ವಾಯುಮಂಡಲ ಅಥವಾ atmosphere ಎಂದೇನು ನಾವು ಇಂಗ್ಲೀಷಿನಲ್ಲಿ ಕರೆಯುತ್ತೇವೆಯೋ ಅದು ಭೂಮಿಯ ಅತೀ ಪ್ರಮುಖವಾದ ಜೀವಪೋಷಕ ಅಂಶಗಳಲ್ಲಿ ಒಂದು.
ಭೂಮಿಯನ್ನು ಆವರಿಸಿರುವ ಅನಿಲಗಳ ಸುತ್ತು ಹೊದಿಕೆಯನ್ನೇ ವಾತಾವರಣ ಎಂದು ಕರೆಯುತ್ತೇವೆ. ಭೂಮಿಯ ಮೇಲ್ಮೈಯಿಂದ ಸುಮಾರು 500-600 ಕಿಮೀ ವರೆಗೂ ಇದು ಗಮನಕ್ಕೆ ಬರುವ ರೀತಿಯಲ್ಲಿ ವ್ಯಾಪಿಸಿರುತ್ತದೆ ಎನ್ನಬಹುದು.
ಒಂದು ಜೀವಂತ ಗ್ರಹಕ್ಕೆ ವಾತಾವರಣ ಅದೆಷ್ಟು ಮುಖ್ಯವೆಂಬುದನ್ನು ಹೇಳಲಿಕ್ಕೂ ಸಹ ಸಾಧ್ಯವಿಲ್ಲ. ಸುಮ್ಮನೇ ಕೆಳಗೆ ಕೊಟ್ಟಿರುವ ಒಂದು ಸಣ್ಣ ಪಟ್ಟಿಯನ್ನು ನೋಡಿ:
1. ಜೀವಿಗಳ ಉಸಿರಾಟಕ್ಕೆ ಅತ್ಯಗತ್ಯವಾಗಿ ಬೇಕಾದ ಆಮ್ಲಜನಕವನ್ನು ಹೊಂದಿರುವುದು, ಮತ್ತು ಅದನ್ನು ಜಗತ್ತಿನ ಮೂಲೆಮೂಲೆಗಳಿಗೂ ತಾಗುವಂತೆ ನೋಡಿಕೊಳ್ಳುವುದು ಇದರ ಒಂದು ಪ್ರಮುಖ ಅಂಶ.
2. ಸಸ್ಯಗಳ ಆಹಾರೋತ್ಪಾದನೆಗೆ ಹಾಗೂ ಪೋಷಕಾಂಶಗಳ ಹಿಡಿದಿಟ್ಟುಕೊಳ್ಳುವಿಕೆಗೆ ಬೇಕಾದ ಇಂಗಾಲದ ಡೈಆಕ್ಸೈಡ್ ಮತ್ತು ಸಾರಜನಕದ ಭಂಡಾರವೂ ಸಹ ಇದುವೇ.
3. ಇದಲ್ಲದೆ, ಸೂರ್ಯನ ತೀಕ್ಷ್ಣವಾದ ಅತಿನೇರಳೆ ಕಿರಣಗಳಿಂದ ಜೀವಜಗತ್ತನ್ನು ರಕ್ಷಿಸುತ್ತಾ, ಸೌರಮಂಡಲ ಹಾಗೂ ವಿಶ್ವದ ಮೂಲೆಮೂಲೆಗಳಿಂದ ತೂರಿಬರುವ ಅತ್ಯಂತ ಶಕ್ತಿಶಾಲೀ ಕಾಸ್ಮಿಕ್ ಕಿರಣಗಳಿಂದ ನಮ್ಮನ್ನು ರಕ್ಷಿಸುವ ಜವಾಬ್ದಾರಿಯನ್ನೂ ಸಹ ಇದುವೇ ಹೊತ್ತಿದೆ.
4. ಇದಿಷ್ಟೇ ಎಂದು ತಿಳಿಯದಿರಿ, ಶಬ್ದ ತರಂಗಗಳ ಪ್ರಸಾರಕ್ಕೆ ಮತ್ತು ನಮ್ಮ ಆಧುನಿಕ ರೇಡಿಯೋ ಸಂಪರ್ಕ/ಸಂವಹನಕ್ಕೆ ಬೇಕಾದ ಮಾಧ್ಯಮವಾಗಿ ಕೂಡ ಇದುವೇ ಒದಗಿ ಬರುತ್ತಿದೆ.
