ಪರಮಾಣುವಿನಲ್ಲಿ ಎಲೆಕ್ಟ್ರಾನ್, ಪ್ರೋಟಾನ್ ಮತ್ತು ನ್ಯೂಟ್ರಾನ್ ಎಂದರೇನು?

SANTOSH KULKARNI
By -
0

ಪರಮಾಣುವನ್ನು ರೂಪಿಸಿರುವ ಮೂರು ಮೂಲಭೂತ ಕಣಗಳು ಇವು:

ಪರಮಾಣುವಿನ ರಚನೆಯಲ್ಲಿ ಎರಡು ಪ್ರಮುಖ ಅಂಗಗಳಿವೆ 1. ಅಣುಬಿತ್ತ (ಪರಮಾಣು ಬೀಜ ಅಥವಾ ನ್ಯೂಕ್ಲಿಯಸ್)

ಇದರಲ್ಲಿ ಹೆಚ್ಚುಕಮ್ಮಿ ಒಂದೇ ಗಾತ್ರದ, ಒಂದೇ ತೂಕದ, ಎರಡು ಕಣಗಳಿವೆ.

  • ಪ್ರೋಟಾನು; ಇದು ಜಲಜನಕದ ಪರಮಾಣು ಬೀಜ, ಪಾಸಿಟಿವ್ ಮಾದರಿಯ ಚಾರ್ಜು ಹೊಂದಿರುತ್ತದೆ. ಇದರ ಗಾತ್ರ ಸುಮಾರು ಒಂದು ಫರ್ಮಿಗಿಂತ ಕಮ್ಮಿ(ಅಂದರೆ 10¹ಮೀ) ದ್ರವ್ಯರಾಶಿ ಸುಮಾರು(10²kg)
  • ನ್ಯೂಟ್ರಾನು; ಇದಕ್ಕೆ ಯಾವುದೇ ಚಾರ್ಜು ಇರುವುದಿಲ್ಲ, ಪರಸ್ಪರ ದೂರ ವಿಕರ್ಷಿಸುವ ಪ್ರೋಟಾನುಗಳ ಮಧ್ಯೆ ಇವು ತಟಸ್ಥವಾಗಿರುತ್ತವೆ. ಒಂದು ಸ್ಥಿರವಾದ ಪರಮಾಣುವಿನಲ್ಲಿ ಸಾಮಾನ್ಯವಾಗಿ ಪ್ರೋಟಾನು-ನ್ಯೂಟ್ರಾನುಗಳ ಸಂಖ್ಯೆ ಸಮನಾಗಿರುತ್ತದೆ. (ಉದಾ; ಆಮ್ಲಜನಕದಲ್ಲಿ 8 ಪ್ರೋಟಾನು, 8 ನ್ಯೂಟ್ರಾನು) ನ್ಯೂಟ್ರಾನುಗಳ ಸಂಖ್ಯೆಯಲ್ಲಿ ಒಂದೆರಡು ಏರುಪೇರಾದರೆ, ಆಗ ನ್ಯೂಕ್ಲಿಯರ್ ಸಮಸ್ಥಾನಿಗಳು ಅಥವಾ isotope ಗಳು ಸೃಷ್ಟಿಯಾಗುತ್ತವೆ.

ಇವೆರಡೂ ಕಣಗಳಿಂದ ಬಿಗಿದು ಕಟ್ಟಿದ, ಲಾಡು ಉಂಡೆ ನಮೂನಿಯ ವ್ಯವಸ್ಥೆಯೇ ನ್ಯೂಕ್ಲಿಯಸ್.

2. ಎಲೆಕ್ಟ್ರಾನು:

ಇದೊಂದು ನೆಗೆಟಿವ್ ಚಾರ್ಜಿರುವ ವಿಶ್ವದ ಮೂಲಭೂತ ಕಣಘಟಕ. ಇದರ ಮೇಲಿರುವ ಚಾರ್ಜಿನ ಪ್ರಮಾಣವು ಪ್ರೋಟಾನ್ ಮೇಲಿರುವ ಪಾಸಿಟಿವ್ ಚಾರ್ಜಿನಷ್ಟೇ ಇರುತ್ತದೆ (ಸುಮಾರು 10¹ಕೂಲಾಂಬು) ಆದರೆ ಎಲೆಕ್ಟ್ರಾನಿನ ಗಾತ್ರವನ್ನು ನಿಖರವಾಗಿ ಹೇಳಲಾಗದು; ತೂಕವೂ, ಪ್ರೋಟಾನಿಗಿಂತ ಊಹಿಸಲಿಕ್ಕಾಗದಷ್ಟು ಚಿಕ್ಕದು (ಸುಮಾರು 10³¹kg)

ನೆಗೆಟಿವ್ ಚಾರ್ಜಿನ ಎಲೆಕ್ಟ್ರಾನು, ಪಾಸಿಟಿವ್ ಚಾರ್ಜಿನ ನ್ಯೂಕ್ಲಿಯಸ್ ಆಕರ್ಷಣೆಗೆ ಸಿಲುಕಿ, ಅದರ ಸುತ್ತಾ ಹರಡಿಕೊಂಡು ಗಿರಕಿ ಹೊಡೆಯುತ್ತಿರುತ್ತದೆ.

