ಇಲ್ಲಿ ನಾನು ಉಲ್ಲೇಖಿಸುವ ಕನ್ನಡ ಮೂಲದ ವ್ಯುತ್ಪತ್ತಿಗಳು ಕೆಲವು ಇತರೆ ದ್ರಾವಿಡ ಭಾಷೆಗಳಲ್ಲಿಯೂ ಕಾಣಬಹುದು. ಕೆಲವೊಮ್ಮೆ ಕನ್ನಡದ ರೀತಿಯೇ ಇರುವ ಇತರೆ ಭಾಷೆಗಳಿಂದಲೂ (ಹಳೆಯ ಕಾಲದ ನಾಮ ಉಲ್ಲೇಖ ಇಲ್ಲದ ಕೆಲವು ಭಾಷೆಗಳಿಂದಲೂ) ತೆಗೆದುಕೊಂಡಿರಬಹುದು. ಆದರೆ ಇಲ್ಲಿ ಕನ್ನಡದ ಆ ಪದಕ್ಕೆ ಮತ್ತು ಸಂಸ್ಕೃತದ ಪದಕ್ಕೆ ಏಕೆ ಹೆಚ್ಚು ಹತ್ತಿರದ ಸಂಬಂಧವಿದೆ ಎಂದು ವಿಶ್ಲೇಷಿಸುತ್ತೇನೆ. ಕೆಲವು ಪದಗಳು ಯಥಾವತ್ತಾಗಿ ಕನ್ನಡದಿಂದ ತೆಗೆದುಕೊಳ್ಳಲಾಗಿದೆ, ಇನ್ನು ಕೆಲವು ಪದಗಳು ಸಂಸ್ಕೃತದಲ್ಲಿ ಬದಲಾದ ರೂಪದಲ್ಲಿದೆ. ಹಾಗಾಗಿ ಆ ಎಲ್ಲ ಸಂಗತಿಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ.
- - - - - - - - - - - - - - - - - - - - - - - - - - - - - - - - - - - - - - - - - -
ಕುಶ (कुश)
ಇಲ್ಲಿ ಕುಶ ಎಂಬ ಸಂಸ್ಕೃತ ಪದದ ಅರ್ಥ "ಹುಲ್ಲು" ಅಥವ "ಹುಲ್ಲು ಕಡ್ಡಿ" ಎಂದು. ಕುಶ ಪದವು ಕನ್ನಡದ "ಕಸ" ಎಂಬ ಪದದಿಂದ ತೆಗೆದುಕೊಳ್ಳಲಾಗಿದೆ. ಕಸ ಎಂಬ ಪದವು ಆಧುನಿಕ ಕನ್ನಡದಲ್ಲಿ ಧೂಳು ಅಥವ ಬೇಡದೆ ಇರುವ ವಸ್ತು ಎಂದು ಅರ್ಥೈಸುವುದುಂಟು. ಆದರೆ ಹಿಂದೆ ಇದನ್ನು ಅರ್ಥೈಸುತಿದ್ದ ರೀತಿಯೇ ಬೇರೆ. ಹಿಂದೆ ಗುಡಿಸಲುಗಳನ್ನು ಮಣ್ಣಿನ ಮೇಲೆಯೇ ಕಟ್ಟುತಿದ್ದರು. ಈ ಗುಡಿಸಲುಗಳನ್ನು ಸ್ವಚ್ಚಪಡಿಸುವ ಪ್ರಕ್ರಿಯೆಗಳಲ್ಲಿ, ಮಣ್ಣಿನ ಮೇಲೆ ಬೆಳೆದಿರುವ ಗಿಡ ಗಂಟೆಗಳನ್ನು ಕತ್ತರಿಸಿ ಒಗ್ಗೂಡಿಸುವ ಕಾರ್ಯಕ್ಕೆ "ಕಸ ಗುಡಿಸುವುದು" ಎಂದು ಕರೆಯುತ್ತಿದ್ದರು. ಈ "ಕಸ" ಎಂಬ ಪದವು ಹಳೆಗನ್ನಡದಲ್ಲಿ "ಕೞ" ಎಂಬ "Zha" ಉಚ್ಚಾರಣೆಯಗಿ ಕರೆಯುತ್ತಿದ್ದರು. ಈ "ೞ"ಕಾರವು ನಡುಗನ್ನಡದ ಕಾಲಕ್ಕೆ "ಳ"ಕಾರವಾಗಿ ಬದಲಾಗಿರುವುದನ್ನು ಕಾಣಬಹುದು. ಇದಕ್ಕೆ ಉದಾಹರಣೆಯಾಗಿ ಕಲವೊಮ್ಮೆ ಹುಲ್ಲಿಗಾಗಿ "ಕಳೆ" ಎಂದು ಕರೆಯುವುದುಂಟು. ತಮಿಳಿನಲ್ಲಿ ಕೆಲವೊಮ್ಮೆ ಹುಲ್ಲಿಗಾಗಿ "ಕಳೈ" ಎಂದ ಕರೆಯುತ್ತಾರೆ. ಇನ್ನು ಕೆಲವೊಮ್ಮೆ "ೞ" ಕಾರವು (Zha) "ಸ"ಕಾರವಾಗಿ "ಕಸ" ಎಂದು ಮಾರ್ಪಟ್ಟಿದೆ. ಈ ಕಸ ಪದದಿಂದಲೇ 'ಕಸಿ', 'ಕಸಾಯ / ಕಷಾಯ ' ಎಂಬಿತ್ಯಾದಿ ಪದಗಳನ್ನು ಕಾಣಬಹುದು. ಹೀಗೆ ೞ ಕಾರವು ಸಂಸ್ಕೃತದ ಅಕ್ಷರಗಳಲ್ಲಿ ಇಲ್ಲದಿರುವುದರಿಂದ, ಇದು "ಚ" ಕಾರವಾಗಿ ಅಥವಾ "ಷ" ಕಾರಾಂತವಾಗಿ ಸಂಸ್ಕೃತದಲ್ಲಿ ಬದಲಾಯಿತು.
ಕುಶ ಪದದ ಬಳಕೆಯು ಕನ್ನಡದಿಂದ ಸಂಸ್ಕೃತ ವಾಂಗ್ಮಯಕ್ಕೆ ಹೊಗಿರುವುದನ್ನು ಐತಿಹಾಸಿಕವಾಗಿಯೂ ಕಾಣಬಹುದು. ಈಗಿನ ಶಿವಮೊಗ್ಗ ಜಿಲ್ಲೆಯ ತಾಳಗುಂದದ ಸಂಸ್ಕೃತ ಶಾಸನದಲ್ಲಿ "ಕುಶ" ಪದದ ಬಳಕೆಯನ್ನು ಗಮನಿಸಬಹುದು. ಇಲ್ಲಿ, ಮಯೂರನ ಸಾಹಸಗಾಥೆಗಳನ್ನು ವರ್ಣಿಸುವ ಪ್ರಸಂಗದಲ್ಲಿ "ಕುಶ" ಎಂಬ ಪದವನ್ನು ಬಳಸಲಾಗಿದೆ. ಸಾಮಾನ್ಯವಾಗಿ "ಕುಶ" ಪದದ ಬದಲು "ತೃಣ", "ದರ್ಬಾ" ಎಂದು ಸಂಸ್ಕೃತದಲ್ಲಿ ಬಳುಸುತ್ತಾರೆ. "ಕುಶ" ಪದವು ಸಂಸ್ಕೃತದಲ್ಲಿ ಹುಲ್ಲಿಗಾಗಿ ಬಳಸುವುದು ಬಹಳ ವಿರಳ.
- - - - - - - - - - - - - - - - - - - - - - - - - - - - - - - - - - - - - - - - - - - -
ಕಾಂತಾ (कांता)
"ಕಾಂತಾ" ಪದವು ಸಂಸ್ಕೃತದಲ್ಲಿ ಗಂಡ ಎಂಬ ಅರ್ಥ ನೀಡುತ್ತದೆ. ಇದು ಕನ್ನಡದ "ಗಂಡ" ಎಂಬ ಪದದಿಂದ ತೆಗೆದುಕೊಳ್ಳಲಾಗಿದೆ. ಈ "ಗಂಡ" ಪದವು "ಕೊಂಡ" ಎಂಬ ಧಾತುವಿನಿಂದ ಬಂದಿರಬಹುದು. "ಕೊಂಡ" ಅಥವಾ "ಗಂಡ" ಎಂದರೆ ಕೊಂಡುಕೊಳ್ಳುವುದು, ಗಳಿಸಿದವನು ಅಥವಾ ಗೆದ್ದವನು ಎಂಬ ಅರ್ಥವನ್ನು ಕೊಡುತ್ತದೆ. ಸಂಸ್ಕೃತದಲ್ಲಿ ಅನೇಕ ಹೆಸರುಗಳು ಕಾಂತ ಎಂಬ ಹೆಸರಿನೊಂದಿಗೆ ಕೊನೆಗೊಳ್ಳುತ್ತದೆ. ಉದಾಹರಣೆಗೆ, ಲಕ್ಷ್ಮೀಕಾಂತ (ಲಕ್ಷ್ಮಿಯ ಗಂಡ :ನಾರಾಯಣ), ಉಮಾಕಾಂತ (ಉಮಾಳ ಗಂಡ : ಶಿವ), ಸೀತಾಕಾಂತ (ಸೀತೆಯ ಗಂಡ : ರಾಮ), ಶ್ರೀಕಾಂತ (ವಿಷ್ಣು) ಹೀಗೆ ಹಲವಾರು ಹೆಸರುಗಳು "ಕಾಂತಾ" ಪದಗಳಿಂದ ಕೊನೆಗೊಳ್ಳುತ್ತದೆ. ಅಲ್ಲದೆ ಕರ್ನಾಟಕದ ಅರಸರ ಕೆಲವು ಬಿರುದುಗಳು "ಗಂಡ" ಎಂಬ ಪದದಿಂದ ಕೊನೆಗೊಳ್ಳುತದೆ. ಉದಾಹರಣೆಗೆ, "ತಲಕಾಡುಗೊಂಡ", "ಮಲೆಪರಗಂಡ", "ಗಂಡರಗಂಡ". ಕೆಲವೊಮ್ಮೆ "ಕಾಂತಾ" ಪದವು ಹೆಣ್ಣನು ದೃಷ್ಟಿಯಲ್ಲಿಟ್ಟುಕೊಂಡ ಸಂಭೋದಿಸಿರುವುದು ಉಂಟು. ಉದಾಹರಣೆಗೆ, "ಧರ್ಮಕಾಂತ". ಇಲ್ಲಿ ಪತ್ನಿಯನ್ನು ಸಂಸ್ಕೃತ್ದಲ್ಲಿ ಹೀಗೂ ಕರೆಯುತ್ತಾರೆ. ಹಾಗಾಗಿ "ಕಾಂತಾ" ಪದವು ಕನ್ನಡದಿಂದ ಸಂಸ್ಕೃತಕ್ಕೆ ಹೋಗಿದೆ ಎಂದು ಹೇಳಬಹುದು.