5. ಮಳೆಯ ಚಕ್ರ, ನೀರಿನ ಪುನರ್ಬಳಕೆ ಹಾಗೂ ಕೆಲವು ರಾಸಾಯನಿಕಗಳ ಪುನರ್ ಸಂಸ್ಕರಣೆ/ ಸಂಗ್ರಹಣೆ ನಡೆಯುವುದೂ ಸಹ ವಾತಾವರಣದಲ್ಲಿಯೇ.
6. ಜೀವದ ಪೋಷಣೆಗೆ ಅಗತ್ಯವಾಗಿ ಬೇಕಾದ ಒಂದು ಹದವಾದ ಉಷ್ಣತೆಯನ್ನು (ನೀರನ್ನು ದ್ರವರೂಪದಲ್ಲಿ ಇರಿಸಲಿಕ್ಕೆ ಬೇಕಾದ) ಕಾಪಾಡಿಕೊಳ್ಳುವಲ್ಲಿ ಇದರ ಪಾತ್ರ ಬಹುಮುಖ್ಯವಾದುದು.
ಇಷ್ಟು ತಿಳಿದ ಮೇಲೆಯೂ ಸಹ ನಾವು ಗಾಳಿಗೆ ವಿಷ ಹಾಕುವುದನ್ನೇನು ನಿಲ್ಲಿಸುವುದಿಲ್ಲ; ಹೌದಲ್ಲ? ಇರಲಿ, ಮುಂದೆ ಓದಿ.....
ವಾತಾವರಣದಲ್ಲಿ ಇರುವುದು ಬರೀ ಗಾಳಿ ಮತ್ತು ಒಂದಷ್ಟು ನೀರಾವಿ ಅಷ್ಟೆ. ಅದರಲ್ಲಿರುವ ವಿವಿಧ ಅನಿಲಗಳ ಪ್ರಮಾಣವನ್ನು ತಿಳಿಯಲು ಕೆಳಗಿನ ಚಿತ್ರವನ್ನು ನೋಡಿ.
ವಾತಾವರಣದಲ್ಲಿನ ವಲಯಗಳು ಅಥವಾ ಆವರಣಗಳು :
ವಾತಾವರಣದಲ್ಲಿನ ಅನಿಲಗಳ ಉಷ್ಣತೆ ಮತ್ತು ರಾಸಾಯನಿಕಗಳ ಆಧಾರದ ಮೇಲೆ ಭೂಮಿಯನ್ನು ಸುತ್ತುವರಿದ ಒಟ್ಟಾರೆ ಅನಿಲಗೋಳವನ್ನು ಪ್ರಮುಖವಾಗಿ ನಾಲ್ಕು ವಲಯಗಳನ್ನಾಗಿ ವಿಭಾಗಿಸಲಾಗಿದೆ. ಅವುಗಳೆಂದರೆ:
(ಅವುಗಳ ಎತ್ತರ ಮುಂತಾದ ವಿವರಗಳಿಗಾಗಿ ಕೆಳಗೆ ಕೊಟ್ಟ ಚಿತ್ರವನ್ನು ಕಾಣಿರಿ)
1. ಟ್ರೋಪೋಸ್ಪಿಯರ್ (ಜೀವಾವರಣ): ಇದು ಭೂಮಿಯ ಮಟ್ಟದಿಂದ ಸುಮಾರು 15 ಕಿಮೀ ವರೆಗೆ ವ್ಯಾಪಿಸಿರುವ ಕ್ಷೇತ್ರ. ಇಲ್ಲಿನ ಉಷ್ಣತೆ ಸುಮಾರು -50 ಡಿಗ್ರಿಯಿಂದ 27 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ. ಇದು ವಾತಾವರಣದ ಎಲ್ಲಾ ವಲಯಗಳಿಗಿಂತ ಅತ್ಯಂತ ಸಾಂದ್ರವಾದ, ಒತ್ತೊತ್ತಾಗಿ ಮಿಶ್ರಿತವಾದ ಅನಿಲಗಳ ದಟ್ಟಣೆಯ ಪ್ರದೇಶ.
