Wednesday, September 30, 2026

ಉಡುಪಿ ಜಿಲ್ಲೆಗೆ ಉಡುಪಿ ಎಂಬ ಹೆಸರು ಹೇಗೆ ಬಂತು ಮತ್ತು ಈ ಜಿಲ್ಲೆಯ ವಿಶೇಷತೆಗಳೇನು?

 ಭಾಗ ೧ :->

ಪುರಾತನ ತುಳುನಾಡು/ ಆಳ್ವಖೇಡ/ ಅಳುಪ ಸಾಮ್ರಾಜ್ಯ:- (೨,೦೦೦ ವರ್ಷ ಹಿಂದಿನ ಹೆಸರು, ಸಾಮ್ರಾಜ್ಯ)

ಇದರಲ್ಲಿ ಈಗಿನ ತುಳುನಾಡು ( ಕಾಸರಗೋಡು, ಈಗಿನ ದ.ಕ., ಉಡುಪಿ) ಮಾತ್ರವಲ್ಲದೆ, ಈಗಿನ ಉತ್ತರ ಕನ್ನಡ, ಮಲೆನಾಡಿನ ಕೆಲವು ಭಾಗ, ಗೋವವನ್ನು ಒಳಗೊಂಡಿತ್ತು. ಇದು ಆ ಕಾಲದಲ್ಲಿ ತುಳುವರು, ಕನ್ನಡಿಗರು,ಭಾರತದ ಇತರ ರಾಜರು, ವಿದೇಶಿಯರು ಉಡುಪಿಯನ್ನು ಒಳಗೊಂಡ ಅವಿಭಜಿತ ದ.ಕ. ಉ.ಕ., ಮಲೆನಾಡಿನ ಕೆಲವು ಭಾಗ, ಗೋವ ವನ್ನು ಕರೆಯುತ್ತಿದ್ದ ಹೆಸರು.👇

ನಂತರ ಸಂಕುಚಿತಗೊಂಡ ತುಳುನಾಡನ್ನು ಒಳಗೊಂಡ ಆಳ್ವಖೇಡ, ಪೋರ್ಚಿಗೀಸರಿಂದ "Kanara /Canara"(ಕೆನರ)(ಕನ್ನಡದ ಅಪಭ್ರಂಶ) ಎಂದು ನಾಮಕರಣಗೊಂಡಿತು. ಬ್ರಿಟೀಷರ ಕಾಲದಲ್ಲಿ "Kanara/Canara"( ಕೆನರ) ಜಿಲ್ಲೆಯಾಯಿತು, ದಾಖಲೆಗಳಲ್ಲಿ ಇದೇ ಮುಂದುವರಿಯಿತು. ಪುನಃ ಬ್ರಿಟಿಷರು, ಕೆನರ ಜಿಲ್ಲೆಯನ್ನು ಆಡಳಿತಕ್ಕಾಗಿ ೨ ಭಾಗ ಮಾಡಿ "North Kanara/Canara" (ಉತ್ತರ ಕನ್ನಡ), South Kanara/Canara" (ದಕ್ಷಿಣ ಕನ್ನಡ) ಜಿಲ್ಲೆ ಮಾಡಿದರು. ಉತ್ತರ ಕನ್ನಡದಲ್ಲಿ ಇದ್ದ ಕುಂದಾಪುರವನ್ನು ದಕ್ಷಿಣ ಕನ್ನಡಕ್ಕೆ ಸೇರಿಸಿದರು. ಇದು ಬ್ರಿಟಿಷರು ಭಾರತದಿಂದ ಹೋದ ಮೇಲೂ ೧೯೪೭ ರಿಂದ ೧೯೫೬ ರ ವರೆಗೆ ಮುಂದುವರಿಯಿತು. ಇದುವೇ "ಅಖಂಡ ದಕ್ಷಿಣ ಕನ್ನಡ" ( ಅವಿಭಜಿತ ದಕ್ಷಿಣ ಕನ್ನಡ).

