ಕ್ಷೀರಪಥವು ಎಷ್ಟು ಬೆಳಕಿನ ವರ್ಷಗಳಷ್ಟು ದೂರದಲ್ಲಿದೆ?

SANTOSH KULKARNI
By -
0

 ಮನೆಯೊಳಗೆ ಇರುವ ನಾನು ಮನೆ ನನ್ನಿಂದ ಎಷ್ಟು ದೂರ ಇದೆ ಎಂದು ಕೇಳಿದ ಹಾಗಾಯ್ತು..

ಅದರ ಬದಲು ಮನೆಯಲ್ಲಿ ನಾನು ಎಲ್ಲಿದ್ದೇನೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡುವುದಾದರೆ,

ಹಾಲುಹಾದಿ ನಕ್ಷತ್ರಪುಂಜ ಅಂದರೇನೆ ಅಂದಾಜು 100 ರಿಂದ 400 ಬಿಲಿಯನ್* ನಕ್ಷತ್ರಗಳ ಒಂದು ಗುಂಪು ..

(*400 000 000 000)

ಸಾಂದರ್ಭಿಕ ಚಿತ್ರ : image courtesy - wikipedia

ಅಷ್ಟು ದೊಡ್ಡ ಗುಂಪಿನಲ್ಲಿನ ಯಾವುದೋ ಒಂದು ನಕ್ಷತ್ರ ನಮ್ಮ ಸೂರ್ಯ.

ಆ ಸೂರ್ಯನೆಂಬ ನಕ್ಷತ್ರದಿಂದಲೂ ಸುಮಾರು 150 ಮಿಲಿಯನ್* ಕಿ. ಮೀ ದೂರದಿಂದ ಆ ನಕ್ಷತ್ರದ ಸುತ್ತ ಗಿರಕಿ ಹೊಡೆಯುತ್ತಿದ್ದೇವೆ ನಾವು (ಭೂಮಿಯಲ್ಲಿರುವವರು).. (*150 000 000)

(ಕೆಳಗಿನ ಚಿತ್ರದ ಬಲ ಭಾಗದಲ್ಲಿ ಸೂರ್ಯನ ಸ್ಥಾನವನ್ನು ಗುರುತಿಸುವುದಕ್ಕೆ ವೃತ್ತವನ್ನು ದೊಡ್ಡದಾಗಿ ತೋರಿಸಲಾಗಿದೆ ಅಷ್ಟೇ.. ವಾಸ್ತವದಲ್ಲಿ ಹಾಲು ಹಾದಿಯ ಈ ರೀತಿಯ ಚಿತ್ರದಲ್ಲಿ ಸೂರ್ಯನಾಗಲೀ ಸೌರಮಂಡಲವಾಗಲೀ ಕಣ್ಣಿಗೆ ಕಾಣುವುದೇ ಇಲ್ಲ.. ಮತ್ತು ಸೂರ್ಯನಿಗಿಂತ ಅದೆಷ್ಟೋ ಕೋಟಿ ಪಟ್ಟು ದೊಡ್ಡ ನಕ್ಷತ್ರಗಳೂ ಸಹ ಇಲ್ಲಿ ಸಣ್ಣ ಸಣ್ಣ ಚುಕ್ಕಿಗಳೇ)

ಸಾಂದರ್ಭಿಕ ಚಿತ್ರ : image courtesy - Astronomymagazine

ಇನ್ನು ಹಾಲುಹಾದಿಯ ಉದ್ದಗಲಗಳನ್ನು ನೋಡುವುದಾದರೆ,

ಸುಮಾರು 105000 ಬೆ.ವ.* ಇದರ ವ್ಯಾಸವಿದ್ದು , ಕೇಂದ್ರದಲ್ಲಿ 1000 ಬೆ.ವ.* ದಪ್ಪವಿದೆ.

(*ಬೆ.ವ. - ಬೆಳಕಿನ ವರ್ಷ - ಬೆಳಕು ಒಂದು ವರ್ಷದಲ್ಲಿ ಕ್ರಮಿಸುವ ದೂರ ->300000x60x60x24x365=9 461 000 000 000 ಕಿ.ಮೀ.~9.5 ಟ್ರಿಲಿಯನ್ ಕಿ.ಮೀ.)

ನಮ್ಮ ಸೂರ್ಯನು ಅದರ ಕೇಂದ್ರದಿಂದ ಸುಮಾರು 25800 ಬೆ.ವ. ದೂರದಲ್ಲಿದೆ ಎಂದು ಅಂದಾಜಿಸಿದ್ದಾರೆ, ಅಂದರೆ ನಾವೂ ಸಹ ಸರಿ ಸುಮಾರು ಅಷ್ಟೇ ದೂರದಿಂದ ಹಾಲು ಹಾದಿಯಲ್ಲಿ ಸುತ್ತುತ್ತಿದ್ದೇವೆ ಎಂದು ಅರ್ಥೈಸಬಹುದು.

ಸಾಂದರ್ಭಿಕ ಚಿತ್ರ : image courtesy - physicsforum

ಸೂರ್ಯನು ಹಾಲು ಹಾದಿಯನ್ನು ಒಂದು ಬಾರಿ ಸುತ್ತಲು ಸುಮಾರು 225 ರಿಂದ 250 ಮಿಲಿಯನ್ ವರ್ಷಗಳನ್ನು ತೆಗೆದುಕೊಳ್ಳುತ್ತಾನೆ ಅಂತಾದರೆ, ಸೂರ್ಯನು 4.5 ಬಿಲಿಯನ್ ವರ್ಷಗಳಷ್ಟು ಹಳೆಯದು ಎಂಬ ಲೆಕ್ಕಾಚಾರದಲ್ಲಿ ಭೂಮಿಯು ಇದುವರೆಗೆ ಹಾಲು ಹಾದಿಯನ್ನು 18 ಬಾರಿ ಸುತ್ತು ಹಾಕಿದೆ. (ಜೊತೆಜೊತೆಗೆ ಸೌರಮಂಡಲವೂ, ನಮ್ಮ ಭೂಮಿಯೂ ಎಂದಿಟ್ಟುಕೊಳ್ಳೋಣ)

ಸಾಂದರ್ಭಿಕ ಚಿತ್ರ : image courtesy - imgur

Post a Comment

0Comments

Post a Comment (0)