- - - - - - - - - - - - - - - - - - - - - - - - - - - - - - - - - - - - - - - - - - - -
ಅರ್ಧ (अर्ध)
"ಅರ್ಧ" ಪದವು ಕನ್ನಡ ಅಥವಾ ಹಿಂದೆ ಕನ್ನಡಕ್ಕೆ ಹತ್ತಿರವಾದಂತ ಯಾವುದೊ ಭಾಷೆಯಿಂದ ತೆಗೆದು ಕೊಂಡಿದೆ ಎಂದು ಹೇಳಬಹುದು. ಈ ಪದವು ಸಾಮಾನ್ಯ ಎಲ್ಲರೂ ಸಂಸ್ಕೃತದ್ದೇ ಆದ ಸ್ವಂತ ಪದವೆಂದು ತಿಳಿಯುತ್ತಾರೆ. ಆದರೆ "ಅರ್ಧ" ಪದಕ್ಕೂ ಕನ್ನಡದ "ಎರಡು" ಎಂಬ ಪದಕ್ಕೂ ಬಹಳ ತಾರ್ಕಿಕ ಸಂಭಂದವಿದೆ . ಸಾಮಾನ್ಯವಾಗಿ ಒಂದು ಇಡೀಯಾ ವಸ್ತುವನ್ನು 'ಎರಡು' ಭಾಗ ಮಾಡುವ ಪ್ರಕ್ರಿಯೆಯನ್ನು 'ಅರ್ಧ' ಮಾಡುವುದೆಂದು ನಾವು ಕರೆಯುತ್ತೇವೆ. ಇಲ್ಲಿ ನಾವು "ಎರಡು" ಮತ್ತೆ "ಅರ್ಧ" ಪದಗಳನ್ನು ಗಮನಿಸಬೇಕು. ಭಾಷಾ ಶಾಸ್ತ್ರಜ್ಞರು ಹೇಳುವಂತೆ "ಅ"ಕಾರವು "ಎ"ಕಾರವಾಗುವುದು ಮತ್ತು "ಎ"ಕಾರವು "ಅ"ಕಾರವಾಗುವುದು ಪದಬಳಕೆಯಲ್ಲಿ ಸಾಮಾನ್ಯ. ಹಾಗಾಗಿ "ಎ" ಕಾರವಿರುವಕಡೆ "ಅ"ಕಾರವಾಗಿ 'ಎರಡು' ಪದವು "ಅರದು" ಆಗಿ "ಅರ್ಧ"ಆಗಿರಬಹುದು.
ಎರಡು >> ಎರದು >>ಎರ್ದು >>ಅರ್ದು >>ಅರ್ಧ .
ಹೀಗೆ ಪದ ಬದಲಾವಣೆ ಆಗಿರಬಹುದು. ಕನ್ನಡದಲ್ಲಿ ಯಾವುದಾದರೂ ಅರ್ಧ ಗೊಳಿಸುವ ಪದಕ್ಕೆ "ಹರಿಯುವುದು" ಅಥವಾ "ಹರಿ" ಎಂಬ ಪದವನ್ನು ಕಾಣುತ್ತೇವೆ. ಉದಾಹರಣೆಗೆ, ಬಟ್ಟೆ ಹರಿಯುವುದು, ಕಾಗದ ಹರಿಯುವುದು ಎಂಬಿತ್ಯಾದಿ ಪದಗಳನ್ನು ಕಾಣಬಹುದು. ಇಲ್ಲಿ ಹರಿ ಪದದ ಮೂಲ "ಅರಿ" ಎಂಬ ಪದ. ನಡುಗನ್ನಡದ ಕಾಲಕ್ಕೆ "ಅರಿ" ಎಂಬ ಪದ "ಹರಿ" ಎಂದು ಬದಲಾಗಿರಬಹುದು . "ಮದನಾರಿ (ಮದನನನ್ನು ಅರಿದವನು )", "ಮೈಲಾರಿ / ಮಲ್ಹಾರಿ ( ಮಲ್ಲನನ್ನು ಅರಿದವನು / ಅಥವಾ ಮಲ್ಲನನ್ನು ಹರಿದವನು )" ಎಂಬ ಅರ್ಥ ಬರುವ ಪದಗಳನ್ನು ಇದಕ್ಕೆ ಉದಾಹರಣೆಯಾಗಿ ಕಾಣಬಹುದು. ಹಾಗಾಗಿ ಈ "ಅರಿ" ಪದವು "ಅರ್ಧ" ಅಥವಾ "ಎರಡು" ಮಾಡುವ ಕ್ರಿಯೆಗೆ ಸಂಬಂಧಿಸಿದೆ. ಕೆಲವೊಮ್ಮೆ "ಎ"ಕಾರವು "ಇ" ಕಾರವಾಗಿ ಬದಲಾಗುವುದನ್ನು ಕಾಣಬಹುದು. ಉದಾಹರಣೆಗೆ, ಎರಡು ಜನರನ್ನು ಉದ್ದೇಶಿಸುವ ಪದಕ್ಕೆ "ಇರ್ವರು" ಎಂದು ಕರೆಯಬಹುದು. ಹಾಗೆಯೇ, "ಅರಿ" ಎಂಬ ಪದಕ್ಕೆ "ಇರಿ" ಎಂಬ ಪದವು ಸಮಾನಾರ್ಥಕ ವಾಗುವುದು (ಇರಿ ಎಂದರೆ ಯಾವುದಾದರು ಚೂಪಾದ ವಸ್ತುವಿನಿಂದ ಮನುಷ್ಯನನ್ನು ಸಾಯಿಸುವ ಕ್ರಿಯೆ ಅಥವಾ ಚುಚ್ಚುವುದು ಎಂಬ ಅರ್ಥ ಕೊಡುತ್ತದೆ).
ಕೇವಲ ಅರ್ಧ ಪದವಷ್ಟೇ ಎಲ್ಲ "ಅರ್ಥ" ಪದವು ಇದಕ್ಕೆ ಸಂಬಂಧ ಹೊಂದಿದೆ. ಈಗಾಗಲೇ ಉಲ್ಲೇಖಿಸಿರುವ "ಅರಿ" ಪದವು ಅರ್ಥ ಪದದೊಂದಿದೆ ಸಂಬಂಧ ಹೊಂದಿದೆ. "ಅರಿ" ಎಂದರೆ ತಿಳಿದುಕೊಳ್ಳುವುದು ಎಂಬ ಅರ್ಥವೂ ಉಂಟು. ಈ ಪದವು ಸಹ ಕನ್ನಡದ "ಎರಡು" ಪದದೊಂದಿಗೆ ಸಮಾನಾರ್ಥಕ ವಾಗಿದೆ. ಇಲ್ಲಿ ಅರಿ ಎಂದರೆ ಯಾವುದಾದರು ಒಂದು ಪದವೋ ಅಥವಾ ವಿಷಯವನ್ನು ಬಿಡಿಸಿ/ ವಿಂಗಡಿಸಿ ಅದರ ತಿರುಳನ್ನುತಿಳಿದುಕೊಳ್ಳುವ ಕ್ರಿಯೆ. ಇಲ್ಲಿ ಯಾವುದಾದರೂ ವಿಷಯವನ್ನು ಬಿಡಿಸುವುದು ಎರಡು ಭಾಗವಾಗಿಸುವುದು ಎಂದು ಅರ್ಥ.
ಹಾಗಾಗಿ ಎರಡು, ಅರ್ಧ, ಅರ್ಥ, ಅರಿತು, ಅರಿ, ಹರಿ, ಇರಿ, ಎಂಬ ಪದಗಳ ಮೂಲ ಕ್ರಿಯೆ ಒಂದೇ. ಒಂದು ವೇಳೆ ಅದು ಸಂಸ್ಕೃತದ್ದೇ ಪದವಾಗಿದ್ದರೆ "ದ್ವಾ" ಅಥವಾ "ದ್ವಿ" ಎಂಬ ಧಾತುವನ್ನು ಬಳಸಿಕೊಂಡು "ಅರ್ಧ" ಪದಕ್ಕೆ ಪರ್ಯಾಯ ಪದವಿದ್ದೀತು. ಆಧಾರೇ ಸಂಸ್ಕೃತದಲ್ಲಿ ಈ ಧಾತುವನ್ನು ಬಳಸಿಕೊಂಡು ಯಾವುದೇ ಪದವು "ಅರ್ಧ" ಎಂಬ ಪದಕ್ಕೆ ಪರ್ಯಾಯ ಪದವಿಲ್ಲಾ. ಅಲ್ಲದೆ ಈ ಪದವು ಕನ್ನಡದ "ಎರಡು" ಪದದೊಂದಿಗೆ ಸಮಾನ ಕ್ರಿಯಾರ್ಥ ಹೊಂದಿರುವುದರಿಂದ, "ಅರ್ಧ ಪದವು ಕನ್ನಡದ ಅಥವಾ ಕನ್ನಡಕ್ಕೆ ಹತ್ತಿರದ ಹಿಂದಿನ ಯಾವುದೋ ಭಾಷೆಯಿಂದ ತೆಗೆದುಕೊಂಡಿರಬಹುದು.