ಅಖಂಡ ದಕ್ಷಿಣ ಕನ್ನಡ ಜಿಲ್ಲೆ , ೩೧-೧೦-೧೯೫೬ ರ ವರೆಗೆ ಈ ರೀತಿ ಇತ್ತು -(ಈಗಿನ ಕಾಸರಗೋಡು,ಈಗಿನ ದ.ಕ. ಈಗಿನ ಉಡುಪಿ ಜಿಲ್ಲೆ ಗಳು) (೪ ಕಾಲಿನಲ್ಲಿ ಕುಳಿತುಕೊಂಡ ಹುಲಿಯ ಆಕಾರದಲ್ಲಿ ಇದೆ)👇

೧-೧೧-೫೬ ರಂದು ಕನ್ನಡ ಪ್ರದೇಶ ಏಕೀಕರಣಗೊಂಡು ವಿಶಾಲ ಮೈಸೂರು ರಾಜ್ಯವಾಯಿತು. ಪಣಿಕರ್ ಅನ್ನುವ ಮಲೆಯಾಳಿಯ ಪಿತೂರಿಯಿಂದ, ಅನ್ಯಾಯವಾಗಿ ಅಖಂಡ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡು ತಾಲೂಕನ್ನು ಮದ್ರಾಸ್ ಪ್ರಾಂತ್ಯದಿಂದ ತೆಗೆದು, ಹೊಸತಾಗಿ ಸೃಷ್ಟಿಯಾದ ಕೇರಳ ರಾಜ್ಯಕ್ಕೆ ಸೇರಿಸಿದರು. ಉಳಿದ ದ.ಕ. ವನ್ನು ಮೈಸೂರು ರಾಜ್ಯಕ್ಕೆ ಸೇರಿಸಿದರು. ನಂತರದ ತುಂಡಾದ ದಕ್ಷಿಣ ಕನ್ನಡ (೧-೧-೧೯೫೬) ಮುಂಗೈ ಕತ್ತರಿಸಲ್ಪಟ್ಟ ಹುಲಿಯ ರೂಪದಲ್ಲಿ ಇದೆ👇

ಕೇರಳಕ್ಕೆ ಅನ್ಯಾಯವಾಗಿ ದಕ್ಷಿಣ ಕನ್ನಡದಿಂದ ಸೇರಿಸಲ್ಪಟ್ಟ ಕಾಸರಗೋಡು ೧-೧೧-೧೯೫೬👇

೧೯೯೭ :- ತುಂಡಾದ ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಪುನಃ ತುಂಡಾಗಿ ಉಡುಪಿ ಜಿಲ್ಲೆಯ ಸೃಷ್ಟಿ ಆಯ್ತು ( ಕರ್ನಾಟಕ ಸರಕಾರದಿಂದ). ಆದರೆ ಇದು ಆಡಳಿತದ ಅನುಕೂಲತೆಗೋಸ್ಕರ ಮಾತ್ರ. ಎರಡೂ ಕರ್ನಾಟಕದಲ್ಲೇ ಇದೆ. ಇಲ್ಲಿ ಅನ್ಯಾಯದ ಪ್ರಶ್ನೆ ಇಲ್ಲ. ಇನ್ನೂ ಒಂದು ತುಂಡಾಗಿ ಕುಂದಾಪುರ ಜಿಲ್ಲೆ ಆದರೂ ತುಳುವ/ಕನ್ನಡಿಗರಿಗೆ ಬೇಸರವಿಲ್ಲ.👇

ಇದು ಉಡುಪಿ ಜಿಲ್ಲೆಯ ಕತೆಯೂ ಹೌದು,ಕಾಸರಗೋಡಿನ ಕತೆಯೂ ಹೌದು, ದ.ಕ.ದ ಕತೆಯೂ ಹೌದು, ತುಳು/ಕುಂದಾಪುರ ಕನ್ನಡ ನಾಡಿನ ಕತೆಯೂ ಹೌದು.————————————————————————————

ಭಾಗ ೨ :->

ಈಗ ಪ್ರಶ್ನೆಗೆ ನೇರ ಉತ್ತರ.

