ರಾವಣ ಕೆಟ್ಟವನಲ್ಲ.
ಸಮಯ-ಸಂದರ್ಭ ಮತ್ತು ಧರ್ಮ-ಕರ್ಮ ಅವನಿಂದ ಕೆಲವು ತಪ್ಪು ಕೆಲಸವನ್ನ ಮಾಡಿಸಿದವು. ಅದರಿಂದ ಅವನು ಕೆಟ್ಟವನು ಎನ್ನುವ ಹಣೆಪಟ್ಟಿ ಹೊತ್ತುಕೊಂಡಿದ್ದಾನೆ.
ಅವತಾರ ಪುರುಷರಾದಿಯಾಗಿ ಯಾವ ವ್ಯಕ್ತಿಯೂ ಪೂರ್ತಿ ಕೆಟ್ಟವನೂ ಅಲ್ಲ ಪೂರ್ತಿ ಒಳ್ಳೆಯವನೂ ಅಲ್ಲ. ಅವರವರ ಕರ್ಮಾನುಸಾರವಾಗಿ ಧನಾತ್ಮಕ ಮತ್ತು ಋಣಾತ್ಮಕ ಗುಣಗಳನ್ನು ಎಲ್ಲರೂ ಹೊಂದಿರಲೇಬೇಕು.
- ಅದಕ್ಕೆ ರಾಮ-ರಾವಣರೂ ಹೊರತಲ್ಲ. ರಾವಣನ ಒಳ್ಳೆಯ ಗುಣಗಳನ್ನು ಸ್ವತಃ ರಾಮನೇ ಒಪ್ಪಿಕೊಂಡು ಪ್ರಶಂಸಿಸಿದ ನಿದರ್ಶನ ರಾಮಾಯಣ ಮಹಾ ಗ್ರಂಥದಲ್ಲಿ ಉಲ್ಲೇಖವಾಗಿದೆ.
ರಾವಣನ ಅಂತಹ ಕೆಲವು ಒಳ್ಳೆಯತನವನ್ನ ನೋಡೋಣ.
- ರಾವಣನೊಬ್ಬ ಮಹಾನ್ ವಿದ್ವಾಂಸ, ಕವಿ, ಸಂಗೀತ ಗಾರ, ವೀಣಾ ವಾದಕ ಮತ್ತು ಜ್ಯೋತಿಷ್ಯ ಶಾಸ್ತ್ರ ಹಾಗೂ ವೇದಗಳಲ್ಲಿ ಪಾರಂಗತನಾಗಿದ್ದನು.
- ಶಿವನಿಗೆ ಅತ್ಯಂತ ಪ್ರಿಯವಾದ ತಾಂಡವ ನೃತ್ಯದ ಸಂಯೋಜನೆ ಮಾಡಿದ್ದು ರಾವಣನೇ ಎಂದು ಹೇಳುತ್ತಾರೆ.
- ರಾವಣನು ಮಹಾನ್ ಆಡಳಿತಗಾರ ಮತ್ತು ತನ್ನ ಪ್ರಜೆಗಳ ಬಗ್ಗೆ ಅತಿಯಾದ ಕಾಳಜಿ ಹೊಂದಿದ್ದ. ಆತನ ಆಡಳಿತವನ್ನು ಲಂಕಾದ ಸುವರ್ಣಯುಗ ಎಂದು ಪರಿಗಣಿಸಲಾಗಿತ್ತು.
- ಸಾಯುತ್ತಿರುವ ರಾವಣನು ಲಕ್ಷ್ಮಣನಿಗೆ ಜೀವನದ ಸತ್ಯ, ಸಾರ ಮತ್ತು ರಹಸ್ಯವನ್ನ ಹೇಳಿದನಲ್ಲದೆ ತನ್ನಲ್ಲಿದ್ದ ಜ್ಞಾನವನ್ನೆಲ್ಲ ಧಾರೆ ಎರೆಯುತ್ತಾನೆ.
- ರಾಮನಿಂದ ಹತನಾಗಿ ಮೋಕ್ಷ ಪಡೆಯುವ ಸಲುವಾಗಿಯೇ ರಾವಣನು ಸೀತೆಯನ್ನು ಅಪಹರಿಸುತ್ತಾನೆ ಮತ್ತು ಅದಕ್ಕಾಗಿ ಅವನು ಸೀತೆಯನ್ನು ಸ್ಪರ್ಷಿಸುವುದಿಲ್ಲ ಎನ್ನುವ ವಿಷಯ ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಾಗಿದೆ. (ಸೀತೆಯನ್ನು ಸ್ಪರ್ಷ ಮಾಡಿದ್ದರೆ ರಾವಣ ಸುಟ್ಟು ಹೋಗುತ್ತಿದ್ದ ಅನ್ನುವುದೂ ಉಲ್ಲೇಖವಾಗಿದೆ).
- ಸಮುದ್ರಕ್ಕೆ ಸೇತುವೆ ಕಟ್ಟುವಾಗ ರಾಮನು ಮಾಡಬೇಕಾದ ಒಂದು ಯಜ್ಞಕ್ಕೆ ಯಾರೂ ಪುರೋಹಿತರು ಸಿಗದಿದ್ದಾಗ ಶಿವ ಭಕ್ತ ಮತ್ತು ಮಹಾನ್ ಬ್ರಾಹ್ಮಣ ಸ್ವತಃ ರಾವಣನೇ ಪುರೋಹಿತನಾಗಿ ಬಂದು ಯುದ್ಧದಲ್ಲಿ ವಿಜಯಿಯಾಗು ಎಂದು ರಾಮನಿಗೆ ಆಶೀರ್ವಾದ ಮಾಡಿ ತನ್ನ ಕರ್ತವ್ಯ ನಿಷ್ಠೆ ಮೆರೆಯುತ್ತಾನೆ.
- ರಾವಣನ ಶಿವ ಭಕ್ತಿ ಮತ್ತು ಆತನ ಉತ್ತಮ ಗುಣಗಳಿಗಾಗಿ ಶ್ರೀಲಂಕಾ ಮತ್ತು ಭಾರತದಲ್ಲಿ ಆತನ ದೇವಾಲಯಗಳು ಕೂಡಾ ಇವೆ.
ರಾಮನೊಂದಿಗೆ ಹೋಲಿಸಿದಾಗ ರಾವಣ ಒಬ್ಬ ಮಹಾನಾಯಕ ಅಲ್ಲದಿರಬಹುದು, ರಾಮನಂತೆ ಆದರ್ಶ ಪುರುಷ ಕೂಡಾ ಅಲ್ಲದಿರಬಹುದು. ಆದರೆ ಅವನು ಖಂಡಿತವಾಗಿಯೂ ಕೆಟ್ಟವನು ಅಥವಾ ವಿಲನ್ ಅಲ್ಲ.
ಬಹುಷಃ ರಾಮನ ಅತಿಯಾದ ಒಳ್ಳೆಯ ಗುಣಗಳೆದುರು ರಾವಣ ಒಳ್ಳೆಯವನಲ್ಲ ಎನ್ನುವುದು ಕೂಡಾ ಸತ್ಯವಿರಬಹುದು.