಾಹಿತ್ಯ-ಕಲೆಯ ವಾತಾವರಣದಲ್ಲೇ ಬೆಳೆದರು. ಮುಂದೆ ನಟಿ ಗಾಯತ್ರಿ ಅವರನ್ನು ವಿವಾಹವಾದ ಅನಂತ್ ಅವರಿಗೆ ಅದಿತಿ ಎಂಬ ಮಗಳಿದ್ದಾರೆ. ಚಿತ್ರರಂಗದ ತಾರಾಮೌಲ್ಯದ ನಡುವೆಯೂ ತುಂಬು ಸಂಸಾರಿಯಾಗಿ, ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ಬದುಕಿದವರು.

​ಶ್ಯಾಮ್ ಬೆನೆಗಲ್ ಅವರ ‘ಅಂಕುರ್’, ‘ನಿಶಾಂತ್’, ‘ಮಂಥನ್’, ‘ಭೂಮಿಕಾ’, ‘ಕಲಿಯುಗ್’ ಮುಂತಾದ ಸಿನೆಮಾಗಳ ಮೂಲಕ ರಾಷ್ಟ್ರಮಟ್ಟದಲ್ಲೂ ಮಿಂಚಿದ ಇವರು ಕರ್ನಾಟಕ ರಾಜ್ಯ ಪ್ರಶಸ್ತಿಗಳಲ್ಲಿ ಆರು ಬಾರಿ ಅತ್ಯುತ್ತಮ ನಟ ಪ್ರಶಸ್ತಿ, ಡಾ. ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

​ಹಿಂದೆ ಡಾ. ರಾಜ್‌ಕುಮಾರ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಾಗ ಅಂದಿನ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರಾಗಿದ್ದ ಸಿ.ಎಂ. ಇಬ್ರಾಹಿಂ ಅವರ ಪ್ರಯತ್ನಗಳಿದ್ದವು ಎಂಬ ಸಣ್ಣ ರಾಜಕೀಯ ಗುಲ್ಲು ಎದ್ದಿದ್ದು ಉಂಟು. ರಾಷ್ಟ್ರೀಯ ಮಟ್ಟದಲ್ಲಿ ಆ ಪ್ರತಿಭೆಯನ್ನು ಗುರುತಿಸಿ ಪೋಷಿಸುವವರು ಇರಬೇಕಾಗುತ್ತದೆ ಎಂಬುದು ಸಾಮಾನ್ಯ ಸಂಗತಿ.

1948ರಲ್ಲಿ ಜನಿಸಿ ಐದು ದಶಕಗಳ ಕಾಲ ಬೆಳ್ಳಿತೆರೆಯನ್ನು ಆಳಿದ ಅನಂತ್‌ನಾಗ್ ಅವರಿಗೆ ಲಭಿಸಿದ ಪದ್ಮಭೂಷಣ ಗೌರವ ಹಾಗೂ ಈಗ ಒಲಿದುಬಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಕನ್ನಡಿಗರೆಲ್ಲರೂ ಅತ್ಯಂತ ಹೆಮ್ಮೆಪಡುವ ಸಂಗತಿ. ಗಣೇಶ ಸರಣಿಯ ಚಿತ್ರಗಳ ಮೂಲಕ ಮನೆಮಾತಾಗಿದ್ದ ನೆಚ್ಚಿನ ನಟನಿಗೆ, ಈ ಅತ್ಯುನ್ನತ ಪುರಸ್ಕಾರಗಳು ಸಂದಿರುವುದು ಗಣೇಶನ ಹಬ್ಬದ ಸಂದರ್ಭದಲ್ಲಿಯೇ ಬಂದಿರುವುದು ಕಲಾ ಸರಸ್ವತಿಗೆ ಸಂದ ನಿಜವಾದ ಗೌರವ.