"ಉಡುಪಿ ಜಿಲ್ಲೆಗೆ", "ಉಡುಪಿ ತಾಲೂಕಿನ", "ಉಡುಪಿ ನಗರದ' ಹೆಸರು ಬಂತು.ಇದು ಪ್ರಶ್ನೆಯ ಮೊದಲ ಭಾಗಕ್ಕೆ ಉತ್ತರ.————————————————————————————

ಭಾಗ ೩ :-

ಇನ್ನು ಹೇಗೆ, ನಗರದ ಈ ಹೆಸರೇ, ಈ ಜಿಲ್ಲೆಗೆ ಬಂತೆಂದರೆ : ->

೧) ಆಗಿನ ಉಡುಪಿಯ ಶಾಸಕರೂ,ಕರ್ನಾಟಕ ಸರಕಾರದಲ್ಲಿ ಮಂತ್ರಿಗಳಾಗಿದ್ದ ವಿ.ಎಸ್. ಆಚಾರ್ಯರ ಪ್ರಯತ್ನದಿಂದ ಅವಿಭಜಿತ ದಕ್ಷಿಣ ಕನ್ನಡದಿಂದ ಹೊಸ ಜಿಲ್ಲೆ ಸೃಷ್ಟಿ ಆಯಿತು.

೨) ಅವರು ಉಡುಪಿಯ ಶಾಸಕರಾಗಿದ್ದರಿಂದ ಅವರ ಕ್ಷೇತ್ರವಾದ ಉಡುಪಿಯ ಹೆಸರನ್ನೇ ಹೊಸ ಜಿಲ್ಲೆಗೆ ಸೂಚಿಸಿದರು.

೩) ಆಗ ಈ ಹೊಸ ಜಿಲ್ಲೆಗೆ ಇದ್ದ ತಾಲೂಕುಗಳು ಮೂರು. ಕುಂದಾಪುರ, ಉಡುಪಿ ಮತ್ತು ಕಾರ್ಕಳ

೪) ಈ ಮೂರು ತಾಲೂಕಿನ ಕೇಂದ್ರ ಸ್ಥಳ ಉಡುಪಿ ಆಗಿತ್ತು.

೫) ಉಡುಪಿಯು, ಉಳಿದ ಆ ಎರಡು ನಗರಗಳಿಗಿಂತ ದೊಡ್ಡದು.

೬) ಉಡುಪಿಯ ಶ್ರೀ ಕೃಷ್ಣ ಮತ್ತು ಉಡುಪಿ ಅಡುಗೆಯಿಂದ ಪ್ರಖ್ಯಾತವಾಗಿತ್ತು.

೭) ಕುಂದಾಪುರದವರಿಗೆ ಪ್ರತ್ಯೇಕ ಜಿಲ್ಲೆ ಆಗಬೇಕೆಂದು ಮನಸ್ಸಿದ್ದರೂ, ಸದ್ಯಕ್ಕೆ ಮಂಗಳೂರಿನಿಂದ ಉಡುಪಿ ಹತ್ತಿರ ಎಂದು ಉಡಪಿ ಜಿಲ್ಲೆಗೆ ಹೆಚ್ಚು ತಕರಾರು ಮಾಡಲಿಲ್ಲ.

೮) ಹೊಸ ಜಿಲ್ಲೆಗೆ "ದಕ್ಷಿಣ ಕನ್ನಡ ಉಡುಪಿ" ಅನ್ನುವ ಹೆಸರು ಇಡಬೇಕೆೇಂದು ವಿ.ಎಸ್. ಆಚಾರ್ಯರಿಗೆ ಮನಸ್ಸಿತ್ತು. ಆದರೆ ಹೆಸರು ಉದ್ದ ಆಗುತ್ತದೆ ಅಂತ ಈ ಹೆಸರು ಕೈ ಬಿಟ್ಟರು.