ಈ ಗ್ರಹದ ಎಲ್ಲಾ ಜೈವಿಕ ಚಟುವಟಿಕೆಗಳ ಕೇಂದ್ರವಿರುವುದು ಇದರ ಒಳಗೇಯೇ. ಅಂದರೆ, ಎಲ್ಲಾ ಹವಾಮಾನ ಬದಲಾವಣೆಗಳೂ, ಮೋಡ, ಮಳೆ, ಗುಡುಗು, ಚಂಡಮಾರುತ ಎಲ್ಲವೂ ಇಲ್ಲಿಯೇ ಉಂಟಾಗುವುದು. ನಮ್ಮೆಲ್ಲಾ ಸಾರಿಗೆ ವಿಮಾನಗಳು ಹಾರಾಟ ನಡೆಸುವುದು ಸಹ ಇದರಲ್ಲಿಯೇ ಆಗಿದೆ.
2. ಸ್ಟ್ರಾಟೋಸ್ಪಿಯರ್ (ಪಾತಳಿಯಾವರಣ) : ಇದು ಜೀವಾವರಣದ ಮೇಲಿನ ವಲಯ, ನೆಲದಿಂದ ಸುಮಾರು 40 ಕಿಮೀ ವರೆಗೆ ಇದರ ಸರಹದ್ದು. ಇಲ್ಲಿನ ಗಾಳಿಯ ಸಾಂದ್ರತೆ ಸ್ವಲ್ಪ ಅಳ್ಳಕವಾಗಿರುತ್ತದೆ. ಈ ಪಾತಳಿಯುತ ವಲಯದ ಮೇಲುಭಾಗವನ್ನೇ ಓಝೋನ್ ಪದರ ಎಂದು ಕರೆಯುತ್ತಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಓಝೋನ್ ನಮ್ಮನ್ನು ಸೂರ್ಯನ ಅಪಾಯಕಾರಿ ಅತಿನೇರಳೆ ಕಿರಣಗಳಿಂದ ರಕ್ಷಿಸುತ್ತದೆ.
ಇಲ್ಲಿಂದ ಉಷ್ಣತೆಯು ಎತ್ತರದೊಂದಿಗೆ ಏರುತ್ತಾ -50 ರಿಂದ ಸುಮಾರು 7 ಡಿಗ್ರಿ ಸೆಲ್ಸಿಯಸ್ ವರೆಗೆ ಇರುವುದುಂಟು.
3. ಮೀಸೋಸ್ಪಿಯರ್ ( ಮಧ್ಯಾವರಣ) : ಇದು ನೆಲಮಟ್ಟದಿಂದ ಸುಮಾರು 120 ಕಿಮೀ, ಹಾಗೂ ಕೆಳಗಿನ ಸ್ಟ್ರಾಟೋಸ್ಪಿಯರ್ ನಿಂದ 80 ಕಿಮೀ ದೂರದವರೆಗೂ ವ್ಯಾಪಿಸಿದೆ, ಇಲ್ಲಿಂದ ಉಷ್ಣತೆ ಇಳಿಯುತ್ತಾ -90 ಡಿಗ್ರಿ ಸೆಲ್ಸಿಯಸ್ ವರೆಗೂ ತಲುಪುತ್ತದೆ. ಸೂರ್ಯನ ಕಿರಣಗಳಿಗೆ ಆದಷ್ಟು ನೇರವಾಗಿ ಒಡ್ಡಿಕೊಳ್ಳುವುದರಿಂದ, ಅವನ ಕಾಂತಿಯಲ್ಲಿರುವ ಚೈತನ್ಯವನ್ನು ಹೀರಿಕೊಂಡ ಅನಿಲಗಳ ಅಣುಗಳು ಇಲ್ಲಿ ಉದ್ರೇಕಿತ ಸ್ಥಿತಿಯಲ್ಲಿ ಇರುತ್ತವೆ.