- - - - - - - - - - - - - - - - - - - - - - - - - - - - - - - - - - - - - - - - - - - -
ಮರ್ಕಟ ( मर्कट )
"ಮರ್ಕಟ" ಎಂದರೆ ಸಂಸ್ಕೃತದಲ್ಲಿ "ಮಂಗ" ಎಂದು ಅರ್ಥ. ಈ ಪದವನ್ನು ಕೆಲವರು ಪ್ರಾಕೃತದಿಂದ ಸಂಸ್ಕೃತಕ್ಕೆ ಹೋಗಿರುವುದೆಂದು ಹೇಳುತ್ತಾರೆ. ಇನ್ನೂ ಕೆಲವರು ಈ ಪದ ಸಂಸ್ಕೃತದಿಂದ ಪ್ರಾಕೃತಕ್ಕೆ ಬಂದಿದೆ ಎಂದು ಹೇಳುತ್ತಾರೆ. ಪ್ರಾಕೃತದಲ್ಲಿ(ಮಹಾರಾಷ್ಟ್ರೀ ) ಮರ್ಕಟವನ್ನು "ಮಾಕಟ" ಎಂದು ಕರೆಯುತ್ತಿದ್ದರು. ಆದರೆ ಕನ್ನಡದಲ್ಲಿ "ಮರ್ಕಟ"ದ ಪದೋತ್ಪತ್ತಿಯನ್ನು ಕಾಣಬಹುದು. "ಮರ್ಕಟ" ಪದವನ್ನು "ಮರ" ಮತ್ತು "ಕಟ" ಎಂದು ವಿಂಗಡಿಸಬಹುದು. ಮರ ಎಂದರೆ ವೃಕ್ಷ , ತರು ಎಂದು ಅರ್ಥ, ಆದರೆ "ಕಟ" ಎಂಬ ಪದಕ್ಕೆ ಬಹಳಷ್ಟು ವ್ಯುತ್ಪತ್ತಿಗಳನ್ನು ಕಾಣಬಹುದು. ಈ "ಕಟ" ಶಬ್ದವನ್ನು "ಕತ ", "ಕೊತ" ಅಥವಾ "ಕೋತಿ" ಎಂದು ಭಾವಿಸಬಹುದು (ಕನ್ನಡದಲ್ಲಿ ಮರ್ಕಟವನ್ನು ಕೋತಿ ಎಂದೇ ಕೆಲವು ಕಡೆ ಕರೆಯುತ್ತಾರೆ). ಇಲ್ಲವೇ "ಕೋತಿ"ಯನ್ನು "ಕೊತ್ತಿ" ಎಂದು ಗ್ರಹಿಸುವುದುಂಟು (ಇಲ್ಲಿ ಕೊತ್ತಿ ಎಂದರೆ ಬೆಕ್ಕು ಅಥವಾ ಬೆಕ್ಕು ಜಾತಿಗೆ ಸೇರಿದ ಪ್ರಾಣಿ, ಕೆಲವೊಮ್ಮೆ ಯಾವುದಾದರು ಸಣ್ಣ ಪ್ರಾಣಿಯನ್ನು ಕೊತ್ತಿ ಎಂದು ಕರೆಯುವುದುಂಟು). ಹಾಗಾದರೆ
ಮರ + ಕೋತಿ / ಕೊತ್ತಿ >> ಮರಕೋತಿ
ಮರಕೋತಿ >> ಮರ್ಕೊತ >> ಮರ್ಕತ >> ಮರ್ಕಟ ಎಂದು ಪದ ಬದಲಾವಣೆಯಾಗಿರಬಹುದು.
ಕೆಲವೊಮ್ಮೆ "ಕಟ" ಶಬ್ದವನ್ನು "ಕೊತ"ದಿಂದ "ಕೂತ" ಎಂದು ಗ್ರಹಿಸಬಹುದು. ಇಲ್ಲಿ "ಕೂತ" ಎಂದರೆ ಕೂತಿರುವ ,ಕುಳಿತಿಕೊಂಡಿರುವ ಎಂಬ ಅರ್ಥವು ಹೊಂದುತ್ತದೆ. ಹಾಗಾದರೆ "ಮರ್ಕಟ"ವನ್ನು ಮರ + ಕೂತ ಇಲ್ಲವೇ "ಮರದ ಮೇಲೆ ಕೂತಿರುವ" ಅಥವಾ "ಮರದ ಮೇಲೆ ಕೂತಿರುವ ಪ್ರಾಣಿ" ಎಂದು ಗ್ರಹಿಸಬಹುದು. ಹಾಗಾಗಿ
ಮರ + ಕೂತ >> ಮರ್ಕುತ
ಮರ್ಕುತ >> ಮರ್ಕತ >> ಮರ್ಕಟ ಆಗಿರಬಹುದು. ಇನ್ನು ಪ್ರಾಕೃತದ "ಮಾಕಟ" ಪದವು ಮತ್ತು ಕನ್ನಡದ "ಮಂಗ" ಪದವು ಬಹಳ ಹತ್ತಿರದ ವುತ್ಪತ್ತಿ ಹೊಂದಿರಬಹುದು. ಹೀಗೆ ಮರ್ಕಟ ಎಂಬ ಪದವು ಕನ್ನಡದ "ಮರಕೋತಿ" ಅಥವಾ "ಮರಕೂತ" ಪದದಿಂದ ಮೂಲ ಕಂಡುಕೊಂಡಿರಬಹುದು.
- - - - - - - - - - - - - - - - - - - - - - - - - - - - - - - - - - - - - - - - - - - -
ವ್ಯಾಘ್ರ ( व्याग्र )
ಈ ಪದವು ಹಳೇ ಕನ್ನಡಕ್ಕೆ ಹತ್ತಿರವಾದಂತ ಉತ್ತರ ಭಾರತದ ಭಾಷೆಯಿಂದ ತೆಗೆದುಕೊಂಡಿರಬಹುದು. ಕನ್ನಡದಲ್ಲಿ ಕೆಲವೊಮ್ಮೆ ಹುಲಿಯನ್ನು ವ್ಯಾಘ್ರ ಎಂದು ಕರೆಯುತ್ತಾರೆ. ಈ ವ್ಯಾಘ್ರ ಪದವು ಸಂಸ್ಕೃತಮೂಲದೆಂದೇ ಕೆಲವು ಭಾಷ ಶಾಸ್ತ್ರಜ್ಞರು ಹೇಳುತ್ತಾರೆ. ಆದರೆ ಕನ್ನಡದಲ್ಲಿ ಹುಲಿಗೆ ಮತ್ತೊಂದು ಪದವಿದೆ. ಅದು "ಬಗ್ಗ" ಎಂದು. ಈ ಪದವು ಕೂಡ ಸಂಸ್ಕೃತದಿಂದಲೇ ಕನ್ನಡಕ್ಕೆ ಬಂದಿರಬಹುದೆಂದು ಕೆಲ ವಿದ್ವಾಂಸರು ಹೇಳುತ್ತಾರೆ. ಮೊದಲು ಈ ಶಬ್ದವು ಸಂಸ್ಕೃತದ್ದೇ ಆದ ಸ್ವಂತ ಪದವೋ ಅಥವಾ ಇತರೆ ಭಾಷೆಗಳಿಂದ ತೆಗೆದುಕೊಂಡ ಪದವೋ ಎಂದು ತೀರ್ಮಾನಿಸೋಣ.
ಇತರೆ ಇಂಡೋ ಯುರೋಪಿಯನ್ ಭಾಷಾ ಗುಂಪುಗಳಿಗೆ ಸೇರಿದ ಲ್ಯಾಟಿನ್, ಗ್ರೀಕ್, ಜರ್ಮನ್, ಲಿಥುವೇನಿಯನ್, ಅಲ್ಬೇನಿಯನ್ ಹಾಗು ಬೇರೆ ಯುರೋಪಿಯನ್ ಭಾಷೆಗಳಲ್ಲಿ "ತಿಗರ್", "ತಿಗ್ರಿಸ್", "ತಿಗೆರೆ" ಎಂಬ ಪದ ಹುಲಿಯನ್ನು ಸೂಚಿಸುತ್ತದೆ. ಇನ್ನು ಏಷ್ಯಾದ ಇಂಡೋ ಯುರೋಪಿಯನ್ ಭಾಷೆಗಳಾದ ಅರ್ಮೇನಿಯನ್, ಪರ್ಷಿಯನ್ ಭಾಷೆಗಳಲ್ಲಿ "ವಗರ್" ಮತ್ತು "ಬಬ್ರ" ಎಂದು ಕರೆಯುತ್ತಾರೆ. ಕೇವಲ ಏಷ್ಯಾದ ಇಂಡೋ ಯುರೋಪಿಯನ್ ಭಾಷೆಗಳಲ್ಲಿ ಮಾತ್ರ ಸಂಸ್ಕೃತಕ್ಕೆ ಹತ್ತಿರ ವಾದ ಪದವನ್ನು ಉಪಯೋಗಿಸುತ್ತಾರೆ. ಈಗಿನ ಅರ್ಮೇನಿಯಾದಲ್ಲಿ ಮತ್ತು ಪರ್ಷಿಯಾದಲ್ಲಿ ಹುಲಿಗಳನ್ನು ಕಾಣಲು ಸಿಗುವುದಿಲ್ಲ( ಹಿಂದೆ ಪರ್ಷಿಯಾದ ದಲ್ಲಿ ಹುಲಿಗಳ ಸಂತತಿ ಇತ್ತು ಮತ್ತೆ ಈ ಸಂಗತಿಯನ್ನು ಈಗ ಅಲ್ಲಿ ಇರುವ ಪಳೆಯುಳಿಕೆಗಳಿಂದ ಕಂಡುಕೊಳ್ಳಬಹುದು). ಹಾಗಾಗಿ ಈ "ವಗರ್" ಎಂಬ ಅರ್ಮೇನಿಯನ್ ಪದವು ಸಂಸ್ಕೃತದಿಂದ ತೆಗೆದು ಕೊಂಡಿದೆ ಎಂದು ಕೆಲವು ಐತಿಹಾಸಿಕ ದಾಖಲೆಗಳನ್ನೂ ನೋಡಿ ಹೇಳಬಹುದು. ಆದರೆ ಪರ್ಷಿಯನ್ ವಿಚಾರದಲ್ಲಿ ಹೀಗಾಗಿರಲು ಸಾಧ್ಯವಿಲ್ಲ , ಏಕೆಂದರೆ ಹಿಂದಿನಿಂದಲೂ ಪರ್ಷಿಯನ್ ಭಾಷೆಯಲ್ಲಿ "ಬಬ್ರ" ಎಂದು ಕರೆಯುವುದನ್ನು ನೋಡಿದ್ದೇವೆ. ಹಾಗಾಗಿ ಸಂಸ್ಕೃತದ 'ವ' ಪರ್ಷಿಯನ್ ನ 'ಬ' ಆಗುವುದನ್ನು ನಾವು ಗಮನಿಸಬೇಕು. ಒಂದು ವೇಳೆ ಈ ಪದಗಳು ಒಂದೇ ಭಾಷಾ ಕುಟುಂಬದೊಂದಿಗೆ ಬಂದಿದ್ದಾರೆ ಕೇವಲ ಪರ್ಷಿಯನ್ ಅರ್ಮೇನಿಯನ್ ಸಂಸ್ಕೃತವಷ್ಟೇ ಅಲ್ಲ ಇತರೆ ಇಂಡೋ ಯುರೋಪಿಯನ್ ಭಾಷೆಗಳಾದ ಲ್ಯಾಟಿನ್, ಗ್ರೀಕ್, ಜರ್ಮನ್, ಲೈಟುವೇನಿಯಾನ್ ಭಾಷೆಗಳಲ್ಲೂ ಸಹ ಒಂದೇ ಪದ ಮೂಲವಿರಬೇಕು. ಹಾಗಾಗಿ ಏಷ್ಯಾದ ಇಂಡೋ ಯೂರೋಪಿಯನ್ ಭಾಷೆಗಳು ಇನ್ನಾವುದೋ ಬೇರೆ ಭಾಷೆ ಗಳಿಂದ "ವ್ಯಾಘ್ರ " ಎಂಬ ಪದವನ್ನು ತೆಗೆದುಕೊಂಡಿರಬೇಕು.