————————————————————————————

ಭಾಗ ೪ :->

ಇನ್ನು ನಿಮ್ಮ ಪ್ರಶ್ನೆ ಉಡುಪಿ ಅನ್ನುವ ಊರಿಗೆ ಆ ಹೆಸರು ಹೇಗೆ ಬಂತು ಎಂದಾಗಿದ್ದರೆ :-

೧) ಉಡುಪಿಯ ಮುಖ್ಯ ದೇವರು ಅನಂತೇಶ್ವರ. ಇದು ಪರಶುರಾಮ ಸೃಷ್ಠಿಯ ಸಪ್ತ ಮೋಕ್ಷದಾಯಕ ಕ್ಷೇತ್ರಗಳಲ್ಲಿ ಒಂದು.ಚಂದ್ರನಿಗೆ ಉಡುಪ ಅನ್ನುತ್ತಾರೆ. ಉಡುಪನನ್ನು ಧರಿಸಿದ ಅನಂತೇಶ್ವರ ನಿಂದಾಗಿ ಉಡುಪಿ ಎನ್ನುವ ಹೆಸರು ಬಂದಿದೆ. ಅಷ್ಟು ಮಾತ್ರವಲ್ಲದೆ ಅನಂತೇಶ್ವರ ದೇವಸ್ಥಾನದ ಎದುರು ಚಂದ್ರಮೌಳಿಶ್ವರ ದೇವಸ್ಥಾನವಿದೆ. ಇಲ್ಲಿ ಅಂತು ಚಂದ್ರ(ಉಡುಪ) ನ ಹೆಸರೇ ಇದೆ.

೨) ಉದ್ಯಾವರ ನದಿ :- ಈ ನದಿಯಿಂದ ಉಡುಪಿ ಅನ್ನುವ ಹೆಸರು ಬಂದಿದೆ ಅಂತ ಕೆಲವರ ಅಭಿಪ್ರಾಯವೂ ಇದೆ.

೩) ಉಡುಪಿಯ ಮೂಲ ತುಳು ಹೆಸರು "ಒಡಿಪು" :-

ಬಹಳ ಹಿಂದೆ ಕೃಷ್ಣ ಮಠದ ದನಗಳೂ, ಊರಿನ ದನಗಳೂ ಕೃಷ್ಣ ಮಠದಿಂದ ಕಿನ್ನಿಮುಲ್ಕಿ ( ಈಗಿನ ದ್ವಾರ) ವರೆಗಿನ "ಖಾಲಿ" ಜಾಗದಲ್ಲಿ ಮೇಯುತ್ತಿದ್ದವಂತೆ. ಖಾಲಿ ಜಾಗಕ್ಕೆ ತುಳುವಿನಲ್ಲಿ "ಪಡ್ಪು" ಅನ್ನುತ್ತಾರೆ. ಈ ಪಡ್ಪು ವೇ "ಒಡಿಪು" ಆಯಿತಂತೆ. ಈಗಲೂ ತುಳುವರು, ತುಳು ಮಾತನಾಡುವಾಗ "ಒಡಿಪು" ಅಂತ ಹೇಳುವುದು.ಆದರೆ ಈ ರೀತಿ ಹೇಳುವವರ ಸಂಖ್ಯೆ ಕ್ಷೀಣಿಸುತ್ತಿದೆ. ತುಳುವಿನಲ್ಲೂ "ಉಡುಪಿ" ಅಂತಾನೆ ಸಂಭೋದನೆ ಮಾಡುತ್ತಾರೆ.

ಈಗ ಹಳೇಯ ಹೆಸರು ಒಡಿಪುವನ್ನೇ ಅಧಿಕೃತ ಮಾಡಬೇಕು ಅನ್ನುವ ಅಭಿಯಾನ ಪ್ರಾರಂಭವಾಗಿದೆ.————————————————————————————

ಭಾಗ ೫ :->

ಇನ್ನು ಪ್ರಶ್ನೆಯ ೨ ನೇ ಭಾಗ,👇

ಉಡುಪಿ ಜಿಲ್ಲೆಯ ವಿಶೇಷತೆ :->

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷತೆ ಏನುಂಟೋ, ಅದುವೇ ಉಡುಪಿ ಜಿಲ್ಲೆಗೂ ಅನ್ವಯಿಸುತ್ತದೆ. ತುಂಡರಿಸಲ್ಪಟ್ಟ ಕೂಡಲೇ ಅದರ ವಿಶೇಷತೆ ಸಂಕುಚಿತಗೊಳ್ಳುತ್ತದೆ ಹೊರತು ಬದಲಾಗುವುದಿಲ್ಲ.