ಒಂದು ಪರಮಾಣು ಬಿತ್ತಲ್ಲಿರುವ ಪ್ರೋಟಾನುಗಳ ಸಂಖ್ಯೆಯೂ, ಅದನ್ನು ಸುತ್ತುತ್ತಿರುವ ಎಲೆಕ್ಟ್ರಾನುಗಳ ಸಂಖ್ಯೆಯೂ ಒಂದೇ ಆಗಿರುತ್ತದೆ. ಈ ಕಾರಣದಿಂದ ಒಂದು ಪರಮಾಣುವು ಯಾವುದೇ ಚಾರ್ಜು ಹೊಂದಿರದೇ, ತಟಸ್ಥವಾಗಿರುತ್ತದೆ.

ಹೀಗೆ, ಸಮವಾದ ಆದರೆ ವಿರುದ್ಧ ಚಾರ್ಜುಗಳುಳ್ಳ ಬೀಜ ಮತ್ತು ಎಲೆಕ್ಟ್ರಾನುಗಳ ಸಮೂಹವು ಸೇರಿಕೊಂಡು ಒಂದು ಪರಮಾಣು ಉಂಟಾಗುತ್ತದೆ.

ಈ ಸಮತೆ ಇಲ್ಲದಿದ್ದರೆ ಅದನ್ನು ಅಯಾನು (ion) ಎನ್ನುತ್ತಾರೆ.

ಹೀಲಿಯಮ್ ನಲ್ಲಿ (ರಾಸಾಯನಿಕ ಸಂಕೇತ: He) ಎರಡು ಪ್ರೋಟಾನು, ಹಾಗಿದ್ದರೆ ಇದರ ಬೀಜದ ಸುತ್ತಾ 2 ಎಲೆಕ್ಟ್ರಾನುಗಳು ಇರಬೇಕು. (ಕೆಳಗಿನ ಚಿತ್ರ ನೋಡಿ, ಇದು ವಾಸ್ತವತೆಯೊಂದಿಗೆ ಸಾಕಷ್ಟು ರಾಜಿ ಮಾಡಿಕೊಂಡು, ಓದುಗರ ಕಲ್ಪನೆಯ ಅನುಕೂಲಕ್ಕಾಗಿ ನೀಡಲಾದ ಒಂದು ಪ್ರಾತಿನಿಧಿಕ ಚಿತ್ರವಷ್ಟೇ; ನಿಜವಾದ ಪರಮಾಣುವಿನ ಕಲ್ಪನೆ ಇದಕ್ಕಿಂತ ಬಹಳ ಭಿನ್ನವಾಗಿರುತ್ತದೆ.)

ನೀವೇನಾದರೂ ಇದರಲ್ಲಿ ಒಂದು ಎಲೆಕ್ಟ್ರಾನನ್ನು ಕಿತ್ತು ಹಾಕಿದರೆ, ಅದರಲ್ಲಿ ಒಂದು ಪ್ರೋಟಾನಿಗೆ ನೆಗೆಟಿವ್ ಸಂಗಾತಿ ಇಲ್ಲದಂತಾಗಿ, ಅದಕ್ಕೆ ಒಂದು ಹೆಚ್ಚಾದ ಪಾಸಿಟಿವ್ ಚಾರ್ಜು ಮಿಗುತ್ತದೆ. ಆಗ ಅದನ್ನು (He+) ಹೀಲಿಯಮ್ ಒಂಟಿ ಅಯಾನು ಎಂದು ಕರೆಯುತ್ತೇವೆ. ಎರಡೂ ಎಲೆಕ್ಟ್ರಾನು ಕಿತ್ತುಹೋದರೆ, ಅದು ಕೇವಲ ಹೀಲಿಯಮ್ ಬೀಜ ಎನಿಸುತ್ತದೆ, ಅಥವಾ ಆಲ್ಫಾ ಕಣ (α-particle) ಎನಿಸಿಕೊಳ್ಳುತ್ತದೆ.

ಇದೇ ಜಾಗದಲ್ಲಿ, 6 ಪ್ರೋಟಾನು, 6 ಎಲೆಕ್ಟ್ರಾನು, 6 ನ್ಯೂಟ್ರಾನುಗಳು ಸೇರಿದಲ್ಲಿ ಅದು ಹೀಲಿಯಂಗಿಂತ ಸಂಪೂರ್ಣ ಭಿನ್ನವೇ ಆದ, ಇಂಗಾಲದ ಪರಮಾಣು ಆಗಿಬಿಡುತ್ತದೆ.

ಹೀಗೆ, ಪ್ರೋಟಾನು, ನ್ಯೂಟ್ರಾನು, ಎಲೆಕ್ಟ್ರಾನುಗಳ ಸಂಖ್ಯೆಯಲ್ಲಿ ಕಂಡುಬರುವ ಬೇರೆ ಬೇರೆ ಸಂಯೋಜನೆಗಳಲ್ಲಿ, ವಿವಿಧ ತೂಕದ, ವಿವಿಧ ಸ್ವಭಾವದ ಪರಮಾಣುಗಳು ಸೃಷ್ಟಿಯಾಗುತ್ತವೆ.

Post a Comment

0Comments

Post a Comment (0)