ಇನ್ನು ಭಾರತದಲ್ಲಿನ ಇಂಡೋ ಯುರೋಪಿಯನ್ ಭಾಷೆಗಳನ್ನೂ ಬಿಟ್ಟು ಬೇರೆ ಭಾಷೆಗಳಲ್ಲಿ ನೋಡಿದರೆ "ಪುಲಿ", "ಕಟುವಾ", "ಪಿಲಿ", ಹೇಗೆ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಕನ್ನಡಲ್ಲಿ ಹುಲಿಗೆ "ಬಗ್ಗ" ಎಂದು ಕರೆಯುವುದನ್ನು ಗಮನಿಸಬೇಕು. ಮತ್ತೆ "ವ್ಯಾಘ್ರ" ಪದವು "ವ್ಯಾಗ">> "ವಾಗ">> "ಬಾಗ">> "ಬಗ್ಗ" ಹೀಗೆ ಬದಲಾಗಿರಬಹುದು. ಈ "ವ್ಯಾಘ್ರ" ಕನ್ನಡ ಅಥವಾ ಕನ್ನಡದ ತರಹ ಇರುವ ಭಾಷೆಗಳಿಂದಲೇ ಬಂದಿದೆ ಎಂದು ಹೇಳುವುದಕ್ಕೆ ಮತ್ತೊಂದು ಉದಾಹರಣೆ ಕೊಡಬಹುದು. ಸಾಮಾನ್ಯವಾಗಿ ಒಂದೇ ರೀತಿಯ ಅಥವಾ ಒಂದೇ ಜಾತಿಯ ಪ್ರಾಣಿಗಳಿಗೆ ಕನ್ನಡದಲ್ಲಿ ಒಂದು ಪದವನ್ನು ಬೇರೆ ಬೇರೆ ರೀತಿಯಲ್ಲಿ ಉಪಯೋಗಿಸುತ್ತೇವೆ. ಉದಾಹರಣೆಗೆ, "ಕತ್ತೆ" ಮತ್ತು "ಕುದುರೆ", "ನಾಯಿ" ಮತ್ತು "ನರಿ". ಇಲ್ಲಿ ಕತ್ತೆ ಮತ್ತು ಕುದುರೆ ಪದಗಳು "ಕತ್" ಅಥವಾ "ಕೋತ್" ಧಾತುವಿನಿಂದ ಬಂದಿರಬಹುದು. ಅದಲ್ಲದೆ ಕತ್ತೆ ಮತ್ತು ಕುದುರೆ ಎರಡು ಪ್ರಾಣಿಗಳು ಒಂದೇ ಜಾತಿಯವು. ಹೀಗೆ "ಬಗ್ಗ" ಪದವು "ಬಗ್" ಅಥವಾ "ಬಕ್" ಧಾತುವಿಂದ ಬಂದಿರಬಹುದು. ಹಾಗು "ಬೆಕ್ಕು" ಪದವು ಕೂಡ ಇದೆ ಧಾತುವಿನಿಂದಲೇ ಬಂದಿರಬಹುದು. ಅಲ್ಲದೆ "ಬೆಕ್ಕು" ಮತ್ತು "ಬಗ್ಗ"(ಹುಲಿ) ಎರಡು ಕೂಡ ಒಂದೇ ಜಾತಿಯ ಪ್ರಾಣಿಗಳು.
ಈಗಿನ ಆಧುನಿಕ ಕನ್ನಡದಲ್ಲಿ "ಬಗ್ಗ" ಪದವನ್ನು ಹೆಚ್ಚಾಗಿ ಬಳಸುವುದಿಲ್ಲ, ಆದರೇ ಹಿಂದಿನ ಕನ್ನಡದಲ್ಲಿ ಇದು ಬಳಕೆಯಲ್ಲಿತ್ತು. ಇದಕ್ಕೆ ಪೂರಕವಾಗಿ ನಮಗೆ ಕೆಲವು ಸ್ಥಳನಾಮಗಳು "ಬಗ್ಗ"ಎಂದು ಶುರುವಾಗುತ್ತದೆ. ಉದಾಹರಣೆಗೆ, ಬಾಗೇವಾಡಿ, ಬಾಗೂರು, ಬಗೆಮನೆ, ಬಗ್ಗವಳ್ಳಿ , ಹೇಗೆ ಅನೇಕ ಊರುಗಳನ್ನು ಕರ್ನಾಟಕದಲ್ಲಿ ಕಾಣಬಹುದು. ಅಷ್ಟೇ ಅಲ್ಲದೆ ಆಯಾ ಸ್ಥಳಗಳಲ್ಲಿ ಹುಲಿಗಳ ಬಗ್ಗೆ ಸಂಬಂಧಿಸಿದ ಅನೇಕ ಸ್ಥಳಪುರಾಣಗಳನ್ನು ನೋಡಬಹುದು.
ಇಷ್ಟೇ ಅಲ್ಲದೆ "ಬಗ್ಗ"ಪದವು ನಮ್ಮ ಸಂಕೃತಿಯಲ್ಲೂ ತುಂಬಾ ಬಿಂಬಿತವಾಗಿದೆ. "ಭಗವಂತ" ಎಂಬ ಪದವೂ ಸಹ "ಬಗ್ಗ" ಎಂಬ ಪದದಿಂದ ಬಂದಿರಬಹುದು. ಭಗವಂತ ಪದವನ್ನು "ಭಗ" ಹಾಗು "ವಂತ"ಎಂದು ಬಿಡಿಡಿಸಬಹುದು. ಇಲ್ಲಿ "ಭಗ" ಎಂದರೆ "ಬಗ್ಗ" ಅಂದರೆ ಹುಲಿ ಎಂದು ಅರ್ಥೈಸಬಹುದು, ಹಾಗು "ವಂತ" ಪದವನ್ನು "ಅಂತ" ಎಂದು ಭಾವಿಸಬಹುದು. ಯಾರು "ಬಗ್ಗ" (ಹುಲಿ) ಯನ್ನು ವಧಿಸಿದನೋ ಅವನು "ಭಗವಂತ". ಇದಕ್ಕೆ ಪೂರಕವಾಗಿ ಸಿಂಧು ನಾಗರೀಕತೆಯಲ್ಲಿ ಎರಡು ಹುಲಿಗಳನ್ನು ಸಾಯಿಸುವ ಮನುಷ್ಯನ ಮುದ್ರಿಕೆಗಳನ್ನು ನೋಡಬಹುದು.
ಇವು ಕೇವಲ ಸಿಂಧು ಕಣಿವೆಯಲ್ಲಷ್ಟೇ ಅಲ್ಲ, ಸುಮೇರ್, ಅಕ್ಕಡ್ ಮತ್ತು ಏಲಾಮ್ ನಾಗರೀಕತೆಗಳಲ್ಲೂ ಕಾಣಬಹುದು. ಇದೇ "ಭಗವಂತ" ಪದವು ಕಾಲಾನುಕ್ರಮೇಣ ಮಾರ್ಪಟ್ಟು ಭಗವತ, ಭಾಗವತ, ಭಗವತಿ ಆಗಿವೆ. ಮುಂದೆ ಕ್ರಿ.ಪೂ ೫ನೇ ಶತಮಾನದಲ್ಲಿ ಆಗಿನ ಎಲಾಮ್, ಬಲೂಚಿಸ್ತಾನ ಮತ್ತು ಸಿಂಧು ಕಣಿವೆಯನ್ನು ಆಳುತ್ತಿದ್ದ ಮಿಡಿಯನ್ನರು ಹಾಗು ಪರ್ಶಿಯನ್ನರು ಅವರ ಸಂಸ್ಕೃತಿ, ಆಚಾರ, ವಿಚಾರ, ಭಾಷೆಯನ್ನು ಅಲವಡಿಸಿಕೊಂಡರು. ಹೀಗೆ "ಬಗ್ಗ" ಪದವು ಪರ್ಶಿಯನ್ ಭಾಷೆಯಲ್ಲಿ "ಬಬ್ಬ" ಆಗಿರಬಹುದು. ಅದು ಸಂಸ್ಕೃತದ ಪದವಾಗಿದ್ದರೆ "ಭಗವಂತ" ಎನ್ನುವಕಡೆ "ವಗವಂತ" ಆಗಿರುತ್ತಿತ್ತು. ಹಾಗಾಗಿ "ವ್ಯಾಘ್ರ" ಪದವು "ಬಗ್ಗ" ಪದದಿಂದ ರೂಪಾಂತರಗೊಂಡಿರಬಹುದು, ಹಾಗೆ ಈ "ಬಗ್ಗ" ಪದವು ಕನ್ನಡ ಅಥವಾ ಹಿಂದೆ ಸಿಂಧು ಕಣಿವೆ ಅಥವಾ ಉತ್ತರ ಭಾರತದಲ್ಲಿ ಕನ್ನಡಕ್ಕೆ ಹತ್ತಿರವಾದಂತಹ ಭಾಷೆಯಿಂದ ತೆಗೆದುಕೊಂಡಿರಬಹುದು.
- - - - - - - - - - - - - - - - - - - - - - - - - - - - - - - - - - - - - - - - - - - -
ಶೃಂಗ (श्रृंग)
ಶೃಂಗ ಪದವು ಸಂಸ್ಕೃತಭಾಷೆಯಲ್ಲಿ ಗಿರಿ ಶಿಖರ, ಅಥವಾ ತುತ್ತ ತುದಿ ಎಂದು ಅರ್ಥ. ಶೃಂಗ ಪದವು ಕನ್ನಡದ "ತುಂಗ" ಪದದಿಂದ ಬಂದಿರಬಹುದು. ಕನ್ನಡದಲ್ಲಿ "ತುಂಗ" ಎಂದರೆ ಶಿಖರ ಅಥವಾ ತುತ್ತ ತುದಿ ಎಂದು ಅರ್ಥ. ಇಲ್ಲಿ ಕನ್ನಡದ "ತ", "ಟ" ಅಥವಾ "ದ"ಕಾರಗಳು ಸಂಸ್ಕೃತಕ್ಕೆ "ಶ" ಅಥವಾ "ಸ"ಕಾರವಾಗುವುದನ್ನು ನಾವು ಕಾಣಬಹುದು. ಉದಾಹರಣೆಗೆ "ದುಃಖ" >> "ಶೋಕ", "ದಗೆ" >> "ಸೆಕೆ" / "ಶಕೆ" ಅಥವಾ "ಶಾಖ" ಆಗಿರಬಹುದು. ಇವಷ್ಟೆ ಅಲ್ಲದೆ "ತಿರು" ಎಂಬ ದ್ರಾವಿಡ ಪದವು "ಶ್ರಿ" ಆಗಿದೆ ಎಂದು ವಿದ್ವಾಂಸರು ತಿಳಿಸುತ್ತಾರೆ.