ಆದರೂ ಸಂಕುಚಿತಗೊಂಡ ಜಿಲ್ಲೆಯ ವಿಶೆೇಷತೆ ಹಿಗಿದೆ:-

೩ ತಾಲೂಕು ಇದ್ದ ಉಡುಪಿ ಜಿಲ್ಲೆ ಈಗ ೭ ತಾಲೂಕುಗಳನ್ನು ಹೊಂದಿದೆ. ಉಡುಪಿ ತಾಲೂಕು ೩ ಹೋಳಾಗಿ, ಕಾಪು, ಉಡುಪಿ, ಬ್ರಹ್ಮಾವರ ತಾಲುಕು ಆಗಿವೆ.ಕುಂದಾಪುರ ಹೋಳಾಗಿ ಕುಂದಾಪುರ, ಬೈಂದೂರು ತಾಲೂಕುಗಳು ಉದಯಿಸಿವೆ. ಕುಂದಾಪುರ ತಾಲೂಕಿನ ೦.೧೫ ಭಾಗದಷ್ಟು ಕಾರ್ಕಳದಿಂದ ಬೇರ್ಪಟ್ಟ ಹೆಬ್ರಿ ತಾಲೂಕಿಗೆ ಸೇರಿಸಲ್ಪಟ್ಟಿದೆ.

೧) ಕಾಪು ತಾಲುಕು (ತುಳು) : -

ಪಡುಬಿದ್ರೆ :- ಢಕ್ಕೆಬಲಿ

ಕಾಪು :- ಸಮುದ್ರ ತೀರ, ಸಮುದ್ರ ತೀರದ ದೀಪ ಸ್ತಂಭ, ೩ ಮಾರಿಗುಡಿಗಳು, "ಬೀಚ್ ರೆಸೋರ್ಟ್" ಗಳು.

೨) ಉಡುಪಿ ತಾಲೂಕು (ತುಳು) : ->

ಉಡುಪಿ :- ಅನಂತೇಶ್ವರ, ಚಂದ್ರಮೌಳೀಶ್ವರ, ಕೃಷ್ಣ ದೇವಸ್ಥಾನ, ಮಠ, ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನಗಳು. ಉಡುಪಿ ಮಟ್ಟಿ ಗುಳ್ಳ(ವಿಶೇಷ ರುಚಿಯ ಬದನೆ), ಶಂಕರಪುರ ಮಲ್ಲಿಗೆ.

ಪಾಜಕ:- ಆಚಾರ್ಯತ್ರಯರಲ್ಲಿ ಮದ್ವಾಚಾರ್ಯರ ಜನ್ಮ ಭೂಮಿ.

ಮಣಿಪಾಲ :- ಭಾರತದ ಪ್ರಥಮ ಖಾಸಗಿ ವೈದ್ಯಕೀಯ ಕಾಲೇಜ್ ಕೆ.ಎಂ.ಸಿ. ಹಾಗೂ ಏಷ್ಯಾದಲ್ಲೇ ದೊಡ್ಡದಾದ ಅದರ "ಎನಾಟಮಿ ಮ್ಯೂಸಿಯಂ", ತುಳುನಾಡಿನ ಹಳೇ ಮನೆಗಳ "ಮ್ಯೂಸಿಯಂ" ಹಸ್ತಶಿಲ್ಪ, ರಮಣೀಯ ಜಿಲ್ಲಾಧಿಕಾರಿ ಕಚೇರಿ , "ಎಂಡ್ ಪಾಯ್ಂಟ್" ಉದ್ಯಾನವನ.

ಹಿರಿಯಡ್ಕ :- ಶ್ರೀ ವೀರಭದ್ರ ದೇವಸ್ಥಾನ ( ಇತ್ತೀಚೆಗೆ ಜೀರ್ಣೋದ್ಧಾರಗೊಂಡಿದೆ).