4. ಥರ್ಮೋಸ್ಪಿಯರ್ (ಉಷ್ಣಾವರಣ) : ಇದು ಮಧ್ಯಾವರಣದಿಂದ 400 ಕಿಮೀವರೆಗೂ ಉಂಟು (ನೆಲದಿಂದ 520 ಕಿಮೀ). ಇಲ್ಲಂತೂ ಸೂರ್ಯಕಿರಣಗಳ ಶಕ್ತಿಯ ಅತ್ಯಧಿಕ ಮಟ್ಟದ ಹೀರುವಿಕೆಯನ್ನು ನೋಡಬಹುದು. ಹಾಗಾಗಿಯೇ ಇಲ್ಲಿನಿಂದ ಮುಂದೆಕಾವು ಏರತೊಡಗುತ್ತದೆ, ಹಾಗೂ ನೀವು ಸೂರ್ಯನಿಗೆ ಹತ್ತಿರವಾಗತೊಡಗುವುದನ್ನು ಅನುಭವಕ್ಕೆ ತಂದುಕೊಳ್ಳುವಿರಿ. ಇಲ್ಲಿನ ಅಣುಗಳು ಹೀಗೆ ಹೀರಿಕೊಂಡ ಶಕ್ತಿಯ ಕಾರಣದಿಂದ, ಮತ್ತು ಕುಗ್ಗಿದ ಒತ್ತಡದ ದೆಸೆಯಿಂದ ತಮ್ಮ ಮಾಮೂಲಿ ಅಣು ಸ್ವರೂಪವನ್ನು ಕಳೆದುಕೊಂಡು ಅಯಾನುಗಳಾಗಿಬಿಟ್ಟಿರುತ್ತವೆ. ಆದ್ದರಿಂದಲೇ ಇದನ್ನು ಅಯಾನೋಸ್ಪಿಯರ್ ಎಂದೂ ಸಹ ಕರೆಯಲಾಗುತ್ತದೆ. ಇಲ್ಲಿನ ಕಾವಳತೆ -50 ರಿಂದ 630 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ!
ನಮ್ಮೆಲ್ಲಾ ಉಪಗ್ರಹ ಆಧಾರಿತ ಸಂಪರ್ಕಕ್ರಾಂತಿ ಕಾರಣವಾಗಿರುವುದು ಈ ಅಯಾನೋಸ್ಪಿಯರ್ ಕೃಪೆಯಿಂದಲೇ! ಈ ವಲಯವು ನಾವು ಒಂದು ಜಾಗದಿಂದ ಕಳುಹಿಸಿದ ರೇಡಿಯೋ ಸಂಕೇತಗಳನ್ನು ಮತ್ತೊಂದು ಜಾಗಕ್ಕೆ ಹೊರಳಿಸುವ ಕನ್ನಡಿಯಂತೆ ವರ್ತಿಸುತ್ತದೆ; ನಾವಿದಕ್ಕೆ ಸದಾ ಆಭಾರಿಗಳಾಗಿರತಕ್ಕದ್ದು.
5. ಎಕ್ಸೋಸ್ಪಿಯರ್ (ಹೊರಾವರಣ) : ಇದು ಅಯಾನೋಸ್ಪಿಯರ್ರಿನಿಂದ ಮುಂದೆ ಬರುವ ವಿಶಾಲವೂ, ಅನಂತವೂ ಆದ ಅಂತರಿಕ್ಷದ ಬಯಲು. ನೆಲದಿಂದ ನಮ್ಮೆಲ್ಲಾ ಉಪಗ್ರಹಗಳೂ ಭೂಮಿಯನ್ನು ಪ್ರದಕ್ಷಿಣೆ ಮಾಡುವ ಪ್ರಾಕಾರವೆಂದರೆ ಇದುವೇ. ಭೂಮಿಯ ಮಟ್ಟದಿಂದ 1000 ಕಿಮೀ ದಾಟಿದಿರೆಂದರೆ ನೀವು ಹೆಚ್ಚೂ ಕಮ್ಮಿ ನಿರ್ವಾತ ಪ್ರದೇಶದಲ್ಲಿದ್ದೀರಿ ಎಂದೇ ಅರ್ಥ. ಇಲ್ಲಿ ವಾತಾವರಣ ಇಲ್ಲವೇ ಇಲ್ಲ ಎನ್ನಬಹುದು.