ಕೇವಲ ಬೆಟ್ಟ ಗುಡ್ಡ ಎಂಬ ಅರ್ಥಕ್ಕೆ ಸೀಮಿತವಾಗಿರದೆ ಕೆಲವು ರಾಜರು, ಕವಿಗಳ ಹೆಸರುಗಳಲ್ಲಿ "ತುಂಗ" ಪದವನ್ನು ಕಾಣಬಹುದು. ಉದಾಹರಣೆಗೆ "ನೃಪತುಂಗ", "ಜಗತ್ತುಂಗ" ಹೀಗೆ ಕನ್ನಡದ ರಾಜರ ಮತ್ತು ಕವಿಗಳ ಹೆಸರುಗಳಲ್ಲಿ "ತುಂಗ" ಎಂಬ ಪದವನ್ನು ಕಾಣಬಹುದು. ಅಲ್ಲದೇ ಕೆಲವು ಕನ್ನಡ ಪದಗಳಲ್ಲಿಯೂ ಸಹ ಕಾಣಬಹುದು. ಉದಾಹರಣೆಗೆ "ಉತ್ತುಂಗ", ಇಲ್ಲಿ ಮತ್ತೊಮ್ಮೆ ಉತ್ತುಂಗ ಎಂದರೆ ತುತ್ತ ತುದಿ ಎಂದು ಅರ್ಥ. ಹಾಗೆ ಮತ್ತೊಂದು ಉದಾಹರಣೆ ಎಂದರೆ "ಟೊಂಗೆ". ಇಲ್ಲಿ "ಟೊಂಗೆ" ಎಂದರೆ ಮರದ ಶಾಖೆ ಎಂದು ಅರ್ಥ, ಕೆಲವೊಮ್ಮೆ ಪ್ರಾಣಿಗಳ ಕೊಂಬುಗಳನ್ನು ಸೂಚಿಸುವುದಕ್ಕಾಗಿಯೂ "ಟೊಂಗೆ" ಎಂದು ಹೇಳುತ್ತಾರೆ. ಇದಕ್ಕೆ ಉದಾಹರಣೆ ಎಂದರೆ. "ಟಗರು". ಟೊಂಗೆ (ಕೊಂಬು) ಇರುವ ಗಂಡು ಕುರಿಗೆ "ಟಗರು" ಎನ್ನುವರು. ಇಲ್ಲಿ ಟೊಂಗೆ + ಕುರಿ ಎರಡು ಪದಗಳು ಸೇರಿ "ಟೋಗರಿ" ಆಗಿ "ಟಗಾರಿ">> "ಟಗರು" ಆಗಿರುವುದಕ್ಕೆ ಸಾಧ್ಯತೆ ಇದೆ.
ಹಾಗಾಗಿ ಕನ್ನಡದ "ತುಂಗ" ಪದವು ಸಂಸ್ಕೃತಕ್ಕೆ "ಶೃಂಗ"ಆಗಿ ಮಾರ್ಪಟ್ಟಿದೆ. ಇದಕ್ಕೆ ಪೂರಕವಾಗಿ ನಾವು ಸ್ಥಳ ನಾಮಗಳನ್ನು ನೋಡಬಹುದು. ಉದಾಹರಣೆಗೆ "ಶೃಂಗೇರಿ". ಶೃಂಗೇರಿ ಪದವನ್ನು "ಶೃಂಗ" ಹಾಗು "ಗಿರಿ"ಎಂದು ಬೇರ್ಪಡಿಸಾಬಹುದು. ಹಿಂದೆ ಶಂಕರಾಚಾರ್ಯರು ಇಲ್ಲಿ ಬರುವ ಮೊದಲು ಈ ಕ್ಷೇತ್ರವನ್ನು "ತುಂಗಾ ಕ್ಷೇತ್ರ" ಹಾಗು ಇಲ್ಲಿ ಹರಿಯುವನದಿಗೆ ತುಂಗಾ ಎಂದು ಕರೆಯುತ್ತಿದ್ದರು. ಅಲ್ಲದೆ ಸ್ಥಳ ಪುರಾಣದ ಪ್ರಕಾರ ನಿಭಾಂಡಕ ಮಹರ್ಷಿಗಳ ಮಗನು ತುಂಗಾ ಕ್ಷೇತ್ರದಲ್ಲಿ ತಪಸ್ಸನ್ನಾಚರಿಸಿದನು. ಹಾಗಾಗಿ ಅವನ ಹೆಸರು "ಋಷ್ಯಶೃಂಗ" ಎಂದಾಯಿತು. ಇನ್ನು ಕೆಲವರು ಹೇಳುವಪ್ರಕಾರ ನಿಭಾಂಡಕ ಮಹರ್ಶಿಗಳ ಮಗನಿಗೆ ಜಿಂಕೆಯ ರೀತಿ ಕೊಂಬಿದ್ದಿದ್ದರಿಂದ ಅವನನ್ನು ಶೃಂಗ ಋಷಿ ಅಥವಾ ಋಷ್ಯಶೃಂಗ ಎಂದು ಹೆಸರು ಬಂದಿತು. ಕಾಲಕ್ರಮೇಣ ಈಪ್ರದೇಶವು "ತುಂಗಾ" ಕ್ಷೇತ್ರವು "ಶೃಂಗ" ಕ್ಷೇತ್ರವಾಯಿತು, ಹಾಗೆ ಇದಕ್ಕೆ ಗಿರಿ ಪದವು ಸೇರಿ "ಶೃಂಗೇರಿ" ಆಯಿತು. ಆದರೆ ಈ ಕ್ಷೇತ್ರದ ಮೂಲ ಹೆಸರನ್ನು ಇಲ್ಲಿನ ನದಿಯ ಮೂಲಕ ಗುರುತಿಸಬಹುದು. ಮತ್ತೊಂದು ಉದಾಹರಣೆ ಎಂದರೆ ಹಂಪೆಯ ಹತ್ತಿರ ಇರುವ "ಮತಂಗ" ಪರ್ವತ. ಈ ಹೆಸರನ್ನು ಸಹ "ಮಾ ತುಂಗಾ" ಅಥವಾ "ಮಹಾ ತುಂಗಾ" ಎಂದು ಅರ್ಥೈಸಬಹುದು. ಅಲ್ಲದೆ ಇಲ್ಲಿಯ ಸ್ಥಳ ಪುರಾಣದ ಪ್ರಕಾರ ಮತಂಗ ಋಷಿಗಳು ತಪಸ್ಸು ಮಾಡಿದ ಸ್ಥಳವೆಂದು ಹೇಳುತ್ತಾರೆ.
ಕೆಲ್ಲವೊಮ್ಮೆ ಸಂಸ್ಕೃತ ಭಾಷೆಯಲ್ಲಿಯು ಸಹ "ತುಂಗ" ಎಂಬ ಪದವನ್ನೇ ಬಳಸಿರುವುದುಂಟು. ಇದು ಬಹುಷಃ ಕನ್ನಡದ ಸಾಮ್ರಾಜ್ಯಗಳ ವಿಸ್ತರಣೆಯಿಂದ ಕನ್ನಡದ ಮೂಲಕ ಸಂಸ್ಕೃತಕ್ಕೆ ಮತ್ತೆ ಇತರೆ ಭಾಷೆಗಳಿಗೆ ಹೋಗಿರಬಹುದು. ಉದಾಹರಣೆಗೆ ಪಂಚಕೇದಾರಗಳಲ್ಲಿ ಒಂದಾದ "ತುಂಗನಾಥ" ದೇವರಹೆಸರು ಸಹ ಹೀಗೆ ಬಂದಿರಾಬಹುದು. ಆದರೆ ಕೆಲವು ವಿದ್ವಾಂಸರು ಇದು ಸಂಸ್ಕೃತದ್ದೇ ಪದ ಹಾಗು ತುಂಗನಾಥ ದೇವರು ಸಹಸ್ರಾರು ಶತಮಾನಗಳಷ್ಟು ಹಳೆಯದ್ದು ಎಂದು ವಾದಿಸುವರು. ಆದರೆ ವಿಪರ್ಯಾಸವೆಂದರೆ ಈಗಲೂ ಸಹ ಈ ಪಂಚಕೇದಾರ ದೇವಾಲಯಗಳ ಅರ್ಚಕರು ಕನ್ನಡದವರೇ ಹಾಗು ಕನ್ನಡ ನಾಡಿನ ಮೂಲದವರೇ ಆಗಿದ್ದರೆ. ಹಾಗಿದ್ದರೆ ಈ ಹೆಸರು ಪೂಜೆಮಾಡುವ ಅರ್ಚಕರಿಂದಲೇ ಬಂದದ್ದೋ ಅಥವಾ ಬಹಳ ಹಿಂದೆ ಹಿಮಾಲಯಗಳ ತಪ್ಪಲಲ್ಲಿ ಕನ್ನಡದ ತರಹ ಇರುವ ಭಾಷೆ ಮಾತನಾಡುವ ಜನರ ಮೂಲಕ ಬಂದದ್ದೋ ಎನ್ನುವುದು ಕುತೂಹಲದ ಸಂಗತಿ.