ಮಲ್ಪೆ :- ವಡಭಾಂಡೇಶ್ವರ ದೇವಸ್ಥಾನ, ತೋನ್ಸೆಪಾರ್ ದ್ವೀಪ ಸಮೂಹ, ಮೀನಗಾರಿಕ ಬಂದರ್.

೩) ಬ್ರಹ್ಮಾವರ ತಾಲೂಕು (ಕುಂದಾಪ್ರ ಕನ್ನಡ) :->

ಸಾಸ್ತಾನ :- ಬಾಳೆಕುದ್ರು ಮಠ, ಹಂಗಾರಕಟ್ಟೆ ಹಡಗು ನಿರ್ಮಾಣ ಬಂದರು, ಹಂಗಾರಕಟ್ಟೆ ಯಿಂದ ಕೋಡಿಬೆಂಗ್ರೆಗೆ ಮಿನಿ ಸಮುದ್ರ ಪ್ರಯಾಣ

ಬ್ರಹ್ಮಾವರ :- ಮಂಗಳೂರು ಆಕಾಶವಾಣಿಯ ಮರು ಪ್ರಸಾರ ಕೇಂದ್ರ,

ಬಾರ್ಕೂರು :- ದಿನಕ್ಕೊಂದರಂತೆ ೩೬೫ ದೇವಸ್ಥಾನವಿದ್ದ ತುಳುನಾಡಿನ ರಾಜಧಾನಿಯಾಗಿದ್ದ ಬಾರ್ಕೂರು,

ಮಂದಾರ್ತಿ :- ೬ ಬಡಗು ತಿಟ್ಟು ಯಕ್ಷಗಾನ ಮೇಳ ಇರುವ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ,

ಸಾಲಿಗ್ರಾಮ :- ಶ್ರೀ ನರಸಂಹ ದೇವಸ್ಥಾನ ಹಾಗೂ ಅದರ ಎದುರುಗಡೆ ಇರುವ ಆಂಜನೇಯ ದೇವಸ್ಥಾನ

ಕೋಟ :- ಶ್ರೀ ಹಿರೇ ಮಹಾಲಿಂಗೇಶ್ವರ ದೇವಸ್ಥಾನ, ಹಲವು ಮಕ್ಕಳ ತಾಯಿ ದೇವಸ್ಥಾನ, ಶಿವರಾಮ ಕಾರಂತರ ಜನ್ಮಸ್ಥಳ.

೪) ಕುಂದಾಪುರ /ಬೈಂದೂರು ತಾಲೂಕುಗಳು ( ಕುಂದಾಪ್ರ ಕನ್ನಡ) :-> ( ಕಾಡ್ಯನಾಟ್ಯ, ನಾಗಮಂಡಲಕ್ಕೆ ಹೆಸರುವಾಸಿ)

ಕುಂಬಾಶಿ :- ಪರಶುರಾಮ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲಿಒಂದು. ಹರಿಹರ ಕ್ಷೇತ್ರ. ಮೇಲೆ ಆನೆಗುಡ್ಡೆ ಗಣಪತಿ ದೇವಸ್ಥಾನ, ಲಕ್ಷ್ಮೀನಾರಾಯಣ, ಸೂರ್ಯನಾರಾಯಣ, ಅಯ್ಯಪ್ಪ, ದುರ್ಗೆ, ನವಗ್ರಹ, ದೇವಸ್ಥಾನಗಳು.( ಇವೆಲ್ಲ ಒಂದೇ ಕಡೆ ಇದೆ). ಅತ್ಯಂತ ರಮಣೀಯ ಪ್ರಕೃತಿ ಸೌಂದರ್ಯವಿರುವ ದೇವಸ್ಥಾನ ಸಮೂಹ.ಹತ್ತಿರದಲ್ಲಿ ನೂತನ ವೈಭವದ ದುರ್ಗಾಪರಮೇಶ್ವರಿ ದೇವಸ್ಥಾನವಿದೆ.

