ನಮ್ಮ ಭೂಮಿಯ ಗೋಳದಲ್ಲಿ ಹಲವು ಪದರಗಳಿವೆ.
ಭೂಮಿಯ ಹೊರಪದರ ಶಿಲಾಪದರ (ಲಿಥೋಸ್ಫಿಯರ್). ಇದು ಸರಾಸರಿ ಒಂದು ನೂರು ಕಿಲೋಮೀಟರ್ ದಪ್ಪ ಇದೆ. ಇದರಲ್ಲಿ ಎಲ್ಲ ಖಂಡಗಳು ಮತ್ತು ಸಾಗರಗಳ ತಳದ ನೆಲ ಇವೆಲ್ಲವೂ ಇವೆ. ಮತ್ತು ಇವೆಲ್ಲದರ ಕೆಳಗೆ ಅನೇಕ ಬಹು ವಿಶಾಲವಾದ ಕಲ್ಲಿನ ಬುನಾದಿ ಚಪ್ಪಡಿಗಳಿವೆ (ಟೆಕ್ಟಾನಿಕ್ ಪ್ಲೇಟ್ಸ್).
ಒಟ್ಟಾರೆ ಒಂಬತ್ತು ತುಂಬಾ ವಿಶಾಲವಾದ ಖಂಡಗಳಷ್ಟು, ಸಾಗರಗಳಷ್ಟು ಅಗಲದ ಪ್ಲೇಟುಗಳು ಇವೆ. ಅಲ್ಲದೆ ಮಧ್ಯಮ ಗಾತ್ರದ ಆರೇಳು ಪ್ರಾದೇಶಿಕ ಪ್ಲೇಟುಗಳು ಹಾಗೂ ಅನೇಕ ಚಿಕ್ಕ ಚಿಕ್ಕ ಪ್ಲೇಟುಗಳು ಇವೆ.
ಲಿಥೋಸ್ಫಿಯರ್ ಕೆಳಗಿರುವುದು ಅಸ್ಥಿರಪದರ (ಅಸ್ಥನಸ್ಫಿಯರ್). ಈ ಅಸ್ಥಿರಪದರ ಇತ್ತ ಘನವಾದ ಕಲ್ಲೂ ಅಲ್ಲ, ಅತ್ತ ಕರಗಿರುವ ದ್ರವವೂ ಅಲ್ಲ. ಒಂದು ತರಹದ ಜೆಲ್ ಅಥವಾ ಪ್ಲಾಸ್ಟಿಕ್ ತರಹ.
ಟೆಕ್ಟಾನಿಕ್ ಪ್ಲೇಟುಗಳು ಸ್ಥಿರವಾಗಿ ಒಂದೇ ಕಡೆ ಇರುವುದಿಲ್ಲ. ಇವು ವರ್ಷಕ್ಕೆ ಎರಡರಿಂದ ನಾಲ್ಕು ಇಂಚು ಆಕಡೆ ಈಕಡೆ ಅಸ್ಥಿರಪದರದ ಮೇಲೆ ಸರಿಯುತ್ತಿರುತ್ತವೆ.
ತುಂಬಾ ಹಿಂದೆ, ಇಂತಹ ಪ್ಲೇಟುಗಳು ಒಂದಕ್ಕೊಂದು ಢಿಕ್ಕಿ ಹೊಡೆದಾಗ ಖಂಡಗಳಾದವು, ಸಂಧಿಭಾಗಗಳು ಉಬ್ಬಿ ಪರ್ವತಗಳಾದವು ಮತ್ತು ದೂರದೂರ ಸರಿದಾಗ ಸಾಗರಗಳಾದವು.
ಭೂಕಂಪಗಳು ಮತ್ತು ಜ್ವಾಲಾಮುಖಿಗಳೂ ಕೂಡ ಈ ಪ್ಲೇಟುಗಳ ಚಲನೆಯಿಂದಲೇ ಉಂಟಾಗುತ್ತವೆ.
ಜ್ವಾಲಾಮುಖಿಗಳಲ್ಲಿ ಅನೇಕ ವಿಧಗಳಿವೆ.
ಎರಡು ಪ್ಲೇಟುಗಳು ಢಿಕ್ಕಿ ಹೊಡೆದಾಗ ಹಗುರವಾದ ಪ್ಲೇಟಿನ ಭಾಗ ಭಾರವಾದ ಪ್ಲೇಟಿನ ಮೇಲೆ ಸವಾರಿ ಮಾಡುವುದೂ ಸಾಧ್ಯ. ಅಂತಹ ಸಮಯದಲ್ಲಿ ಅತಿ ಹೆಚ್ಚಿನ ಶಾಖ ಉತ್ಪತ್ತಿಯಾಗಿ ಕೆಳಗಿನ ಭಾಗ ಕರಗಿ ಮೇಲಕ್ಕೆ ಚಿಮ್ಮುತ್ತದೆ. ಇದು ಒಂದು ರೀತಿಯ ಜ್ವಾಲಾಮುಖಿ.
ಪ್ಲೇಟುಗಳು ಪರಸ್ಪರ ದೂರ ಸರಿದಾಗಲೂ ಮಧ್ಯದ ಸಂದಿಯಿಂದ ಒಳಗಿನ ಬಿಸಿ ದ್ರವ ಮೇಲೆ ನುಗ್ಗಿ ಬರಬಹುದು. ಇದು ಇನ್ನೊಂದು ರೀತಿಯ ಜ್ವಾಲಾಮುಖಿ.