- - - - - - - - - - - - - - - - - - - - - - - - - - - - - - - - - - - - - - - - - - - -
ಶೈಲ ( शैल )
ಶೈಲ ಪದವು ಕೂಡ ಕನ್ನಡದ "ತ"ಕರವು ಸಂಸ್ಕೃತದ "ಶ"ಕಾರವಾಗುವ ಒಂದು ಉದಾಹರಣೆ ಎನ್ನಬಹುದು. ಕನ್ನಡದ "ತಲ" ಶಬ್ದವು ಸಂಸ್ಕೃತದ "ಶಲ" ದಿಂದ "ಶೈಲ" ಪದವಾಗುವುದನ್ನು ಗಮನಿಸಬಹುದು. ಉದಾಹರಣೆಗೆ, ಕೆಲವು ಕರ್ನಾಟಕದ ಊರುಗಳು ತಾಳಗುಂದ, ತಾಳಗುಪ್ಪ, ತಲಕಾವೇರಿ ಹೀಗೆ "ತಲ" ಎಂಬ ಪದದಿಂದ ಶುರುವಾಗುತ್ತದೆ. ಹೀಗೆ "ತಲ" ಪದದಿಂದ ಶುರುವಾಗುವ ಎಲ್ಲ ಊರುಗಳು ಸಹ ಬೆಟ್ಟ ಗುಡ್ಡದ ಪ್ರದೇಶ ಅಥವಾ ಇಳಿಜಾರು ಪ್ರದೇಶಗಳಲ್ಲಿ ಕಾಣಬಹುದು. ಅಲ್ಲದೆ ಈಗಿನ ತಮಿಳುನಾಡು ಮತ್ತು ಕರ್ನಾಟಕದ ಗಡಿಭಾಗದ ಹಾಸನೂರು, ಅಂತಿಯೂರು ಪ್ರದೇಶಗಳಲ್ಲಿ "ತಾಳವಾಡಿ", "ತಾಲಮಲೆ", "ತಾಲಕ್ಕೆರೆ" ಎಂಬ ಹೆಸರಿನ ಊರುಗಳನ್ನು ಕಾಣಬಹುದು. ಇವು ಕನ್ನಡದ ಉಪಭಾಷೆಯಾದ ಸೋಲಿಗ ಜನಾಂಗದವರು ವಾಸಿಸುವ ಪ್ರದೇಶವಾಗಿದೆ. ಈ ಊರುಗಳು ಸಹ ಬೆಟ್ಟ,ಗುಡ್ಡ,ಇಳಿಜಾರು ಪ್ರದೇಶಗಳಲ್ಲಿವೆ. ಹಾಗಾಗಿ "ತಲ" ಎಂಬ ಪದಕ್ಕೆ ಮತ್ತು ಬೆಟ್ಟ ಗುಡ್ಡಗಳಿಗೆ ಸಾಕಷ್ಟು ಹತ್ತಿರದ ಅರ್ಥವಿದೆ. "ತಲೆ" ಎಂಬ ಪದವೂ ಕೂಡ ಶಿರಸ್ಸು ಮತ್ತೆ ಮೂಡಿ ಎಂಬ ಅರ್ಥ ಹೊಂದಿದೆ. ಹಾಗಾಗಿ "ತಲೆ" ಮತ್ತು "ತಲ" ಪದಗಳು ಕೂಡ ಶಿಖರ, ಮುಡಿ ಅಥವಾ ತುದಿ ಎಂಬ ಅರ್ಥ ಕೊಡುತ್ತದೆ.
ಅಷ್ಟೇ ಅಲ್ಲದೆ ಕೆಲವು ವ್ಯಕ್ತಿಗಳ ಹೆಸರು ಸಹ "ತಲಾ" ಪದದಿಂದ ಶುರುವಾಗುತ್ತದೆ. ಉದಾಹರಣೆಗೆ ಕಲ್ಯಾಣಿ ಚಾಲುಕ್ಯರ ದೊರೆ ಇಮ್ಮಡಿ "ತೈಲಪ". ತೈಲಪ ಎಂಬ ಪದಕ್ಕೆ ಅರ್ಥ ಹುಡುಕುವುದು ಬಹಳಕಷ್ಟಕರವಾದದ್ದು. ಆದರೆ ಕೆಲವರು ತೈಲ ಅಥವಾ ಎಣ್ಣೆಗೆ ಸಂಭಂದಿಸಿದ ಹೆಸರಾಗಿರಬಹುದೆಂದು ತರ್ಕಿಸುತ್ತಾರೆ. ಸಂಸ್ಕೃತದಲ್ಲಿ "ತೈಲಪ" ಎಂದರೆ "ಜಿರಳೆ" ಅಥವಾ "ಎಣ್ಣೆ ಕುಡಿಯುವವನು" ಎಂಬ ಅರ್ಥವೂ ಉಂಟು. ಆದರೆ "ತೈಲಪ"ಪದವನ್ನು "ತೈಲ" ಮತ್ತೆ "ಅಪ್ಪ" ಎಂದು ವಿಂಗಡಿಸಬಹುದು. ಇಲ್ಲಿ "ತ" ಇರುವ ಜಗದಲ್ಲಿ "ಶ" ಸೇರಿಸಿದರೆ "ಶೈಲಪ". ಈ "ಶೈಲಪ" ಪದವನ್ನು "ಶೈಲದ ತಂದೆ" ಎಂದರೆ ಮಲ್ಲಿಕಾರ್ಜುನ ಎಂದು ಗುರುತಿಸಬಹುದು. ಸಾಮಾನ್ಯವಾಗಿ ಮಲ್ಲಿಕಾರ್ಜುನ, ಮೈಲಾರಲಿಂಗೇಶ್ವರನ ದೇವಸ್ಥಾನಗಳು ಬೆಟ್ಟದ ಮೇಲೆ ಇರುತ್ತವೆ. ಅಷ್ಟೇ ಅಲ್ಲದೆ ಕಲ್ಯಾಣಿ ಚಾಲುಕ್ಯರು ಮಲ್ಲಿಕಾರ್ಜುನ ದೇವರ ಆರಾಧಕರು ಹೌದು. ಹಲವಾರು ಕಲ್ಯಾಣಿ ಚಾಲೂಕ್ಕ್ಯರ ಕಾಲದ ಮಲ್ಲಿಕಾರ್ಜುನ ದೇವಸ್ಥಾನಗಳನ್ನು ಈಗಲೂ ಕರ್ನಾಟಕದಲ್ಲಿ ನೋಡಬಹುದು. "ತೈಲಪ" ಹೆಸರಿಗೂ "ತಲ" ಅಥವಾ "ಶೈಲ" ಪದಕ್ಕೂ ಬಹಳ ಹತ್ತಿರದ ಸಂಭಂದವಿದೆ. ಹಾಗಾಗಿ "ತೈಲ" ಅಥವಾ "ತಲ" ಎಂಬ ಕನ್ನಡ ಪದವು ಸಂಸ್ಕೃತದಲ್ಲಿ "ಶೈಲ" ಎಂಬ ಪದವಾಗಿ ಬದಲಾಗಿರಬಹುದಾದ ಸಾಧ್ಯತೆಗಳಿವೆ.
- - - - - - - - - - - - - - - - - - - - - - - - - - - - - - - - - - - - - - - - - - - -
ಔದುಂಬರ ( अवधुम्बरा )
ಈ ಪದವು ಕನ್ನಡದಲ್ಲಿ ಅಷ್ಟೇ ಅಲ್ಲದೆ ಇತರೆ ದಕ್ಷಿಣ ದ್ರಾವಿಡ ಭಾಷೆಗಳಲ್ಲಿಯೂ ಕಾಣಬಹುದು. ಔದುಂಬರ ವೃಕ್ಷವನ್ನು ಭಾರತದಲ್ಲಿ ದೇವ ವೃಕ್ಷವೆಂದು ಪೂಜಿಸುತ್ತಾರೆ. ಅಥರ್ವ ವೇದ, ಶತಪಥ ಬ್ರಾಹ್ಮಣಗಳಲ್ಲಿ ಈ ವೃಕ್ಷದ ಬಗ್ಗೆ ಉಲ್ಲೇಖವಿದೆ. ಈ ವೃಕ್ಷವು ಕೂಡ ಕನ್ನಡದ ಪದದಿಂದ ಬಂದಿರಬಹುದು ಎಂದು ಹೇಳಬಹುದು. ಔದುಂಬರ ಪದವನ್ನು "ಔದಂ " ಮತ್ತು "ಬರ" ಎಂದು ವಿಂಗಡಿಸಬಹುದು. "ಬರ" ಪದವನ್ನು "ಮರ" ಎಂದು ಮತ್ತೆ "ಔದ" ಪದವನ್ನು "ಔತ" >> "ಓತ" >>"ಅತ">> "ಅತ್ತ" ಎಂದು ಆಗಿರಬಹುದು. ಕನ್ನಡಲ್ಲಿ "ಔದುಂಬರ" ವೃಕ್ಷಕ್ಕೆ "ಅತ್ತಿಮರ" ಎಂದು ಕರೆಯುತ್ತಾರೆ. "ಔದುಂಬರ" ಮತ್ತು "ಅತ್ತಿಮರ" ಎರಡು ಪದಗಳು ಬಹಳಷ್ಟು ಹೋಲಿಕೆ ಕಂಡುಬರುತ್ತದೆ. ಅತ್ತಿಮರವನ್ನು ಸಾಮಾನ್ಯವಾಗಿ ದತ್ತ ಸಂಪ್ರದಾಯದಭಕ್ತರು ಪೂಜಿಸುತ್ತಾರೆ. ಈ ಮರವನ್ನು ದತ್ತಾತ್ರೇಯರ ಸ್ವರೂಪವೆಂದೇ ನಂಬುವರು. ವಿಶೇಷವೆಂದರೆ ದತ್ತಾತ್ರೇಯರ ತಂದೆಯವರಾದ ಅತ್ರಿ ಮಹರ್ಷಿಗಳ ಹೆಸರಿಗೂ "ಅತ್ತಿ" ಶಬ್ದಕ್ಕೂ ಬಹಳ ಸಂಬಂಧವಿದ್ದಂತೆ ಕಾಣುತ್ತದೆ. ಅಷ್ಟೇ ಅಲ್ಲದೆ ದತ್ತಸಂಪ್ರದಾಯ ಮತ್ತು ದತ್ತಾತ್ರೇಯರ ಆರಾಧನೆಯನ್ನು ನಾವು ಹೆಚ್ಚು ಡೆಕ್ಕನ್ ಪ್ರಾಂತ್ಯಗಳಲ್ಲಿ ನೋಡಬಹುದು.
- - - - - - - - - - - - - - - - - - - - - - - - - - - - - - - - - - - - - - - - - - - -
ದಕ್ಷಿಣ ( दक्षिण )
"ದಕ್ಷಿಣ" ಪದವು ಸಾಮಾನ್ಯ ಎಲ್ಲ ಭಾರತೀಯ ಭಾಷೆಗಳಲ್ಲಿ ಬಳಸುವ ಪದ. ಭಾಷಾ ಶಾಸ್ತ್ರಜ್ಞರು ಈ ಪದದ ವ್ಯುತ್ಪತ್ತಿಯನ್ನು ವಿಭಿನ್ನ ರೀತಿಯಲ್ಲಿ ಕೊಟ್ಟಿದ್ದಾರೆ. ಕೆಲವರು ಇದು ಸಂಸ್ಕೃತದ್ದೇ ಆದ ಸ್ವಂತ ಪದ ಎಂದು ಕರೆಯುತ್ತಾರೆ, ಇನ್ನು ಕೆಲವರು ಇದು ದ್ರಾವಿಡ ಭಾಷೆಗಳಿಂದ ತೆಗೆದುಕೊಂಡ ಪದವೆಂದು ಕರೆಯುತ್ತಾರೆ. ಹಾಗಾಗಿ ಇದರ ವ್ಯುತ್ಪತ್ತಿಯನ್ನು ನಿಖರವಾಗಿ ಹೇಳಲು ಸಾಧ್ಯವಾಗುವುದಿಲ್ಲ.