ಈಯೆಲ್ಲಾ ಗಾಳಿಯ ಆವರಣಗಳು ಸೇರಿ, ಭೂಮಿಯತ್ತ ನುಗ್ಗಿಬರುವ ಸೂರ್ಯನ ಶಕ್ತಿಯ ಬಹುಪಾಲನ್ನು ತಾವು ಹೀರಿಕೊಂಡು, ಉಳಿದದ್ದನ್ನು ಭೂಮಿಗೆ ಕಳುಹಿಸುತ್ತವೆ. ನಮ್ಮ ಭೂಮಿಯು ಹೆಚ್ಚೆಂದರೆ ಇವುಗಳಿಂದ ಸೋಸಲ್ಪಟ್ಟ 43 % ಸೂರ್ಯನ ಚೈತನ್ಯವನ್ನು ಮಾತ್ರವೇ ತೆಗೆದುಕೊಳ್ಳುವುದು.
ವಾತಾವರಣದ ಒತ್ತಡ: ನೆಲದ ಮೇಲೆ ವಾಸಿಸುವ ಎಲ್ಲಾ ಚರಾಚರಗಳ ಮೇಲೆಯೂ 400 ಕಿಮೀ ದಪ್ಪದ ವಾಯುವಿನ ಭಾರೀ ಹೊರೆಯೊಂದು ಅನವರತವೂ ಬಿದ್ದಿರುತ್ತದೆ. ನಾವು ಹುಟ್ಟುತ್ತಲೇ ಈ ಭಾರವನ್ನು ಹೊತ್ತುಕೊಂಡೇ ಹುಟ್ಟುತ್ಟೇವೆ.....ಈ ಗಾಳಿಯ ಒಟ್ರಾಸಿ ಹೊರೆಯು ನಮ್ಮ ಮೇಲೆ ಹಾಕುವ ಒತ್ತಡವನ್ನೇ ವಾತಾವರಣದ ಒತ್ತಡ (atmospheric pressure) ಎನ್ನುತ್ತಾರೆ. ಸಮುದ್ರಮಟ್ಟದಲ್ಲಿ ಸಾಮಾನ್ಯವಾಗಿ ಈ ಒತ್ತಡವು ಪಾದರಸವನ್ನು ಕೆಳಗಿನಿಂದ ಒತ್ತಿ, 76 ಸೆಂಟಿಮೀಟರುಗಳಷ್ಟು ಅದನ್ನು ಮೇಲಕ್ಕೆತ್ತುವ ಮಟ್ಟಿಗೆ ಶಕ್ತವಾಗಿರುತ್ತದೆ.
ನೀವೇನಾದರೂ ಯಾವ ರಕ್ಷಣೋಪಾಯವೂ ಇಲ್ಲದೆ, ಬರಿಮೈಯಲ್ಲಿ ಅಂತರಿಕ್ಷಕ್ಕೆ ಹೋದಿರೆಂದರೆ, ಒತ್ತಡಕ್ಕೆ ಒಳಗಾದ ಪೈಪನ್ನು ಕೂಡಲೇ ಸಡಿಲ ಬಿಟ್ಟಂತಾಗಿ ನಮ್ಮ ರಕ್ತನಾಳಗಳೆಲ್ಲಾ ಒಡೆದು, ನವರಂಧ್ರಗಳಿಂದಲೂ ನೆತ್ತರು ಸೋರಲಾರಂಭಿಸುತ್ತದೆ. ನೀವು ಆಕ್ಸಿಜನ್ ಮಾಸ್ಕ್ ಹಾಕಿಕೊಂಡರೂ ಪ್ರಯೋಜನವಿಲ್ಲ.