ಕೋಟೇಶ್ವರ :- ಪರಶುರಾಮ ಸೃಷ್ಟಿಯ ಸಪ್ತಕ್ಷೇತ್ರಗಳಲ್ಲಿ ಇನ್ನೊಂದು. ಬಹಳ ದೊಡ್ಡ ದೇವಸ್ಥಾನ, ವಿಶಾಲ ರಮಣೀಯ ಕೆರೆ, ಕರಾವಳಿಯ ಹಬ್ಬ/ಜಾತ್ರೆಗಳಲ್ಲಿಯೆ ಕೋಟೇಶ್ವರ ಕೊಡಿ ಹಬ್ಬಕ್ಕೆ ಮೊದಲ ಸ್ಥಾನ. ತುಳುನಾಡಿನ ಕೋಟಿಚೆನ್ನಯರಲ್ಲಿ ಕೋಟಿಗೆ ಹೆಸರು ಕೊಟ್ಟ ದೇವಸ್ಥಾನ. ಚೆನ್ನಯನಿಗೆ ಸುಳ್ಯದ ಚೆನ್ನಕೇಶವ ದೇವರ ಹೆಸರಿನ ಮೊದಲ ಭಾಗ)

ಕುಂದಾಪುರ ಪೇಟೆ :- ಕುಂದೇಶ್ವರ ದೇವಸ್ಥಾನ, ಅವಿಭಜಿತ ದಕ್ಷಿಣ ಕನ್ನಡ ಅಥವ ರಾಜ್ಯದಲ್ಲೆೇ, ಪೇಟೆ ಪೂರ್ತಿ ಏಕಮುಖ ರಸ್ತೆ ಇರುವ ಸುಂದರ ನಗರ.೨ ಬದಿ ಹೊಳೆ ಇದೆ.ರಾತ್ರಿ ಬೆಂಗಳೂರಿನ ಉಪನಗರದಂತೆ ತೇೂರುತ್ತದೆ.ಮರಗಳಿಂದ ತುಂಬಿದ ತಂಪಾದ ಖಾಸಗಿ ಬಸ್ಸು ನಿಲ್ದಾಣ.

ಕೋಡಿ :- ಸಮುದ್ರ ಕಿನಾರೆ

ಬಸ್ರೂರು :- ಚಾರಿತ್ರಿಕ ಪುರಾತನ ನಗರ.

ಕುದ್ರುಗಳು :- ಸಣ್ಣ ದ್ವೀಪಗಳಂತೆ, ನದಿಯಲ್ಲಿ ಇರುವ ಕುದ್ರುಗಳು.(ಉದಾ- ಕನ್ನಡ ಕುದ್ರು - ಈ ಹೆಸರೇ ವಿಶೇಷ)

ಕ್ರೋಢ ಶಂಕರನಾರಾಯಣ : - ಪರಶುರಾಮ ಕ್ಷೇತ್ರದ ಮತ್ತೊಂದು ದೇವಸ್ಥಾನ ( ಊರಿನ ಹೆಸರೂ ಹೌದು). ಹತ್ತರದಲ್ಲೇ ಉಳಿದ ೪ ಶಂಕರನಾರಾಯಣ ದೇವಸ್ಥಾನಗಳಿವೆ, ಶಂಕರನಾರಾಯಣ ಕಲ್ಲುಕುಟ್ಟಿಗ ದೈವಸ್ಥಾನ.

ಹಾಲಾಡಿ :- ಮಸಾಲೆ ದೋಸೆಗಾಗಿ ದೂರದಿಂದ ಬರುವ ಪ್ರಖ್ಯಾತ ಉಪಹಾರ ಗೃಹ ಇದೆ. ಹೆಂಚಿನ ಕಾರ್ಖನೆಯ ಹೊಗೆ ಕೊಳವೆ ನೋಡಬೇಕಿದ್ರೆ ಇಲ್ಲಿಗೆ ಬರಬಹುದು. ೪ ರಸ್ತೆ ಕೂಡುವ ಪ್ರಮುಖ ಪೇಟೆ. ೨ ಘಾಟಿಗೆ ಹೋಗುವ ಊರು. ಸೋಲಿಲ್ಲದ ಸರದಾರ, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಊರು.