ಮೊದಲನೆಯದಾಗಿ ಈ ಪದವು ಮನುಷ್ಯನ ಅಂಗವನ್ನು ಸೂಚಿಸುವ "ದಕ್ಷಿಣ" ಪದದಿಂದ ಬಂದಿರಬಹುದು ಎಂದು ಕೆಲವರು ಹೇಳುತ್ತಾರೆ. ಇಲ್ಲಿ "ದಕ್ಷಿಣ" ಎಂದರೆ ಮನುಶ್ಯನ ಬಲಗೈ ಎಂದು ತಿಳಿಯಬೇಕು. ಹಿಂದೆ ನಾಲ್ಕು ದಿಕ್ಕುಗಳನ್ನು ಗುರಿತಿಸುವುದಕ್ಕಾಗಿ ಜನರು, ಸೂರ್ಯನು ಹುಟ್ಟುವ ದಿಕ್ಕಿಗೆ ಮುಖಮಾಡಿ ನಿಂತಾಗ ನಮ್ಮ ಬಲಭಾಗವನ್ನು ಮುಖಮಾಡುವ ದಿಕ್ಕಿಗೆ "ದಕ್ಷಿಣ"ಎಂದು ಕರೆಯುತ್ತಾರೆ. ಹೀಗೆ "ದಕ್ಷಿಣ" ಪದವು ಬಂದಿರುವುದೆಂದು ಒಂದು ವಾದ. ಇನ್ನೊಂದು ವಾದದ ಪ್ರಕಾರ ಸಂಸ್ಕೃತದ "ದಕ್ಷಿಣ" ಪದವು ಪ್ರಾಕೃತದ "ದಕ್ಕಿಣ" ಅಥವ "ದಕ್ಕಣ" ಎಂಬ ಪದದಿಂದ ಬಂದದ್ದು ಎಂದು. ಇನ್ನು ಪ್ರಾಕೃತಕ್ಕೆ ದಕ್ಷಿಣ ಪದವು ದ್ರಾವಿಡದ ಯಾವುದೋ ಭಾಷೆಯಿಂದ ತೆಗೆದುಕೊಂಡಿರಬಹುದು ಎಂದು.
ಆಗ ದಕ್ಷಿಣ ದ್ರಾವಿಡ ಭಾಷೆಗಳು "ಪ್ರೋಟೋ" ಸ್ಥಿತಿಯಲ್ಲಿದ್ದವು ಎಂದು ಹೇಳಬಹುದು. ಆದರೆ ಕನ್ನಡವೋ ಅಥವಾ ತಮಿಳು ಭಾಷೆಯಿಂದಲೋ ಬಂದಿದೆ ಎಂದು ತೀರ್ಮಾನಿಸುವುದು ಬಹಳ ಕಷ್ಟ. ದಕ್ಷಿಣ ದ್ರಾವಿಡ ಭಾಷೆಯ "ತೆನ್" ಎಂಬ ಪದವು ಈ ಅನುಮಾನಕ್ಕೆ ಕಾರಣವಾಗಿದೆ. ಈ ಪದವು ಮುಂದೆ "ತೆರ್ " ಅಥವಾ "ತೆರ್ಕ್" ಎಂದು ಬದಲಾಗುತ್ತಾದೆ. ಆದರೂ "ತೆನ್" ಶಬ್ದವು ತಮಿಳಿನಲ್ಲಿ ಈಗಲೂ ಉಳಿದುಕೊಂಡಿದೆ. ಕನ್ನಡದಲ್ಲಿ "ತೆನ್" ಶಬ್ದವು "ತೆಂಕ್ನ್" ಅಥವಾ "ತೆಂಕಣ" ಎಂದು ರೂಪಾಂತರಗೊಂಡಿತು. "ದಕ್ಷಿಣ" ಪದವು ತಮೇಲಿನ "ತೇರ್ಕ್" ಅಥವಾ "ತೇರ್" ಪದದಿಂದ ಬಂದಿರಲು ಸಾಧ್ಯವಿಲ್ಲ. ಹಾಗಾಗಿ ಈ ಪದ ಒಂದು ವೇಳೆ ತೆಗೆದುಕೊಂಡಿದ್ದಾರೂ ಕನ್ನಡದಿಂದ ತೆಗೆದು ಕೊಂಡಿರಲು ಸಾಧ್ಯತೆ ಬಹಳ ಹೆಚ್ಚು.
ತೆಂಕಣ (ಕನ್ನಡ) >> ತಂಕಣ >> ದಖ್ಖಣ (ಪ್ರಾಕೃತ ) >> ದಕ್ಷಣ >> ದಕ್ಷಿಣ
ಹೀಗೆ ಕನ್ನಡದ "ತೆಂಕಣ" ಪದವು ಪ್ರಾಕೃತದ ಮೂಲಕ ಸಂಸ್ಕುತಕ್ಕೆ ಹೋಗಿರುವ ಸಾಧ್ಯತೆ ಬಹಳಷ್ಟು ಇದೆ.ಸಂಸ್ಕೃತದಲ್ಲಿ ದಕ್ಷಿಣದಿಕ್ಕನ್ನು ಸೂಚಿಸುವುದಕ್ಕೆ ಮತ್ತೊಂದು ಪದವೆಂದರೆ "ಆವಾಚಿ" ಎಂದು. "ಆವಾಚಿ" ಪದವು ಸಾಮಾನ್ಯವಾಗಿ ಕ್ಲಾಸಿಕಲ್ ಸಂಸ್ಕೃತದಲ್ಲಿ ಉಪಯೋಗಿಸಿರುವುದು ಬಹಳ ಕಡಿಮೆ ಆದರೆ ಹಿಂದಿನ ಸಂಸ್ಕೃತ ಅಥವಾ ವೇದ ಮತ್ತು ಜನಪದದ ಕಾಲದಲ್ಲಿ ಬಳಸಿರುವುದನ್ನು ಕಾಣಬಹುದು. ಅಷ್ಟೇ ಅಲ್ಲದೆ ಮಹಾಜನಪದಗಳಲ್ಲಿ ಒಂದು ಜನಪದದ ಹೆಸರನ್ನು ಈ ಪದದ ಮೂಲಕ ಬಂದಿರಬಹುದು. "ಅವಂತಿ" ಜನಪದವು "ಅವಚಿ" ಪದದ ಮೂಲದಿಂದ ಬಂದಿರಬಹುದು.
ಅವಚಿ >> ಅವಂಚಿ >> ಅವಂತಿ
ಹೀಗೆ ಅವಚಿ ಪದವು ಅವಂತಿ ಎಂದು ಪದ ಬದಲಾವಣೆ ಹೊಂದಿರಬಹುದು. ಹಿಂದೆ ವೇದ ಕಾಲದ ಆರ್ಯಾವರ್ತದಲ್ಲಿ ದಕ್ಷಿಣ ದಿಕ್ಕಿನ ಕೊನೆಯ ಜನಪದವು ಅವಂತಿ ಆಗಿತ್ತೆಂದು ಮರೆಯಬಾರದು.
ಅಲ್ಲದೆ ಆಗ ವರ್ಣಿಸಲ್ಪಟ್ಟ ಆರ್ಯಾವರ್ತವು ಸಿಂಧು ದೇಶದಿಂದ ಅಂಗ ದೇಶದವರೆಗೆ ಮತ್ತು ಗಾಂಧಾರ,ಕಾಂಭೋಜದಿಂದ ಕಾಳಿಂಗ, ಅವಂತಿಯ ವರೆಗೂ ಕರೆಯಲ್ಪಡುತ್ತಿತ್ತು. ಆದರೆ ಕಾಲಾನಂತರ ಅಸ್ಸಕ ಮತ್ತು ಆಂಧ್ರ ಜನಪದಗಳು ದಕ್ಷಿಣಗಳಲ್ಲಿ ಕಾಣಿಸಿಕೊಂಡವು.
"ಅವಚಿ" ಪದದ ಮೂಲವನ್ನು ಹೂಡುಕತೊಡಗಿದರೆ ಇತರೆ ಇಂಡೋ ಯುರೋಪಿಯನ್ ಭಾಷೆಗಳಲ್ಲಿ ಇದೇ ತರಹದ ಪದವು ಸ್ವಲ್ಪ ವಿಭಿನ್ನ ರೀತಿಯಲ್ಲಿ ಉಚ್ಚರಿಸುವುದನ್ನು ಕಾಣಬಹುದು. ಲ್ಯಾಟಿನ್ ನಲ್ಲಿ ದಕ್ಷಿಣ ದಿಕ್ಕಿಗೆ "ಮೆರಿದಿಯಾನೂಸ್" ಎಂದು ಹಾಗು "ಔಸ್ತ" ಎಂಬ ಪದ ಇದೆ. ಇಲ್ಲಿ "ಔಸ್ತ" ಎಂಬ ಪದವನ್ನು ನಾವು ಗಮನಿಸಬೇಕು. ಈ ಪದವನ್ನು ದಕ್ಷಿಣ, ದಾಕ್ಷಿಣಾತ್ಯ ಅಥವಾ ದಕ್ಷಿಣದ ಮಾರುತಗಳನ್ನು ಸೂಚಿಸುವುದಕ್ಕಾಗಿ ಬಳಸುತ್ತಿದ್ದರು. "ಔಸ್ತ" ಪದವು "ಆಸ್ಟ್ರ" ಅಥವಾ "ಆಸ್ಟ್ರಾಲಿಸ್" ಎಂದು ಬದಲಾಯಿತು.