ಮೇಲೆ ಹೇಳಿದ ವಾತಾವರಣದ ಹೊದಿಕೆಗಳಲ್ಲದೆ, ಇನ್ನೂ ಕೆಲವು ರಕ್ಷಣಾ ಕವಚಗಳನ್ನೂ ಸಹ ನಮ್ಮ ಪರಿಸರವು ರೂಪಿಸಿಕೊಂಡಿದೆ. ಅವುಗಳೆಂದರೆ:
1. ಮ್ಯಾಗ್ನೆಟೋಸ್ಪಿಯರ್ ( ಕಾಂತಾವರಣ) : ಇದು ಭೂಮಿಯಿಂದ ಸುಮಾರು 65 ಸಾವಿರ ಕಿಮೀ ಪ್ರದೇಶದಲ್ಲಿ ಇರುವಂತಹ ಒಂದು ಕಾಂತಕ್ಷೇತ್ರ. (ಭೂಮಿಯೂ ಒಂದು ಅಯಸ್ಕಾಂತವಾಗಿರುವುದರಿಂದ, ಅದರ ಸುತ್ತಲಿನ ಸಮ್ಮೋಹವಲಯ) ಸೌರಮಂಡಲವೂ ಸೇರಿದಂತೆ, ವಿಶ್ವದ ಎಲ್ಲೆಡೆಯಿಂದ ತೂರಿಬರುವ ವಿಶ್ವಕಿರಣಗಳ (ಕಾಸ್ಮಿಕ್ ಕಿರಣ) ಹಾವಳಿಯಿಂದ ಜೀವಜಗತ್ತನ್ನು ಕಾಪಾಡುತ್ತದೆ ಈ ಕಾಂತಾವರಣ. ವೇಗವಾಗಿ ಬರುವ ಕಾಸ್ಮಿಕ್ ಕಿರಣಗಳು ಈ ಕಾಂತಕ್ಷೇತ್ರದ ಒಳಗೆ ಸಿಲುಕಿಕೊಂಡು, ದಿಕ್ಕು ತಪ್ಪಿಸಿಕೊಂಡು ಬೇರೆಡೆಗೆ ಹೊರಳಿಕೊಳ್ಳುತ್ತವೆ, ಇಲ್ಲವೇ ಅಲ್ಲಿಯೇ ಬಂದಿಗಳಾಗುತ್ತವೆ.
2. ವಾನ್-ಅಲೆನ್ ಪಟ್ಟಿ : ಮ್ಯಾಗ್ನೆಟೋಸ್ಪಿಯರು ಹಿಡಿದಿಟ್ಟ ಕಾಸ್ಮಿಕ್ ಕಣಗಳೆಲ್ಲಾ ಅಲ್ಲೇ ಸುತ್ತುವರೆಯುತ್ತಾ ತಾವೇ ಒಂದು ರಕ್ಷಣಾ ಪಟ್ಟಿಯನ್ನು ರಚಿಸಿಕೊಂಡು, ಬರುವ ಇನ್ನಿತರೆ ವಿಶ್ವಕಿರಣಗಳಿಗೆ ಅಡ್ಡಿಯಾಗಿ ನಮ್ಮನ್ನು ಪೊರೆಯುತ್ತಿವೆ. ಇದರಲ್ಲಿ ಎರಡು ಪದರಗಳಿದ್ದು, ಮೊದಲನೆಯದು ನೆಲದಿಂದ 20 ಸಾವಿರ ಕಿಮೀ ಎತ್ತರದಲ್ಲಿದೆ, ಇದರಲ್ಲಿ ಕಡಿಮೆ ಶಕ್ತಿಯ ಕಾಸ್ಮಿಕ್ ಕಿರಣಗಳ ಹಿಂಡು ನೆರೆದಿರುತ್ತದೆ. ಒಳಗಿನ ವಾನ್ ಅಲೆನ್ ಪಟ್ಟಿಯಲ್ಲಿ ಅತೀ ತೀಕ್ಷ್ಣವಾದ ವಿಶ್ವಕಿರಣಗಳಿದ್ದು, ಹೊರಪಟ್ಟಿಯಿಂದ ತಪ್ಪಿಸಿಕೊಂಡು ಬಂದ ಅಪಾಯಕಾರಿ ವಿಕಿರಣಗಳನ್ನು ನಿವಾರಿಸುತ್ತವೆ. ಇದರ ಎತ್ತರ ಭೂಮಿಯಿಂದ 10 ಸಾವಿರ ಕಿಮೀ.
