ನಾರ್ದರ್ನ್ ಲೈಟ್ಸ್ ಅಥವಾ ಅರೋರ ಬೋರಿಯಾಲಿಸ್ ಎಂದರೆ ಭೂಮಿಯ ಉತ್ತರ ಧ್ರುವದಲ್ಲಿ ಕೆಲವು ದಿನಗಳಲ್ಲಿ ಆಕಾಶದಲ್ಲಿ ಕಾಣಿಸಿಕೊಳ್ಳುವ ಅದ್ಭುತವಾದ ಬಣ್ಣಗಳ ಓಕುಳಿಯಾಟ!
ಈ ರೀತಿಯ ಚಿತ್ತಾರಕ್ಕೆ ಕಾರಣ ದೂರದ ಸೂರ್ಯ. ಹೇಗೆ?
ಸೂರ್ಯ ಒಂದು ಪರಮಾಣು ಶಕ್ತಿಯ ರಿಯಾಕ್ಟರ್.
ಅದರ ಕೇಂದ್ರದಲ್ಲಿ 150 ಲಕ್ಷ ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತದೆ. ಇಷ್ಟು ಅತಿಯಾದ ತಾಪದಲ್ಲಿ ಹೈಡ್ರೋಜನ್ ಮತ್ತು ಹೀಲಿಯಂ ಪರಮಾಣುಗಳು ಅಯಾನ್ಗಳ ರೂಪದಲ್ಲಿರುತ್ತವೆ. ಈ ಸ್ಥಿತಿಯನ್ನು ಪ್ಲಾಸ್ಮಾ ಎನ್ನುತ್ತಾರೆ.
ಆ ಬಿಸಿಯಲ್ಲಿ ಹೈಡ್ರೋಜನ್ ಅಯಾನ್ಗಳು ಫ್ಯೂಷನ್ ಕ್ರಿಯೆಯಿಂದ ಹೀಲಿಯಂ ಅಯಾನ್ಗಳಾಗುತ್ತವೆ.
ಈ ಕ್ರಿಯೆಯಿಂದ ಅಗಾಧವಾದ ಶಕ್ತಿ ಹೊರಹೊಮ್ಮಿ ಬೆಳಕು ಮತ್ತು ಶಾಖ ಸೂರ್ಯನ ಮೇಲ್ಮೈಗೆ ಬಂದು ಎಲ್ಲ ದಿಕ್ಕಿನಲ್ಲಿ ಹರಡುತ್ತದೆ. ಇಷ್ಟಲ್ಲದೆ ಟನ್ನುಗಟ್ಟಲೆ ಕಣಗಳು ವಿದ್ಯುತ್ ಚಾರ್ಜ್ ಹೊತ್ತು ಸೂರ್ಯನ ಮೇಲ್ಮೈಗೆ ತಲುಪುತ್ತವೆ. ಚಾರ್ಜ್ ಇದ್ದಮೇಲೆ ಮ್ಯಾಗ್ನೆಟಿಸಂ ಕೂಡ ಇರಬೇಕಲ್ಲವೇ!
ಚಾರ್ಜ್ ಮತ್ತು ಮ್ಯಾಗ್ನೆಟಿಸಂ ಉಳ್ಳ ಕಣಗಳು ಸೂರ್ಯನಿಂದ ಹೊರಹೊಮ್ಮುವುದನ್ನು ಸೋಲಾರ್ ವಿಂಡ್ ಅಥವಾ ಸೋಲಾರ್ ಸ್ಟಾರ್ಮ್ ಎನ್ನುತ್ತಾರೆ.
ಇದು ಆರು ದಿನಗಳಲ್ಲಿ ಬುಧಗ್ರಹ ದಾಟಿ ಹನ್ನೆರಡು ದಿನಗಳಲ್ಲಿ ಶುಕ್ರಗ್ರಹ ದಾಟಿ ಹದಿನೆಂಟು ದಿನಗಳಲ್ಲಿ ಭೂಮಿಗೆ ತಲುಪುತ್ತದೆ. ಈ ಕಣಗಳು ಭೂಮಿಯನ್ನು ಸುತ್ತುವರಿದಿರುವ ಮ್ಯಾಗ್ನೆಟಿಕ್ ಕ್ಷೇತ್ರಕ್ಕೆ ಡಿಕ್ಕಿ ಹೊಡೆದು ಭೂಮಿಯ ಮ್ಯಾಗ್ನೆಟಿಕ್ ಧ್ರುವಗಳ ಮೇಲೆ ಸುರಿಯುತ್ತವೆ.
ಈ ಕಣಗಳು ಗಾಳಿಯಲ್ಲಿರುವ ಬೇರೆ ಬೇರೆ ಅನಿಲಗಳ ಕಣಗಳಿಗೆ ತಗುಲಿದಾಗ ಬೇರೆ ಬೇರೆ ಬಣ್ಣಗಳು ಹೊಮ್ಮುತ್ತವೆ.
ಇದೇ ನಾರ್ದರ್ನ್ ಲೈಟ್ಸ್ ನ ಗುಟ್ಟು.