ಈ ಪದವನ್ನು ಜರ್ಮನಿಕ್ ಭಾಷಾಪಂಗಡದವರು ತೆಗೆದು ಕೊಂಡರು. ಹಾಗಾಗಿ ಈಗಲೂ ಕೆಲವು ದೇಶಗಳ ಹೆಸರು "ಆಸ್ಟ್ರಿಯಾ", "ಆಸ್ಟ್ರೇಲಿಯಾ" ಎಂದು ಕಾಣಬಹುದು. ಇದರ ಅರ್ಥ ದಕ್ಷಿಣದ ದೇಶಗಳು ಎಂದು. ಹಾಗಾಗಿ ಈ "ಔಸ್ತ" ಅಥವಾ "ಆಸ್ತಾ" ಪದವು ಮತ್ತು ಸಂಸ್ಕೃತದ "ಅವಚ" ಅಥವಾ "ಅವಚಿ" ಶಬ್ದಗಳು ಒಂದೇ ಮೂಲದಿಂದ ಬಂದಿರುವಂತಹದು. ಭಾಷಾಶಾಸ್ತ್ರಜ್ಞರ ಪ್ರಕಾರ "ಚ"ಕಾರವು "ಸ"ಕಾರವಾಗುವುದು ಅಥವಾ "ಸ"ಕಾರವು "ಚ"ಕಾರವಾಗುವುದು ಸಾಮಾನ್ಯ. ಹಾಗಾಗಿ ಇದರ ಮೂಲಪಾದ "ಔಸ್ಸಾ" ಇಲ್ಲವೇ "ಔಚ್ಚ" ಆಗಿರಬಹುದು. ಈ "ಔಚ್ಚ" ಪದವನ್ನು ತೆಗೆದುಕೊಂಡು "ಅವಂತಿ" ಪದದ ಬದಲು "ಔಚ್ಛಯ್" ಅಥವಾ "ಔಚ್ಚ್ಯಾನಿ" ಎಂದು "ಉಜ್ಜಯಿನಿ" ಪದವು ಬಂದಿರಬಹುದು.
"ಅವಚಿ" ಪದದಿಂದ ಬೇರೆ ಪದಗಳು ಬಂದಿರುವುದನ್ನು ನೋಡಬಹುದು. ಉದಾಹರಣೆಗೆ, ಅವಾಚೀನ, ಅವಾಚ್ಹ್ಯ, ಅವಾಚಿಯ ಪದಗಳನ್ನು ನೋಡಬಹುದು. ಇವೆಲ್ಲವೂ ದಕ್ಷಿಣ ಅಥವಾ ದಾಕ್ಷಿಣಾತ್ಯ ದಿಕ್ಕು ಮತ್ತು ಅಲ್ಲಿನ ವಿಷಯಗಳನ್ನು ತಿಳಿಸುತ್ತವೆ. ವೇದ ಕಾಲದಲ್ಲೂ ದಕ್ಷಿಣ ಪದವು ದಿಕ್ಕನ್ನು ಸೂಚಿಸಲು ಬಳಸಿರುವುದನ್ನು ಎಲ್ಲಿಯೂ ನೋಡಲು ಸಾಧ್ಯವಿಲ್ಲ. ಆದರೆ ಋಗ್ವೇದದಲ್ಲಿ "ದಕ್ಷಿಣ" ಎಂಬ ದೇವರನ್ನು (demi god) ಕಾಣಬಹುದು. ಇದು ಗುರುಗಳಿಗೆ ಅಥವಾ ಹಿರಿಯರಿಗೆ ಕೊಡುಗೆ ಅಥವಾ "ದಕ್ಷಿಣೆ" ಕೊಡಲಿಕ್ಕೆ ಆರಾಧಿಸುತ್ತಿದ್ದರು. ಇದು ಮುಂದೆ ಕ್ರಿ ಪೂ ೭ ಅಥವಾ ೬ನೇ ಶತಮಾನದ ಹೊತ್ತಿಗೆ ನಿದಿಷ್ಟವಾದ ದಿಕ್ಕನ್ನು ಸೂಚಿಸುವುದಕ್ಕೆ ಬಳಸುವುದನ್ನು ಸಂಸ್ಕೃತದಲ್ಲಿ ಕಾಣುತ್ತೇವೆ.
ಹಾಗಾಗಿ ದಕ್ಷಿಣ ಪದವು ಇಂತದ್ದೇ ನಿರ್ಧಿಷ್ಟವಾದ ಭಾಷೆಯಿಂದ ಬಂದಿದೆ ಅಥವಾ ತನ್ನದ್ದೇ ಸ್ವಂತ ಪದವೋ ಎಂದು ತೀರ್ಮಾನಿಸುವುದು ಬಹಳಕಷ್ಟ. ಆದರೆ ಕನ್ನಡದ ತೆಂಕಣ ಪದದಿಂದ ಸಂಸ್ಕೃತಕ್ಕೆ ಹೋಗಿಲ್ಲ ಎಂದು ತಳ್ಳಿ ಹಾಕುವುದಕ್ಕೂ ಸಾಧ್ಯವಿಲ್ಲ.
- - - - - - - - - - - - - - - - - - - - - - - - - - - - - - - - - - - - - - - - - - - -
ಜಟ ( जटा )
"ಜಟ" ಎಂಬಾ ಪದವು ಸಂಸ್ಕೃತ ಭಾಷೆಯಲ್ಲಿ "ಜಡೆ" ಅಥವಾ "ಜುಟ್ಟು" ಎಂದು ಅರ್ಥ. ಈ ಪದವು ಕನ್ನಡದಿಂದ ಸಂಸ್ಕೃತಕ್ಕೆ ಹೋಗಿರುವ ಸಾಧ್ಯತೆಗಳು ಹೆಚ್ಚಿವೆ. ಮತ್ತೊಂದು ವಿಶೇಷತೆ ಎಂದರೆ, ಇತರೆ ಇಂಡೋ ಆರ್ಯನ್ ಭಾಷೆಗಳಲ್ಲಿ ಸಂಸ್ಕೃತದ "ಜಟ" ಎಂಬ ಪದವನ್ನು ಯತಾವತ್ತಾಗಿ ಬಳಸಿರುವುದನ್ನು ಕಾಣಬಹುದು ಕಾಣಬಹುದು. ಕನ್ನಡದ "ಜುಟ್ಟು" ಪದವು "Cut" ಪದದಿಂದ ಬಂದಿರಬಹುದು. ಇಲ್ಲಿ "c" ಪದವನ್ನು "ಕ" ಎಂದು ಓದಬಹುದು ಅಥವ "ಚ" ಎಂದು ಓದಬಹುದು. ಕನ್ನಡದಲ್ಲಿ "ಕಟ್ಟು" ಎಂಬ ಪದವನ್ನು ಒಮ್ಮೊಮ್ಮೆ ಜುಟ್ಟಿಗಾಗಿ ಬಳಸುತ್ತೇವೆ. ಇದು "ಕ" ಉಚ್ಚಾರಣೆಯಾ ಉದಾಹರಣೆ. ಕನ್ನಡದಲ್ಲಿ "ಚ" ಉಚ್ಚಾರಣೆಯ ಬದಲಾಗಿ "ಜ" ಉಚ್ಚಾರಣೆಯಾಗಿದೆ. ಆದರೆ ತಮಿಳಿನಲ್ಲಿ "ಚುಟ್ಟು" ಎಂದು ಕರೆಯುವುದುಂಟು. ಇದು "ಚ" ಉಚ್ಚಾರಣೆಯ ಉದಾಹರಣೆ. ಒಮ್ಮೊಮ್ಮೆ ಹಿಂದಿ ಭಾಷೆಯಲ್ಲಿ "ಚೂಟಿ" ಎಂದು ಕರೆಯುವುದುಂಟು. ಆದರೆ ಕನ್ನಡದ "ಜುಟ್ಟು" ,"ಜಡೆ" ಪದಗಳು ಸಂಸ್ಕೃತದ "ಜಟ" ಪದಕ್ಕೆ ಬಹಳ ಹೋಲಿಕೆ ಕಂಡು ಬರುತ್ತವೆ.
"ಜಟ" ಸಂಸ್ಕೃತದ್ದೇ ಸ್ವಂತ ಪದವಾಗಿದ್ದರೆ ಮತ್ತು ಇದಕ್ಕೆ ಇಂಡೋ ಯುರೋಪಿಯನ್ ಭಾಷಾ ಮೂಲವಿದ್ದರೆ ಇತರೆ ಇಂಡೋ ಯುರೋಪಿಯನ್ ಭಾಷೆಗಳಲ್ಲಿ ಇದರ ತದ್ರೂಪು ಪದವಿರಬೇಕು. ಆದರೆ ಇನ್ನಾವುದೇ ಇಂಡೋ ಯುರೋಪಿಯನ್ ಭಾಷೆಗಳಲ್ಲಿ "ಜಟ" ಪದದ ಹಾಗೆ ಇರುವ ಇನ್ನೊಂದು ಪದವು ಕಾಣಸಿಗುವುದಿಲ್ಲ. "ಜಟ" ಪದವು ಕನ್ನಡದಿಂದ ಅಥವಾ ಕನ್ನಡದ ತರಹ ಇರುವ ಮತ್ತೊಂದು ಭಾಷೆಯಿಂದ ತೆಗೆದುಕೊಂಡಿದೆ ಎಂದು ಹೇಳಬಹುದು.
- - - - - - - - - - - - - - - - - - - - - - - - - - - - - - - - - - - - - - - - - - - -
ಕೊನೇಯದಾಗಿ, ಇಲ್ಲಿ ಉಲ್ಲೇಖಿಸಿರುವ ಕೆಲವು ಪದಗಳು ಅನ್ಯ ಭಾಷೆಗಳಲ್ಲಿ ಬಳಸಿರುವ ಉದಾಹರಣೆಗಳು ಕಾಣಬಹುದು. ಕೆಲವೊಮ್ಮೆ ಯಾವುದು ಸಂಸ್ಕೃತ ಪದ ಯಾವುದು ಕನ್ನಡ ಮೂಲ ಪದ ಎಂದು ಅರಿತುಕೊಳ್ಳಲು ಕಷ್ಟಕರವಾಗಿರುತ್ತದೆ. ಅಷ್ಟರಮಟ್ಟಿಗೆ ಸಂಸ್ಕೃತ ಮತ್ತು ಕನ್ನಡ ಬೆರೆತುಕೊಂಡಿವೆ. ಇನ್ನೂ ಸಾಕಷ್ಟು ಪದಗಳು ಕನ್ನಡದಿಂದ ಸಂಸ್ಕೃತ ವಾಂಗ್ಮಯಕ್ಕೆ ಹೋಗಿರಬಹುದು ಎಂದು ಭಾವಿಸುತ್ತೇನೆ. ಹಾಗು ಇನ್ನಷ್ಟು ಹೆಚ್ಚು ಅಧ್ಯಯನಗಳು ಈ ವಿಷಯದ ಮೇಲೆ ಮುಂದೆ ನೆಡೆಯಬೇಕು. ಕೊನೇಯದಾಗಿ ಕನ್ನಡದಿಂದ ಸಂಸ್ಕೃತಕ್ಕೆ ಹೋದ ಮತ್ತಷ್ಟು ಪದಗಳು ನಿಮಗೆ ತಿಳಿದಲ್ಲಿ, ಕೆಳಗಿನ ಕಾಮೆಂಟ್ ವಿಭಾಗದಲ್ಲಿ ತಿಳಿಸಿ.