ಕೆಲವು ಬಾರಿ ಈ ವಿಶ್ವಕಿರಣಗಳ ನೆರವಿಯಿಂದ ತಪ್ಪಿಸಿಕೊಂಡ ಕೆಲವು ವಿಕಿರಣಗಳು, ಭೂಮಿಯ ವಾತಾವರಣವನ್ನು ಪ್ರವೇಶಿಸಿ (ಅದೂ ಸಹ ಧ್ರುವ ಪ್ರದೇಶಗಳಲ್ಲಿ ಮಾತ್ರ; ಏಕೆಂದರೆ, ಭೂಮಿಯ ಕಾಂತದ ತೀವ್ರತೆಯು ಅಲ್ಲಿಯೇ ಹೆಚ್ಚು, ಹಾಗಾಗಿ ಅವು ನೇರವಾಗಿ ಅತ್ತ ಕಡೆಯೇ ನುಗ್ಗುವುದು!) ನಮ್ಮ ಗಾಳಿಯಲ್ಲಿನ ಅಮಾಯಕ ಅಣುಗಳ ಜೊತೆಗೆ ಢಿಕ್ಕಿ ಹೊಡೆದು, ಉಜ್ವಲವಾದ, ವಿವಿಧ ಬಣ್ಣಗಳ ಓಕುಳಿಯನ್ನು ಚೆಲ್ಲುತ್ತವೆ. ಇದನ್ನೇ ಧ್ರುವಪ್ರಭೆ ಅಥವಾ Aurora Borealis (ಉತ್ತರದ ಬೆಳಕು) ಎಂದೂ, Aurora Australis (ದಕ್ಷಿಣದ ಬೆಳಕು) ಎಂದೂ ಕರೆಯಲಾಗುತ್ತದೆ.
ಇದೊಂದು ಮನೋಹರವಾದ ವಿದ್ಯಮಾನ. ಈ ಆರೋರಾಗಳನ್ನು ಅಭ್ಯಾಸ ಮಾಡುವುದರಿಂದ ಆ ಗ್ರಹದ ವಾತಾವರಣದಲ್ಲಿರುವ ಅಣುಗಳ ಸಂಯೋಜನೆಯ ಕುರಿತು ಮಾಹಿತಿಯನ್ನು ತಿಳಿಯಬಹುದು. ಏಕೆಂದರೆ, ಒಂದೊಂದು ಅನಿಲವು ಒಂದೊಂದು ಬಣ್ಣದ ಧ್ರುವಪ್ರಭೆಗಳನ್ನು ಸೃಜಿಸುತ್ತದೆ.
ಗುರುತ್ವಾಕರ್ಷಣೆ ಕಡಿಮೆಯಿರುವ ಗ್ರಹಗಳಿಗೆ ವಾತಾವರಣವನ್ನು ಹಿಡಿದಿಟ್ಟುಕೊಳ್ಳುವ ತಾಕತ್ತು ಇರುವುದಿಲ್ಲ, ಹಾಗಾಗಿ ಅವುಗಳಲ್ಲಿ ಜೀವಸೃಷ್ಟಿ ಮತ್ತು ಜೀವಪಾಲನೆಗೆ ಬೇಕಾದ ವೇದಿಕೆಯೇ ಇಲ್ಲದಂತಾಗುತ್ತದೆ, ಅಂಥಾ ಗ್ರಹಗಳು ನೀರಿನ ಮೂಲವಿದ್ದೂ ಸಹ ಬರಡು ಗ್ರಹಗಳಾಗಿ ಬಿಡುತ್ತವೆ. ನಾವೇನೂ ಚಿಂತೆ ಮಾಡಬೇಕಿಲ್ಲ, ಇಂದು ಹೆಚ್ಚುತ್ತಿರುವ ತಾಪಮಾನ ಮತ್ತು ಮಾಲಿನ್ಯದ ದೆಸೆಯಿಂದ ನಮ್ಮ ವಾತಾವರಣದ ಹೊದಿಕೆಯನ್ನು ಬಲುಬೇಗನೇ ಕಳೆದುಕೊಂಡು, ಸ್ವತಃ ನಾವೇ ವಿಶ್ವಸ್ಮಶಾನದ ಚಿತೆಯ ಕಡೆಗೆ ಭೂಮಿಯ ಚಟ್ಟವನ್ನು ಹೊತ್ತೊಯ್ಯುತ್ತಿದ್ದೇವೆ.