ಬಳ್ಮನೆ ( ವಯಾ ಬೆಳ್ವೆ, ಹಾಲಾಡಿ, ಸಿದ್ಧಾಪುರ) :- ಅಪರೂಪದ ಬ್ರಹ್ಮ ದೇವಸ್ಥಾನವಿದೆ

ಕಮಲಶಿಲೆ :- ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ

ಹೊಸಂಗಡಿ :- ವಿದ್ಯುತ್ ಸ್ಥಾವರ

ಹುಲಿಕಲ್ /ಬಾಳೆಬರೆ ಘಾಟಿ :- ಅವಿಭಜಿತ ದ.ಕ.ದ ಅಷ್ಟ ಘಾಟಿಗಳಲ್ಲಿ ಒಂದು.

ಮರವಂತೆ :- ನದಿ ಸಮುದ್ರ ಮದ್ಯೆ ರಸ್ತೆ, ವರಾಹ ಸ್ವಾಮಿ ದೇವಸ್ಥಾನ, ಆಮೆಗಳ ರಕ್ಷಿತ ವಲಯ.

ಬೈಂದೂರು :- ಪುರಾತನ ಸೇನೇಶ್ವರ ದೇವಸ್ಥಾನ.

ಕೊಲ್ಲೂರು :- ಮೂಕಾಂಭಿಕೆ ದೇವಸ್ಥಾನ,( ಪರಶುರಾಮ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲಿ ಒಂದು)

ಮಾರಣಕಟ್ಟೆ :- ಬ್ರಹ್ಮಲಿಂಗೇಶ್ವರ ದೇವಸ್ಥಾನ.

೫) ಕಾರ್ಕಳ/ ಹೆಬ್ರಿ ತಾಲೂಕುಗಳು ( ತುಳು) :->

ಕಾರ್ಕಳ ಪೇಟೆ :- ಗೋಮಟೇಶ್ವರ, ವಿಶಾಲಕೆರೆಗಳು, ತುಳು ಅರಸರ ಊರು,ಕ್ರೈಸ್ತರ ಪ್ರಖಾತ್ಯ ಇಗರ್ಜಿ

ಹೆಬ್ರಿ ಪೇಟೆ :- ಉತ್ತಮ ಹಳ್ಳಿ ಶೈಲಿಯ ಉಪಹಾರಗೃಹ ಇದೆ.

ಸೋಮೇಶ್ವರ :- ಆಗುಂಬೆ ಘಾಟಿ ಪ್ರಾರಂಭದ ಊರು. ಇಲ್ಲಿಂದ ರಮಣೀಯ ಆಗುಂಬೆ ಘಾಟಿಯನ್ನು ಕಣ್ತುಂಬಿಸಿಕೊಳ್ಳಬಹುದು.

ವರಂಗ :- ಜೈನರ ಸುಂದರ ಕೆರೆ ಮದ್ಯೆ ಇರುವ ಬಸದಿ.

ಖಾಸಗಿ ಬಸ್ಸು :- ಉಡುಪಿಯಿಂದ ಕುಂದಾಪುರ, ಕಾರ್ಕಳ ಹಾಗೂ ಮಂಗಳೂರಿಗೆ ಹೋಗುವ ಖಾಸಗಿ ಬಸ್ಸುಗಳ ಭರಾಟೆಯನ್ನು ನೋಡಲು ಇಲ್ಲಿಗೆ ಬರಬೇಕು.ಭಾರತದಲ್ಲೇ ಅತ್ಯುತ್ತಮ ಖಾಸಗಿ ಸಾರಿಗೆ ವ್ಯವಸ್ಥೆ ಅಂತ ಹೆಸರು ಪಡೆದಿದೆ.

ಆಳ್ವಖೇಡದಿಂದ - ದ.ಕ.ದಿಂದ - ಉಡುಪಿವರೆಗೆ ಮುಕ್ತಾಯ.